logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು; ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಕಣ್ಣು

ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು; ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಕಣ್ಣು

Umesh Kumar S HT Kannada

Jun 05, 2024 04:31 PM IST

google News

ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು ಶುರುವಾಗಿದ್ದು, ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಕಣ್ಣು ಬಿದ್ದಿದೆ.

  • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರ ರಚನೆಯ ಕೆಲಸಗಳು ನವದೆಹಲಿಯಲ್ಲಿ ಇಂದು (ಜೂನ್ 5) ಶುರುವಾಗಿವೆ. ಬಿಜೆಪಿಗೆ ಸರಳ ಬಹುಮತ ಇಲ್ಲದ ಕಾರಣ, ನಿಜಾರ್ಥದ ಮೈತ್ರಿ ಸರ್ಕಾರ ರಚನೆಯಾಗಲಿದೆ. ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು ನಡೆಯುತ್ತಿರುವಾಗ ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಕಣ್ಣು ನೆಟ್ಟಿವೆ. 

ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು ಶುರುವಾಗಿದ್ದು, ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಕಣ್ಣು ಬಿದ್ದಿದೆ.
ಎನ್‌ಡಿಎ ಮೈತ್ರಿ ಸರ್ಕಾರಯ ಕಸರತ್ತು ಶುರುವಾಗಿದ್ದು, ಲೋಕಸಭಾ ಸ್ಪೀಕರ್ ಸ್ಥಾನದ ಮೇಲೆ ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಕಣ್ಣು ಬಿದ್ದಿದೆ.

ನವದೆಹಲಿ: ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚನೆಯಾಗುತ್ತಿದೆಯಾದರೂ, ಕಳೆದ ಎರಡು ಸಲವೂ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದ ಕಾರಣ ಮಿತ್ರಪಕ್ಷಗಳಿಗೆ ಧ್ವನಿ ಇರಲಿಲ್ಲ. ಈ ಬಾರಿ ಹಾಗಲ್ಲ. ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಈ ಸಲ ನಿಜವಾಗಿಯೂ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಎನ್‌ಡಿಎ ಮಿತ್ರ ಪಕ್ಷಗಳ ಪೈಕಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಸಂಯುಕ್ತ ಜನತಾದಳ (ಜೆಡಿಯು) ನಿರ್ಣಾಯಕ. ಈ ಎರಡೂ ಪಕ್ಷಗಳು ಈಗ ಲೋಕಸಭಾ ಸ್ಪೀಕರ್ ಸ್ಥಾನ ಮಿತ್ರಪಕ್ಷಗಳಿಗೆ ಸಿಗಬೇಕು ಎಂದು ಆಗ್ರಹಿಸುತ್ತಿವೆ ಎಂಬ ಅಂಶ ಬಹಿರಂಗವಾಗಿದೆ.

1990 ರ ದಶಕದ ಕೊನೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಟಿಡಿಪಿಯ ಜಿಎಂಸಿ ಬಾಲಯೋಗಿ ಸ್ಪೀಕರ್ ಆಗಿದ್ದ ಅವಧಿಯನ್ನು ನೆನಪಿಸಿಕೊಂಡ ಟಿಡಿಪಿ ಮತ್ತು ಜೆಡಿಯು ಎರಡೂ ಈ ಪಾತ್ರವು ಮಿತ್ರಪಕ್ಷಗಳಿಗೆ ಸಿಗಬೇಕು ಎಂದು ಬಿಜೆಪಿಯ ವರಿಷ್ಠರಿಗೆ ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಲೋಕಸಭಾ ಸ್ಪೀಕರ್ ಹುದ್ದೆಗೇಕಿಷ್ಟು ಮಹತ್ವ

ಲೋಕಸಭೆಯ ಸ್ಪೀಕರ್ ಹುದ್ದೆಯು ಸಾಂವಿಧಾನಿಕ ಮತ್ತು ಒಂದು ರೀತಿಯ ಅಲಂಕಾರಿಕ ಸ್ಥಾನಮಾನ. ಸಚಿವರಷ್ಟು ಪ್ರಭಾವಿಯಲ್ಲದ ಸ್ಥಾನ. ಇದೇ ರೀತಿ ಡೆಪ್ಯೂಟಿ ಸ್ಪೀಕರ್ ಹುದ್ದೆ ಕೂಡ. ಸಾಮಾನ್ಯವಾಗಿ ವಿಪಕ್ಷ ಸದಸ್ಯರು ಈ ಹುದ್ದೆಯಲ್ಲಿರುತ್ತಾರೆ. ಆದರೆ, 17ನೆ ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್‌ ಇರಲಿಲ್ಲ.

ಹಾಗಾದರೆ ಲೋಕಸಭಾ ಸ್ಪೀಕರ್ ಹುದ್ದೆಗೆ ಏಕಿಷ್ಟು ಮಹತ್ವ? - ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷಗಳು ಭಿನ್ನಮತ ಏರ್ಪಟ್ಟಾಗ, ಅವುಗಳ ಹಟ ನಡೆಯದೇ ಇದ್ದಾಗ ಒಕ್ಕೂಟ ಬಿಟ್ಟು ಹೋಗುವುದು ಸಹಜ. ಶಾಸಕರು ಪಕ್ಷಾಂತರ ಮಾಡಿದಾಗ ಅವರನ್ನು ಅಮಾನತು ಮಾಡುವ, ಸದಸ್ಯತ್ವದಿಂದ ವಜಾಗೊಳಿಸುವ ಅಧಿಕಾರ ಇರುವುದು ಸ್ಪೀಕರ್‌ಗೆ. ಆ ಮಟ್ಟಿಗೆ ಪ್ರಭಾವಿ ಹುದ್ದೆ ಅದು. ಪಕ್ಷಾಂತರ ವಿರೋಧಿ ಕಾನೂನು ಜಾರಿಗೊಳಿಸುವಲ್ಲಿ ಸ್ಪೀಕರ್‌ ಹೊಣೆಗಾರಿಕೆ ನಿರ್ಣಾಯಕ. ವಿವಿಧ ರಾಜ್ಯಗಳ ವಿಧಾನಸಭೆಗಳ ಇತಿಹಾಸ ಗಮನಿಸಿದರೆ ಇದು ಮನವರಿಕೆಯಾದೀತು.

ಇದೇ ಕಾರಣಕ್ಕೆ ಮುನ್ನೆಚ್ಚರಿಕೆಯ ಕ್ರಮವಾಗಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಸ್ಪೀಕರ್ ಹುದ್ದೆ ಮಿತ್ರಪಕ್ಷಗಳಿಗೆ ಇರಲಿ ಎಂಬ ಬೇಡಿಕೆಗೆ ಆದ್ಯತೆ ನೀಡಿದ್ದಾರೆ ಎಂದು ವರದಿ ಹೇಳಿದೆ.

ನವದೆಹಲಿಯಲ್ಲಿ ಇಂದು ನಡೆದ ಎನ್‌ಡಿಎ ಸಭೆಯ ವಿವರ ಇನ್ನಷ್ಟೆ ಬಹಿರಂಗವಾಗಬೇಕು. ಅಲ್ಲಿ ಈ ಬೇಡಿಕೆ ವಿಚಾರ ಏನಾಯಿತು ಎಂಬುದು ಸದ್ಯದಲ್ಲೇ ಬಹಿರಂಗವಾದೀತು.

17ನೆ ಲೋಕಸಭೆ ಬರ್ಖಾಸ್ತು; ಸಚಿವ ಸಂಪುಟ ಸಹಿತ ರಾಜೀನಾಮೆ ನೀಡಿದ ಪ್ರಧಾನಿ ಮೋದಿ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಅವಕಾಶ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು 17ನೆ ಲೋಕಸಭೆ ಬರ್ಖಾಸ್ತುಗೊಳಿಸಲು ರಾಜೀನಾಮೆ ಪತ್ರದೊಂದಿಗೆ ರಾಷ್ಟ್ರಪತಿಯವರಿಗೆ ಮನವಿ ಮಾಡಿದರು. ಹೊಸ ಸರ್ಕಾರ ರಚನೆಯಾಗುವ ತನಕ ಹಂಗಾಮಿ ಸರ್ಕಾರವಾಗಿ ಈ ಸರ್ಕಾರ ಮುಂದುವರಿಯಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಪ್ರಧಾನಿ ಮೋದಿ ರಾಜೀನಾಮೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೂನ್ 16 ರಂದು ಅಧಿಕಾರಾವಧಿ ಕೊನೆಗೊಳ್ಳಲಿರುವ ಸಚಿವ ಸಂಪುಟವನ್ನು ವಿಸರ್ಜಿಸಲು ತೀರ್ಮಾನ ತೆಗೆದುಕೊಂಡು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ