logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Twinning Pals: ಬಾಹ್ಯಾಕಾಶದಲ್ಲಿ ಜೋಡಿ ಸ್ನೇಹಿತರ ತುಂಟಾಟ; ಬೆರಗುಗೊಳಿಸಿದೆ ಹಬಲ್‌ ಸೆರೆಹಿಡಿದ ಅವಳಿ ಗ್ಯಾಲಕ್ಸಿಗಳ ವಿಹಂಗಮ ನೋಟ

Twinning Pals: ಬಾಹ್ಯಾಕಾಶದಲ್ಲಿ ಜೋಡಿ ಸ್ನೇಹಿತರ ತುಂಟಾಟ; ಬೆರಗುಗೊಳಿಸಿದೆ ಹಬಲ್‌ ಸೆರೆಹಿಡಿದ ಅವಳಿ ಗ್ಯಾಲಕ್ಸಿಗಳ ವಿಹಂಗಮ ನೋಟ

Nikhil Kulkarni HT Kannada

Apr 27, 2023 02:10 PM IST

ಅವಳಿ ಗ್ಯಾಲಕ್ಸಿ

    • ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ‌ ಇತ್ತೀಚಿಗಷ್ಟೇ 33ನೇ ಉಡಾವಣಾ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಇದಾಗಿ ಕೇವಲ ಒಂದು ವಾರದ ಬಳಿಕ ಹಬಲ್‌ ಟೆಲಿಸ್ಕೋಪ್, ದೂರದ ಜೋಡಿ ಗ್ಯಾಲಕ್ಸಿಗಳ ವಿಹಂಗಮ ನೋಟವನ್ನು ಜಾಗತಿಕ ಖಗೋಳಪ್ರಿಯರಿಗೆ ಉಣಬಡಿಸಿದೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ..
ಅವಳಿ ಗ್ಯಾಲಕ್ಸಿ
ಅವಳಿ ಗ್ಯಾಲಕ್ಸಿ (Verified Instagram)

ವಾಷಿಂಗ್ಟನ್:‌ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ, ಮಾನವನ ಖಗೋಳ ಜ್ಞಾನವನ್ನು ವಿಸ್ತರಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ. ಹಬಲ್‌ ಕಣ್ಣಿನಿಂದ ಬ್ರಹ್ಮಾಂಡವನ್ನು ನೋಡಿದ ಮಾನವ, ಅದರ ಅಗಾಧತೆ ಕಂಡು ಬೆರಗುಗೊಂಡಿದ್ದಾನೆ. ಅನಂತ ವಿಶ್ವದ ಮುಂದೆ ತಾನೆಷ್ಟು ಕುಬ್ಜ ಎಂಬ ಸತ್ಯವನ್ನು ಮನಗಂಡಿದ್ದಾನೆ. ಬ್ರಹ್ಮಾಂಡದ ಮೂಲೆ ಮೂಲೆಯನ್ನು ಶೋಧಿಸುವ ಹಠಕ್ಕೆ ಬಿದ್ದಿದ್ದಾನೆ. ಇದೆಲ್ಲವನ್ನೂ ಸಾಧ್ಯವಾಗಿಸಿದ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್., ಈಗಲೂ ಭೂಮಿಯ ಮೇಲಿನಿಂದ ಬ್ರಹ್ಮಾಂಡವನ್ನು ಇಣುಕಿ ನೋಡುವುದನ್ನು ಮುಂದುವರೆಸಿದೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ‌ ಇತ್ತೀಚಿಗಷ್ಟೇ 33ನೇ ಉಡಾವಣಾ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಇದಾಗಿ ಕೇವಲ ಒಂದು ವಾರದ ಬಳಿಕ ಹಬಲ್‌ ಟೆಲಿಸ್ಕೋಪ್, ದೂರದ ಜೋಡಿ ಗ್ಯಾಲಕ್ಸಿಗಳ ವಿಹಂಗಮ ನೋಟವನ್ನು ಜಾಗತಿಕ ಖಗೋಳಪ್ರಿಯರಿಗೆ ಉಣಬಡಿಸಿದೆ. ಈ ಮೂಲಕ ಬ್ರಹ್ಮಾಂಡದ ಇಂಚಿಂಚೂ ಭಾಗವನ್ನೂ ಕೆದಕುವ ಸಾಮರ್ಥ್ಯ ಇನ್ನೂ ನನ್ನಲ್ಲಿದೆ ಎಂಬುದನ್ನು ಹಬಲ್‌ ಮತ್ತೊಮ್ಮೆ ಸಾಬೀತುಪಡಿಸಿತು.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ ಪುಟದಲ್ಲಿ, ಹಬಲ್‌ ಕ್ಲಿಕ್ಕಿಸಿದ ಈ ಅವಳಿ ಗ್ಯಾಲಕ್ಸಿಗಳ ಚಿತ್ರವನ್ನು ಹಂಚಿಕೊಂಡಿದೆ. ಈ ಗ್ಯಾಲಕ್ಸಿಗಳನ್ನು ''ಬ್ರಹ್ಮಾಂಡದ ಸ್ನೇಹಿತರು'' ಎಂದು ಕರೆದಿರುವ ನಾಸಾ, ದೂರದ ದಿಗಂತದಲ್ಲಿ ತುಂಟಾಟವಾಡುತ್ತಿರುವ ಈ ಗ್ಯಾಲಕ್ಸಿಗಳು ವಿಶ್ವದ ಸೌಂದರ್ಯಕ್ಕೆ ಸಾಕ್ಷಿ ಒದಗಿಸಿವೆ ಎಂದು ಹೇಳಿದೆ.

"NGC 4302 ಮತ್ತು NGC 4298 ಹೆಸರಿನ ಈ ಅವಳಿ ಗ್ಯಾಲಕ್ಸಿಗಳು, ನಮ್ಮ ಕ್ಷೀರಪಥ ನಕ್ಷತ್ರಪುಂಜ(ಮಿಲ್ಕಿ ವೇ ಗ್ಯಾಲಕ್ಸಿ)ಯಂತೆಯೇ ಸುರುಳಿಯಾಕಾರದಲ್ಲಿದ್ದು, ಅದರಲ್ಲಿ ಒಂದು ಗ್ಯಾಲಕ್ಸಿ ಭೂಮಿಯಿಂದ ನೋಡಿದಾಗ ಓರೆಯಾಗಿರುವಂತೆ ಕಾಣುತ್ತದೆ ಎಂದು ನಾಸಾ ತಿಳಿಸಿದೆ.

ಈ ಎರಡೂ ಗ್ಯಾಲಕ್ಸಿಗಳು ಭೂಮಿಯಿಂದ ಸುಮಾರು 55 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದ್ದು, ಕೋಮಾ ಬೆರೆನಿಸಸ್ ನಕ್ಷತ್ರಪುಂಜವನ್ನು ತಮ್ಮ ಮನೆಯಾಗಿಸಿಕೊಂಡಿವೆ. ಖಗೋಳಶಾಸ್ತ್ರಜ್ಞ ವಿಲಿಯಂ ಹರ್ಷಲ್ ಅವರು ಈ ಅವಳಿ ಗ್ಯಾಲಕ್ಸಿಯನ್ನು 1784ರಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಿದ್ದರು.

"ಈ ಗ್ಯಾಲಕ್ಸಿಗಳು ಆಕಾಶದ ಭಿನ್ನ ಕೋನಗಳ ಕಾರಣದಿಂದಾಗಿ ಒಂದಕ್ಕೊಂದು ಭಿನ್ನವಾಗಿ ಕಾಣುತ್ತವೆಯಾದರೂ, ಅವು ರಚನೆ ಮತ್ತು ಗಾತ್ರದಲ್ಲಿ ಬಹುತೇಕ ಒಂದನ್ನೊಂದು ಹೋಲುತ್ತವೆ. ವಿಶಿಷ್ಟವಾದ ಈ ಸುರುಳಿಯಾಕಾರದ ಗ್ಯಾಲಕ್ಸಿಗಳು, ತಮ್ಮ ಕೇಂದ್ರಗಳಿಂದ ಹೊರಕ್ಕೆ ಸುತ್ತುವ ಯುವ ನಕ್ಷತ್ರಗಳ ಸಮೂಹವನ್ನು ಹೊಂದಿವೆ.." ಎಂದು ನಾಸಾ ಮಾಹಿತಿ ನೀಡಿದೆ.

"ಈ ಪ್ರಕಾಶಮಾನವಾದ ಅಂಚಿನ ಪ್ರದೇಶವು, ತೀವ್ರವಾದ ನಕ್ಷತ್ರ ರಚನೆಯ ಪ್ರದೇಶಗಳಾಗಿವೆ. ಇತರ ಸುರುಳಿಯಾಕಾರದ ಗ್ಯಾಲಕ್ಸಿಗಳಂತೆ ಅವು ನಕ್ಷತ್ರಗಳ ಮಸುಕಾದ ಪ್ರಭಾವಲಯದಿಂದ ಸುತ್ತುವರೆದಿರುವ ಕೇಂದ್ರವನ್ನು ಹೊಂದಿವೆ. ಈ ಎರಡೂ ಗ್ಯಾಲಕ್ಸಿಗಳು ರಚನೆಯಲ್ಲಿ ಬಹುತೇಕವಾಗಿ ನಮ್ಮ ಹಾಲುಹಾದಿ ನಕ್ಷತ್ರಪುಂಜವನ್ನೇ ಹೋಲುತ್ತವೆ.." ಎಂದು ನಾಸಾ ಹೇಳಿದೆ.

"ಎಡಭಾಗದ ನಕ್ಷತ್ರಪುಂಜವು ಅದರ ಡಿಸ್ಕ್‌ನಲ್ಲಿ ಭೂಮಿಯಿಂದ 90 ಡಿಗ್ರಿ ಕೋನದಲ್ಲಿದೆ. ಹೀಗಾಗಿ ಇದು ನಮಗೆ ತನ್ನ ಓರೆ ನೋಟದ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಅಲ್ಲದೇ ಅದರ ಆಕಾರವನ್ನು ನಿರ್ಧರಿಸಿರುವ ನಕ್ಷತ್ರಗಳ ಗಾಢವಾದ, ಕೆಂಪು ಪ್ರದೇಶವು, ಯುವ ನಕ್ಷತ್ರಗಳ ಜನ್ಮಸ್ಥಳವಾಗಿದೆ.." ಎಂದು ನಾಸಾ ತನ್ನ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಅದೇ ರೀತಿ ಚಿತ್ರದ ಬಲಭಾಗದಲ್ಲಿ, ಒಂದು ದೊಡ್ಡ ಸುರುಳಿಯಾಕಾರದ ನಕ್ಷತ್ರಪುಂಜದಲ್ಲಿ, ಯುವ ನಕ್ಷತ್ರಗಳು ಮತ್ತು ಅನಿಲ ಮತ್ತು ಧೂಳಿನ ಉದ್ದನೆಯ ಪಥವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ಗ್ಯಾಲಕ್ಸಿಯು ತನ್ನ ಕೇಂದ್ರದ ಕಡೆಗೆ ಹಳದಿ ಬಣ್ಣಕ್ಕೆ ಹೊಳೆಯುತ್ತಿದ್ದು, ತನ್ನ ಸಹೋದರ ನಕ್ಷತ್ರಪುಂಜದ ಕೇಂದ್ರಕ್ಕೆ ಮುಖ ಮಾಡಿದೆ.

ಒಟ್ಟಿನಲ್ಲಿ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ಹಂಚಿಕೊಂಡ ಈ ಅವಳಿ ಗ್ಯಾಲಕ್ಸಿಗಳ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು,ವಿಶಾಲ ಬ್ರಹ್ಮಾಂಡದ ಸೌಂದರ್ಯ ಮತ್ತು ಅಗಾಧತೆ ಕಂಡು ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ ಎಂದು ಹೇಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು