logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monsoon Rain Forecast: ಈ ವರ್ಷವೂ ಭಾರತದಲ್ಲಿ ವಾಡಿಕೆಯಷ್ಟೇ ಮಳೆ: ಹವಾಮಾನ ಇಲಾಖೆ ಅಭಯ, ಕರಗಿತು ಆತಂಕದ ಕಾರ್ಮೋಡ

Monsoon Rain Forecast: ಈ ವರ್ಷವೂ ಭಾರತದಲ್ಲಿ ವಾಡಿಕೆಯಷ್ಟೇ ಮಳೆ: ಹವಾಮಾನ ಇಲಾಖೆ ಅಭಯ, ಕರಗಿತು ಆತಂಕದ ಕಾರ್ಮೋಡ

D M Ghanashyam HT Kannada

Apr 12, 2023 09:06 AM IST

Monsoon Rains: ಹವಾಮಾನ ಇಲಾಖೆಯು ಮಳೆ ಬಗ್ಗೆ ಭರವಸೆ ಮೂಡಿಸಿದೆ

    • Indian Economy: ಇದೀಗ ತಾನೆ ಕೊವಿಡ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಆರ್ಥಿಕತೆಗೆ ಉತ್ತಮ ಮುಂಗಾರು ಅತ್ಯಗತ್ಯ. ಇದೀಗ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಕೃಷಿ ಆರ್ಥಿಕತೆಯ ಸ್ಥಿರತೆ ಬಗ್ಗೆ ಆಶಾಭಾವನೆ ಮೂಡಿಸಿದೆ.
Monsoon Rains: ಹವಾಮಾನ ಇಲಾಖೆಯು ಮಳೆ ಬಗ್ಗೆ ಭರವಸೆ ಮೂಡಿಸಿದೆ
Monsoon Rains: ಹವಾಮಾನ ಇಲಾಖೆಯು ಮಳೆ ಬಗ್ಗೆ ಭರವಸೆ ಮೂಡಿಸಿದೆ (REUTERS)

ದೆಹಲಿ: ಭಾರತದಲ್ಲಿ ಈ ವರ್ಷದ ಮುಂಗಾರು (Monsoon Rains) ಹಂಗಾಮಿನಲ್ಲಿ ವಾಡಿಕೆಯಷ್ಟೇ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Indian Meteorological Department) ಆಶಾದಾಯಕ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಅಧಿಕೃತ ಮುನ್ಸೂಚನೆ ನಿನ್ನೆಯಷ್ಟೇ (ಏ 11) ಪ್ರಟವಾಗಿದ್ದು, ರೈತರೂ ಸೇರಿದಂತೆ ಸಾರ್ವಜನಿಕರಿಗೆ ನೆಮ್ಮದಿ ತಂದಿದೆ. ಇದಕ್ಕೆ ಕೇವಲ ಒಂದು ದಿನ ಮೊದಲಷ್ಟೇ, ಅಂದರೆ ಸೋಮವಾರ (ಏ 10) ಮುನ್ಸೂಚನೆ ಪ್ರಕಟಿಸಿದ್ದ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ (Skymet Weather Services), 'ಈ ವರ್ಷ ಭಾರತದಲ್ಲಿ ಮುಂಗಾರು ದುರ್ಬಲವಾಗಲಿದೆ. ಬರಗಾಲ ಆವರಿಸುವ ಸಾಧ್ಯತೆ ಶೇ 20ರಷ್ಟಿದೆ' ಎಂದು ಹೇಳಿತ್ತು. ಮುಂಗಾರು ಕುಂಠಿತಗೊಂಡರೆ ಆಹಾರ ಉತ್ಪಾದನೆಯೂ ಕಡಿಮೆಯಾಗಲಿದೆ. ಮುಖ್ಯವಾಗಿ ಗ್ರಾಮೀಣ ಆರ್ಥಿಕತೆ (Rural Economy) ಮತ್ತು ಅದರ ಜೊತೆಗೆ ದೇಶದ ಒಟ್ಟಾರೆ ಆರ್ಥಿಕತೆಯಲ್ಲಿ ಹಿಂಜರಿಕೆಯ ವಾತಾವರಣ ನೆಲೆಗೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಇದೀಗ ಭಾರತದ ಅಧಿಕೃತ ಹವಾಮಾನ ಸಂಸ್ಥೆಯೇ ಮುಂಗಾರಿನ ಬಗ್ಗೆ ಅಧಿಕೃತ ಹೇಳಿರುವುದು ಆತಂಕದ ಕಾರ್ಮೋಡವನ್ನು ದೂರ ಮಾಡಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರುವ ಎಲ್‌ ನಿನೊ ಮತ್ತು ಲಾ ನಿನೊ ಎನ್ನುವ ಎರಡು ವಿದ್ಯಮಾನಗಳನ್ನು ಆಧರಿಸಿ ಹವಾಮಾನ ಸಂಸ್ಥೆಗಳು ಮುನ್ಸೂಚನೆ ನೀಡುತ್ತವೆ. ಸ್ಕೈಮೆಟ್ ಸಂಸ್ಥೆಯು ನೀಡಿದ್ದ ಮುನ್ಸೂಚನೆಗೆ ಲಾ ನಿನಾ ವಿದ್ಯಮಾನ ಆಧಾರವಾಗಿತ್ತು. 'ಸಾಗರ ಮತ್ತು ವಾತಾವರಣದಲ್ಲಿ ಕಂಡು ಬರುವ ಲಾ ನಿನಾ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬಂದಿರುವುದರಿಂದ ಮಳೆ ಕಡಿಮೆಯಾಗಬಹುದು. ಭಾರತದಲ್ಲಿ ಬರಗಾಲ ಆವರಿಸುವ ಸಾಧ್ಯತೆ ಶೇ 20ರಷ್ಟು ಇದೆ' ಎಂದು ಸ್ಕೈಮೆಟ್ ಹೇಳಿತ್ತು. ಹವಾಮಾನ ಇಲಾಖೆಯು ಈ ವಿಶ್ಲೇಷಣೆಯನ್ನು ನಿರಾಕರಿಸಿದೆ. 'ಉತ್ತರ ಗೋಳಾರ್ಧದದಲ್ಲಿ ಹಿಮ ಆವರಿಸಿರುವ ಪ್ರಮಾಣ ಕಡಿಮೆಯಾಗಿರುವುದು ಮತ್ತು ಹಿಂದೂ ಮಹಾಸಾಗರದ ನೀರಿನ ಮೇಲ್ಮೈ ಉಷ್ಣಾಂಶದಲ್ಲಿ ವ್ಯತ್ಯಾಸ ದಾಖಲಾಗಿರುವುದರಿಂದ ಮಳೆಯ ಪ್ರಮಾಣ ಎಂದಿನಂತೆಯೇ ಇರಲಿದೆ' ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಭೂವಿಜ್ಞಾ ಇಲಾಖೆಯ ಕಾರ್ಯದರ್ಶಿ ಎಂ.ರವಿಚಂದ್ರನ್ ಹಾಗೂ ಪ್ರಧಾನ ನಿರ್ದೇಶಕ ಎಂ.ಮಹಾಪಾತ್ರ , ' ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (Long Period Average - LPA) ಲೆಕ್ಕಾಚಾರದ ಪ್ರಕಾರ, ಈ ಬಾರಿಯ ಮಳೆ ಸಾಧ್ಯತೆ 87 ಸೆಂಮೀ ಇದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಯ ಶೇ 96ರಷ್ಟು ಮಳೆ ಸುರಿಯುವ ನಿರೀಕ್ಷೆಯಿದೆ. ಭಾರತದ ಪಶ್ಚಿಮ (ವಾಯವ್ಯ) ಹಾಗೂ ಉತ್ತರ (ಈಶಾನ್ಯ) ಪ್ರದೇಶದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ' ಎಂದು ವಿವರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ಮಳೆ ಪ್ರಮಾಣ ಉತ್ತಮವಾಗಿದೆ. 2019ರಲ್ಲಿ 87.19 ಸೆಂಮೀ, 2020ರಲ್ಲಿ 96.14 ಸೆಂಮೀ, 2021ರಲ್ಲಿ 87.45 ಸೆಂಮೀ, 2022ರಲ್ಲಿ 92.48 ಸೆಂಮೀ ಮಳೆಯಾಗಿದೆ. ಕೊವಿಡ್ ನಂತರ ಕಾಣಿಸಿಕೊಂಡಿದ್ದ ಆರ್ಥಿಕ ಹಿಂಜರಿತದ ಪರಿಸ್ಥಿತಿಯಿಂದ ಭಾರತದ ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲು ಉತ್ತಮ ಹವಾಮಾನ ಮತ್ತು ಮಳೆಯೂ ಮುಖ್ಯಕಾರಣವಾಗಿದೆ. ಈ ವರ್ಷ ಕಡಿಮೆ ಮಳೆಯ ಮುನ್ಸೂಚನೆ ಸಿಕ್ಕಿದ್ದರಿಂದ ಆರ್ಥಿಕ ಪ್ರಗತಿಯ ವೇಗಕ್ಕೆ ತಡೆಯಾಗಬಹುದು, ಆಹಾರ ಉತ್ಪಾದನೆ ಕುಂಠಿತಗೊಂಡು ಹಣದುಬ್ಬರ ಹೆಚ್ಚಾಗಬಹುದು ಎಂಬ ಆತಂಕ ಕಂಡುಬಂದಿತ್ತು. ಇದೀಗ ಹವಾಮಾನ ಇಲಾಖೆಯು ಅಧಿಕೃತ ಮಾಹಿತಿ ಬಹಿರಂಗಪಡಿಸುವ ಮೂಲಕ ರೈತರಲ್ಲಿ ನೆಮ್ಮದಿ ಮೂಡಿಸಿದೆ.

ಸ್ಕೈಮೆಟ್ ಕೊಟ್ಟ ಮುನ್ಸೂಚನೆ ಹೀಗಿತ್ತು

ಭಾರತದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರುವ ಎಲ್‌ ನಿನೊ ಮತ್ತು ಲಾ ನಿನಾ ವಿದ್ಯಮಾನಗಳನ್ನು ಆಧರಿಸಿ 'ಸ್ಕೈಮೆಟ್' ಮುನ್ಸೂಚನೆ ಪ್ರಕಟಿಸಿತ್ತು. 'ಲಾ ನಿನಾ ವಿದ್ಯಮಾನ ಕೊನೆಗೊಂಡಿರುವುದರಿಂದ ಭಾರತದಲ್ಲಿ ಬರಗಾಲ ಆವರಿಸುವ ಸಾಧ್ಯತೆ ಕಂಡುಬರುತ್ತಿದೆ. ಈ ವರ್ಷ 86 ಸೆಂಮೀ ಮಳೆಯಾಗಬಹುದು. ಉತ್ತರ ಹಾಗೂ ಮಧ್ಯ ಭಾರತದಲ್ಲಿ ಮಳೆ ಕೊರತೆ ಕಂಡುಬರಲಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಅಸಹಜ ರೀತಿಯಲ್ಲಿ ಸುರಿಯಲಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಲಿದ. ದೇಶಾದ್ಯಂತ ಮಳೆ ಕೊರತೆ ಕಂಡುಬರುವ ಸಾಧ್ಯತೆ ಶೇ 40ರಷ್ಟಿದೆ' ಎಂದು ಸ್ಕೈಮೆಟ್‌ನ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ಹೇಳಿದ್ದರು.

ಯುದ್ಧ ಮತ್ತು ಹವಾಮಾನ

ರಷ್ಯಾ ಮತ್ತು ಉಕ್ರೇನ್ ಯುದ್ಧ ತಕ್ಷಣಕ್ಕೆ ಕೊನೆಗೊಳ್ಳುವ ಯಾವುದೇ ಮುನ್ಸೂಚನೆ ಕಾಣಿಸುತ್ತಿಲ್ಲ. ಉಕ್ರೇನ್ ವಿಶ್ವದ ಅತಿದೊಡ್ಡ ಗೋಧಿ ಉತ್ಪಾದಕ ದೇಶ. ಅಲ್ಲಿ ಈ ವರ್ಷ ಬೇಸಾಯ ಸರಿಯಾಗಿ ನಡೆದಿಲ್ಲ. ವಿಶ್ವದ 2ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತ ಪ್ರಮುಖ ಗೋಧಿ ಬಳಕೆದಾರ ದೇಶ. ಇಲ್ಲಿ ಉತ್ಪಾದನೆಯಾಗುವ ಗೋಧಿ ಆಂತರಿಕ ಬಳಕೆಯ ನಂತರವೂ ಉಳಿದರೆ ಈಜಿಪ್ಟ್ ಸೇರಿ ಹಲವು ದೇಶಗಳಿಗೆ ರಫ್ತಾಗುತ್ತದೆ. ಶ್ರೀಲಂಕಾ ಮತ್ತು ನೇಪಾಳದಂಥ ಹಲವು ದೇಶಗಳಿಗೆ ಅಕ್ಕಿಯನ್ನೂ ಭಾರತ ರಫ್ತು ಮಾಡುತ್ತದೆ. ಭಾರತದ ಕೃಷಿ ಕ್ಷೇತ್ರ ಉತ್ತಮ ಪ್ರಗತಿ ಸಾಧಿಸುವುದು ಕೇವಲ ಭಾರತದ ಆರ್ಥಿಕತೆ ಮಾತ್ರವೇ ಅಲ್ಲ, ವಿಶ್ವದ ಆರ್ಥಿಕತೆ ಮತ್ತು ಆಹಾರ ಭದ್ರತೆಗೆ ಅತ್ಯಗತ್ಯ. ಹೀಗಾಗಿಯೇ ಭಾರತದ ಹವಾಮಾನ ಮುನ್ಸೂಚನೆಯ ಬಗ್ಗೆ ಇಡೀ ಜಗತ್ತಿನಲ್ಲಿ ಕುತೂಹಲ ವ್ಯಕ್ತವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು