Pathankot attack: ಪಾಕಿಸ್ತಾನದಲ್ಲಿ 3 ಬಂದೂಕುಧಾರಿಗಳಿಂದ 2016ರ ಪಠಾಣ್‌ಕೋಟ್ ದಾಳಿಯ ಸಂಚುಕೋರ ಶಾಹಿದ್ ಲತೀಫ್ ಹತ್ಯೆ
Oct 11, 2023 04:14 PM IST
ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ, 2016 ರ ಪಠಾಣ್‌ಕೋಟ್ ದಾಳಿಯ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾದ ಶಾಹಿದ್ ಲತೀಫ್‌ನನ್ನು ಪಾಕಿಸ್ತಾನದ ಮಸೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. (ಸಾಂಕೇತಿಕ ಚಿತ್ರ)
ಭಾರತದಲ್ಲಿ 2016ರ ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿ ಬೇಕಾದವನಾಗಿದ್ದ ಜೆಇಎಂ ಉಗ್ರ ಶಾಹಿದ್ ಲತೀಫ್‌ನನ್ನು ಪಾಕಿಸ್ತಾನದಲ್ಲಿ ಮೂವರು ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿ ಹೇಳಿದೆ.
ನವದೆಹಲಿ: ಭಾರತದಲ್ಲಿ 2016ರಲ್ಲಿ ಸಂಭವಿಸಿದ ಪಠಾಣ್‌ಕೋಟ್ ಉಗ್ರದಾಳಿ (Pathankot attack) ಯ ಪಿತೂರಿಗಾರ ಜೈಷ್ ಏ ಮೊಹಮ್ಮದ್ ಉಗ್ರ (Jaish-e-Mohammaed terrorist) ಶಾಹಿದ್ ಲತೀಫ್ ಅಲಿಯಾಸ್ ಬಿಲಾಲ್ (Shahid Latif aka Bilal) ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ದಸ್ಕಾ ಪಟ್ಟಣದ ಮಸೀದಿಯಲ್ಲಿ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಭಾರತೀಯ ವಾಯುಪಡೆ (ಐಎಎಫ್) ನೆಲೆಯ ಮೇಲೆ 2016 ರಲ್ಲಿ ನಡೆದ ಪಠಾಣ್‌ಕೋಟ್ ದಾಳಿಯಲ್ಲಿ ನಾಲ್ವರು ದಾಳಿಕೋರರು ಮತ್ತು ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ದಾಳಿ ಸಂಬಂಧ ಲತೀಫ್ ಅನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿತ್ತು ರಾಷ್ಟ್ರೀಯ ತನಿಖಾ ಸಂಸ್ಥೆೆ (ಎನ್‌ಐಎ).
ಇಸ್ಲಾಮಿಕ್ ಪ್ರತ್ಯೇಕತಾವಾದಿ ಕಾಶ್ಮೀರಿ ಗುಂಪುಗಳ ಉಗ್ರಗಾಮಿಗಳು 2016ರ ಜನವರಿ 2 ರಂದು, ಭಾರತೀಯ ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ನ ಭಾಗವಾದ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿದರು.
ಘೋಷಿತ ಭಯೋತ್ಪಾದಕ ಜೆಇಎಂ ಉಗ್ರ ಲತೀಫ್
ಲತೀಫ್ ಅಲಿಯಾಸ್ ಬಿಲಾಲ್ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಪ್ರಕಾರ ಘೋಷಿತ ಭಯೋತ್ಪಾದಕ. ವರದಿಗಳ ಪ್ರಕಾರ, ಲತೀಫ್ ಅವರ ಇಬ್ಬರು ಸಹಚರರೊಂದಿಗೆ ಮೂವರು ಬಂದೂಕುಧಾರಿಗಳಿಂದ ಹತನಾಗಿದ್ಧಾನೆ.
ಉಗ್ರ ಲತೀಫ್ 1993ರಲ್ಲಿ ಕಾಶ್ಮೀರ ಕಣಿವೆಯೊಳಗೆ ನುಸುಳಿದ್ದು, ಒಂದು ವರ್ಷದ ಬಳಿಕ ಆತನನ್ನು ಬಂಧಿಸಲಾಗಿತ್ತು. 2010 ರವರೆಗೆ ಜೆಎಂ ಸಂಸ್ಥಾಪಕ ಮಸೂದ್ ಅಜರ್ ಜತೆಗೆ ಜಮ್ಮು ಜೈಲಿನಲ್ಲಿದ್ದ. 2010 ರಲ್ಲಿ ಬಿಡುಗಡೆಯಾದ ನಂತರ ಆತನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು. ಅಲ್ಲಿ ಆತ ಔಪಚಾರಿಕವಾಗಿ ಭಯೋತ್ಪಾದಕ ಗುಂಪಿಗೆ ಸೇರಿದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ನೆಲೆದಲ್ಲಿ ಜೆಇಎಂಗೆ ದೊಡ್ಡ ಹೊಡೆತ
ಪಾಕಿಸ್ತಾನದ ನೆಲದಲ್ಲಿ ಜೆಇಎಂಗೆ ಇದು ದೊಡ್ಡ ಹೊಡೆತವಾಗಿದೆ. ಇದರೊಂದಿಗೆ ಲತೀಫ್ ಯುಎಪಿಎ ಪ್ರಕಾರ ಭಾರತವು ಭಯೋತ್ಪಾದಕರೆಂದು ಘೋಷಿಸಿದ ಮತ್ತು ಇತರ ದೇಶಗಳಲ್ಲಿ ನಿಗೂಢವಾಗಿ ಕೊಲ್ಲಲ್ಪಟ್ಟ ಉಗ್ರರ ಸಣ್ಣ ಪಟ್ಟಿಗೆ ಸೇರಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣವು ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧ ಹಾಳುಮಾಡಿತು. 2023ರ ಜೂನ್ ತಿಂಗಳು, ಖಾಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಗುರುನಾನಕ್ ಸಿಖ್ ಗುರುದ್ವಾರ ದೇವಸ್ಥಾನದ ಮೈದಾನದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಇದೇ ರೀತಿ, ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್) ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾರ್ ಅವರನ್ನು 2023 ರ ಮೇ ತಿಂಗಳಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ವರದಿಗಳ ಪ್ರಕಾರ, ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಪಂಜ್ವಾರ್ ಲಾಹೋರ್‌ನ ಜೋಹರ್ ಟೌನ್‌ನಲ್ಲಿ ತನ್ನ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸುವ ವೇಳೆ ಹತ್ಯೆ ಮಾಡಲಾಗಿದೆ.
2016ರ ಪಠಾಣ್‌ಕೋಟ್ ದಾಳಿ
ಪಠಾಣ್‌ಕೋಟ್ ಏರ್ ಫೋರ್ಸ್ ಸ್ಟೇಷನ್‌ಗೆ 2016ರ ಜನವರಿ 2ರಂದು ಜೆಇಎಂ ಭಯೋತ್ಪಾದಕರು ನುಸುಳಿ ದಾಳಿ ನಡೆಸಿದರು. ಈ ದಾಳಿಯಲ್ಲಿ ಏಳು ಐಎಎಫ್ ಸಿಬ್ಬಂದಿ ಕೊಲ್ಲಲ್ಪಟ್ಟರು. ಈ ಉಗ್ರರು ಮೂರು ದಿನಗಳ ಕಾಲ ವಾಯುನೆಲೆಯಲ್ಲಿ ಅವಿತಿದ್ದರು.
ಗುಂಡಿನ ಕಾಳಗ ಮತ್ತು ನಂತರದ ಕೂಂಬಿಂಗ್ ಕಾರ್ಯಾಚರಣೆಯು ಜನವರಿ 2 ರಂದು ಸುಮಾರು 17 ಗಂಟೆಗಳ ಕಾಲ ನಡೆಯಿತು. ಪರಿಣಾಮ ಐವರು ದಾಳಿಕೋರರು ಮತ್ತು ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು. ಇನ್ನು ಮೂವರು ಯೋಧರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹಾಗೆ ಮೃತ ಯೋಧರ ಸಂಖ್ಯೆ ಆರು ಮಂದಿಗೆ ಏರಿಕೆಯಾಗಿತ್ತು.
ಮಾರನೇ ದಿನ ಜನವರಿ 3 ರಂದು, ಹೊಸದಾಗಿ ಗುಂಡಿನ ದಾಳಿ ನಡೆದವು. ಅದರಲ್ಲಿ ಇನ್ನೊಬ್ಬ ಭದ್ರತಾ ಅಧಿಕಾರಿ ಐಇಡಿ ಸ್ಫೋಟದಿಂದ ಕೊಲ್ಲಲ್ಪಟ್ಟರು. ಕಾರ್ಯಾಚರಣೆಯು ಜನವರಿ 4 ರಂದು ಮುಂದುವರೆಯಿತು. ಐದನೇ ದಾಳಿಕೋರ ಆ ಕಾರ್ಯಾಚರಣೆಯಲ್ಲಿ ಮೃತಪಟ್ಟ.
‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್
“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.