Last salute: ಜೈ ಹಿಂದ್ ಪಾಪಾ, ಕರ್ನಲ್ ಮನ್‌ಪ್ರೀತ್ ಸಿಂಗ್‌ಗೆ 7 ವರ್ಷದ ಮಗನ ಲಾಸ್ಟ್ ಸಲ್ಯೂಟ್
Sep 15, 2023 07:25 PM IST
ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಉಗ್ರರ ಜತೆಗಿನ ಹೋರಾಟದಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರಿಗೆ ಏಳು ವರ್ಷದ ಪುತ್ರ ಕಬೀರ್‌ನ ಲಾಸ್ಟ್ ಸಲ್ಯೂಟ್.
ಅತ್ಯಂತ ಭಾವುಕ ಸನ್ನಿವೇಶ ಒಂದರಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಅಂತ್ಯ ಸಂಸ್ಕಾರ ಇಂದು (ಸೆ.15) ಪಂಜಾಬ್‌ನ ಮೊಹಾಲಿ ಜಿಲ್ಲೆಯ ಅವರ ಹುಟ್ಟೂರಲ್ಲಿ ನಡೆಯಿತು. ಅವರ ಪುತ್ರ ಏಳು ವರ್ಷದ ಕಬೀರ್ ಲಾಸ್ಟ್ ಮಾಡಿದ ಲಾಸ್ಟ್ ಸಲ್ಯೂಟ್ ಮನಕಲಕುವಂತೆ ಇತ್ತು.
“ಜೈ ಹಿಂದ್ ಪಾಪಾ” - ಇದು ಅತ್ಯಂತ ಭಾವುಕ ಸನ್ನಿವೇಶದಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ (Colonel Manpreet Singh) ಅವರಿಗೆ ಅವರ ಪುತ್ರ 7 ವರ್ಷ ಪ್ರಾಯದ ಕಬೀರ್ (Seven-year-old Kabir) ಮಾಡಿದ ಕೊನೆಯ ಸೆಲ್ಯೂಟ್ (Last salute).
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಕಾಶ್ಮೀರ ಕಣಿವೆಯಲ್ಲಿ ಉಗ್ರರ ಜತೆಗೆ ಹೋರಾಟ ನಡೆಸುತ್ತಿರುವಾಗ ಬುಧವಾರ ವೀರಮರಣವನ್ನಪ್ಪಿದ್ದರು. ಅವರು 19ನೇ ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದರು. ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿರುವ ಅವರ ಸ್ವಗ್ರಾಮ ಭರುನ್‌ಜಿಯಾನ್ ಗ್ರಾಮದಲ್ಲಿ ಕರ್ನಲ್ ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಗ್ಗೆ ನಡೆಯಿತು.
ಕರ್ನಲ್ ಅವರ ಮನೆಗೆ ಶುಕ್ರವಾರ ಬೆಳಗ್ಗೆಯಿಂದಲೇ ಅವರ ಅಭಿಮಾನಿಗಳು, ಹಿತೈಷಿಗಳು ಆಗಮಿಸಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಕರ್ನಲ್ ಅವರ ಪುತ್ರ ಕಬೀರ್ ಲಾಸ್ಟ್ ಸಲ್ಯೂಟ್ ಮಾಡುವಾಗ ಸೇನಾಧಿಕಾರಿಯೊಬ್ಬರು ಆತನನ್ನು ಹಿಡಿದುಕೊಂಡಿದ್ದರು. ಇನ್ನೊಬ್ಬ ಸಂಬಂಧಿ ಕರ್ನಲ್ ಅವರ ಎರಡು ವರ್ಷದ ಪುತ್ರಿ ಬನ್ನಿಯನ್ನು ಹಿಡಿದುಕೊಂಡಿದ್ದರು.
ಕರ್ನಲ್ ಮನ್‌ಪ್ರೀತ್ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಪೆಟ್ಟಿಗೆಗೆ ತಿರಂಗಾ ಹೊದಿಸಲಾಗಿತ್ತು. ಕಬೀರ್ ಅದರ ಎದುರು ನಿಂತು ಲಾಸ್ಟ್ ಸಲ್ಯೂಟ್ ಮಾಡಿದ್ದ.
ಸಂಪೂರ್ಣ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯುತ್ತಿದ್ದಾಗ ಅಲ್ಲಿ ಭಾರತ್ ಮಾತಾ ಕೇ ಸಪೂತ್ ಕಿ ಜೈ, ಭಾರತ್ ಮಾತಾ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಪಂಜಾಬ್ ರಾಜ್ಯಪಾಲರಾದ ಬನ್‌ವರಿಲಾಲ್ ಪುರೋಹಿತ್, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್, ಪಂಜಾಬಿನ ಕೆಲವು ಸಚಿವರು, ಹಿರಿಯ ಸೇನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ದುಃಖದ ಮಡುವಿನಲ್ಲಿತ್ತು ಕುಟುಂಬ, ಶಾಲಾ ಶಿಕ್ಷಕರು
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ತಾಯಿ ಬೆಳಗ್ಗೆ ಮನೆಯ ಬಾಗಿಲ ಬಳಿ ನಿಂತುಕೊಂಡಿದ್ದರು. ಅವರ ಕಂಗಳು ಪುತ್ರನ ಪಾರ್ಥಿವ ಶರೀರಕ್ಕಾಗಿ ಎದುರುನೋಡುತ್ತಿತ್ತು. ಶಹೀದ್ ಕರ್ನಲ್ ಮನ್‌ಪ್ರೀತ್ ಸಿಂಗ್ ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ಪಾರ್ಥಿವ ಶರೀರ ಮನೆಗೆ ತಲುಪಿದಾಗ ತಾಯಿ ಕಣ್ಣೀರಾಗಿದ್ದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ತಂದೆ ಕೂಡ ಸೇನೆಯಲ್ಲಿದ್ದವರು. ಅವರು 9 ವರ್ಷ ಹಿಂದೆ ಮೃತಪಟ್ಟಿದ್ದರು.
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಶಾಲಾ ಶಿಕ್ಷಕರು ಕೂಡ ಸ್ಥಳದಲ್ಲಿದ್ದು ಅಂತಿಮ ನಮನ ಸಲ್ಲಿಸಿದರು. ನಮ್ಮ ಪಾಲಿಗೆ ಆತ ರತ್ನವಾಗಿದ್ದ. ದೇಶದ ಅಮೂಲರತ್ನವಾಗಿ ಬೆಳಗಿದ ಎಂದು ಆಶಾ ಛಡ್ಡಾ ಎಂಬ ಶಿಕ್ಷಕಿ ಹೇಳಿದರು.
ಕರ್ನಲ್ ಸಿಂಗ್ ಅವರ ಪತ್ನಿ ಜಗಮೀತ್ ಕೌರ್ ಸರ್ಕಾರಿ ಶಾಲಾ ಶಿಕ್ಷಕಿ. ಕರ್ನಲ್ ಸಿಂಗ್ ಅವರ ತಾಯಿ ಮನ್‌ಜೀತ್ ಕೌರ್, ಸಹೋದರ ಸಂದೀಪ್ ಸಿಂಗ್ ಕೂಡ ಬಹಳ ದುಃಖಿತರಾಗಿದ್ದರು.
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು 2003ರಲ್ಲಿ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿದ್ದರು. ಅನಂತನಾಗ್‌ನಲ್ಲಿ ಕಳೆದ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಏಳು ತಿಂಗಳ ಹಿಂದೆ ತಾಯ್ನಾಡಿಗೆ ಬಂದು ಹೋಗಿದ್ದರು ಎಂದು ಪಿಟಿಐ ವರದಿ ಹೇಳಿದೆ.