logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು; 2 ದಿನ ಹೊಸ ಸದಸ್ಯರ ಪ್ರಮಾಣ, ಜೂ 26ಕ್ಕೆ ಸ್ಪೀಕರ್ ಆಯ್ಕೆ, ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜು

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು; 2 ದಿನ ಹೊಸ ಸದಸ್ಯರ ಪ್ರಮಾಣ, ಜೂ 26ಕ್ಕೆ ಸ್ಪೀಕರ್ ಆಯ್ಕೆ, ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜು

Umesh Kumar S HT Kannada

Jun 24, 2024 07:20 AM IST

google News

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು; 2 ದಿನ ಹೊಸ ಸದಸ್ಯರ ಪ್ರಮಾಣ, ಜೂ 26ಕ್ಕೆ ಸ್ಪೀಕರ್ ಆಯ್ಕೆ, ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜು

  • ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಶುರುವಾಗುತ್ತಿದೆ. ಹಂಗಾಮಿ ಸ್ಪೀಕರ್ ಆಗಿ ಸಂಸದ ಭರ್ತೃಹರಿ ಮಹತಾಬ್ ಪ್ರಮಾಣ ಸ್ವೀಕರಿಸಲಿದ್ದಾರೆ. ಅದಾಗಿ, 2 ದಿನ ಹೊಸ ಸದಸ್ಯರ ಪ್ರಮಾಣ ವಚನ ನಡೆಯಲಿದೆ ಜೂ 26ಕ್ಕೆ ಸ್ಪೀಕರ್ ಆಯ್ಕೆಆಗಲಿದೆ. ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜಾಗಿದೆ.

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು; 2 ದಿನ ಹೊಸ ಸದಸ್ಯರ ಪ್ರಮಾಣ, ಜೂ 26ಕ್ಕೆ ಸ್ಪೀಕರ್ ಆಯ್ಕೆ, ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜು
18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು; 2 ದಿನ ಹೊಸ ಸದಸ್ಯರ ಪ್ರಮಾಣ, ಜೂ 26ಕ್ಕೆ ಸ್ಪೀಕರ್ ಆಯ್ಕೆ, ನೀಟ್ ಅಕ್ರಮ ಪ್ರಸ್ತಾಪಿಸಲು ವಿಪಕ್ಷ ಸಜ್ಜು (Arvind Yadav/ Hindustan Times)

ನವದೆಹಲಿ: ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಲೋಕಸಭಾ ಅಧಿವೇಶನ ಇಂದು ಶುರುವಾಗುತ್ತಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನದ ಮೊದಲ ಎರಡು ದಿನ ಹೊಸ ಸದಸ್ಯರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಜೂನ್ 26ಕ್ಕೆ ಹೊಸ ಸ್ಪೀಕರ್ ಆಯ್ಕೆ ನಡೆಯಲಿದೆ. ನೀಟ್ ಪರೀಕ್ಷಾ ಅಕ್ರಮ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ವಿಪಕ್ಷಗಳು ಸಜ್ಜಾಗಿವೆ.

ಇಂದು ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಜನತಾ ಪಾರ್ಟಿ (ಬಿಜೆಪಿ ) ಸಂಸದ ಭರ್ತೃಹರಿ ಮಹತಾಬ್‌ ಅವರಿಗೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಅದಾಗಿ, ಹಂಗಾಮಿ ಸ್ಪೀಕರ್ ಹೊಸ ಸದಸ್ಯರಿಗೆ ಪ್ರಮಾಣ ಬೋಧಿಸುವರು.

ಎಲ್ಲ ಸದಸ್ಯರ ಪ್ರಮಾಣ ವಚನ ಸಮಾರಂಭ ಪೂರ್ಣಗೊಂಡ ಬಳಿಕ, ಲೋಕಸಭೆಯ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಇದು ಜೂನ್ 26ಕ್ಕೆ ನಡೆಯಲಿದೆ. ಇದಾದ ಬಳಿಕ ಜೂನ್ 27ಕ್ಕೆ ಸಂಸತ್ತಿನ ಉಭಯ ಸದನಗಳ ಅಂದರೆ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಲಿದ್ದಾರೆ. ಅದಾಗಿ ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಇರಲಿದ್ದು, ನಡುವೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಜುಲೈ ಮೂರಕ್ಕೆ ಈ ಅಧಿವೇಶನ ಸಂಪನ್ನವಾಗಲಿದೆ. ಅದಾಗಿ ಮುಂಗಾರು ಅಧಿವೇಶನ ಜುಲೈ 22ಕ್ಕೆ ಶುರುವಾಗಲಿದೆ. ಆ ಸಂದರ್ಭದಲ್ಲಿ ಬಜೆಟ್ ಮಂಡನೆಯಾಗಲಿದೆ.

ಬೆಲೆ ಏರಿಕೆ, ನೀಟ್ ಪರೀಕ್ಷಾ ಅಕ್ರಮ; ಟೀಕಾ ಪ್ರಹಾರಕ್ಕೆ ವಿಪಕ್ಷ ಸಜ್ಜು

ಹೊಸ ಸರ್ಕಾರದ ಮೊದಲ ಲೋಕಸಭಾ ಅಧಿವೇಶನದಲ್ಲಿ ಬೆಲೆ ಏರಿಕೆ, ಆಹಾರ ಹಣದುಬ್ಬರ, ಅಭೂತಪೂರ್ವ ಬಿಸಿಗಾಳಿಯ ಕಾರಣದಿಂದಾಗಿ ಸಾವುಗಳು ಮತ್ತು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡುಮಾಡಿರುವ ಪರೀಕ್ಷಾ ಅಕ್ರಮಗಳಂತಹ ವಿಷಯಗಳೊಂದಿಗೆ ಟೀಕಾ ಪ್ರಹಾರ ನಡೆಸಲು ವಿಪಕ್ಷಗಳು ಸಜ್ಜಾಗಿವೆ.

ಈ ನಡುವೆ, ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಕಾಂಗ್ರೆಸ್‌, ಡಿಎಂಕೆ, ಟಿಎಂಸಿಗೆ ಇತ್ತಾದರೂ, ಅದನ್ನು ಪ್ರತಿಭಟನಾರ್ಥವಾಗಿ ತಿರಸ್ಕರಿಸಿವೆ. ಈ ಪಕ್ಷಗಳು ಇಂಡಿಯಾ ಬ್ಲಾಕ್‌ನ ಮಿತ್ರಪಕ್ಷಗಳಾಗಿದ್ದು, ಜನಪರವಾಗಿ ನಿಲ್ಲುವುದಾಗಿ ಘೋಷಿಸಿವೆ.

ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಸತತ ಅವಧಿಗೆ ಸುದೀರ್ಘ ಸೇವೆ ಸಲ್ಲಿಸಿದ ಸದಸ್ಯರನ್ನು ನೇಮಿಸುವ ನಿಯಮವನ್ನು ಸರ್ಕಾರ ಪಾಲಿಸುವುದಾಗಿ ಹೇಳಿದಾಗ, ಎಂಟು ಅವಧಿಯ ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರನ್ನು ನೇಮಕ ಮಾಡಬೇಕು ಎಂದು ಪ್ರತಿಪಕ್ಷಗಳು ಬಯಸಿದ್ದವು. ಆದರೆ ಸುರೇಶ್ ಅವರು ನಿರಂತರ ಗೆಲುವು ಸಾಧಿಸಿಲ್ಲ. ಅವರು 1998ರ ಮತ್ತು 2008ರಲ್ಲಿ ಸೋಲು ಅನುಭವಿಸಿದ್ದು, 8 ನೇರ ಅವಧಿಗಳಲ್ಲ. ಹೀಗಾಗಿ, ನಿರಂತರ ಏಳು ಅವಧಿಯ ಸಂಸದ ಭರ್ತೃಹರಿ ಮಹತಾಬ್ ಅವರ ನೇಮಕವಾಗಿದೆ.

ಡಿಎಂಕೆಯ ಟಿಆರ್ ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಅವರಿಗೂ ಹಂಗಾಮಿ ಸ್ಪೀಕರ್ ಆಗುವ ಅವಕಾಶ ಇತ್ತು. ಆದರೆ ಅವರು ಪ್ರತಿಭಟನಾರ್ಥವಾಗಿ ಅವಕಾಶ ತಿರಸ್ಕರಿಸಿದರು.

ಪ್ರಧಾನಿ ಮೋದಿ ಪ್ರಮಾಣದೊಂದಿಗೆ ಸದಸ್ಯರ ಪ್ರಮಾಣ ವಚನ ಶುರು

ಲೋಕಸಭೆಯ ಕಲಾಪಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಸಭಾನಾಯಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಹಂಗಾಮಿ ಸ್ಪೀಕರ್‌ಗೆ ಸಹಾಯ ಮಾಡಲು ರಾಷ್ಟ್ರಪತಿಗಳು ನೇಮಿಸಿದ ಅಧ್ಯಕ್ಷರ ಸಮಿತಿ ಇರಲಿದೆ.

ಪ್ರತಿಪಕ್ಷಗಳ ಆಕ್ರಮಣಕಾರಿ ಧೋರಣೆಯನ್ನು ನಿರೀಕ್ಷಿಸುತ್ತಿರುವ ಸರ್ಕಾರವು ತನ್ನ ಕಾರ್ಯತಂತ್ರದೊಂದಿಗೆ ಸಿದ್ಧವಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. “ನಾವು ಅವರನ್ನು (ವಿರೋಧ) ಸಂಪರ್ಕಿಸಿದ್ದೇವೆ. ಕಳೆದ ವಾರ ಸಚಿವ ರಿಜಿಜು ಅವರು ಕಾಂಗ್ರೆಸ್ ಅಧ್ಯಕ್ಷರನ್ನು (ಖರ್ಗೆ) ಭೇಟಿ ಮಾಡಿ ಎರಡು ಕಡೆ ಒಟ್ಟಾಗಿ ಕೆಲಸ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ,'' ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡುತ್ತಾ ಒಬ್ಬರು ನಾಯಕರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ