logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Breaking News: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ, ಅಧಿಸೂಚನೆ ಜಾರಿ

Breaking News: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ, ಅಧಿಸೂಚನೆ ಜಾರಿ

Umesha Bhatta P H HT Kannada

Mar 11, 2024 06:53 PM IST

google News

CAA ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

    •  CAA ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ  ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ನಾಲ್ಕು ವರ್ಷಗಳ ಹಿಂದೆಯೇ ಇದಕ್ಕೆ ಒಪ್ಪಿಗೆ ನೀಡಿದ್ದರೂ ಜಾರಿಯಾಗಿರಲಿಲ್ಲ.
CAA ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
CAA ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. (Amit Shah Twitter)

ದೆಹಲಿ: ಈ ಹಿಂದೆಯೇ ಘೋಷಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು(CAA) ಜಾರಿಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಯಮಗಳನ್ನು ಗೃಹ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಜೈನ ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಪಡೆಯಲು ಈ ಕಾನೂನು ಸುಲಭಗೊಳಿಸುತ್ತದೆ. ಸತತ ಹತ್ತು ವರ್ಷದಿಂದ ಈ ವಿಚಾರವನ್ನು ಹೇಳುತ್ತಲೇ ಬರುತ್ತಿದ್ದ ಬಿಜೆಪಿ ವಿರೋಧದ ನಡುವೆಯೂ ವಿಧೇಯಕ ಮಂಡಿಸಿ ನಾಲ್ಕು ವರ್ಷದ ಹಿಂದೆಯೇ ಅದಕ್ಕೆ ಅನುಮತಿ ಪಡದಿತ್ತು. ಈಗ ಕಾಯಿದೆ ರೂಪವನ್ನು ಇದಕ್ಕೆ ನೀಡಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ವಾರದ ನಂತರ ಈ ಬೆಳವಣಿಗೆ ನಡೆದಿದೆ.

2014 ರ ಡಿಸೆಂಬರ್ 31 ಕ್ಕಿಂತ ಮೊದಲು ಈ ದೇಶಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಗುರಿಯನ್ನು ಈ ಕಾನೂನು ಹೊಂದಿದೆ. 2019 ರಲ್ಲಿ ಈ ಕಾನೂನು ಜಾರಿಗೆ ಬಂದ ನಂತರ, ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸಿಎಎ ಕಾನೂನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಳೆದ ತಿಂಗಳು ಅಮಿತ್ ಶಾ ಹೇಳಿದ್ದರು.

ಇದನ್ನು ಚುನಾವಣೆಗೆ ಮೊದಲು ಜಾರಿಗೆ ತರಲಾಗುವುದು. ಇದು ದೇಶದ ಕಾನೂನು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಇದನ್ನು ಕಲ್ಲಿನಲ್ಲಿ ಸ್ಥಾಪಿಸಲಾಗಿದೆ. ಇದು ವಾಸ್ತವ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಅಮಿತ್‌ ಶಾ ಗಟ್ಟಿ ದನಿಯಲ್ಲೇ ಹೇಳಿದ್ದರು. ಸಿಎಎ ದೇಶದ ಕಾನೂನು. ಕಾನೂನು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂದು ಅವರು ಅಲ್ಪಸಂಖ್ಯಾತರಿಗೆ ಭರವಸೆ ನೀಡಿದ್ದರು.

"ಸಿಎಎ ಅದರ ಸುತ್ತ ಯಾವುದೇ ಗೊಂದಲ ಇರಬಾರದು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಯ್ದೆಯಲ್ಲಿ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ" ಎಂದು ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಇಟಿ ನೌ-ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಶಾ ಹೇಳಿದ್ದರು.

ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ಕಾಂಗ್ರೆಸ್ ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಭರವಸೆ ನೀಡಿತ್ತು. ಈಗ ಅವರು ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಶಾ ಟೀಕೆ.

ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಅಥವಾ ಎನ್ಆರ್ಸಿ (ರಾಷ್ಟ್ರೀಯ ನಾಗರಿಕರ ನೋಂದಣಿ) ಜಾರಿಗೆ ತಮ್ಮ ಸರ್ಕಾರ ಅನುಮತಿಸುವುದಿಲ್ಲ ಎಂದು ಹೇಳಿದರು.

ಸಿಎಎ, ಎನ್ಆರ್ಸಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳವನ್ನು ವಿಭಜಿಸುವ ರಾಜಕೀಯ, ಮಾಟುವಾ ಸಮುದಾಯವನ್ನು ವಿಭಜಿಸುವ ಸುಳ್ಳು ರಾಜಕೀಯ ಅಥವಾ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ಸುಳ್ಳು ರಾಜಕೀಯವನ್ನು ನಾವು ಅನುಮತಿಸುವುದಿಲ್ಲ. ನಾವು ಇದನ್ನು ಒಪ್ಪುವುದಿಲ್ಲ. ಅವರು ಬಂಗಾಳಕ್ಕೆ ೪೦೦ ಕ್ಕೂ ಹೆಚ್ಚು ತಂಡಗಳನ್ನು ಕಳುಹಿಸಿದರು. ನಮ್ಮ ಸಹೋದರಿಯರನ್ನು ಸುಟ್ಟುಹಾಕಿದ ಮಣಿಪುರಕ್ಕೆ ನೀವು ಎಷ್ಟು ತಂಡಗಳನ್ನು ಕಳುಹಿಸಿದ್ದೀರಿ ಎಂದು ಕಾರವಾಗಿಯೇ ಪ್ರಶ್ನಿಸಿದ್ದರು.

ಪರ ವಿರೋಧದ ದನಿಯ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಯಮಗಳನ್ನು ಗೃಹ ಸಚಿವಾಲಯ ಪ್ರಕಟಿಸಿದ್ದು. ಇದು ಭಾರತದಲ್ಲಿ ಜಾರಿಯಾಗಲಿದೆ.

ಪೌರತ್ವ ತಿದ್ದುಪಡಿ ಕಾಯ್ದೆ, ಏನಿದರ ವಿಶೇಷ, ಯಾರಿಗಾದರೂ ಇದರಿಂದ ಅಡ್ಡಿಯಾಗಲಿದೆಯಾ?

1) ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದೇಶಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಅವಕಾಶ ನೀಡುತ್ತದೆ.

2) ಈ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳದ ಕಾರಣ 2014ರ ಡಿಸೆಂಬರ್ 31 ರವರೆಗೆ ಭಾರತಕ್ಕೆ ಆಗಮಿಸಿದ ಉಲ್ಲೇಖಿಸಲಾದ ಸಮುದಾಯಗಳನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ. ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂಬ ಅಂಶ ಹೊಸ ತಿದ್ದುಪಡಿಯಲ್ಲಿದೆ.

3) ನಿಕಟಪೂರ್ವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು 2019ರ ಡಿಸೆಂಬರ್‌ 12ರಂದು ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ.

4) ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಸಿಎಎ 2019 ಅನ್ನು ಕೋವಿಡ್‌ 19ರ ಸಂಕಷ್ಟ ಕೊನೆಗೊಂಡ ಬಳಿಕ ಜಾರಿಗೊಳಿಸುವುದಾಗಿ ಹೇಳಿದ್ದರು.

5) ಪೀಡಿತರಿಗೆ ಪರಿಣಾಮಕಾರಿ ಕಾನೂನು ನೆರವು ನೀಡಲು ದೇಶಾದ್ಯಂತ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಸೃಷ್ಟಿಸಲು ನಾವು ಭಾರತೀಯ ಮಹಿಳೆಯರು ಸಲ್ಲಿಸಿದ ಮನವಿ ಸೇರಿದಂತೆ ಇತರ ಕೆಲವು ಪಿಐಎಲ್‌ಗಳನ್ನು ಸಲ್ಲಿಸಲಾಗಿತ್ತು.

6) ದೇಶದಲ್ಲಿ ಕೌಟುಂಬಿಕ ಹಿಂಸಾಚಾರ ಮುಂದುವರಿದಿದ್ದು, ಮಹಿಳೆಯರ ವಿರುದ್ಧ ಸಾಮಾನ್ಯ ಅಪರಾಧ ಇದುವೇ ಆಗಿದೆ. ದೇಶದಲ್ಲಿ 15 ವರ್ಷ ಹಿಂದೆಯೇ ಕಾನೂನು ಜಾರಿಯಾಗಿದ್ದರೂ, ಪರಿಣಾಮಕಾರಿ ಅನುಷ್ಠಾನ ಆಗಿಲ್ಲ ಎಂದು ಅರ್ಜಿ ಹೇಳಿತ್ತು

7) ಸುಪ್ರೀಂ ಕೋರ್ಟ್‌ 2019ರ ಡಿಸೆಂಬರ್ 18 ರಂದು ಅರ್ಜಿಗಳ ವಿಚಾರಣೆ ನಡೆಸಿದ ವೇಳೆ, ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಾರ್ಯಾಚರಣೆಯನ್ನು ತಡೆಯಲು ನಿರಾಕರಿಸಿತ್ತು. ಆದರೆ ಕೇಂದ್ರಕ್ಕೆ ನೋಟಿಸ್ ನೀಡಿತ್ತು.

8) ಸಿಎಎಯನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಒಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಈ ಕಾಯಿದೆಯು ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಹೊರಗಿಡುವ ಮೂಲಕ ಅಕ್ರಮ ವಲಸಿಗರ ಒಂದು ವಿಭಾಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ತಿಳಿಸಿತ್ತು.

9) ಪೌರತ್ವ ಕಾನೂನನ್ನು ಸಂಸತ್ತು ಅಂಗೀಕರಿಸಿದ ನಂತರ, ಭಾರತದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳಾದವು. ಪರಿಣಾಮ ನಡೆದ ಹಿಂಸಾಚಾರದಲ್ಲಿ ಅಂದಾಜು 100 ಜನ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು

10) ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಸೇರಿಕೊಂಡು ಈ ಸಿಎಎ ಕಾನೂನು ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿದೆ ಎಂಬುದು ಸಿಎಎ ವಿರೋಧಿಗಳ ಬಲವಾದ ನಂಬಿಕೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ