Ayodhya Mosque: ಅಯೋಧ್ಯೆ ಮಸೀದಿ ನಿರ್ಮಾಣ ಮೇ ತಿಂಗಳು ಶುರುವಾಗುವುದು ಸಂದೇಹ; ನಿವೇಶನ ಈಗ ಸಾಕುಪ್ರಾಣಿಗಳ ಹುಲ್ಲುಗಾವಲು
Jan 21, 2024 01:16 PM IST
ಧನ್ನಿಪುರ ಮಸೀದಿ ಸೈಟ್ ವ್ಯಾಪ್ತಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೇಕೆ ಮರಿಯೊಂದಿಗೆ ಮುನ್ನಡೆಯುತ್ತಿರುವುದು. ಈ ಮಸೀದಿ ಸೈಟ್ ಅಯೋಧ್ಯೆಯ ರಾಮ ಜನ್ಮಭೂಮಿಯಿಂದ 15 ಮೈಲಿ ದೂರದಲ್ಲಿದೆ. (ಕಡತ ಚಿತ್ರ)
Ayodhya Mosque Construction: ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಉದ್ದೇಶಿತ ಮಸೀದಿಯ ನಿರ್ಮಾಣಕ್ಕೆ ವಿನ್ಯಾಸ ಅಂತಿಮವಾಗಿಲ್ಲ. ನಿಧಿ ಸಂಗ್ರಹವೂ ಶುರುವಾಗಿಲ್ಲ. ಆದ್ದರಿಂದ ಮಸೀದಿ ನಿರ್ಮಾಣವು ವಿಳಂಬವಾದೀತು ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮೂಲಗಳು ತಿಳಿಸಿವೆ. ಸದ್ಯ ಸೈಟ್ ಸಾಕುಪ್ರಾಣಿ ಹುಲ್ಲುಗಾವಲು ಎಂದು ವರದಿ ಹೇಳಿದೆ.
ಅಯೋಧ್ಯೆ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಉದ್ದೇಶಿತ ಮಸೀದಿಯ ನಿರ್ಮಾಣಕ್ಕೆ ಸಂಬಂಧಿಸಿದ ರಚನೆಯ ವಿನ್ಯಾಸ ಅಂತಿಮವಾಗಿಲ್ಲ. ಅದೇ ರೀತಿ ಮಸೀದಿ ನಿರ್ಮಾಣಕ್ಕೆ ನಿಧಿ ಸಂಗ್ರಹವೂ ಶುರುವಾಗಿಲ್ಲ. ಹೀಗಾಗಿ ಈ ಮಸೀದಿ ನಿರ್ಮಾಣವು ವಿಳಂಬವಾಗುವ ಸಾಧ್ಯತೆಯಿದೆ.
ಅಯೋಧ್ಯೆ ಸಮೀಪದ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣದ ಸೈಟ್ ಇದ್ದು, ಮೇ ತಿಂಗಳ ಆರಂಭದಲ್ಲಿ ಮಸೀದಿ ನಿರ್ಮಾಣ ಶುರುವಾಗುವ ನಿರೀಕ್ಷೆ ಇದೆ. ಆದಾಗ್ಯೂ, ಮಸೀದಿ ನಿರ್ಮಾಣದ ಮೇಲ್ವಿಚಾರಣೆಗಾಗಿ ರಚಿಸಲಾದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್), ಮಸೀದಿ ನಿರ್ಮಾಣ ಕಾರ್ಯ ಮೇ ತಿಂಗಳು ಶುರುವಾಗಬೇಕು. ಆದರೆ, ಯೋಜನಾ ಪ್ರಕ್ರಿಯೆ ವಿಳಂಬವಾಗಿರುವ ಕಾರಣ ಇದು ವಿಳಂಬವಾಗಬಹುದು ಎಂಬ ಸುಳಿವು ನೀಡಿದೆ.
ಫೆಬ್ರವರಿಯಲ್ಲಿ ಐಐಸಿಎಫ್ ವೆಬ್‌ಸೈಟ್‌ಗೆ ಚಾಲನೆ
"ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ವೆಬ್‌ಸೈಟ್ ನಿರ್ಮಾಣ ಹಂತದಲ್ಲಿದೆ. ಫೆಬ್ರವರಿ ವೇಳೆಗೆ ವೆಬ್‌ಸೈಟ್ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದಾದ ನಂತರ, ಮಸೀದಿ ನಿರ್ಮಾಣಕ್ಕಾಗಿ ಹಣವನ್ನು ಸಂಗ್ರಹಿಸಿವ ಒಂದು ವೇದಿಕೆಯಾಗಿ ವೆಬ್ಸೈಟ್ ಕಾರ್ಯನಿರ್ವಹಿಸುತ್ತದೆ" ಎಂದು ಐಐಸಿಎಫ್ ಮುಖ್ಯ ಟ್ರಸ್ಟಿ ಜುಫರ್ ಫಾರೂಕಿ ಹೇಳಿದರು.
"ಮಸೀದಿ ಮತ್ತು ಅದರೊಂದಿಗೆ ಬರುವ ಆಸ್ಪತ್ರೆ, ಗ್ರಂಥಾಲಯ ಇತ್ಯಾದಿಗಳ ವಿನ್ಯಾಸಗಳನ್ನು ಸಹ ಇನ್ನೂ ಅಂತಿಮಗೊಳಿಸಲಾಗಿಲ್ಲ. ಸಾಂಪ್ರದಾಯಿಕ ಭಾರತೀಯ ಮಸೀದಿ ವಾಸ್ತುಶಿಲ್ಪದಿಂದ ಪ್ರೇರಿತವಾದ ಮಸೀದಿಯ ಆರಂಭಿಕ ವಿನ್ಯಾಸವನ್ನು ತಿರಸ್ಕರಿಸಲಾಯಿತು. ಎಲ್ಲಾ ವಿನ್ಯಾಸಗಳನ್ನು ಫೆಬ್ರವರಿಯಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಇದು ಯೋಜನೆಯ ಪ್ರಗತಿಯಲ್ಲಿ ನಿರ್ಣಾಯಕ ಹಂತವನ್ನು ಸೂಚಿಸುತ್ತದೆ. ಸಾಕಷ್ಟು ಹಣವನ್ನು ಸಂಗ್ರಹಿಸಿದ ನಂತರ ಮತ್ತು ಮಸೀದಿಯ ವಿನ್ಯಾಸವನ್ನು ಅಂತಿಮಗೊಳಿಸಿದ ಬಳಿಕವಷ್ಟೇ ಮಸೀದಿ ನಿರ್ಮಾಣ ಕಾರ್ಯ ಶುರುಮಾಡಬಹುದು." ಎಂದು ಜುಫರ್ ಫಾರೂಕಿ ವಿವರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಹಿಂದೂ ಗುಂಪುಗಳು ಮೂರು ದಶಕಗಳ ಹಿಂದೆಯೇ ದೇಣಿಗೆ ಪಡೆಯಲು ಪ್ರಾರಂಭಿಸಿದವು ಮತ್ತು ಭಾರತದಲ್ಲಿ 4 ಕೋಟಿ ಜನರಿಂದ 3000 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಸಂಗ್ರಹಿಸಿವೆ. "ನಾವು ಯಾರನ್ನೂ ಸಂಪರ್ಕಿಸಿಲ್ಲ ... ಅದಕ್ಕಾಗಿ (ನಿಧಿ) ಯಾವುದೇ ಸಾರ್ವಜನಿಕ ಅಭಿಯಾನ ನಡೆಸಲಿಲ್ಲ" ಎಂದು ಐಐಸಿಎಫ್ ಅಧ್ಯಕ್ಷ ಜುಫರ್ ಅಹ್ಮದ್ ಫಾರುಕಿ ಹೇಳಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಐಐಸಿಎಫ್ ವಕ್ತಾರ ಅಥರ್ ಹುಸೇನ್, "ಈ ಮಸೀದಿಯು ಹಿಂದೂ-ಮುಸ್ಲಿಂ ಏಕತೆಯ ಸಂಕೇತವಾಗಬೇಕೆಂದು ನಾವು ಬಯಸುತ್ತೇವೆ. ಮಸೀದಿ, ಆಸ್ಪತ್ರೆ, ಸಮುದಾಯ ಅಡುಗೆಮನೆ ಮತ್ತು ವಸ್ತುಸಂಗ್ರಹಾಲಯ ಸೇರಿ ಎಲ್ಲಾ ಯೋಜನೆಗಳು ಸಾಮಾನ್ಯ ಜನರಿಗಾಗಿ ಇರಬೇಕು ಎಂಬ ಇಚ್ಛೆಯೊಂದಿಗೆ ಫೌಂಡೇಶನ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಹೊಸ ಮಸೀದಿಗೆ ಬಾಬರ್‌ನ ಹೆಸರು ಅಥವಾ ಬಾಬರಿ ಮಸೀದಿ ಎಂಬ ಹೆಸರು ಇರಲ್ಲ. ಬಾಬರ್ ವಿವಾದಾತ್ಮಕ ವಿಚಾರವಾದ ಕಾರಣ, ಪುನಃ ಅದನ್ನು ಕೆದಕುವುದು ಬೇಡ ಎಂಬ ಕಾರಣಕ್ಕೆ ಹೊಸ ಮಸೀದಿಗೆ ಮೊಹ್ಮಮದ್ ಬಿನ್ ಅಬ್ದುಲ್ಲಾ ಮಸೀದಿ ಎಂಬ ಹೆಸರು ಇರಿಸಲು ಐಐಸಿಎಫ್ ತೀರ್ಮಾನಿಸಿದೆ.
ಹೊಸ ಮಸೀದಿಯ ನಿರ್ಮಾಣದ ಮೂಲಕ ಜನರ ನಡುವೆ, ಕೋಮುಗಳ ನಡುವೆ ಉಂಟಾದ ದ್ವೇಷವನ್ನು ಕೊನೆಗೊಳಿಸುವುದು ಮತ್ತು ಎಲ್ಲರ ನಡುವೆ ಪ್ರೀತಿಯನ್ನು ಹರಡುವುದು ಇದರ ಉದ್ದೇಶ. ನಾವು ನಮ್ಮ ಮಕ್ಕಳಿಗೆ ಮತ್ತು ಜನರಿಗೆ ಒಳ್ಳೆಯದನ್ನೇ ಕಲಿಸಿದರೆ, ಈ ಎಲ್ಲ ಹೋರಾಟಗಳು, ದ್ವೇಷಗಳು ಕೊನೆಯಾಗುತ್ತವೆ ಎಂದು ಐಐಸಿಎಫ್‌ನ ಸದಸ್ಯ ಶೇಖ್ ತಿಳಿಸಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ.
------------------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in