Delhi Liquor scam: ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಇಡಿ ಸಮನ್ಸ್, ನವೆಂಬರ್ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ
Oct 30, 2023 10:23 PM IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ಜಾರಿಯಾಗಿದ್ದು, ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಬಹಳಷ್ಟು ನಾಯಕರಿಗೆ ಸಂಕಷ್ಟವನ್ನು ತಂದೊಡ್ಡಿರುವ ಅಬಕಾರಿ ಹಗರಣದಲ್ಲಿ ಈಗ ವಿಚಾರಣೆ ಹಾಜರಾಗುವ ಸರದಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರದ್ದು. ಜಾರಿ ನಿರ್ದೇಶನಾಲಯ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ನ.2ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ನವದೆಹಲಿ: ಮಹತ್ವದ ವಿದ್ಯಮಾನ ಒಂದರಲ್ಲಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ)ಯ ನ್ಯಾಷನಲ್ ಕನ್ವೀನರ್ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ. ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಅದು ಅರವಿಂದ ಕೇಜ್ರೀವಾಲ್ ಅವರಿಗೆ ಸೂಚಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣ ಕೇಸ್‌ನ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನವೆಂಬರ್ 2 (ಗುರುವಾರ) ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿಚಾರಣೆ ನಡೆಸಲು ಸಿದ್ದರಾಗಿದ್ದಾರೆ.
ಎಎಪಿಯನ್ನು ನಿರ್ನಾಮ ಮಾಡುವುದೇ ಕೇಂದ್ರ ಸರ್ಕಾರದ ಗುರಿ: ಆರೋಪ
ಇಡಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿರುವ ಕುರಿತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಪ್ರತಿಕ್ರಿಯಿಸಿದ್ದು, “ಕೇಂದ್ರ ಸರ್ಕಾರದ ಇಡಿ ದೆಹಲಿ ಸಿಎಂಗೆ ಸಮನ್ಸ್ ಕಳುಹಿಸಿದೆ ಎಂಬ ಸುದ್ದಿಯ ಪ್ರಕಾರ, ಕೇಂದ್ರವು ಎಎಪಿಯನ್ನು ಹೇಗಾದರೂ ಮುಗಿಸುವ ಒಂದೇ ಒಂದು ಗುರಿಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳಲು ಮತ್ತು ಎಎಪಿಯನ್ನು ಮುಗಿಸಲು ಸುಳ್ಳು ಪ್ರಕರಣವನ್ನು ರೂಪಿಸುವಲ್ಲಿ ಏನನ್ನೂ ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದ ಮಾಸ್ಟರ್‌ಮೈಂಡ್ ಮತ್ತು ಕಿಂಗ್‌ಪಿನ್ ಎಂದ ಬಿಜೆಪಿ ನಾಯಕ
ಇಡಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿರುವ ಕುರಿತು ಬಿಜೆಪಿ ನಾಯಕ ಹರೀಶ್ ಖುರಾನಾ ಅವರು, "ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ ಮತ್ತು ನವೆಂಬರ್ 2 ರಂದು ತಮ್ಮ ಮುಂದೆ ಹಾಜರಾಗುವಂತೆ ಕೇಳಿದೆ ಎಂಬ ಸುದ್ದಿ ನಮಗೆ ಬಂದಿದೆ. ಇಂದು ಬೆಳಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಇದು ಇನ್ನಷ್ಟು ಮಹತ್ವದ್ದಾಗಿದೆ. ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದ ಮಾಸ್ಟರ್‌ಮೈಂಡ್ ಮತ್ತು ಕಿಂಗ್‌ಪಿನ್ ಆಗಿದ್ದು, ಈ ವಿದ್ಯಮಾನ ಗಮನಸೆಳೆದಿದೆ ಎಂದು ಹೇಳಿದರು.