Income Tax: ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದೀರಾ? ಕೊನೆದಿನದೊಳಗೆ ಸಲ್ಲಿಸದಿದ್ದರೆ ದಂಡವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
Jul 23, 2022 02:48 PM IST
Income Tax: ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದೀರಾ? ಸಲ್ಲಿಸದಿದ್ದರೆ ದಂಡವೆಷ್ಟು?
- ತೆರಿಗೆ ಅಡಿಟ್ ಕೆಟಗರಿಗೆ ಬಾರದ ವ್ಯಕ್ತಿಗಳು ಅಂದರೆ ವೇತನ ಪಡೆಯುವವರು, ಸಣ್ಣ ವ್ಯವಹಾರಗಳು ಮತ್ತು ವಿವಿಧ ಕ್ಷೇತ್ರದ ವೃತ್ತಿಪರರು 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31, 2022 ಕೊನೆಯ ದಿನಾಂಕವಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ Income Tax Return filing ಕುರಿತು ವಿವಿಧ ಎಸ್‌ಎಂಎಸ್‌ಗಳು, ವಾಟ್ಸಾಪ್ ಸಂದೇಶಗಳು, ಇಮೇಲ್‌ಗಳು, ಸುದ್ದಿಗಳು ಬರುತ್ತಿವೆ. ಏಕೆಂದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31, 2022 ಕೊನೆಯ ದಿನಾಂಕವಾಗಿದ್ದು, ಅದಕ್ಕಿಂತ ಮೊದಲೇ ಆದಾಯ ತೆರಿಗೆ ಸಲ್ಲಿಸುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ.
ಭಾರತದ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 139ರ ಅನ್ವಯ ಆದಾಯ ತೆರಿಗೆ ಪಾವತಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು. ಇದು ಕಂಪನಿ ಹೊರತುಪಡಿಸಿ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರು ಕಡ್ಡಾಯವಾಗಿ ಪಾಲಿಸಬೇಕಾದ ವಾರ್ಷಿಕ ನಿಯಮವೆನ್ನಬಹುದು.
ತೆರಿಗೆ ಅಡಿಟ್ ಕೆಟಗರಿಗೆ ಬಾರದ ವ್ಯಕ್ತಿಗಳು ಅಂದರೆ ವೇತನ ಪಡೆಯುವವರು, ಸಣ್ಣ ವ್ಯವಹಾರಗಳು ಮತ್ತು ವಿವಿಧ ಕ್ಷೇತ್ರದ ವೃತ್ತಿಪರರು 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31, 2022 ಕೊನೆಯ ದಿನಾಂಕವಾಗಿದೆ.
ಡೆಡ್‌ಲೈನ್ ಮೊದಲು ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?
ಬಹುತೇಕರು ಡೆಡ್‌ಲೈನ್‌ಗೆ ಕೊನೆಯ ದಿನಾಂಕವಿರುವಾಗ ಐಟಿಆರ್ ಫೈಲ್ ಸಲ್ಲಿಸಲು ಮುಂದಾಗುವುದು ಸಹಜ. ಇನ್ನು ಕೆಲವರು ಪ್ರತಿವರ್ಷ ಐಟಿಆರ್ ರಿಟರ್ನ್ ಸಲ್ಲಿಕೆ ದಿನಾಂಕ ವಿಸ್ತರಣೆಯಾಗುತ್ತದೆ, ಬಳಿಕ ಸಲ್ಲಿಸಿದಾರಾಯ್ತು ಎಂದುಕೊಳ್ಳುತ್ತಾರೆ. ಆದರೆ, ಈ ಬಾರಿ ಐಟಿಆರ್ ಸಲ್ಲಿಕೆ ಅವಧಿ ವಿಸ್ತರಿಸುವುದು ಕಷ್ಟ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಈ ತಿಂಗಳ ಅಂತ್ಯದೊಳಗೆ ಐಟಿಆರ್ ಸಲ್ಲಿಸುವುದು ಉತ್ತಮ.
ಐಟಿಆರ್ ರಿಟರ್ನ್ ಸಲ್ಲಿಸದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಭಾರತದ ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಅಥವಾ ಐಟಿಆರ್ ಸಲ್ಲಿಸದವರಿಗೆ 5000 ರೂ. ದಂಡ ವಿಧಿಸಲಾಗುತ್ತದೆ. ಅಂದರೆ, ನೀವು ನಿಗದಿತ ದಿನಾಂಕದ ನಂತರ (ದಿನಾಂಕ ವಿಸ್ತರಣೆಗೊಳ್ಳದಿದ್ದರೆ) ದಂಡದ ಮೊತ್ತ ಪಾವತಿಸಬೇಕಾಗಬಹುದು. ನೀವು ವರ್ಷಕ್ಕೆ ನೂರು ರೂಪಾಯಿ ತೆರಿಗೆ ಪಾವತಿಸುವರಾದರೂ ೫ ಸಾವಿರ ರೂಪಾಯಿ ದಂಡ ತೆರಬೇಕಾಗಬಹುದು.
ಯಾರ ಆದಾಯವು 5 ಲಕ್ಷ ರೂ.ಗಿಂತ ಅಧಿಕವಿದೆಯೋ ಅವರು ನಿಗದಿತ ಅವಧಿಯೊಳಗೆ ITR ಫೈಲ್ ಮಾಡದೆ ಇದ್ದರೆ 5000 ರೂ. ದಂಡ ತೆರಬೇಕಾಗುತ್ತದೆ. ಎಲ್ಲಾದರೂ ನಿಮ್ಮ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇದ್ದು, ನೀವು ತೆರಿಗೆ ಪಾವತಿಸುವ ಕೆಟಗರಿಯಲ್ಲಿದ್ದರೆ 1000 ರೂ. ದಂಡ ಪಾವತಿಸಬೇಕು.
ಡಿಸೆಂಬರ್ ಬಳಿಕ ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬರ ಆದಾಯವನ್ನು ಪರಿಶೀಲಿಸುತ್ತದೆ. ಈ ಸಂದರ್ಭದಲ್ಲಿ ಆದಾಯ ಹೆಚ್ಚಿದ್ದು, ತೆರಿಗೆ ಪಾವತಿಸದೆ ಇರುವವರ ಮಾಹಿತಿ ಪಡೆದು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಈ ಸಮಯದಲ್ಲಿ ನೀವು ದಂಡ ಮತ್ತು ಬಡ್ಡಿಮೊತ್ತವನ್ನೂ ಪಾವತಸಬೇಕಾಗುತ್ತದೆ. ಆದಾಯ ತೆರಿಗೆ ಕಕಾಯಿದೆಯ ಸೆಕ್ಷನ್ 234ರಲ್ಲಿ ಈ ಕುರಿತು ವಿವರ ನೀಡಲಾಗಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234C ಪ್ರಕಾರ ನೀವು ಎಲ್ಲಾದರೂ ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದೆ ಇದ್ದರೆ ಪ್ರತಿತಿಂಗಳು ನೀವು ಬಾಕಿ ಉಳಿಸಿರುವ ತೆರಿಗೆಗೆ ಶೇಕಡ ೧ರಷ್ಟು ದಂಡ ಪಾವತಿಸಬೇಕು. ಅಂದರೆ, ಮುಂದಿನ ಐಟಿಆರ್ ಸಲ್ಲಿಕೆ ಅವಧಿಯವರೆಗೆ ನೀವು ಈ ಪೆನಾಲ್ಟಿ ಮೊತ್ತವನ್ನು ಪಾವತಿಸುತ್ತಿರಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ಟ್ ಸಲ್ಲಿಕೆ ಅವಧಿ ವಿಸ್ತರಣೆಯಿಲ್ಲ
ಪ್ರತಿವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಐಟಿಆರ್ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಲಾಗುವುದಿಲ್ಲವೆಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಕುರಿತು ನಿನ್ನೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
"ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ ೩೧ ಕೊನೆಯ ದಿನಾಂಕವಾಗಿದೆ. ಇದನ್ನು ವಿಸ್ತರಿಸಲಾಗುವುದಿಲ್ಲʼʼ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್ ಟ್ವೀಟ್ ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಇಲ್ಲಿಯವರೆಗೆ ಶೇಕಡ ೪೬ರಷ್ಟು ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್‌ಸಲ್ಲಿಸಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣಗಳಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ, ಈ ಬಾರಿ ಈ ರೀತಿ ವಿಸ್ತರಣೆ ಮಾಡಲಾಗುವುದಿಲ್ಲ. ಕಳೆದ ವರ್ಷ ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳೂ ಇದ್ದವು. ಹೀಗಾಗಿ, ಅನಿವಾರ್ಯವಾಗಿ ಐಟಿಆರ್ ಸಲ್ಲಿಕೆ ವಿಸ್ತರಿಸಲಾಗಿತ್ತು. ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಿಸಲಾಗುವುದಿಲ್ಲವಂತೆ. ಹೀಗಾಗಿ, ವಿಳಂಬ ಮಾಡದೆ ಐಟಿಆರ್ ಸಲ್ಲಿಸಿ, ಪೆನಾಲ್ಟಿಯಿಂದ ಪಾರಾಗಿ.
ವಿಭಾಗ