ಹಿಂದೂ ಯುವಕನ ಮದುವೆಯಾದ ಮುಸ್ಲಿಂ ಯುವತಿ, ನವದಂಪತಿಯ ಹತ್ಯೆ ಮಾಡಿದ 3 ಅಪ್ರಾಪ್ತರು ಸೇರಿ 6 ಆರೋಪಿಗಳ ಬಂಧನ
Oct 18, 2023 05:32 PM IST
ಹಿಂದೂ ಯುವಕನ ಮದುವೆಯಾದ ಮುಸ್ಲಿಂ ಯುವತಿ. ನವದಂಪತಿಯನ್ನು ಹತ್ಯೆ ಮಾಡಿದ 3 ಅಪ್ರಾಪ್ತರು ಸೇರಿ 6 ಆರೋಪಿಗಳ ಬಂಧನ. (ಸಾಂಕೇತಿಕ ಚಿತ್ರ)
ಬಾವಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬರ ಅಪರಿಚಿತ ಶವದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಈ ಜೋಡಿ ಕೊಲೆ (ಮರ್ಯಾದಾ ಹತ್ಯೆ) ಬೆಳಕಿಗೆ ಬಂದಿದೆ. ಶವ ಪತ್ತೆಯಾದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾರುಣ ಘಟನೆಯ ವಿವರ ಇಲ್ಲಿದೆ.
ಮುಸ್ಲಿಂ ಯುವತಿ ಹಿಂದೂ ಯುವಕನನ್ನು ಮದುವೆಯಾದ ಕಾರಣ ಕೋಪಗೊಂಡ ಯುವತಿಯ ಕುಟುಂಬಸ್ಥರು ಇಬ್ಬರ ಪ್ರಾಣವನ್ನೂ ತೆಗೆದಿದ್ದಾರೆ. ಜೋಡಿ ಕೊಲೆ ಆರೋಪದ ಮೇಲೆ ಮುಂಬೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಮೂವರು ಅಪ್ರಾಪ್ತರನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಗುಲ್‌ನಾಜ್ ಖಾನ್ 2022ರಲ್ಲಿ ಕರಣ್ ರಮೇಶ್ ಚಂದ್ರ ಅವರನ್ನು ವಿವಾಹವಾಗಿದ್ದಳು. ಇದರಿಂದ ಖಾನ್ ಕುಟುಂಬ ಅಸಮಾಧಾನಗೊಂಡಿತ್ತು. ಇದಾದ ಬಳಿಕ ಆಕೆಯ ತಂದೆ ಮತ್ತು ಸಹೋದರ ಕೆಲವು ಸ್ನೇಹಿತರ ನೆರವಿನೊಂದಿಗೆ ಇಬ್ಬರನ್ನೂ ಹತ್ಯೆ ಮಾಡಿದ್ದರು. ಇಬ್ಬರೂ ಉತ್ತರ ಪ್ರದೇಶದ ಬಾಂದಾದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮರ್ಯಾದೆಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದದ್ದು ಹೀಗೆ
ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಈ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುಂಡರಿಸಿದ ತಲೆಯೂ ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ವಿವಿಧೆಡೆ ಛಾಯಾಚಿತ್ರಗಳನ್ನು ಪ್ರಕಟಿಸಿ ಜನರಿಂದ ಮಾಹಿತಿ ಪಡೆದರು.
ಕೆಲ ದಿನಗಳ ಹಿಂದೆ ಪತ್ನಿಯೊಂದಿಗೆ ಮುಂಬೈಗೆ ಬಂದಿದ್ದ ಉತ್ತರ ಪ್ರದೇಶದ ನಿವಾಸಿ ಕರಣ್ ರಮೇಶ್ ಚಂದ್ರ ಅವರದೇ ಶವ ಎಂದು ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ಪತ್ತೆ ಹಚ್ಚಿದ್ದೇವೆ. ನಾವು ಅವರ ಪತ್ನಿ ಗುಲ್ ನಾಜ್ ಅವರನ್ನು ಹುಡುಕಲು ಪ್ರಾರಂಭಿಸಿದಾಗ, ಅವಳು ಸಹ ಕಾಣೆಯಾಗಿದ್ದಳು. ಪ್ರಾಥಮಿಕ ತನಿಖೆಯ ನಂತರ, ಗುಲ್‌ನಾಜ್ ಹಿಂದೂ ಯುವಕನನ್ನು ವಿವಾಹವಾದ ಕಾರಣ ಅವರ ಕುಟುಂಬಕ್ಕೆ ತುಂಬಾ ಅಸಮಾಧಾನವಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿತ್ತು ಎಂದು ಇನ್ ಸ್ಪೆಕ್ಟರ್ ಪ್ರಮೋದ ಕೊಕಾಟೆ ತಿಳಿಸಿದ್ದಾರೆ.
ಕರಣ್ ರಮೇಶ್ ಚಂದ್ರ ಮತ್ತು ಗುಲ್‌ನಾಜ್ ಪ್ರೇಮ ವಿವಾಹ
"ನಾವು ಗುಲ್‌ನಾಜ್ ಅವರ ತಂದೆ ಗೋರಾ ರೈಸುದ್ದೀನ್ ಖಾನ್ ಮತ್ತು ಸಹೋದರ ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರು ಇಬ್ಬರನ್ನೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡರು. ಸಲ್ಮಾನ್ ಸ್ನೇಹಿತ ಮೊಹಮ್ಮದ್ ಕೈಫ್ ಜೊತೆಗೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ ಇತರ ಮೂವರು ಅಪ್ರಾಪ್ತರನ್ನು ಸಹ ಬಂಧಿಸಲಾಗಿದೆ" ಎಂದು ವಲಯ VIರ ಡಿಸಿಪಿ ಹೇಮರಾಜ್ ರಜಪೂತ್ ತಿಳಿಸಿದ್ದಾರೆ.
ಜವಳಿ ವ್ಯಾಪಾರ ಮಾಡುತ್ತಿದ್ದ ಗೋರಾ ಮತ್ತು ಸಲ್ಮಾನ್ ಆಗಾಗ್ಗೆ ಕೆಲಸದ ನಿಮಿತ್ತ ಮುಂಬೈನ ಧಾರಾವಿಗೆ ಬರುತ್ತಿದ್ದರು. ಬಳಿಕ ಅಲ್ಲೇ ಬಹು ಕಾಲದಿಂದ ನೆಲೆಸಿದ್ದರು. ಕರಣ್ ಚಂದ್ರ ರಮೇಶ್ ಜತೆಗಿನ ಪ್ರೇಮದ ವಿಚಾರವನ್ನು ಗುಲ್‌ನಾಜ್ ಕಳೆದ ವರ್ಷ ಮನೆಯವರಿಗೆ ತಿಳಿಸಿದ್ದರು. ಬಳಿಕ ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾದರು. ಸಮಯ ಕಳೆದಂತೆ ಸಂಬಂಧಿಕರಿಗೆ ವಿಷಯ ತಿಳಿಯಿತು. ಇದಾದ ನಂತರ ಯುವತಿಯ ತಂದೆ ಮತ್ತು ಸಹೋದರ ಮುಜುಗರ ಅನುಭವಿಸಿದ್ದೇವೆ. ಚಂದ್ರನನ್ನು ಕೊಲ್ಲಲು ನಿರ್ಧರಿಸಲಾಯಿತು. ಅವರ ನಡುವಿನ ವಿವಾದ ಬಗೆಹರಿಸುವುದಕ್ಕಾಗಿ ಮುಂಬೈಗೆ ಕರೆಸಿಕೊಂಡರು ಎಂದು ಅಧಿಕಾರಿ ಹೇಳಿದರು.
ನಂತರ ರಾತ್ರಿಯಲ್ಲಿ, ಗುಲ್ ನಾಜ್ ತನ್ನ ಗಂಡನ ಬಗ್ಗೆ ಕೇಳಲು ಪ್ರಾರಂಭಿಸಿದಾಗ, ತಮ್ಮ ವಿರುದ್ಧ ದೂರು ನೀಡುತ್ತಾರೆ ಎಂದು ಆರೋಪಿಗಳು ಚಿಂತಿತರಾಗಿದ್ದರು. ಯಾವುದೋ ನೆಪದಲ್ಲಿ ಅವರನ್ನು ಮುಂಬೈನ ಕಲಾಂಬೋಲಿಗೆ ಕರೆದೊಯ್ದರು. ಅಲ್ಲಿ ಅವರು ಹಗ್ಗದಿಂದ ಕತ್ತು ಹಿಸುಕಿ ಗುಲ್‌ನಾಜ್‌ನ ದೇಹವನ್ನು ಕಾಡಿನಲ್ಲಿ ಎಸೆದರು ಎಂದು ಅಧಿಕಾರಿ ಹೇಳಿದರು.
ಆರೋಪಿಗಳು ಗುಲ್ ನಾಜ್ ಶವವನ್ನು ಎಸೆದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದರು. ಪೊಲೀಸರು ಆತನನ್ನು ವಶಪಡಿಸಿಕೊಂಡರು. ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 11 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.