logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಜಯ ಸಾಧಿಸಿದರೂ ಅನಿರೀಕ್ಷಿತ ಹಿನ್ನಡೆ ಎಂದು ಮೋದಿಯನ್ನು ಬಣ್ಣಿಸಿದ ಪಾಶ್ಚಾತ್ಯ ಮಾಧ್ಯಮಗಳು: ಟೀಕೆಗಳ ನಡುವೆ ಮೂರನೇ ಅವಧಿ

ವಿಜಯ ಸಾಧಿಸಿದರೂ ಅನಿರೀಕ್ಷಿತ ಹಿನ್ನಡೆ ಎಂದು ಮೋದಿಯನ್ನು ಬಣ್ಣಿಸಿದ ಪಾಶ್ಚಾತ್ಯ ಮಾಧ್ಯಮಗಳು: ಟೀಕೆಗಳ ನಡುವೆ ಮೂರನೇ ಅವಧಿ

Jun 06, 2024 02:30 PM IST

google News

ವಿಜಯ ಸಾಧಿಸಿದರೂ ಅನಿರೀಕ್ಷಿತ ಹಿನ್ನಡೆ ಎಂದು ಮೋದಿಯನ್ನು ಬಣ್ಣಿಸಿದ ಪಾಶ್ಚಾತ್ಯ ಮಾಧ್ಯಮಗಳು: ಟೀಕೆಗಳ ನಡುವೆ ಮೂರನೇ ಅವಧಿ

    • ಲೋಕಸಭಾ ಚುನಾವಣಾ ಫಲಿತಾಂಶವನ್ನು ಪಾಶ್ಚಾತ್ಯ ಮಾಧ್ಯಮಗಳು, ಎರಡು ಅವಧಿ ಆಡಳಿತ ನಡೆಸಿದ ಪ್ರಧಾನಿ ಮೋದಿಯವರಿಗೆ 'ಅನಿರೀಕ್ಷಿತ ಹಿನ್ನಡೆ' ಎಂದು ಬಣ್ಣಿಸಿವೆ. ಆದರೆ, ಬಿಜೆಪಿ ಮುಖಂಡರು ಭಾರತದ ಚುನಾವಣಾ ಫಲಿತಾಂಶ ಪಾಶ್ಚಾತ್ಯ ದೇಶಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಅನವಶ್ಯಕ ವಿಚಾರ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. (ಬರಹ: ಗಿರೀಶ್ ಲಿಂಗಣ್ಣ)
ವಿಜಯ ಸಾಧಿಸಿದರೂ ಅನಿರೀಕ್ಷಿತ ಹಿನ್ನಡೆ ಎಂದು ಮೋದಿಯನ್ನು ಬಣ್ಣಿಸಿದ ಪಾಶ್ಚಾತ್ಯ  ಮಾಧ್ಯಮಗಳು: ಟೀಕೆಗಳ ನಡುವೆ ಮೂರನೇ ಅವಧಿ
ವಿಜಯ ಸಾಧಿಸಿದರೂ ಅನಿರೀಕ್ಷಿತ ಹಿನ್ನಡೆ ಎಂದು ಮೋದಿಯನ್ನು ಬಣ್ಣಿಸಿದ ಪಾಶ್ಚಾತ್ಯ ಮಾಧ್ಯಮಗಳು: ಟೀಕೆಗಳ ನಡುವೆ ಮೂರನೇ ಅವಧಿ

Western media about PM Modi's victory: 2024ರ ಭಾರತದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 542 ಸ್ಥಾನಗಳ ಪೈಕಿ 240 ಸ್ಥಾನಗಳನ್ನು ಗೆದ್ದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳ ನಿರೀಕ್ಷಿತ ಬೆಂಬಲದೊಡನೆ, ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಜೂನ್ 8ರಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಗಳಿವೆ.

ಲೋಕಸಭಾ ಚುನಾವಣಾ ಫಲಿತಾಂಶವನ್ನು ಪಾಶ್ಚಾತ್ಯ ಮಾಧ್ಯಮಗಳು, ಎರಡು ಅವಧಿ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ 'ಅನಿರೀಕ್ಷಿತ ಹಿನ್ನಡೆ' ಎಂದು ಬಣ್ಣಿಸಿವೆ. ಆದರೆ, ಬಿಜೆಪಿ ಮುಖಂಡರು ಭಾರತದ ಚುನಾವಣಾ ಫಲಿತಾಂಶ ಪಾಶ್ಚಾತ್ಯ ದೇಶಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಅನವಶ್ಯಕ ವಿಚಾರ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಸ್ವಪನ್ ದಾಸ್ ಗುಪ್ತ ಅವರು ಈ ಕುರಿತು ತನ್ನ ಅಭಿಪ್ರಾಯ ತಿಳಿಸಿದ್ದು, ಪಾಶ್ಚಾತ್ಯ ಸರ್ಕಾರಿ ಮತ್ತು ಸರ್ಕಾರೇತರ ಶಕ್ತಿಗಳು ಭಾರತದ ರಾಜಕೀಯ ಚಿತ್ರಣ ಮತ್ತು ಪ್ರಜಾಪ್ರಭುತ್ವವನ್ನು ತಮಗೆ ಬೇಕಾದ ರೀತಿಯಲ್ಲಿ ರೂಪಿಸಬಹುದು ಎಂಬ ಭಾವನೆ ಹೊಂದಿವೆ ಎಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಇಂತಹ ವಿದೇಶೀ ಶಕ್ತಿಗಳ ಪ್ರಯತ್ನ, ಹಸ್ತಕ್ಷೇಪಗಳನ್ನು ನಿರಂತರವಾಗಿ ತಿರಸ್ಕರಿಸಿದೆ ಎಂದು ಅವರು ವಿವರಿಸಿದ್ದಾರೆ.

ಗಮನಾರ್ಹ ವಿಚಾರವೆಂದರೆ, ಒಂದಷ್ಟು ನಿರ್ದಿಷ್ಟ ಪಾಶ್ಚಾತ್ಯ ಗುಂಪುಗಳು ಭಾರತದ ಅನುಕೂಲಕ್ಕಿಂತಲೂ ಹೆಚ್ಚಾಗಿ, ತಮಗೆ ಪ್ರಯೋಜನವಾಗುವ ರೀತಿಯಲ್ಲಿ ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದವು ಎಂಬ ವಿಚಾರವೂ ಮುನ್ನಲೆಗೆ ಬಂದಿದೆ.

ಸ್ವಂತ ಬಲದಲ್ಲಿ ಬಹುಮತ ಪಡೆಯಲು ಆಗಲಿಲ್ಲ

ಪಾಶ್ಚಾತ್ಯ ಮಾಧ್ಯಮಗಳು ಭಾರತೀಯ ಚುನಾವಣಾ ಫಲಿತಾಂಶದ ಕುರಿತು ವರದಿ ಮಾಡುತ್ತಾ, 2014ರ ಬಳಿಕ ಇದೇ ಮೊದಲ ಬಾರಿಗೆ ಮೋದಿಯವರ ಬಿಜೆಪಿ ಸ್ವಂತ ಬಲದಲ್ಲಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ ಎಂದಿರುವುದಕ್ಕೆ ಪ್ರತಿಕ್ರಿಯೆಯಾಗಿ ಇಂತಹ ವಿಚಾರಗಳು ಚರ್ಚೆಗೆ ಬಂದಿವೆ. ದ ವಾಷಿಂಗ್ಟನ್ ಪೋಸ್ಟ್ ಮತ್ತು ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆಗಳು ಲೋಕಸಭಾ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರಿಗೆ 'ಆಘಾತಕಾರಿ ಹಿನ್ನಡೆ' ಎಂದಿದ್ದರೆ, ದ ಎಕನಾಮಿಸ್ಟ್ ಪತ್ರಿಕೆ ಈ ಫಲಿತಾಂಶ ಮೋದಿಯವರಿಗೆ 'ಮಹತ್ವದ ಹಿನ್ನಡೆ' ಎಂದು ಕರೆದಿದೆ.

ಸ್ವಪನ್ ದಾಸ್ ಗುಪ್ತ ಅವರು ಭಾರತದ ಚುನಾವಣಾ ಫಲಿತಾಂಶದಲ್ಲಿ ಪಾಶ್ಚಾತ್ಯ ಮಾಧ್ಯಮಗಳಿಗೆ ಧೈರ್ಯ - ಸ್ಫೂರ್ತಿ ತುಂಬುವಂತಹ ಯಾವುದೇ ಅಂಶಗಳಿಲ್ಲ, ಮತ್ತು 'ಇಂಡಿಯಾ ಫಸ್ಟ್' (ಭಾರತಕ್ಕೆ ಪ್ರಥಮ ಆದ್ಯತೆ) ಎಂಬ ಭಾರತದ ವಿದೇಶಾಂಗ ನೀತಿ ಅಬಾಧಿತವಾಗಿ ಮುಂದುವರಿಯಲಿದೆ ಎಂದಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ ಬೆಂಬಲ ಕಡಿಮೆಯಾಗಿದೆ ಎಂಬಂತಹ ಯಾವುದೇ ಭಾವನೆ, ಸಂತೋಷ ಪಾಶ್ಚಾತ್ಯ ಮಾಧ್ಯಮಗಳಿಗಿದ್ದರೆ, ಈ ಖುಷಿಯ ಆಯುಷ್ಯ ಬಹಳ ಕಡಿಮೆಯಿದೆ. ಯಾಕೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೆಲದಿನಗಳಲ್ಲೇ ಸ್ಥಿರವಾಗಲಿದೆ" ಎಂದು ಗ್ಲೋಬಲ್ ಸ್ಟ್ರಾಟಜಿಕ್ ಪಾಲಿಸಿ ಫೌಂಡೇಶನ್ ಪುಣೆಯ (ಜಿಎಸ್‌ಪಿಎಫ್‌ಪಿ) ಸ್ಥಾಪಕ ಅಧ್ಯಕ್ಷರಾದ ಡಾ. ಅನಂತ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ಪಾಶ್ಚಾತ್ಯ ಮಾಧ್ಯಮಗಳ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ, ಪ್ರಧಾನಿಯಾಗಿ ಮೋದಿಯವರ ಮೂರನೇ ಅವಧಿಯಲ್ಲಿ ರಾಷ್ಟ್ರೀಯವಾದಿ ನೀತಿಗಳು ಇನ್ನಷ್ಟು ತೀವ್ರಗೊಂಡು, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಾಧಿಸುವುದಕ್ಕೆ ಇನ್ನಷ್ಟು ಆದ್ಯತೆ ಲಭಿಸಬಹುದು ಎಂದು ಅನಂತ್ ಭಾಗವತ್ ಪಾಶ್ಚಾತ್ಯ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾದ ಒತ್ತಡದ ಹೊರತಾಗಿಯೂ, ಭಾರತ ಯಾವುದೇ ಅಧಿಕೃತ ಜಾಗತಿಕ ಚೀನಾ ವಿರೋಧಿ ಗುಂಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿಲ್ಲ ಎಂದು ಭಾಗವತ್ ಹೇಳಿದ್ದಾರೆ. ಆದರೆ ಭಾರತ ಚೀನಾದೊಡನೆ ನೇರವಾಗಿ ಕಾರ್ಯಾಚರಿಸುವುದನ್ನು ಮುಂದುವರಿಸಿ, ಲಡಾಖ್ ಗಡಿಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ನಡೆಸಲಿದೆ. ಅದರೊಡನೆ, ಚೀನೀ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲೂ ಭಾರತ ಪ್ರಯತ್ನಿಸಲಿದೆ. ಈ ಮೊದಲಿನಂತೆ ರಷ್ಯಾದಿಂದ ಭಾರತದ ತೈಲ ಆಮದು ಮುಂದುವರಿಯಲಿದ್ದು, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗುವಂತೆ, ರಷ್ಯಾದೊಡನೆ ಇತರ ವಲಯಗಳಲ್ಲೂ ವ್ಯಾಪಾರ ಸಂಬಂಧ ಗಟ್ಟಿಗೊಳ್ಳುವ ನಿರೀಕ್ಷೆಗಳಿವೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಅನಿರ್ಬನ್ ಗಂಗೂಲಿ ಹೇಳಿದ್ದೇನು?

ರಾಯ್ಟರ್ಸ್ ಬರಹಗಾರರೊಬ್ಬರು ಪಾಶ್ಚಾತ್ಯ ದೇಶಗಳಿಗೆ ಸಲಹೆಯೊಂದನ್ನು ನೀಡಿದ್ದು, ನರೇಂದ್ರ ಮೋದಿಯವರ ಮೂರನೇ ಅವಧಿಯಲ್ಲಿ ಭಾರತದೊಡನೆ ವ್ಯವಹರಿಸುವಾಗ ವ್ಯಾಪಾರ ಕೇಂದ್ರಿತ ದೃಷ್ಟಿಕೋನದಿಂದ ವರ್ತಿಸುವುದು ಸೂಕ್ತ ಎಂದಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ಪಟ್ಟಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಅನಿರ್ಬನ್ ಗಂಗೂಲಿ ಅವರು, ಜಾಗತಿಕ ಅಪಾಯಗಳ ಕಾರಣಕ್ಕಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿರುವ ಪಾಶ್ಚಾತ್ಯ ದೇಶಗಳಿಗೆ ಭಾರತವೇ ಅತ್ಯಂತ ಸೂಕ್ತವಾದ, ಮತ್ತು ಉತ್ತಮವಾದ ಪ್ರಜಾಪ್ರಭುತ್ವವಾದಿ ಮಾದರಿಯ ಆಯ್ಕೆಯಾಗಿದೆ ಎಂದಿದ್ದಾರೆ.

  • ವ್ಯಾಪಾರ ಕೇಂದ್ರಿತ ಸಂಬಂಧವೆಂದರೆ, ನಿರ್ದಿಷ್ಟ ಗುರಿಗಳನ್ನು ಸಾಧಿಸುವ ಸಲುವಾಗಿ, ಅಥವಾ ವಾಣಿಜ್ಯಿಕ ಲಾಭ ಗಳಿಸುವ ಸಲುವಾಗಿ ಮಾತ್ರವೇ ಒಪ್ಪಂದಗಳನ್ನು ಹೊಂದಲು ಗಮನ ಕೇಂದ್ರೀಕರಿಸುವ ವಿಧಾನ.
  • ಪ್ರಜಾಪ್ರಭುತ್ವವಾದಿ ಮಾದರಿಯ ಆಯ್ಕೆ ಎಂದರೆ, ಪ್ರಜಾಪ್ರಭುತ್ವದ ನೀತಿ, ಮೌಲ್ಯಗಳು, ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ದೇಶದ ಆಯ್ಕೆಯಾಗಿದ್ದು, ಆ ಆಯ್ಕೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ನ್ಯಾಯಯುತ ಪ್ರಾತಿನಿಧ್ಯ, ಆಯ್ಕೆಯ ಸ್ವಾತಂತ್ರ್ಯ, ಹಾಗೂ ವೈಯಕ್ತಿಕ ಹಕ್ಕುಗಳಿಗೆ ಆದ್ಯತೆ ನೀಡುತ್ತದೆ.

ಪಾಶ್ಚಾತ್ಯ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಕೇವಲ ಪಾಶ್ಚಾತ್ಯ ಮಾಧ್ಯಮಗಳ ಮಾತುಗಳನ್ನು ಮಾತ್ರ ಗಮನಿಸಿ, ಅವುಗಳ ಮೇಲೆ ಅವಲಂಬಿತವಾಗಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಡಾ. ಅನಿರ್ಬನ್ ಗಂಗೂಲಿ ಹೇಳಿದ್ದಾರೆ. ಕಳೆದ ದಶಕದಲ್ಲಿ ಇದ್ದ ರೀತಿಯಲ್ಲೇ, ಮುಂದಿನ ದಿನಗಳಲ್ಲೂ ವಿದೇಶೀ ಹೂಡಿಕೆದಾರರಿಗೆ ಭಾರತವೇ ನೆಚ್ಚಿನ ಆಯ್ಕೆಯಾಗಿ ಮುಂದುವರಿಯಲಿದೆ ಎಂದು ಗಂಗೂಲಿ ವಿಶ್ವಾಸ ಹೊಂದಿದ್ದಾರೆ.

ಎನ್‌ಡಿಎ ಗೆಲುವಿನ ಬಳಿಕ, ಜೂನ್ 5ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯದ ಭಾಷಣ ಮಾಡಿದರು. ತನ್ನ ಅಧಿಕಾರದ ಮೂರನೇ ಅವಧಿಯಲ್ಲಿ ಭಾರತದಲ್ಲಿ ಮಹತ್ವದ ಆರ್ಥಿಕ ಸುಧಾರಣೆಗಳನ್ನು ತರುವ ಭರವಸೆಯನ್ನು ಪ್ರಧಾನಿ ನೀಡಿದರು. ಈ ಸುಧಾರಣೆಗಳು ಹೂಡಿಕೆಯನ್ನು ಆಕರ್ಷಿಸುವ, ಭಾರತದ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವ, ಹಾಗೂ ಭಾರತದ ಯುವ ಜನತೆಗೆ ಅವಶ್ಯಕ ಉದ್ಯೋಗ ಸೃಷ್ಟಿಸುವ ಗುರಿಗಳನ್ನು ಹೊಂದಿವೆ. ಮೋದಿಯವರ ಭರವಸೆಗಳು ಸಮ್ಮಿಶ್ರ ಸರ್ಕಾರದ ಸ್ಥಾಪನೆ ಭಾರತದ ಆರ್ಥಿಕತೆಯನ್ನು ಇನ್ನಷ್ಟು ಮುಕ್ತವಾಗಿಸುವ ಮತ್ತು ಸ್ವತಂತ್ರಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗಲಾರದು ಎಂಬ ನಂಬಿಕೆ ಮೂಡಿಸಿವೆ.

ಪಶ್ಚಿಮ ಬಂಗಾಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಾ. ಗಂಗೂಲಿ, ಪಾಶ್ಚಾತ್ಯ ಮಾಧ್ಯಮಗಳ ಪಕ್ಷಪಾತದ ಧೋರಣೆಯ ಕುರಿತು ಸ್ವಪನ್ ದಾಸ್ ಗುಪ್ತ ಅವರ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ್ದಾರೆ. ಆದರೆ, ಪಾಶ್ಚಾತ್ಯ ಮಾಧ್ಯಮಗಳ ಇಂತಹ ನಿರೂಪಣೆಯ ಹೊರತಾಗಿಯೂ, ಭಾರತದ ಪ್ರಜಾಪ್ರಭುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳೇನು ಎನ್ನುವುದು ಸಾಮಾನ್ಯ ಭಾರತೀಯರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಇಳಿಮುಖ; ಪಾಶ್ಚಾತ್ಯ ಮಾಧ್ಯಮಗಳು

"ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಪಾಶ್ಚಾತ್ಯ ಮಾಧ್ಯಮಗಳು ನರೇಂದ್ರ ಮೋದಿಯವರ ಕುರಿತು ಋಣಾತ್ಮಕ ಅಭಿಪ್ರಾಯ ಹಂಚುತ್ತಲೇ ಬಂದಿವೆ. ಪಾಶ್ಚಾತ್ಯ ಮಾಧ್ಯಮಗಳು ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಇಳಿಮುಖಗೊಂಡಿದೆ, ಮಾನವ ಹಕ್ಕುಗಳು ಸಮಸ್ಯೆಯ ಸುಳಿಯಲ್ಲಿವೆ ಎಂಬ ಅಭಿಪ್ರಾಯ ಮೂಡಿಸಲು ಸತತ ಪ್ರಯತ್ನ ನಡೆಸಿವೆ. ಆದರೆ, ನರೇಂದ್ರ ಮೋದಿಯವರು ತನ್ನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಬಲಗೊಳಿಸಿದ್ದಾರೆ ಎನ್ನಲು ಯಾವುದೇ ಅನುಮಾನಗಳಿಲ್ಲ. ವೈಯಕ್ತಿಕ ಹಂತದಲ್ಲಿ ನೋಡಿದರೂ, ಮೋದಿಯವರು ತನ್ನ ಪ್ರಜಾಸತ್ತಾತ್ಮಕ ಧೋರಣೆಯನ್ನು ಹೆಚ್ಚಿಸಿದ್ದಾರೆ. ಅವರು ಪ್ರಧಾನಿಯಾಗಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಾಗೃತ ಕಾವಲುಗಾರನ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಪ್ರಜೆಗಳು ಇದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ ಎಂದು ನಾನು ದೃಢವಾಗಿ ನಂಬಿದ್ದೇನೆ" ಎಂದು ಡಾ. ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ (ಎಸ್‌ಪಿಎಂಆರ್‌ಎಫ್) ಅಧ್ಯಕ್ಷರೂ ಆಗಿರುವ ನೆಲೆಯಲ್ಲಿ ಗಂಗೂಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ, ನರೇಂದ್ರ ಮೋದಿಯವರು ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಮುಂದುವರಿಯುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ, ನವದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರು ಭಾರತೀಯ ಮತದಾರರಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

"ಭಾರತದ ಕೆಲವು ವಿರೋಧ ಪಕ್ಷಗಳು ಮತ್ತು ಪಾಶ್ಚಾತ್ಯ ಮಾಧ್ಯಮಗಳ ರೀತಿಯಲ್ಲಿ ನಾವು ಭಾರತೀಯ ಮತದಾರರ ವಿವೇಚನೆ, ಬುದ್ಧಿಮತ್ತೆಯ ಕುರಿತು ಅನುಮಾನ ಹೊಂದಿಲ್ಲ. ಮತದಾರರ ನಂಬಿಕೆ ಮತ್ತು ವಿಶ್ವಾಸದ ಕಾರಣದಿಂದ, ಪಂಡಿತ್ ಜವಾಹರಲಾಲ್ ನೆಹರೂ ಅವರ ಬಳಿಕ, ನರೇಂದ್ರ ಮೋದಿಯವರು ಸತತವಾಗಿ ಮೂರನೇ ಬಾರಿಗೆ ಭಾರತ ಪ್ರಧಾನಿಯಾಗುತ್ತಿದ್ದಾರೆ" ಎಂದು ಬಿಜೆಪಿ ಥಿಂಕ್ ಟ್ಯಾಂಕ್ ಸದಸ್ಯರಾದ ಡಾ. ಅನಿರ್ಬನ್ ಗಂಗೂಲಿ ಪಕ್ಷದ ನಿಲುವನ್ನು ವಿವರಿಸಿದ್ದಾರೆ.

(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ