logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India On Russia Ukraine War: ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿಗೆ ಭಾರತ ಕಳವಳ; ಯುದ್ಧ ನಿಲ್ಲಿಸುವಂತೆ ಕರೆ

India on Russia Ukraine war: ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿಗೆ ಭಾರತ ಕಳವಳ; ಯುದ್ಧ ನಿಲ್ಲಿಸುವಂತೆ ಕರೆ

HT Kannada Desk HT Kannada

Oct 10, 2022 07:53 PM IST

google News

ಕೈವ್ ನಗರದ ಒಂದು ದೃಶ್ಯ

  • “ಮೂಲಸೌಕರ್ಯ ನಾಶ ಮತ್ತು ನಾಗರಿಕರ ಸಾವುಗಳನ್ನು ಗುರಿಯಾಗಿಸುವುದು ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷದ ಉಲ್ಬಣಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೈವ್ ನಗರದ ಒಂದು ದೃಶ್ಯ
ಕೈವ್ ನಗರದ ಒಂದು ದೃಶ್ಯ (AFP)

ಉಕ್ರೇನ್‌ ಗುರಿಯಾಗಿಸಿ ರಷ್ಯಾ ಮತ್ತೆ ದಾಳಿ ನಡೆಸುತ್ತಿದೆ. ಉಕ್ರೇನ್‌ನ ಕೈವ್ ಸೇರಿದಂತೆ ಇತರ ನಗರಗಳನ್ನು ಗುರಿಯಾಗಿಸಿ ರಷ್ಯಾದ ವೈಮಾನಿಕ ದಾಳಿ ನಡೆಸಿದೆ. ಸದ್ಯ ಈ ಬಗ್ಗೆ ಭಾರತ ಮೌನ ಮುರಿದಿದ್ದು, ಸಂಘರ್ಷದ ಉಲ್ಬಣಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ರಷ್ಯಾಗೆ ಸಲಹೆ ನೀಡಿರುವ ಭಾರತ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸಿ ಮಾತುಕತೆ ನಡೆಸುವಂತೆ ಕರೆ ನೀಡಿದೆ.

ಇಂದು ಬೆಳಗ್ಗಿನ ಜಾವ, ಜನರು ನಗರದಲ್ಲಿ ಸೇರುವ ಪ್ರಮುಖ ಅವಧಿಯಲ್ಲಿ ಉಕ್ರೇನ್‌ನ್‌ ನಗರದ ಮೇಲೆ ರಷ್ಯಾ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿತು. ಈ ಕ್ಷಿಪಣಿ ದಾಳಿಯಿಂದಾಗಿ ಹಲವು ನಾಗರಿಕರು ಪ್ರಾಣ ಕಳೆದುಕೊಂಡರು. ನಗರದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ದಾಳಿ ಬಗ್ಗೆ ಸಮರ್ಥನೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ ಎಂದು ಹೇಳಿದ್ದಾರೆ.

“ಮೂಲಸೌಕರ್ಯ ನಾಶ ಮತ್ತು ನಾಗರಿಕರ ಸಾವುಗಳನ್ನು ಗುರಿಯಾಗಿಸುವುದು ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷದ ಉಲ್ಬಣಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಈ ಹೇಳಿಕೆಯಲ್ಲಿ ರಷ್ಯಾ ದೇಶದ ಹೆಸರನ್ನು ವ್ಯಕ್ತಪಡಿಸಿಲ್ಲ.

"ಹಗೆತನವನ್ನು ಸಾಧಿಸುವುದು ಯಾರ ಹಿತಾಸಕ್ತಿಯೂ ಅಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಿ, ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ತುರ್ತಾಗಿ ಮರಳಲು ನಾವು ಒತ್ತಾಯಿಸುತ್ತೇವೆ. ಸಂಘರ್ಷವನ್ನು ನಿಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ,” ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 24ರಂದು ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ಪ್ರಾರಂಭವಾದಾಗಿನಿಂದಲೂ, ಹೋರಾಟಕ್ಕೆ ತಕ್ಷಣದ ಅಂತ್ಯವಿರಬೇಕು. ಅಲ್ಲದೆ ಪರಿಹಾರವನ್ನು ಕಂಡುಹಿಡಿಯಲು ಉಭಯ ದೇಶಗಳು ಮಾತುಕತೆ ಪುನರಾರಂಭಿಸಬೇಕು ಎಂದು ಭಾರತ ಹೇಳುತ್ತಿದೆ.

ಸೆಪ್ಟೆಂಬರ್ 16ರಂದು ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation) ಶೃಂಗಸಭೆಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ಮಾತನಾಡಿದ್ದರು. ಈ ವೇಳೆ “ಇಂದಿನ ಯುಗ ಯುದ್ಧವಲ್ಲ” ಎಂದು ಮೋದಿ ಪುಟಿನ್‌ಗೆ ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದ ಕಾಳಜಿಯ ಬಗ್ಗೆ ವಿವರಿಸಿದ ಮೋದಿ, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ಭಾರತವು ಈವರೆಗೆ ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ಆಕ್ರಮಣದ ಬಗ್ಗೆ ಸಾರ್ವಜನಿಕವಾಗಿ ಟೀಕಿಸುವುದರಿಂದ ದೂರವೇ ಉಳಿದಿತ್ತು. ಅಲ್ಲದೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಉಕ್ರೇನ್ ಸಂಬಂಧಿತ ನಿರ್ಣಯಗಳಿಂದಲೂ ದೂರವಿತ್ತು.

ರಷ್ಯಾ ಮತ್ತು ಉಕ್ರೇನ್‌ ನಡುವೆ ಕಳೆದ ಎಂಟು ತಿಂಗಳಿಂದ ಯುದ್ಧದ ವಾತಾವರಣವಿದೆ. ಈ ನಡುವೆ ಇಂದು ನಡೆದ ವಾಯುದಾಳಿಗಳು ಹಳೆಯ ಯುದ್ಧ ಮತ್ತೆ ಉಲ್ಬಣಿಸಲು ಕಾರಣವಾಯಿತು. ರಷ್ಯಾದ ಕ್ರೂಸ್ ಕ್ಷಿಪಣಿಗಳು ಕೈವ್‌ ನಗರದ ಮಧ್ಯಭಾಗದಲ್ಲಿರುವ ಕಾರ್ಯನಿರತ ಟ್ರಾಫಿಕ್ ಛೇದಕಗಳು, ಉದ್ಯಾನವನಗಳು ಮತ್ತು ಪ್ರವಾಸಿ ತಾಣಗಳನ್ನು ಹೊಡೆದವು. ಪಶ್ಚಿಮ ನಗರಗಳಾದ ಎಲ್ವಿವ್, ಟೆರ್ನೋಪಿಲ್ ಮತ್ತು ಝೈಟೊಮಿರ್, ಪೂರ್ವದ ಖಾರ್ಕಿವ್, ಡ್ನಿಪ್ರೊ ಮತ್ತು ಕ್ರೆಮೆನ್‌ಚುಕ್ ಮತ್ತು ದಕ್ಷಿಣದಲ್ಲಿ ಝಪೊರಿಝಿಯಾ ನಗರಗಳಲ್ಲೂ ಸ್ಫೋಟಗಳು ವರದಿಯಾಗಿವೆ. ಈ ದಾಳಿಯಿಂದ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ