logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dhruv Rathee: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಯಾರು? ಈತ ಮೋದಿ ಸರ್ಕಾರವನ್ನೇ ಟಾರ್ಗೆಟ್‌ ಮಾಡಲು ಕಾರಣವೇನು?

Dhruv Rathee: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಯಾರು? ಈತ ಮೋದಿ ಸರ್ಕಾರವನ್ನೇ ಟಾರ್ಗೆಟ್‌ ಮಾಡಲು ಕಾರಣವೇನು?

Reshma HT Kannada

May 10, 2024 02:06 PM IST

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಪ್ರೊಫೈಲ್ ಇಲ್ಲಿದೆ.

    • ಲೋಕಸಭಾ ಚುನಾವಣೆ 2024: ದೇಶದಲ್ಲೀಗ ಚುನಾವಣೆ ಕಾವು ಜೋರಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ್ ರಾಠೀ ಎಂಬ ಹೆಸರು ಸಂಚಲನ ಸೃಷ್ಟಿಸಿದೆ. ಈ ಯುವ ಯೂಟ್ಯೂಬರ್‌ ಮೋದಿ ಸರ್ಕಾರದ ವಿರುದ್ಧ ವಿಡಿಯೊಗಳನ್ನು ಅಪ್‌ಲೋಡ್ ಮಾಡಿ ಲಕ್ಷಾಂತರ ವ್ಯೂವ್ಸ್‌ ಪಡೆಯುತ್ತಿದ್ದಾರೆ. ಯಾರು ಈ ಧ್ರುವ್ ರಾಠೀ? ಮೋದಿ ಸರ್ಕಾರವನ್ನೇ ಗುರಿಯಾಗಿಸಿಕೊಂಡಿದ್ದೇಕೆ? -ಇಲ್ಲಿದೆ ವಿವರ.
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಪ್ರೊಫೈಲ್ ಇಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಪ್ರೊಫೈಲ್ ಇಲ್ಲಿದೆ.

ಧ್ರುವ್ ರಾಠೀ: ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಥವಾ ಯೂಟ್ಯೂಬ್‌ನಲ್ಲಿ ‘ನಮಸ್ಕಾರ್‌ ದೋಸ್ತೋʼ ಎಂಬ ಮಾತುಗಳಿಂದ ಆರಂಭವಾಗುವ ವಿಡಿಯೊಗಳನ್ನು ನೀವು ಗಮನಿಸಿರಬಹುದು.ಇದು ದೇಶದ ಪ್ರಸಿದ್ಧ ಯೂಟ್ಯೂಬರ್‌ ಧ್ರುವ್ ರಾಠೀ ಅವರ ವಿಡಿಯೊಗಳು. ಸದ್ಯ ಭಾರತದಲ್ಲಿ ಈ ವಿಡಿಯೊಗಳು ಸಂಚಲನ ಸೃಷ್ಟಿಸಿವೆ. ಇವರ ವಿಡಿಯೊ ಅಪ್‌ಲೋಡ್‌ ಆಗುವುದಕ್ಕಾಗಿ ಸಾವಿರಾರು ಮಂದಿ ಕಾಯುತ್ತಿರುತ್ತಾರೆ. ಅಂದ ಹಾಗೆ ಇವರ ವಿಡಿಯೊಗಳಿಗೆ ಟಾಪಿಕ್‌ ಮೋದಿ ಸರ್ಕಾರ. ಮೋದಿ ಸರ್ಕಾರವನ್ನು ಟಾರ್ಗೆಟ್‌ ಮಾಡಿರುವ ಧ್ರುವ್ ರಾಠೀ ’ಕೇಂದ್ರ ಸರ್ಕಾರದಲ್ಲಿ ಹಲವು ಹಗರಣಗಳು ನಡೆಯುತ್ತಿವೆ, ಈ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲʼ ಎಂದು ಟೀಕಿಸುತ್ತಿದ್ದಾರೆ. ಮೋದಿ ಸರ್ಕಾರವನ್ನು ಸತತ ಟೀಕೆಗೆ ಗುರಿ ಮಾಡಿರುವ ಇವರ ವಿಡಿಯೊಗಳನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಇವರು ಪ್ರಸ್ತಾಪಿಸುತ್ತಿರುವ ವಿಷಯಗಳು ಈಗ ಸಾಮಾಜಿಕ ಜಾಲತಾಣಗಳ ಹಾಟ್‌ ಟಾಪಿಕ್‌ ಆಗಿರುವುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

‘ಮೋದಿ ಸರ್ಕಾರವನ್ನು ಉರುಳಿಸುವುದೇ ಧ್ರುವ ಅವರ ಟಾರ್ಗೆಟ್‌’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ‘ಇವರು ಪತ್ರಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಅಧ್ಯಯನ ಮಾಡಿಯೇ ವಿವರ ಕೊಡುತ್ತಾರೆ’ ಎಂದು ಹಲವರು ಸಮರ್ಥಿಸಿಕೊಂಡಿದ್ದಾರೆ. ವಾದ-ವಿವಾದಗಳು, ದೂಷಣೆ-ಸಮರ್ಥನೆಗಳು ಬದಿಗಿರಲಿ. ಈ ಧ್ರುವ್ ರಾಠೀ ಯಾರು? ಇವರು ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದೇಕೆ? ಇವರು ಅಷ್ಟು ಖ್ಯಾತಿ ಪಡೆಯಲು ಕಾರಣವೇನು? ಎಂಬ ಪ್ರಶ್ನೆಗಳೂ ಜನರಲ್ಲಿ ಮೂಡಲಾರಂಭಿಸಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಧ್ರುವ್ ರಾಠೀ ಯಾರು?

ಧ್ರುವ್ ರಾಠೀ 1994, ಅಕ್ಟೋಬರ್ 8 ರಂದು ಹರಿಯಾಣದ ಜಾಟ್ ಕುಟುಂಬದಲ್ಲಿ ಜನಿಸಿದರು. ಇವರ ಕುಟುಂಬದಲ್ಲಿ ಯಾರೂ ರಾಜಕೀಯ ನಾಯಕರಲ್ಲ. ಕುಟುಂಬಿಕರಲ್ಲಿ ಹಲವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ, ಸಾಕಷ್ಟು ಮಂದಿ ರೈತರಿದ್ದಾರೆ. ಧ್ರುವ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದಲ್ಲಿ ಮುಗಿಸಿದರು. ಇವರು ಪ್ರತಿಭಾವಂತ ವಿದ್ಯಾರ್ಥಿಯೇನಲ್ಲ, ಹಾಗಂತ ದಡ್ಡ ವಿದ್ಯಾರ್ಥಿಯೂ ಅಲ್ಲ. ಅವರ ವಿದ್ಯಾಭ್ಯಾಸ, ಅಂಕಗಳ ಬಗ್ಗೆ ಅವರ ಮಾತುಗಳಲ್ಲೇ ಕೇಳಿ.

'ಶಾಲಾ-ಕಾಲೇಜು ದಿನಗಳಲ್ಲಿ ನಾನೇನು ಪ್ರತಿಭಾವಂತ ವಿದ್ಯಾರ್ಥಿಯಲ್ಲ. ನಾನು ಶೇ 70-80 ಅಂಕಗಳನ್ನು ಪಡೆಯುತ್ತಿದ್ದೆ. ಆದರೆ ನಾವು ಒಂದು ವಿಷಯವನ್ನು ಕಲಿಯಲು ಆಸಕ್ತಿ ತೋರಿದರೆ, ಅದೇ ವಿಚಾರದ ಮೇಲೆ ಕುಳಿತು ಕೆಲಸ ಮಾಡಿದರೆ ಖಂಡಿತ ಪರಿಣತರಾಗುತ್ತೇವೆʼ ಎಂದು ತಮ್ಮ ವಿಡಿಯೊವೊಂದರಲ್ಲಿ ಹೇಳಿದ್ದರು ಧ್ರುವ್ ರಾಠೀ.

ಇವರು 2011ರಲ್ಲಿ ಮೊದಲ ಬಾರಿಗೆ ರಾಜಕೀಯದತ್ತ ಆಸಕ್ತಿ ತೋರಿದರು. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಆಂದೋಲನ ಅವರನ್ನು ರಾಜಕೀಯದತ್ತ ಮೇಲೆ ಗಮನ ಹರಿಸಲು ಪ್ರೇರೇಪಿಸಿತು. 2013ರಲ್ಲಿ ಇವರು ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದರು. ಕಾರ್ಲ್ಸ್‌ರುಹೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ರಿನಿವೇಬಲ್‌ ಎನರ್ಜಿ (ನವೀಕರಿಸಬಹುದಾದ ಇಂಧನ) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ಯುಟ್ಯೂಬ್ ಆರಂಭಿಸಿದ ಕಥೆ

2013ರಲ್ಲಿ ಟ್ರಾವೆಲ್ ವಿಡಿಯೊಗಳ ಮೂಲಕ ತಮ್ಮ ಯೂಟ್ಯೂಬ್ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ ಈ ಸೋಷಿಯಲ್‌ ಮಿಡಿಯಾ ಸ್ಟಾರ್‌. ಆ ವರ್ಷದ ಅಂತ್ಯದ ವೇಳೆಗೆ ಅವರು ರಾಜಕೀಯ, ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾಜಿಕ ವಿಷಯಗಳ ಕುರಿತು ವಿಡಿಯೊಗಳನ್ನು ಮಾಡುತ್ತಾರೆ. ಧ್ರುವ ಅವರ ಪ್ರಸ್ತುತ ವಿಡಿಯೊಗಳಿಗೆ ಮಾತ್ರವಲ್ಲ, ಹಿಂದಿನ ವಿಡಿಯೊಗಳಿಗೂ ಸಾಕಷ್ಟು ಬೇಡಿಕೆ ಇರುವುದು ಸುಳ್ಳಲ್ಲ.

ಧ್ರುವ್ ರಾಠೀ 2020ರಲ್ಲಿ ಮತ್ತೊಂದು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುತ್ತಾರೆ. ಅದರ ಹೆಸರು ಧ್ರುವ್ ರಾಠೀ ವ್ಲಾಗ್ಸ್. ಅದರಲ್ಲಿ ಅವರು ತಮ್ಮ ವರ್ಲ್ಡ್‌ ಟೂರ್‌ಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇವರು 2021ರಲ್ಲಿ ತನ್ನ ದೀರ್ಘಕಾಲದ ಗೆಳತಿ ಯುಲಿಯನ್ನು ವಿವಾಹವಾಗುತ್ತಾರೆ.

ಪ್ರಸ್ತುತ ಧ್ರುವ್ ರಾಠೀ ಯೂಟ್ಯೂಬ್‌ನಲ್ಲಿ 19.3 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 7.9 ಮಿಲಿಯನ್ ಅನುಯಾಯಿಗಳಿದ್ದಾರೆ. ಧ್ರುವ್ ರಾಠೀ vlogs ಚಾನೆಲ್ 2.63 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಟೈಮ್ ಮ್ಯಾನೇಜ್‌ಮೆಂಟ್ ಮತ್ತು ಚಾಟ್‌ಜಿಪಿಟಿ ಜೊತೆಗೆ ಹಲವು ಕೋರ್ಸ್‌ಗಳನ್ನು ಸಹ ನಡೆಸುತ್ತಿದ್ದಾರೆ. ಹಲವು ಮಾಧ್ಯಮಗಳ ವರದಿ ಪ್ರಕಾರ, ಧ್ರುವ್ ರಾಠೀ ಅವರ ಆದಾಯದ ನಿವ್ವಳ ಮೌಲ್ಯ ರೂ. 27 ಕೋಟಿ.

'ನನಗೆ ಬಿಜೆಪಿ ಇಷ್ಟ.. ಆದರೆ….ʼ

Dhruv Rathee vs BJP: 2014ರಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಧ್ರುವ್ ರಾಠೀ ಬಹಳ ಸಂತೋಷಪಟ್ಟಿದ್ದರು. ಆದರೆ ಆಮೇಲೆ ದೇಶದ ಪರಿಸ್ಥಿತಿ ನೋಡಿ ನನಗೆ ಆತಂಕ ಶುರುವಾಗಿತ್ತು ಎಂದು ಅವರು ತಮ್ಮ ವಿಡಿಯೊಗಳಲ್ಲಿ ಹೇಳಿಕೊಂಡಿದ್ದನ್ನು ಗಮನಿಸಬಹುದು.

ʼ2014ರ ಅವಧಿಯಲ್ಲಿ ನನಗೆ ಕಾಂಗ್ರೆಸ್ ಮೇಲೆ ತೀವ್ರ ಸಿಟ್ಟಿತ್ತು. ಕಾಂಗ್ರೆಸ್ ಸೋತಿದ್ದಕ್ಕೆ ತುಂಬಾ ಖುಷಿಯಾಗಿತ್ತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಹಲವು ಬದಲಾವಣೆಗಳನ್ನು ತರಲಿದೆ ಎಂದು ಭಾವಿಸಿದ್ದೆ. ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಕೂಡ ನಾನು ಕನಸು ಕಂಡಿದ್ದೆ. ಆದರೆ ಸ್ವಲ್ಪ ಸಮಯದ ನಂತರ ಇದ್ಯಾವುದೂ ಸಾಧ್ಯವಾಗಿಲ್ಲ, ಸಾಧ್ಯವಾಗುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆʼ ಎಂದಿರುವ ಅವರು ಆರ್‌ಟಿಐ ಕಾನೂನಿನಲ್ಲಿ ಸರ್ಕಾರ ತಂದಿರುವ ಬದಲಾವಣೆಗಳ ಉದಾಹರಣೆಯನ್ನು ನೀಡುತ್ತಾರೆ.

ಧ್ರುವ್ ರಾಠೀ ಅವರ ಹೆಚ್ಚಿನ ವಿಡಿಯೊಗಳು ಶಿಕ್ಷಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿದ್ದಾಗಿವೆ. ಅದೇ ಸಮಯದಲ್ಲಿ, ಅವರು ಆಗಾಗ್ಗೆ ಭಾರತೀಯ ರಾಜಕೀಯದ ಬಗ್ಗೆ ವಿಡಿಯೊಗಳನ್ನು ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ನೋಟು ಅಮಾನ್ಯೀಕರಣ (Note Ban), ಜಿಎಸ್‌ಟಿ ಮತ್ತು ಚುನಾವಣಾ ಬಾಂಡ್‌ಗಳಂತಹ ವಿಷಯಗಳ ಕುರಿತು ಇವರು ವಿಡಿಯೊಗಳನ್ನು ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಹಲವು ನಡೆಗಳನ್ನು ಸರ್ವಾಧಿಕಾರಿಗಳೊಂದಿಗೆ ಹೋಲಿಸುವ ‘ದಿ ಡಿಕ್ಟೇಟರ್’ ವಿಡಿಯೊ ಇವರ ಜನಪ್ರಿಯತೆ ಹೆಚ್ಚಿಸಿತು. ಅನಂತರ ಧ್ರುವ್ ರಾಠೀ ಅವರ ಎಲ್ಲಾ ವಿಡಿಯೊಗಳು ಕ್ಲಿಕ್‌ ಆಗಲು ಪ್ರಾರಂಭವಾದವು. ಮತ್ತೋರ್ವ ಜನಪ್ರಿಯ ಯುಟ್ಯೂಬರ್ ಆಕಾಶ್ ಬ್ಯಾನರ್ಜಿ ಸಹ ಧ್ರುವ್ ರಾಠೀ ಅವರ ಸಂದರ್ಶನದ ವಿಡಿಯೊ ಮಾಡಿದರು. ಇವರ ವಿಡಿಯೊಗಳು ಸರಳವಾಗಿ ಹಾಗೂ ನೇರವಾಗಿ ಇರುವ ಕಾರಣ ಇವರು ಹೇಳುವ ವಿಚಾರಗಳು ಜನರಲ್ಲಿ ಆಸಕ್ತಿ ಮೂಡಿಸಿದವು. ನಿಧಾನವಾಗಿ ಇವರ ಯೂಟ್ಯೂಬ್ ಚಾನೆಲ್ ಹೆಸರು ಗಳಿಸುತ್ತಾ ಹೋಯಿತು.

ಒಂದೇ ಒಂದು ವಿಡಿಯೊ ಧ್ರುವ್ ರಾಠೀ ಅವರನ್ನು ಭಾರತದಲ್ಲಿ ಹಾಟ್ ಟಾಪಿಕ್ ಮಾಡಿತು. ಆ ಒಂದು ವಿಡಿಯೊ ದೇಶದಾದ್ಯಂತ ‘ಟಾಕ್ ಆಫ್ ದಿ ಟೌನ್’ ಆಯಿತು. ಆ ಒಂದು ವಿಡಿಯೊದಿಂದ ಅವರ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾದಂತೆ ದ್ವೇಷಿಗಳು ಕೂಡ ಹೆಚ್ಚಾದರು. ಆ ವಿಡಿಯೊ 'ಭಾರತ ಸರ್ವಾಧಿಕಾರವಾಗುತ್ತಿದೆಯೇ?' (Is India becoming a DICTATORSHIP? | Chandigarh Elections | Farmers Protest | Dhruv Rathee - ಭಾರತ ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗುತ್ತಿದೆಯೇ?) ಎನ್ನುವುದೇ ಆ ವಿಡಿಯೊ. ಈ ಮೊದಲು ಪ್ರಸ್ತಾಪಿಸಿದ್ದಂತೆ ಈ ವಿಡಿಯೊಗೆ 'ದಿ ಡಿಕ್ಟೇಟರ್' ಎಂದು ಥಂಬ್‌ನೇಲ್ ನೀಡಲಾಗಿತ್ತು. ಈ ವಿಡಿಯೊ ಸಹ ಪಬ್ಲಿಷ್ ಆದ ಕೂಡಲೇ ವೈರಲ್ ಆಯಿತು.

ಮೋದಿ-ಬಿಜೆಪಿ Vs ಧ್ರುವ್ ರಾಠೀ

2024 Lok Sabha Elections: 2024ರ ಲೋಕಸಭಾ ಚುನಾವಣೆಯ ನಡೆಯುತ್ತಿರುವ ಈ ಸಮಯದಲ್ಲಿ ಧ್ರುವ್ ರಾಠೀ ಅವರು ಬಿಡುಗಡೆ ಮಾಡಿದ ವಿಡಿಯೊಗಳು ಸಂಚಲನ ಸೃಷ್ಟಿಸಿವೆ. ಮೋದಿ ಸರ್ಕಾರದಲ್ಲಿ ಹಲವು ಲೋಪಗಳಿವೆ, ಚುನಾವಣಾ ಬಾಂಡ್‌ಗಳು ದೊಡ್ಡ ಹಗರಣವಾಗಿದೆ, ದೇಶದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ಕುರಿತ ಕೆಲವು ಸತ್ಯಗಳನ್ನು ತೋರಿಸಲು ಪ್ರಯತ್ನಿಸಿದರು. ಈ ವಿಡಿಯೊ ತಕ್ಷಣವೇ ವೈರಲ್ ಆಯಿತು. ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜನರು ಈ ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲಿಂದ ಧ್ರುವ್ ರಾಠೀ ನೇರವಾಗಿ ಬಿಜೆಪಿಯನ್ನು ಟೀಕಿಸುವ ಹಲವು ವಿಡಿಯೊಗಳನ್ನು ಬಿಡುಗಡೆ ಮಾಡಿದರು. ರೈತರ ಸಮಸ್ಯೆಗಳು ಮತ್ತು ಲಡಾಖ್ ಸಮಸ್ಯೆಗಳನ್ನು ಇವರು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಅರವಿಂದ್ ಕೇಜ್ರಿವಾಲ್ ಬಂಧನ ಮತ್ತು ಎಲೆಕ್ಟ್ರಾಲ್‌ ಬಾಂಡ್ ಹಗರಣಗಳ ಬಗ್ಗೆ ಧ್ರುವ ತಮ್ಮ ವಿಡಿಯೊಗಳ ಮೂಲಕ ಸಾರ್ವಜನಿಕರಿಗೆ ವಿವರಿಸಿದ್ದಾರೆ. ಈ ಎಲ್ಲಾ ವಿಡಿಯೊಗಳಲ್ಲೂ ಬಿಜೆಪಿ ವಿರುದ್ಧ ನೇರ ಟೀಕೆ, ತೀವ್ರ ಆರೋಪಗಳು ಕೇಳಿಬಂದಿದ್ದವು.

ಮತ್ತೊಂದು ಹೆಜ್ಜೆ ಮುಂದಿಟ್ಟು.. 'WhatsApp University' ಎಂಬ ಮತ್ತೊಂದು ವಿಡಿಯೊವನ್ನು ಇವರು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಐಟಿ ಸೆಲ್ ಜನರನ್ನು ದಾರಿ ತಪ್ಪಿಸಲು ವಾಟ್ಸಾಪ್ ಮತ್ತು ಮಾಧ್ಯಮಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ತಂಡ ಜನರ ಬ್ರೈನ್ ವಾಶ್ ಮಾಡುತ್ತಿದೆ ಎಂದು ಅವರು ದೂರಿದ್ದಾರೆ. ಜನರು ಏನನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬುದನ್ನು ಸರ್ಕಾರ ನಿರ್ಧರಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದರು.

ಮೋದಿಯನ್ನೇಕೆ ಗುರಿ ಮಾಡಲಾಯಿತು?

ಬಿಜೆಪಿ ಹಾಗೂ ಮೋದಿ ಅವರ ಮೇಲೆ ಈ ರೀತಿ ಪ್ರಶ್ನೆಗಳನ್ನು ಎತ್ತಲು ಕಾರಣವನ್ನು ಧ್ರುವ್ ರಾಠೀ ವಿವರಿಸಿದ್ದಾರೆ.

Dhruv Rathee BJP: 'ನಾನು ಮಾಡಿದ ಡಿಕ್ಟೇಟರ್ ಎಂಬ ವಿಡಿಯೊ ತುಂಬಾ ಆಕ್ರಮಣಕಾರಿಯಾಗಿದೆ. ದೇಶವನ್ನು ಪ್ರೀತಿಸುವ ವ್ಯಕ್ತಿ ಆ ವಿಡಿಯೊ ನೋಡಿ ಶಾಕ್ ಆಗಬೇಕು. ಜನರು ಇನ್ನಾದರೂ ಕಣ್ಣು ತೆರೆದು ದೇಶದತ್ತ ಗಮನ ಹರಿಸುವಂತೆ ನಾನು ಅದನ್ನು ಮಾಡಿದ್ದೇನೆ. ನನಗೆ ಇಷ್ಟವಾಗಿದೆ. ರಾಜಕೀಯಕ್ಕಿಂತ ಶೈಕ್ಷಣಿಕ ವಿಡಿಯೊಗಳನ್ನು ಮಾಡಲು ನನಗೆ ಇಷ್ಟ. ಈಗಲ್ಲದಿದ್ದರೆ ನಾವು ಯಾವಾಗ ಮಾತನಾಡುತ್ತೇವೆ? ಎಲ್ಲರೂ ಮೌನವಾಗಿದ್ದರೆ ಯಾವುದೇ ಪ್ರಯೋಜನವಿಲ್ಲʼ ಎಂದು ಧ್ರುವ ದೇಶಭಕ್ತ್‌ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ದೇಶ ಸಂಪೂರ್ಣ ಸರ್ವಾಧಿಕಾರಿ ಆಡಳಿತಕ್ಕೆ ಸಿಲುಕಿಲ್ಲ, ಆದರೆ ಮತ್ತೊಮ್ಮೆ ಮೋದಿ ಸರ್ಕಾರ ಬಂದರೆ ಖಂಡಿತ ಅಪಾಯʼ ಎಂದು ಧ್ರುವ ರಾಥೀ ಹೇಳುತ್ತಾರೆ. ’ಯಾವುದೇ ಸರ್ವಾಧಿಕಾರಿ ಆಡಳಿತಗಾರನನ್ನು ತೆಗೆದುಕೊಳ್ಳಿ. ದೇಶದಲ್ಲಿ ಈಗ ಏನಾಗುತ್ತಿದೆ, ಆಗ ಏನಾಯಿತು ಎಂಬ ಪರಿಶೀಲಿಸಿ. ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ಅರವಿಂದ್ ಕೇಜ್ರಿವಾಲ್ ಬಂಧನ.. ಇದೆಲ್ಲವನ್ನೂ ಲೋಕಸಭೆ ಚುನಾವಣೆಗೆ ಮುನ್ನ ಮಾಡಲಾಗುತ್ತಿದೆ. ಬಿಜೆಪಿಯವರು ವಿರೋಧಿಗಳನ್ನು ಮಟ್ಟಹಾಕಲು ಪ್ರಯತ್ನಿಸುತ್ತಿದ್ದಾರೆ. ಕೊರಿಯಾ ಮತ್ತು ರಷ್ಯಾದಲ್ಲಿ ಚುನಾವಣೆಗಳು ನಡೆಯುತ್ತವೆ ಎಂದರೆ ಅಲ್ಲಿ ಪ್ರಜಾಪ್ರಭುತ್ವ ಶ್ರೇಷ್ಠವಾಗಿದೆಯೇʼ ಎಂದು ಧ್ರುವ್ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

'ಇವತ್ತು ಪರಿಸ್ಥಿತಿ ಬದಲಾಗದಿದ್ದರೆ ಮುಂದೆ ರಷ್ಯಾದಲ್ಲಿ ಕಾಣುವ ಪರಿಸ್ಥಿತಿಯೇ ಭಾರತದಲ್ಲೂ ಕಾಣುತ್ತದೆ. ಪುಟಿನ್ ಮುಂದೆ ಯಾರು ಮಾತನಾಡಲಾರರು!, ಹಾಗೆಯೇ ಭಾರತದಲ್ಲಿ ಆಗುತ್ತದೆ ಎನ್ನುವುದೇ ನನ್ನ ಭಯ. ಭಾರತದಲ್ಲೂ ಪೂರ್ಣ ಪ್ರಮಾಣದ ಸರ್ವಾಧಿಕಾರಿ ಆಡಳಿತ ಬರಬಹುದಾ? ಎಂದು ನಾನು ವಿಡಿಯೊ ಮಾಡಿದ್ದೇನೆʼ ಧ್ರುವ್ ರಾಠೀ ಹೇಳಿದ್ದಾರೆ.

ರಷ್ಯಾದಲ್ಲಿ ಪರಿಸ್ಥಿತಿ ಕೈ ಮೀರಿದೆ, ಆದರೆ ಭಾರತದಲ್ಲಿ ಹಾಗಾಗದಂತೆ ನೋಡಿಕೊಳ್ಳುವುದು ಜನರ ಜವಾಬ್ದಾರಿಯಾಗಿದೆ ಎಂದು ಧ್ರುವ ಹೇಳುತ್ತಾರೆ. ‘ಮೋದಿ ಇಲ್ಲದಿದ್ದರೆ ಬೇರೆ ಯಾರು?ʼ ದೇಶಭಕ್ತ್‌ ಯೂಟ್ಯೂಬ್‌ ಚಾನೆಲ್‌ನ ಆಕಾಶ್ ಬ್ಯಾನರ್ಜಿ ಕೇಳಿದ ಪ್ರಶ್ನೆಗೆ, 'ನೀವು ಕಾರಿನಲ್ಲಿ ಕುಳಿತಿದ್ದೀರಿ. ಬೆಂಕಿ ಹೊತ್ತಿಕೊಂಡಿದೆ. ಆಗ ನೀವೇನು ಮಾಡುತ್ತೀರಿ? ನೀವು ಇರುತ್ತೀರಾ ಅಥವಾ ನೀವು ಹೊರಬರುತ್ತೀರಾ? ಮೊದಲು ನೀವು ಕಾರಿನಿಂದ ಇಳಿಯಬೇಕು. ನಂತರ ನೀವು ಮುಂದೇನು ಎಂದು ಯೋಚಿಸಬೇಕು ಅಲ್ವಾʼ ಎಂದು ಅವರು ಉತ್ತರಿಸಿದ್ದಾರೆ.

ಯುವಜನರ ನೆಚ್ಚಿನ ಯೂಟ್ಯೂಬರ್‌

ಧ್ರುವ್ ರಾಠೀ ಅವರ ವಿಡಿಯೊಗಳು ಸಂಚಲನ ಮೂಡಿಸಿವೆ. ಅವರ ವಿಡಿಯೊಗಳನ್ನು ಜನರು ಹುಡುಕಿ ಹೋಗಿ ನೋಡುತ್ತಿದ್ದಾರೆ. ಯೂಟ್ಯೂಬ್ ಅನ್ನು ಹೆಚ್ಚು ವೀಕ್ಷಿಸುವ ಯುವಕರಿಗೆ ಧ್ರುವ್ ರಾಠೀ ಇಷ್ಟವಾಗುತ್ತಿದ್ದಾರೆ. 'ಧ್ರುವ್ ರಾಠೀಗೆ ಧೈರ್ಯ ಜಾಸ್ತಿ...' ಎನ್ನುವವರೂ ಹಲವರಿದ್ದರೆ, 'ಧ್ರುವ್ ರಾಠೀ ಒಬ್ಬ ದೇಶದ್ರೋಹಿ, ಹಿಂದೂ ದ್ರೋಹಿ, ಪಾಕಿಸ್ತಾನಿ' ಎಂದೆಲ್ಲಾ ಹೇಳುವ ವಿರೋಧಿಗಳು ಸಾಕಷ್ಟಿದ್ದಾರೆ.

ಅದನೇ ಇದ್ದರೂ ಧ್ರುವ್ ರಾಠೀ ಅವರ ವಿಡಿಯೊಗಳು ಸಾಕಷ್ಟು ವ್ಯೂವ್ಸ್‌ ಹಾಗೂ ಲೈಕ್ಸ್‌ ಪಡೆಯುತ್ತಿವೆ. ಅವರು ತಮ್ಮ ವಿಡಿಯೊಗಳಲ್ಲಿ ಮಾತನಾಡುವ ವಿಚಾರಗಳು ಭಾರತದ ಮತದಾರನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿವೆ? ಮೋದಿ ಅಂಡ್ ಟೀಮ್ ಮೇಲೆ ಧ್ರುವ ರಥೀ ಮಾತುಗಳು ಎಫೆಕ್ಟ್ ಆಗುತ್ತಾ? ಎಂಬುದಕ್ಕೆಲ್ಲಾ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿರುವ ಜೂನ್ 4ರಂದು ಸ್ಪಷ್ಟತೆ ಸಿಗಲಿದೆ.

ಧ್ರುವ್ ರಾಠೀ ಯುಟ್ಯೂಬ್ ಚಾನೆಲ್‌ನ ವಿಡಿಯೊಗಳು ಇದೀಗ ಕನ್ನಡದಲ್ಲಿಯೂ ಲಭ್ಯವಿವೆ. ಅವರು ಕನ್ನಡದಲ್ಲಿಯೂ ಒಂದು ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಅವರ ಕನ್ನಡ ಯುಟ್ಯೂಬ್ ಚಾನೆಲ್‌ ಲಿಂಕ್: youtube.com/@DhruvRathee-Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ