Modi Cabinet: ಮೋದಿ ಪ್ರಮಾಣ ವಚನ ಇಂದು; ಸಂಪುಟ ಸೇರುವವರ ಪಟ್ಟಿಯಲ್ಲಿ ಪ್ರಮುಖ ಹೆಸರು, ಕರ್ನಾಟಕದಿಂದ ಯಾರು?
Jun 09, 2024 01:08 AM IST
ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ಅಧಿಕಾರ ಹಿಡಿಯಲು ಎನ್‌ಡಿಎ ಅಣಿಯಾಗಿದೆ.
- Political Updates ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ( Narendra Modi Oath Ceremony) ಸ್ವೀಕರಿಸುವರು. ಅವರೊಂದಿಗೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ನಾಯಕರು ಪ್ರಮಾಣ ವಚನ ಸ್ವೀಕರಿಸುವರು.
ದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಬಿಜೆಪಿ ನೇತೃತ್ವದ ಎನ್‌ಡಿಐ ಮೈತ್ರಿ ಕೂಟ ಸತತ ಮೂರನೇ ಬಾರಿಗೆ ಅಣಿಯಾಗಿದೆ. ಭಾನುವಾರ ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಸುಮಾರು ಎಂಟು ಸಾವಿರ ಅತಿಥಿಗಳು ಭಾಗಿಯಾಗಲಿದ್ಧಾರೆ. ಮೊದಲ ಹಂತದಲ್ಲಿ ಬಿಜೆಪಿಯಿಂದ 20ಕ್ಕೂ ಅಧಿಕ ಹಾಗೂ ಮಿತ್ರ ಪಕ್ಷಗಳಿಂದ 10ಕ್ಕೂ ಅಧಿಕ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವರು. ಕರ್ನಾಟಕದಿಂದಲೂ ಇಬ್ಬರು ಇಲ್ಲವೇ ಮೂವರು ಸಂಪುಟ ಸೇರುವುದು ಖಚಿತವಾಗಿದೆ.
ಸಂಪುಟ ಸೇರುವ ಸಂಖ್ಯೆ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಬಿಜೆಪಿಯಿಂದ ಯಾರು ಸೇರಬಹುದು ಎನ್ನುವ ಚರ್ಚೆಗಳು ಬುಧವಾರ ಬೆಳಿಗ್ಗೆಯೂ ಆಗಬಹುದು. ಸಂಜೆ ಹೊತ್ತಿಗೆ ಇದಕ್ಕೊಂದು ಅಂತಿಮ ಸ್ವರೂಪ ಸಿಗಬಹುದು. ಇದರಲ್ಲಿ ಹಿರಿತನ, ರಾಜ್ಯವಾರು, ಸಮದಾಯವಾರು ಪ್ರಾತಿನಿಧ್ಯವನ್ನು ಬಿಜೆಪಿ ನೀಡಲಿದೆ. ಈ ಬಾರಿ ಶೇ. 25ರಷ್ಟು ಸ್ಥಾನ ಎನ್‌ಡಿಎ ಮಿತ್ರ ಪಕ್ಷಗಳಿಗೆ ಹೋಗುವುದರಿಂದ ಬಿಜೆಪಿಗೆ ಕಡಿಮೆ ಸ್ಥಾನ ಸಿಗಲಿವೆ. ಇದರಿಂದ ಆಯ್ಕೆ ಕಠಿಣವಾಗಿದೆ. ಆದರೂ ಹಿರಿಯರೊಂದಿಗೆ ಚರ್ಚಿಸಿ ಮೋದಿ ಸಚಿವರ ಹೆಸರು ಅಂತಿಮಗೊಳಿಸಲಿದ್ದಾರೆ.
ಬಿಜೆಪಿಯಿಂದ ಹಿರಿಯರಾದ ರಾಜನಾಥಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಶಿವರಾಜಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಪಿಯುಷ್ ಗೋಯೆಲ್, ಅಶ್ವಿನಿ ಶ್ರೀವೈಷ್ಣವ್, ಗಜೇಂದ್ರ ಸಿಂಗ್ ಶೇಖಾವತ್, ಡಾ.ಜಿತೇಂದ್ರ ಸಿಂಗ್, ಹರ್ದೀಪ್ ಸಿಂಗ್ ಪುರಿ ಸಹಿತ ಹಲವರ ಹೆಸರುಗಳಿವೆ. ಜ್ಯೋತಿರಾಧಿತ್ಯ ಸಿಂಧಿಯಾ, ಅನುರಾಗ ಠಾಕೂರ್, ಭೂಪೇಂದ್ರ ಯಾದವ್ ಅವರೂ ಸಂಪುಟ ಸೇರಬಹುದು ಎನ್ನಲಾಗುತ್ತಿದೆ. ಈ ಬಾರಿ ಸೋತಿದ್ದರೂ ಪ್ರಬಲವಾಗಿ ಕೆಲಸ ಮಾಡಿರುವ ತಮಿಳುನಾಡಿನ ಅಣ್ಣಾಮಲೈಗೂ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಪಶ್ಚಿಮ ಬಂಗಾಳದಿಂದಲೂ ಒಂದಿಬ್ಬರಿಗೆ ಅವಕಾಶ ಸಿಗಬಹುದು.
ಕರ್ನಾಟಕದಿಂದ ಬಿಜೆಪಿಯ ಪರವಾಗಿ ಈಗಾಗಲೇ ಕೇಂದ್ರ ಸಚಿವರಾಗಿದ್ದ ಪ್ರಲ್ಹಾದ ಜೋಶಿ ಅವರು ಸಂಪುಟ ಸೇರುವ ಸೂಚನೆಗಳಿವೆ. ಅವರೊಂದಿಗೆ ವಿ.ಸೋಮಣ್ಣ ಅವರೂ ಸಂಪುಟ ಸೇರಿಕೊಳ್ಳಬಹುದು.
ಕರ್ನಾಟಕದಿಂದಲೇ ಎನ್‌ಡಿಎ ಕೋಟಾದಡಿ ಮಾಜಿ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ಸೇರಲಿದ್ದಾರೆ.
ಟಿಡಿಪಿಗೆ ಸಂಪುಟದಲ್ಲಿ ನಾಲ್ಕು ಸ್ಥಾನ ಸಿಗಲಿವೆ. ಇವರಲ್ಲಿ ರಾಮಮೋಹನ ನಾಯ್ಡು, ಹರೀಶ್ ಬಾಲಯೋಗಿ, ದಗ್ಗುಮಲ್ಲ ಪ್ರಸಾದ್ ಅವರು ಸಂಪುಟ ಸೇರಬಹುದು ಎನ್ನಲಾಗುತ್ತಿದೆ.
ಜೆಡಿಯುನಿಂದ ಇಬ್ಬರು ಹಿರಿಯರ ಹೆಸರನ್ನು ಆ ಪಕ್ಷ ಪ್ರಸ್ತಾಪಿಸಿದೆ. ಇವರಲ್ಲಿ ಲಲನ್ ಸಿಂಗ್ ಹಾಗೂ ರಾಮನಾಥ್ ಠಾಕೂರ್ ಅವರು ಮೋದಿ ಅವರ ಸಂಪುಟ ಸೇರುವರು.
ಮೊದಲ ಹಂತದಲ್ಲಿ ಸಂಪುಟ ರಚನೆಯಾಗಿ ಬಹುಮತ ಸಾಬೀತುಪಡಿಸಿದ ಜತೆಗೆ ಎನ್‌ಡಿಎ ಸಂಚಾಲನ ಸಮಿತಿ ರಚನೆ ನಂತರ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯೂ ಮಾತುಕತೆಗಳು ನಡೆದಿವೆ.