Interesting News: ಆತ ಅನಕ್ಷರಸ್ಥ, ಆದ್ರೆ ತಂತ್ರಜ್ಞಾನ ಬಳಸಿ ಅತ್ಯಾಚಾರಗಳನ್ನು ಎಸಗಿ ಜೈಲು ಪಾಲಾದ !
May 26, 2024 09:58 AM IST
ವಾಯ್ಸ್ ಮೆಸೆಂಜರ್ ಆಪ್ ಬಳಸಿ ಯುವತಿಯನ್ನು ವಂಚಿಸಿ ಅತ್ಯಾಚಾರ ವೆಸಗಿದ್ದ ಯುವಕ ಹಾಗೂ ಆತನ ಸ್ನೇಹಿತರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
- Crime news ಮಧ್ಯಪ್ರದೇಶದಲ್ಲಿ( Madhya Pradesh) ಯುವಕನೊಬ್ಬ ತಂತ್ರಜ್ಞಾನ ಬಳಸಿಕೊಂಡು ಯುವತಿಯರ ಮೇಲೆ ಅತ್ಯಾಚಾರ ವೆಸಗಿರುವ ಪ್ರಕರಣ ವರದಿಯಾಗಿದೆ.
ಭೋಪಾಲ್: ಆತ ಓದಿದ್ದು ಅತಿ ಕಡಿಮೆ. ಓದು ಬರಹದಲ್ಲಿಯೇ ಅನಕ್ಷರಸ್ಥನೇ. ಆದರೆ ತಂತ್ರಜ್ಞಾನ ಬಳಕೆಯಲ್ಲಿ ನಿಪುಣ. ತಂತ್ರಜ್ಞಾನವನ್ನು ಒಳ್ಳೆಯ ಕೆಲಸಕ್ಕೆ ಬಳಸುವ ಬದಲು ಅದನ್ನು ದುರುಪಯೋಗ ಪಡಿಸಿಕೊಂಡು ಈಗ ಜೈಲು ಪಾಲಾಗಿದ್ದಾನೆ. ಆತನ ವಿರುದ್ದ ಏಳು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪಗಳು ಕೇಳಿ ಬಂದಿವೆ. ವಾಯ್ಸ್ ಮೆಜೆಂಜರ್ ಆಪ್ ( Voice Messenger App) ಮಹಿಳಾ ಪ್ರಾಧ್ಯಾಪಕರೊಬ್ಬರ ಧ್ವನಿಯಲ್ಲಿ ಕರೆ ಮಾಡಿ ವಿದ್ಯಾರ್ಥಿನಿಯರ ಓದಿಗೆ ನೆರವು ನೀಡುವುದಾಗಿ ಹೇಳಿ ವಂಚನೆ ಮಾಡುತ್ತಿದ್ದುದು ಈತ ಶೈಲಿ. ಇಂತಹ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ.
ಆತನ ಹೆಸರು ಬ್ರಜೇಶ್ ಕುಶ್ವಾ. ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯ ಹಳ್ಳಿಯೊಂದರ ನಿವಾಸಿ. ಮಹಾರಾಷ್ಟ್ರದ ಮಿಲ್‌ಗಳಲ್ಲಿ ಕೆಲಸ ಮಾಡುತ್ತದ್ದ ಬ್ರಜೇಶ್ ಕೈಗೆ ಗಾಯವಾಯಿತು ಎಂದು ಕೆಲಸ ಬಿಟ್ಟು ಊರಿಗೆ ಬಂದು ಸೇರಿಕೊಂಡಿದ್ದ. ಊರಲ್ಲೇ ಸಣ್ಣಪುಟ್ಟ ಕಲಸ ಮಾಡಿಕೊಂಡಿದ್ದ. ಕೆಲ ದಿನಗಳಿಂದ ಮೊಬೈಲ್ ವಾಯ್ಸ್ ಕರೆ ಮಾಡುವುದನ್ನು ಚೆನ್ನಾಗಿಯೇ ಕಲಿತುಕೊಂಡಿದ್ದ. ಅದನ್ನು ಬಳಸಿದ್ದು ಮಾತ್ರ ಕೆಟ್ಟ ಕೆಲಸಕ್ಕೆ.
ಕಾಲೇಜು ಹಾಗೂ ಪ್ರೌಢಶಾಲೆ ಓದುವ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಬ್ರಜೇಶ್ ಕರೆ ಮಾಡುತ್ತಿದ್ದ. ಅದರಲ್ಲೂಆದಿವಾಸಿ ವಿದ್ಯಾರ್ಥಿನಿಯರೇ ಆತನ ಮೊದಲ ಗುರಿ. ನಾನೊಬ್ಬ ಪ್ರಾಧ್ಯಾಪಕಿ. ನನಗೆ ಹಲವರು ಪರಿಚಯವಿದ್ದಾರೆ. ನಿಮ್ಮ ಓದಿಗೆ ಆರ್ಥಿಕ ನೆರವು ಕೊಡಿಸುವೆ. ನಿಮಗೆ ಹೆಚ್ಚಿನ ವಿದ್ಯಾರ್ಥಿ ವೇತನ ಸಿಗುವಂತೆ ಮಾಡುವೆ. ನಾನು ಒಬ್ಬ ಹುಡುಗನನ್ನು ಕಳುಹಿಸುತ್ತಿದ್ದೇನೆ. ಅತನಿಗೆ ಎಲ್ಲ ಮಾಹಿತಿ ನೀಡಿ. ನಿಮಗೆ ಸಹಾಯ ಮಾಡುತ್ತಾನೆ ಎನ್ನುವ ದನಿ ಇತ್ತ ಕಡೆಯಿಂದ ಕೇಳುತ್ತಿತ್ತು. ಇದನ್ನು ನಂಬಿದ ವಿದ್ಯಾರ್ಥಿನಿಯರು ಅಲ್ಲಿಗೆ ಹೋದರೆ ಹೆಲ್ಮೆಟ್ ಧರಿಸಿದ ರೀತಿಯಲ್ಲಿಯೇ ವಾಹನದೊಂದಿಗೆ ಬ್ರಜೇಶ್ ನಿಂತಿರುತ್ತಿದ್ದ. ಅವರನ್ನು ಕರೆದುಕೊಂಡು ಕಾಡಿನ ಪ್ರದೇಶಕ್ಕೆ ಹೋಗಿ ಅತ್ಯಾಚಾರ ಮಾಡುತ್ತಿದ್ದ. ಈ ರೀತಿ ಏಳು ವಿದ್ಯಾರ್ಥಿನಿಯರ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ. ಕೆಲವರು ಹೆದರಿ ಸುಮ್ಮನಾದರೆ, ಇನ್ನು ಕೆಲವರು ಪೋಷಕರಿಗೂ ತಿಳಿಸಿದ್ದರು. ಆದರೆ ನೊಂದ ವಿದ್ಯಾರ್ಥಿನಿಯೊಬ್ಬಳು ಪೋಷಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಳು.
ಆತ ಹೆಲ್ಮೆಟ್ ಧರಿಸಿಕೊಂಡು ಗಾಡಿಯಲ್ಲಿ ಬರುತ್ತಾನೆ. ಕೈಗೂ ಗ್ಲೌಸ್ ಹಾಕಿಕೊಳ್ಳುತ್ತಾನೆ. ವಾಯ್ಸ್ ಮೆಸೆಂಜರ್ ಮೂಲಕ ಕರೆ ಮಾಡುತ್ತಾನೆ ಎನ್ನುವ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಪೊಲೀಸರು ವಿಚಾರಣೆ ಆರಂಭಿಸಿದಾಗ ಬ್ರಜೇಶ್ ಸಿಕ್ಕಿಬಿದ್ದ. ಈತನಿಗೆ ಸಹಕರಿಸಿ ಇನ್ನೂ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಆತನ ವಿರುದ್ದ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಧಿ ಜಿಲ್ಲಾಡಳಿತವು ಬುಲ್ಡೋಜರ್ ಬಳಸಿ ಬ್ರಜೇಶ್ ನ ಮನೆಯನ್ನು ಧ್ವಂಸ ಮಾಡಿದೆ.
ಈ ಕುರಿತು ಮಾತನಾಡಿರುವ ಮಧ್ಯಪ್ರದೇಶದ ಐಜಿಪಿ ಮಹೇಂದ್ರ ಸಿಕರ್‌ವಾರ್, ಮಹಿಳೆಯೊಬ್ಬರು ನಮಗೆ ದೂರು ನೀಡಿ ಯುವಕನೊಬ್ಬ ಶೈಕ್ಷಣಿಕ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿಸಿದ್ದರು. ಪೊಲೀಸರ ತಂಡ ವಿಚಾರಣೆ ನಡೆಸಿದಾಗ ಬ್ರಜೇಶ್ ಕುಶ್ವಾರನ ಕೃತ್ಯ ಎನ್ನುವುದು ಬಯಲಾಯತು. ಆತ ಧ್ವನಿ ಬದಲಿಸಿ ಅಧ್ಯಾಪಕಿ ಹೆಸರಲ್ಲಿ ವಂಚಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾನೆ. ಈತನೂ ಸೇರಿ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ತನಿಖೆಗೆ ಎಸ್‌ಐಟಿಯನ್ನು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ರಚಿಸಿ ಆದೇಶಿಸಿದ್ದಾರೆ. ಬ್ರಜೇಶ್ ಈ ರೀತಿ ಎಷ್ಟು ಜನರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಕುರಿತು ಮಹಿಳಾ ಡಿವೈಎಸ್ಪಿ ಯೊಬ್ಬರ ನೇತೃತ್ವದ ತಂಡ ತನಿಖೆ ನಡೆಸಲಿದೆ.
ಈ ರೀತಿ ವಾಯ್ಸ್ ಮೆಸೆಂಜರ್ ಆಪ್ ಬಳಸಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಇರುವುದರಿಂದ ಎಚ್ಚರಿಕೆ ವಹಿಸಬೇಕು. ಯಾರಾದರೂ ಕರೆದರೆ ಕುಟುಂಬದವರಿಗೆ ತಿಳಿಸಿ ಅವರೊಂದಿಗೆ ಹೋಗಬೇಕು. ಅಪರಿಚಿತ ವ್ಯಕ್ತಿಗಳ ಬಗ್ಗೆ ಗಮನ ನೀಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)