logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ; ಸಾಕಾರವಾಯ್ತು ಶತಮಾನಗಳ ಕನಸು -Highlights

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ; ಸಾಕಾರವಾಯ್ತು ಶತಮಾನಗಳ ಕನಸು -Highlights

Rakshitha Sowmya HT Kannada

Jan 22, 2024 02:41 PM IST

google News

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ

  • ಅಯೋಧ್ಯೆ ರಾಮ ಮಂದಿರದಲ್ಲಿ ಸುಂದರ ಬಾಲರಾಮನ ನಗುಮೊಗದ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಶತಮಾನಗಳ ನಿರೀಕ್ಷೆ, ಲಕ್ಷಾಂತರ ಮಂದಿಯ ಪರಿಶ್ರಮ, ಸಂತರ ತಪಸ್ಸು ಸಾಕಾರಗೊಂಡ ಧನ್ಯತೆ ಈಗ ದೇಶವನ್ನು ಆವರಿಸಿದೆ. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿವೆ. ರಾಮ ಭಕ್ತಿಯ ಚೈತನ್ಯ ರಾರಾಜಿಸುತ್ತಿದೆ. Ayodhya Ram Mandir News Live in kannada

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ

̤Ayodhya Ram Mandir: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ (ಜ 22) ಮುದ್ದು ಮೊಗದ ಬಾಲರಾಮನ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ವಿಧಿಗಳು ಹಿಂದೂ ಸಂಪ್ರದಾಯದ ವಿಧಾನಕ್ಕೆ ಅನುಗುಣವಾಗಿ ನಡೆಯಿತು. ಶುಭ ಅಭಿಜಿತ್ ಮುಹೂರ್ತದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಮನೆ ಮನಗಳಲ್ಲಿ ಬೆಳಗಲಿ ರಾಮಜ್ಯೋತಿ; ನರೇಂದ್ರ ಮೋದಿ

2.40 PM: ದೇಶದಾದ್ಯಂತ ಇಂದು ಜನರು ರಾಮನ ಜಪ ಮಾಡುವ ಜೊತೆಗೆ ರಾಮಜ್ಯೋತಿಯನ್ನು ಬೆಳಗುತ್ತಿದ್ದಾರೆ. ರಾಮನ ಹೆಸರಿನಲ್ಲಿ ದೇಶದಲ್ಲಿ ದೀಪಾವಳಿ ನಡೆಯುತ್ತಿದೆ. ಭಾರತೀಯ ಆತ್ಮದ ಪ್ರತಿಕಣ ಕಣದಲ್ಲೂ ರಾಮನಿದ್ದಾನೆ. ರಾಮಮಂದಿರ ನಿರ್ಮಾಣಕ್ಕೆ ನ್ಯಾಯದೇವತೆಯೂ ಅಸ್ತು ಎಂದಿದ್ದಳು. ಒಟ್ಟಾರೆ ದಿನ ಬಹುಕೋಟಿ ಭಾರತೀಯರ ಪ್ರಾರ್ಥನೆ ಫಲ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ರಾಮನ ಬಳಿ ಕ್ಷಮೆ ಕೇಳುತ್ತೇನೆ ಎಂದ ಮೋದಿ

2.29 PM: ರಾಮನು ಭಾರತೀಯರ ಅಂತರಾತ್ಮದಲ್ಲಿ ನೆಲೆಯಾಗಿದ್ದಾನೆ. ನಾನು ಈ ವೇಳೆ ರಾಮನ ಬಳಿ ಕ್ಷಣ ಕೇಳುತ್ತೇನೆ. ರಾಮಮಂದಿರ ನಿರ್ಮಾಣಕ್ಕೆ ಇಷ್ಟು ಸಮಯ ತೆಗೆದುಕೊಂಡಿರುವುದಕ್ಕೆ ನಾನು ಪ್ರಭು ಶ್ರೀರಾಮನ ಬಳಿ ಕ್ಷಮೆ ಕೇಳುತ್ತೇನೆ.

1000 ವರ್ಷಗಳ ನಂತರವೂ ನೆನಪಿನಲ್ಲಿ ಉಳಿಯುವ ದಿನವಿದು

2. 27 PM: ದೇಶದಾದ್ಯಂತ ರಾಮನ ಜಪ ನಡೆಯತ್ತಿದೆ. ಇಂದು ಸಂಜೆ ದೇಶದ ಪ್ರತಿ ಮನೆಮನೆಯಲ್ಲೂ ರಾಮ ಹೆಸರಿನಲ್ಲಿ ದೀಪ ಬೆಳಗಿ, ದೀಪಾವಳಿ ಆಚರಿಸೋಣ. ಇದು 1000 ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುವ ದಿನವಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ರಾಮ ಬಂದಿದ್ದಾನೆ, ದಿವ್ಯ ಮಂದಿರದಲ್ಲಿ ರಾಮನಿರುತ್ತಾನೆ; ಮೋದಿ

2.22 PM: ಇಂದು ರಾಮನ ಆಗಮನವಾಗಿದೆ. ಹಲವರ ತ್ಯಾಗ, ಪರಿಶ್ರಮದ ಫಲವಾಗಿ ಪ್ರಭು ಶ್ರೀರಾಮನು ಅಯೋಧ್ಯೆಗೆ ಮರಳಿದ್ದಾನೆ. ಈ ಹೊತ್ತಿನಲ್ಲಿ ನನಗೆ ಮಾತು ಹೊರಡುತ್ತಿಲ್ಲ. ಬಾಲರಾಮ ಇನ್ನು ಮುಂದೆ ಟೆಂಟ್‌ನಲ್ಲಿ ಇರುವುದಿಲ್ಲ, ಭವ್ಯ ಮಂದಿರದಲ್ಲಿ ಇರುತ್ತಾನೆ ಎಂದು ಮೋದಿ ಹೇಳಿದ್ದಾರೆ

ದೇಶದೆಲ್ಲೆಡೆ ರಾಮಜಪ

1.16 PM: ರಾಮಮಂದಿರ ಉದ್ಘಾಟನೆಯ ಈ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ರಾಮಜಪ, ರಾಮಭಜನೆಯ ಸದ್ದು ಮೊಳಗುತ್ತಿದೆ.

ರಾಮಮಂದಿರದ ಗರ್ಭಗುಡಿಯಲ್ಲಿ ಮೊಳಗುತ್ತಿರುವ ಮಂತ್ರಘೋಷ

1.10 PM: ಬಾಲರಾಮನ ಅನಾವರಣವಾಗಿ ಪೂಜಾ ಕಾರ್ಯಕ್ರಮಗಳು ಮುಂದುವರಿಯುತ್ತಿರುವ ಈ ಹೊತ್ತಿನಲ್ಲಿ ಗರ್ಭಗುಡಿಯ ಒಳಗೆ ಮಂತ್ರಘೋಷಗಳು ಮೊಳಗುತ್ತಿವೆ.

1.07 PM: ಬಾಲರಾಮನ ಅಂದವನ್ನು ನೀವು ಕಣ್ತುಂಬಿಕೊಳ್ಳಿ

ಬಾಲರಾಮನ ಪಾದಕ್ಕೆ ಕಮಲದ ಹೂ ಅರ್ಪಣೆ

1.04 PM: ಲೋಕಾರ್ಪಣೆಗೊಂಡ ಬಾಲರಾಮ ಭವ್ಯ ಪ್ರತಿಮೆಗೆ ಆರತಿ ಬೆಳಗಿದ ನಂತರ ಪ್ರಧಾನಿ ಮೋದಿ ಶ್ರೀರಾಮನ ಪಾದಾರವಿಂದಗಳಿಗೆ ಕಮಲದ ಹೂಗಳನ್ನು ಅರ್ಪಿಸಿದ್ದಾರೆ.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಲೈವ್‌ ವೀಕ್ಷಿಸುತ್ತಿರುವ ಅಮಿತ್‌ ಷಾ

1.00 PM: ದೆಹಲಿಯ ಬಿರ್ಲಾ ಮಂದಿರದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಷಾ, ಮೀನಾಕ್ಷಿ ಲೇಖಿ ಹಾಗೂ ಇತರರು ಬಾಲ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಲೈವ್‌ ವೀಕ್ಷಿಸಿದರು.

ಬಾಲರಾಮನಿಗೆ ಆರತಿ ಬೆಳಗುತ್ತಿರುವ ಪ್ರಧಾನಿ ಮೋದಿ

12.59: ಬಾಲರಾಮನ ಪ್ರತಿಮೆ ಅನಾವರಣವಾಗಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ ಪ್ರಧಾನಿ ಮೋದಿ ಬಾಲ ರಾಮನ ಭವ್ಯ ಪ್ರತಿಮೆಗೆ ಆರತಿ ಬೆಳಗಿದ್ದಾರೆ.

ರಾಮಮಂದಿರದ ಮೇಲೆ ಹೂವಿನ ಮಳೆ ಸರಿಸಿದ ಐಎಎಫ್ ಹೆಲಿಕಾಪ್ಟರ್‌ಗಳು

12.52 PM: ರಾಮನ ಜನ್ಮಭೂಮಿ ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮ ಮುಖ ಅನಾವರಣಗೊಳ್ಳ ತ್ತಿದ್ದಂತೆ ಐಎಎಫ್ ಹೆಲಿಕಾಪ್ಟರ್‌ಗಳು ಶ್ರೀರಾಮನ ಸನ್ನಿಧಿಯ ಮೇಲೆ ಹೂಗಳ ಮಳೆಯನ್ನು ಹರಿಸಿವೆ.

ಬಾಲರಾಮನಿಗೆ ಮೋದಿಯಿಂದ ಪೂಜೆ

12.47 PM: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಅವರು ಬಾಲರಾಮ ಪ್ರಾಣ ಪ್ರತಿಷ್ಠಾ ನಂತರ ಪೂಜಾ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಇದ್ದಾರೆ.

ದೇಶದೆಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

12.45 PM : ಅತ್ತ ಅಯೋಧ್ಯೆಯಲ್ಲಿ ಬಾಲ ರಾಮನ ಮುಖ ಅನಾವರಣವಾದ ಮರುಕ್ಷಣವೇ ದೇಶದಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಡೆ ಜೈ ಶ್ರೀರಾಮ ಎಂದು ಭಕ್ತರು ಉದ್ಘೋಷ ಹೊರಡಿಸುತ್ತಿದ್ದಾರೆ. ಪಟಾಕಿ ಹೊಡೆಯುವ ಮೂಲಕ ಸಂಭ್ರಮಿಸುತ್ತಿದ್ದಾರೆ. ದೇವಾಯಲಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳ ಗಂಟಾಘೋಷ ಮುಗಿಲು ಮುಟ್ಟಿದೆ.

ರಾಮನ ಪಾದಕ್ಕೆ ಪುಷ್ಪಾರ್ಚನೆ ಮಾಡಿದ ಮೋದಿ

12.41 PM: ಬಾಲ ರಾಮನ ಪ್ರತಿಮೆ ಅನಾವರಣವಾದ ಕೆಲ ಹೊತ್ತಿಗೆ ರಾಮನ ಪಾದಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ ಪ್ರಧಾನಿ ಮೋದಿ. ಆ ವೇಳೆ ಅವರ ಮೊಗದಲ್ಲಿ ಧನ್ಯತಾ ಭಾವ ಆವರಿಸಿದ್ದನ್ನು ಕಾಣಬಹುದಾಗಿದೆ.

ನನ್ನ ಬದುಕಿನ ಅತ್ಯಂತ ಸಂಸತದ ಕ್ಷಣ; ಮೋದಿ

12.36 PM: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಅಲೌಕಿಕ ಕ್ಷಣ ಎಲ್ಲರನ್ನೂ ಭಾವುಕತೆಗೆ ಒಳಗಾಗಿಸಿದೆ. ಈ ದಿವ್ಯ ಕಾರ್ಯಕ್ರಮದ ಭಾಗವಾಗಿರುವುದು ನನ್ನ ಸಂತಸ ಇಮ್ಮಡಿಗೊಳಿಸಿದೆ. ಜಯ್ ಸಿಯಾ ರಾಮ್! ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಲರಾಮನ ಮೂರ್ತಿ ಅನಾವರಣ

12.34 PM: ದೇಶದಾದ್ಯಂತ ರಾಮಭಕ್ತರು ಕಾತರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದಿದೆ. ಬಾಲರಾಮನ ಮೂರ್ತಿಯ ಅನಾವರಣವಾಗಿದೆ. ದೇಶದೆಲ್ಲೆಡೆ ಜೈಶ್ರೀರಾಮ್‌ ಮಂತ್ರಘೋಷ ಮೊಳಗಿದೆ

ಬೀಜಾಕ್ಷರಗಳ ಘೋಷಣೆಯೊಂದಿಗೆ ಮೊಳಗಿತು ಶಂಖನಾದ

12.33 PM: ಅಯೋಧ್ಯೆಯಲ್ಲಿ ಬಾಲರಾಮನ ಸುಂದರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ಅಂತಿಮ ಘಟ್ಟಕ್ಕೆ ಮುಟ್ಟಿವೆ. ಕೈಲಿ ಹೂ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಭಕ್ತಿಯಿಂದ ರಾಮನ ಪಾದಕ್ಕೆ ನಮಸ್ಕರಿಸಿದರು. ಪ್ರಾಣ ಪ್ರತಿಷ್ಠಾಪನೆಗಳ ವಿಧಿಗಳನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಿದರು.

ಬಾಲರಾಮನ ಪ್ರಾಣ ಪ್ರತಿಷ್ಠೆ; ಪೂಜಾ ವಿಧಿವಿಧಾನಗಳಲ್ಲಿ ನರೇಂದ್ರ ಮೋದಿ ಭಾಗಿ

12.24 PM: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗವಹಿಸಿದ್ದಾರೆ.

ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಆರಂಭ

12.15 PM: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳು ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಲ್ಲಿ ಭಾಗವಹಿಸಿದ್ದಾರೆ.

ರಾಮನ ಅಂಗಳಕ್ಕೆ ಸೆಲೆಬ್ರಿಟಿಗಳ ಆಗಮನ

12. 05 PM: ರಿಲಯನ್ಸ್‌ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಕುಟುಂಬದವರು ರಾಮಮಂದಿರ ಅಂಗಳದಲ್ಲಿ ಬಂದಿಳಿದಿದ್ದಾರೆ.

ಸೋನು ನಿಗಮ್‌, ಶಂಕರ್‌ ಮಹಾದೇವನ್‌ರಿಂದ ಗಾನ ಸುಧೆ

12.00 PM: ಅಯೋಧ್ಯೆಯ ಅಂಗಳದಲ್ಲಿ ಗಾಯಕರಾದ ಸೋನು ನಿಗಮ್‌ ಹಾಗೂ ಶಂಕರ್‌ ಮಹಾದೇವನ್‌ ರಾಮ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿದ್ದಾರೆ.

ಅಯೋಧ್ಯೆ ತಲುಪಿದ ಪ್ರಧಾನಿ ನರೇಂದ್ರ ಮೋದಿ

11.57 AM: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕೆಲ ಸಮಯವಷ್ಟೇ ಬಾಕಿ ಇದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ತಲುಪಿದ್ದಾರೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆ ರಾಮಮಂದಿರ ಆವರಣಕ್ಕೆ ಬಂದಿಳಿದಿರುವ ಮೋದಿ ಇನ್ನೇನು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ಭೂಮಿಯಲ್ಲಿ ಜನಿಸಿದ ನಾನು ತುಂಬಾ ಪುಣ್ಯವಂತ; ಅರುಣ್‌ ಯೋಗಿರಾಜ್‌

11.25 AM: ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಮೈಸೂರಿನ ಅರುಣ್‌ ಯೋಗಿರಾಜ್‌ ಪ್ರಾಣ ಪ್ರತಿಷ್ಠೆಯ ಈ ಸುಸಂದರ್ಭದಲ್ಲಿ ಈ ಭೂಮಿ ಮೇಲೆ ಜನಿಸಿರುವ ನಾನೇ ಪುಣ್ಯವಂತ. ನಮ್ಮ ಮೇಲೆ ರಾಮನ ದಯೆ ಇರುವ ಕಾರಣಕ್ಕೆ ನಮ್ಮಿಂದ ಬಾಲರಾಮನನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದು ಮನದುಂಬಿ ನುಡಿದಿದ್ದಾರೆ.

ರಾಮ ಮಂದಿರಕ್ಕೆ ವಿವಿಧ ಗಣ್ಯರ ಆಗಮನ

11: 35 AM: ಅಯೋಧ್ಯೆ ರಾಮ ಮಂದಿರದಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಆರಂಭವಾಗಲಿದೆ. ಈ ಶುಭ ಗಳಿಗೆಗೆ ಸಾಕ್ಷಿಯಾಗಲು ವಿವಿಧ ಗಣ್ಯರು ರಾಮಮಂದಿರದತ್ತ ಧಾವಿಸುತ್ತಿದ್ದಾರೆ. ಮುಖೇಶ್‌ ಅಂಬಾನಿ, ಸುನಿಲ್‌ ಮಿತ್ತಲ್‌, ಯೋಗ ಗುರು ಬಾಬಾ ರಾಮ್‌ ದೇವ್‌, ಅಮಿತಾಬ್‌ ಬಚ್ಚನ್‌, ವಿಕ್ಕಿ ಕೌಶಲ್‌- ಕಟ್ರೀನಾ ಕೈಫ್‌, ಆಲಿಯಾ ಭಟ್‌-ರಣಬೀರ್‌ ಕಪೂರ್‌ ಹಾಗೂ ಇನ್ನಿತರರು ಆಗಮಿಸಿದ್ದಾರೆ.

ತಮ್ಮ ನಿವಾಸದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

11:20 AM:ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಕ್ಷೇತ್ರದ ಗಣ್ಯರು ಆಗಮಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ತೆರಳುವ ಮುನ್ನ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ತಮ್ಮ ನಿವಾಸದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತರ್‌

11:00 AM: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತರ್‌, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಯೋಧ್ಯೆಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇವಾಲಯದ ಗರ್ಭಗುಡಿಯಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸಲು ತಮಿಳುನಾಡಿನಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ತೆರವುಗೊಳಿಸಿದ ಪೊಲೀಸರು

10:42 AM: ಇಡೀ ದೇಶವೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ದೃಶ್ಯಗಳನ್ನು ನೋಡಲು ಕಾಯುತ್ತಿದೆ. ಇದಕ್ಕಾಗಿ ದೇಶದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಆದರೆ ತಮಿಳುನಾಡಿನ ಕಾಂಚಿಪುರಂ ದೇವಸ್ಥಾನದ ಬಳಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಆಡಳಿತಾರೂಢ ಡಿಎಂಕೆ ಸರ್ಕಾರವು ಹಿಂದೂ ವಿರೋಧಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ 466 ಎಲ್ಇಡಿ ಪರದೆಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಅವುಗಳಲ್ಲಿ 400 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಪರದೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಮಾನ್ಯರಂತೆ ಶ್ರೀರಾಮನ ಭಜನೆಯಲ್ಲಿ ತಲ್ಲೀನರಾದ ಸಚಿವ ಪ್ರಹ್ಲಾದ ಜೋಶಿ

10:22 AM: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾಗುವ ಈ ಶುಭ ಸಂದರ್ಭದಲ್ಲಿ ರಾಜ್ಯದ ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ದೇಶದೆಲ್ಲೆಡೆ ಮಠ , ಮಂದಿರ, ಮನೆಗಳಲ್ಲಿ ರಾಮನಾಮ ಝೇಂಕರಿಸುತ್ತಿದೆ. ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಥಾಪನೆಯ ಈ ಶುಭ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕೂಡಾ ಭಕ್ತಿ ಪೂರ್ವಕವಾಗಿ ಹೀಗೆ ಶ್ರೀ ರಾಮನ ಭಜನೆಯಲ್ಲಿ ತಲ್ಲೀನರಾಗಿದ್ದರು. ಸದಾ ಬಿಡುವಿಲ್ಲದ ಕೆಲಸ -ಕಾರ್ಯಗಳ ಮಧ್ಯೆಯೇ ಸಚಿವರು ದೇವಸ್ಥಾನದಲ್ಲಿ ಜನ ಸಾಮಾನ್ಯರಂತೆ ಕುಳಿತು ಭಜನೆ ಹಾಡಿದ್ದು ಗಮನ ಸೆಳೆದಿತ್ತು.

ಅಯೋಧ್ಯೆ ಸರಯೂ ತೀರದ ಫೋಟೋ ಹಂಚಿಕೊಂಡ ಪಿ ಟಿ ಉಷಾ

10:05 AM:ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ ಟಿ ಉಷಾ ಕೂಡಾ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಮ ಮಂದಿರ ತಲುಪುವ ಮುನ್ನ ಅಯೋಧ್ಯೆಯ ಸರಯೂ ನದಿಯ ದಡದಲ್ಲಿರುವ ಘಾಟ್‌ಗಳಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ''ಸರಯೂ ನದಿ ದಡದಲ್ಲಿ ಶಾಂತಿ ಮತ್ತು ದೈವಿಕ ಶಾಂತಿಯನ್ನು ಅನುಭವಿಸಿದೆ. ನದಿಯು ಅಯೋಧ್ಯೆ ಮತ್ತು ರಾಮನ ಇತಿಹಾಸಕ್ಕೆ ಸಾಕ್ಷಿಯಾಗಿದೆ'' ಎಂದು ಪಿಟಿ ಉಷಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನೇರಪ್ರಸಾರ- Video

9:50: AM: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಚ್‌ಟಿ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿರಂತರವಾಗಿ ವೀಕ್ಷಿಸಬಹುದು. ಈಗಾಗಲೇ ಹಲವು ಸೆಲೆಬ್ರಿಟಿಗಳು ಅಯೋಧ್ಯೆ ತಲುಪಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಮಿಳುನಾಡಿನ ಕಾಮಾಕ್ಷಿ ದೇಗುಲದಲ್ಲಿ ಅಯೋಧ್ಯೆ ನೇರ ಪ್ರಸಾರ

9:45: AM: ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ತಮಿಳುನಾಡಿನ ಕಾಮಾಕ್ಷಿ ದೇಗುಲದಲ್ಲಿ ಎಲ್‌ಸಿಡಿ ಪರದೆ ಅಳವಡಿಸಲಾಗುತ್ತಿದೆ. ಇಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇರ ಪ್ರಸಾರ ವೀಕ್ಷಿಸಲಿದ್ದಾರೆ. ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಲ್ಲಿ ರಾಮ ಜನ್ಮಭೂಮಿಯಿಂದ ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ನೋಡಲು ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ.

ಪ್ರಾಣ ಪ್ರತಿಷ್ಠಾಪನೆ ಮುಹೂರ್ತ

9:30: AM: ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 12:15 ರಿಂದ 12:45 ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಬಾಲರಾಮನ ಪ್ರತಿಷ್ಠಾಪನೆ ನೆರವೇರಲಿದೆ. ಸದ್ಯಕ್ಕೆ ದೇವಾಲಯದಲ್ಲಿ ವೇದ ಘೋಷ ವಾಕ್ಯಗಳು ಮೊಳಗುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗುತ್ತಿದೆ.

ರಾಮ ಮಂದಿರ ಉದ್ಘಾಟನೆ; ಜನತೆಗೆ ಶುಭ ಕೋರಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

9:05: AM: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಕಳೆಗಟ್ಟಿದೆ. ಈ ವಿಶೇಷ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಉಪರಾಷ್ಟ್ರಪತಿಗಳು, "ಈ ದಿನವನ್ನು ದೇಶದ ಇತಿಹಾಸದಲ್ಲಿ ಹೊಸ ಯುಗದ ಆರಂಭಿಕ ಕ್ಷಣ" ಎಂದು ಬಣ್ಣಿಸಿದ್ದಾರೆ.

ಕಪಿಲೆಯ ದಂಡೆ ಮೇಲೆ ಅಯೋಧ್ಯೆ ರಾಮಮಂದಿರ

8:40 AM: ಅತ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯತ್ತಿದ್ದರೆ ಇತ್ತ ರಾಜ್ಯದಲ್ಲೂ ಸಂಭ್ರಮ ಮುಗಿಲು ಮುಟ್ಟಿದೆ. ಮೈಸೂರು ಜಿಲ್ಲೆ ಟಿ ನರಸಿಪುರದ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ, ಕಪಿಲಾ ನದಿ ದಂಡೆಯ ಮೇಲೆ ಕಲಾವಿದ ರಘುನಂದನ್‌ ಎಂಬುವರು ಮರಳಿನ ಶಿಲ್ಪ ರಚಿಸಿದ್ದು ಗಮನ ಸೆಳೆಯುತ್ತಿದೆ.

ಬಾಲರಾಮನ ಪ್ರಾಣಪ್ರತಿಷ್ಠೆಗೆ ಮೊದಲಿನ ಸಂಭ್ರಮದ ವಿಡಿಯೋ ಶೇರ್ ಮಾಡಿದ ಟ್ರಸ್ಟ್

8:12 AM: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಮೊದಲು ಕಿರು ವಿಡಿಯೋವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಂಚಿಕೊಂಡಿದೆ.

ನಾನು ಅದೃಷ್ಟವಂತ; ತೆಲುಗು ಸ್ಟಾರ್‌ ಚಿರಂಜೀವಿ

08:06 AM: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ಗ್ರೇಟ್‌, ನಮಗೆ ದೊರೆತ ಅಪರೂಪದ ಅವಕಾಶವಿದು, ನಾನು ಆರಾಧಿಸುವ ಹನುಮನೇ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಂತೆ ಭಾಸವಾಗುತ್ತಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಸಾಕ್ಷಿಯಾಗುತ್ತಿರುವ ನಾವು ಅದೃಷ್ಟವಂತರು ಎಂದು ಚಿರಂಜೀವಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.

ಅಮೆರಿಕದಲ್ಲೂ ಸಂಭ್ರಮ, ಲಡ್ಡು ವಿತರಿಸಿದ ಭಕ್ತರು

07:47 AM: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೂ ಮುನ್ನ ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ 'ಓವರ್ಸೀಸ್ ಫ್ರೆಂಡ್ಸ್ ಆಫ್ ರಾಮ್ ಮಂದಿರ' ಸದಸ್ಯರು ಜನರಿಗೆ ಸಿಹಿ ವಿತರಿಸುತ್ತಿದ್ದಾರೆ. ಯುಎಸ್‌ನಾದ್ಯಂತ ಆಚರಣೆಗಳು ನಡೆಯುತ್ತಿವೆ, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಿಂದ ಬೋಸ್ಟನ್, ವಾಷಿಂಗ್ಟನ್, ಡಿಸಿ, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಇನ್ನಿತರ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಮ ಮಂದಿರ ಲೋಕಾರ್ಪಣೆ ನೇರ ಪ್ರಸಾರ ಆರಂಭ

07:25 AM: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಹೀಗೆ ನೋಡಿ. ದೂರದರ್ಶನ ಸೇರಿದಂತೆ ಹಲವು ವಾಹಿನಿಗಳು ಈಗಾಗಲೇ ನೇರ ಪ್ರಸಾರ ಅರಂಭಿಸಿವೆ.

ಕೇಸರಿ ಧ್ವಜ, ರಾಮನ ಕಟೌಟ್‌ಗಳಿಂದ ಮಿನುಗುತ್ತಿರುವ ಅಯೋಧ್ಯೆ

07:14 AM: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಅಂಗವಾಗಿ ಇಡೀ ನಗರವೇ ಕೇಸರಿ ಧ್ವಜ, ಶ್ರೀರಾಮನ ಕಟೌಟ್‌ಗಳಿಂದ ಅಲಂಕೃತಗೊಂಡಿದೆ. ಎತ್ತ ನೋಡಿದರೂ ನಾನಾ ಘೋಷಣೆಗಳಿರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಪ್ರತಿ ರಸ್ತೆಗಳನ್ನೂ ಶ್ರೀ ರಾಮನ ರಂಗೋಲಿ, ಕಲಾಕೃತಿಗಳಿಂದ ಅಲಂಕರಿಸಲಾಗಿದೆ. ಭಕ್ತರಿಗಾಗಿ ಪ್ರಮುಖ ಸ್ಥಲಗಳಲ್ಲಿ ಎಲ್ಇಡಿ ಪರದೆಗಳನ್ನು ವ್ಯವಸ್ಥೆ ಮಾಡಲಾಗಿದ್ದು ಸಂಜೆ ರಾಮಾಯಣವನ್ನು ಪ್ರಸಾರ ಮಾಡಲಾಗುತ್ತಿದೆ.

ಅರ್ಚಕರಿಗೆ ಸಿಎಂ ಯೋಗಿ ಆದಿನಾಥ್ ಗೌರವ ನಮನ

06:37 AM: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಮಠದ ಮುಖ್ಯಸ್ಥರು ಕೂಡಾ ಆಗಿದ್ದು, ಅವರ ಹಿಂದಿನ ಅರ್ಚಕರಾದ ಅವೈದ್ಯನಾಥ್ ಮತ್ತು ದಿಗ್ವಿಜಯ್‌ನಾಥ್‌ಗೆ ಗೌರವ ಸಲ್ಲಿಸಿದ್ದಾರೆ. ಇಂದು ಶ್ರೀರಾಮನ ಜನ್ಮಸ್ಥಳವಾದ ಶ್ರೀ ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ಹೊಸ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ತಲೆಮಾರುಗಳ ಹೋರಾಟ ಮತ್ತು ಶತಮಾನಗಳ ಸಂಕಲ್ಪ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ, ಯುಗ ಪುರುಷ ಬ್ರಹ್ಮಲಿನ್ ಮಹಂತ್ ದಿಗ್ವಿಜಯನಾಥ್ ಜಿ ಮಹಾರಾಜ್ ಮತ್ತು ರಾಷ್ಟ್ರೀಯ ಸಂತ ಬ್ರಹ್ಮಲಿನ್ ಮಹಂತ್ ಅವೈದ್ಯನಾಥ್ ಜಿ ಮಹಾರಾಜ್ ಅವರಿಗೆ ಭಾವನಾತ್ಮಕ ಶ್ರದ್ಧಾಂಜಲಿ ಅರ್ಪಿಸಲು ಬಯಸುತ್ತೇನೆ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಲಹಾಬಾದ್ ವಿವಿ ವಿದ್ಯಾರ್ಥಿಗಳಿಂದ ಬಾಲರಾಮನ ವಿಶ್ವದ ಅತಿದೊಡ್ಡ ರಂಗೋಲಿ

06:11 AM: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ಗೆ ಸಂಯೋಜಿತವಾಗಿರುವ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪೊಂದು ರಾಮಮಂದಿರ ಮತ್ತು ಬಾಲರಾಮನ ವಿಶ್ವದ ಅತಿದೊಡ್ಡ ರಂಗೋಲಿಯನ್ನು ರಚಿಸುತ್ತಿದೆ. ಸುಮಾರು 50 ಅಡಿ ಉದ್ದ 30 ಅಡಿ ಅಗಲದ ರಂಗೋಲಿಯನ್ನು ಸೋಮವಾರ, ಅಯೋಧ್ಯೆಯ ಮಹಾಮಸ್ತಕಾಭಿಷೇಕ ಸಮಾರಂಭದ ಜೊತೆಗೆ ಅನಾವರಣಗೊಳಿಸಲಾಗುವುದು. 30 ವಿದ್ಯಾರ್ಥಿನಿಯರು 10 ವಿದ್ಯಾರ್ಥಿಗಳು ಬಿಡಿಸುತ್ತಿರುವ ಈ ರಂಗೋಲಿಯನ್ನು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ದಾಖಲಿಸಲು ಅರ್ಜಿ ಸಲ್ಲಿಸಲಾಗಿದೆ.

114 ಕಲಶಗಳ ಪುಣ್ಯ ಜಲದಿಂದ ಪೂಜೆ

05:54 AM: ಮುಂಜಾನೆಯಿಂದಲೇ ರಾಮಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. 114 ಕಲಶಗಳ ಪುಣ್ಯ ಜಲದಿಂದ ಮೂರ್ತಿಯ ಸ್ನಾನ, ಮಹಾಪೂಜೆ, ಹೋಮ ಹವನಗಳು ನೆರವೇರಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ