logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Isis Conspiracy Case: ಭಾರತದಲ್ಲಿ ಉಗ್ರ ದಾಳಿಗೆ ಐಸಿಸ್ ಜತೆ ಸಂಚು ಪ್ರಕರಣ; 9 ಆರೋಪಿಗಳ ವಿರುದ್ಧ ಎನ್ಐಎ ಪೂರಕ ಚಾರ್ಜ್ ಶೀಟ್

ISIS conspiracy Case: ಭಾರತದಲ್ಲಿ ಉಗ್ರ ದಾಳಿಗೆ ಐಸಿಸ್ ಜತೆ ಸಂಚು ಪ್ರಕರಣ; 9 ಆರೋಪಿಗಳ ವಿರುದ್ಧ ಎನ್ಐಎ ಪೂರಕ ಚಾರ್ಜ್ ಶೀಟ್

HT Kannada Desk HT Kannada

Jul 01, 2023 03:45 PM IST

google News

ಎನ್‌ಐಎ ಅಧಿಕಾರಿಗಳ ಫೈಲ್ ಫೋಟೋ

    • Shivamogga ISIS conspiracy case: ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಐಸಿಸ್ ಜೊತೆಗೂಡಿ ಸಂಚು ರೂಪಿಸಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಒಂಬತ್ತು ವ್ಯಕ್ತಿಗಳ ಮೇಲೆ ಆರೋಪ ಹೊರಿಸಿದೆ. ಅವರಲ್ಲಿ ಐವರು ಆರೋಪಿಗಳು ಟೆಕ್ ಹಿನ್ನೆಲೆ ಹೊಂದಿದ್ದಾರೆ.
ಎನ್‌ಐಎ ಅಧಿಕಾರಿಗಳ ಫೈಲ್ ಫೋಟೋ
ಎನ್‌ಐಎ ಅಧಿಕಾರಿಗಳ ಫೈಲ್ ಫೋಟೋ (AFP)

ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ (ISIS) ರೂಪಿಸಿದ ಸಂಚಿನಲ್ಲಿ ಭಾಗಿಯಾದ ಆರೋಪದಡಿ ಶಿವಮೊಗ್ಗದಲ್ಲಿ ಬೆಳಕಿಗೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಒಂಬತ್ತು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ರಾಷ್ಟ್ರದಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಕಾರ್ಯಗತಗೊಳಿಸಲು ಐಸಿಸ್ ನಡೆಸಿದ ಸಂಚಿನಲ್ಲಿ ಅವರು ಭಾಗವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತನಿಖಾ ಸಂಸ್ಥೆಯ ಚಾರ್ಜ್ ಶೀಟ್‌ನಲ್ಲಿರುವ ಐವರು ಆರೋಪಿಗಳು ತಂತ್ರಜ್ಞಾನದಲ್ಲಿ ನುರಿತವರಾಗಿದ್ದು, ಭವಿಷ್ಯದಲ್ಲಿ ಭಾರತದಲ್ಲೇ ಭಯೋತ್ಪಾದಕ ದಾಳಿಗಳನ್ನು ನಡೆಸುವ ಕೌಶಲ್ಯಗಳನ್ನು ಪಡೆಯುವ ಸಲುವಾಗಿ ರೊಬೊಟಿಕ್ಸ್‌ನಲ್ಲಿ ಕೋರ್ಸ್‌ಗಳನ್ನು ಮುಂದುವರೆಸಲು ವಿದೇಶಿ ಮೂಲದ ಐಸಿಸ್ ಉಗ್ರರು ನಿಯೋಜಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ದೋಷಾರೋಪ ಪಟ್ಟಿಯಲ್ಲಿ ಇರುವ ಆರೋಪಿಗಳೆಂದರೆ, ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22) ಎಂದು ಗುರುತಿಸಲಾಗಿದೆ. ನದೀಮ್ ಅಹ್ಮದ್ ಕೆ ಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27).

ಎನ್ಐಎ ಪ್ರಕಾರ, ಕರ್ನಾಟಕದ ಈ ಆರೋಪಿಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ವಿನಾಶ ಮತ್ತು ಆಸ್ತಿ ನಷ್ಟ ತಡೆ ಕಾಯ್ದೆ ಸೇರಿದಂತೆ ಅನೇಕ ಕಾನೂನುಗಳ ಅಡಿಯಲ್ಲಿ ಈ ಹಿಂದೆಯೇ ಆರೋಪ ಹೊತ್ತಿದ್ದಾರೆ. ಈ ವರ್ಷದ ಆರಂಭದಲ್ಲೇ ಅಹ್ಮದ್ ಮತ್ತು ಸೈಯದ್ ಯಾಸಿನ್ ಈ ಹಿಂದೆಯೇ ಆರೋಪ ಹೊತ್ತಿದ್ದರು. ಇದೀಗ ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆಎ ಅವರೊಂದಿಗೆ ಹೆಚ್ಚುವರಿ ದೋಷಾರೋಪವನ್ನು ಎದುರಿಸಬೇಕಾಗಿ ಬಂದಿದೆ. ಅಚ್ಚರಿಯೆಂದರೆ ಇವರೆಲ್ಲರೂ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಮಾಡಿದವರು ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.

“ಭಾರತದಲ್ಲಿ ಐಎಸ್ (ಇಸ್ಲಾಮಿಕ್ ಸ್ಟೇಟ್) ಅಜೆಂಡಾವನ್ನು ಮುಂದುವರೆಸುವ ದುರುದ್ದೇಶದಿಂದ, ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಕೌಶಲ್ಯಗಳನ್ನು ರೋಬೋಟಿಕ್ಸ್ ಕೋರ್ಸ್‌ಗಳ ಮೂಲಕ ಪಡೆಯಲು ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ ಈ ಆರೋಪಿಗಳನ್ನು ನಿಯೋಜಿಸಿದೆ” ಎಂದು ಕೇಂದ್ರ ತನಿಖಾ ಸಂಸ್ಥೆ ಅಚ್ಚರಿಯ ಮಾಹಿತಿ ನೀಡಿದೆ.

ಎನ್‌ಐಎ ಪ್ರಕಾರ, ಶಾರಿಕ್, ಮುನೀರ್ ಮತ್ತು ಯಾಸಿನ್ ಎಂಬ ಮೂವರು ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ನಿರ್ದೇಶನದ ಅಡಿಯಲ್ಲಿ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತರೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಎನ್‌ಐಎ ಹೇಳಿರುವಂತೆ ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಈ ಮೂವರು ಆರೋಪಿಗಳು ಇತರ ಆರೋಪಿಗಳ ನೇಮಕಾತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಎನ್ಐಎ ನೀಡಿರುವ ಮಾಹಿತಿ ಪ್ರಕಾರ, ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್ ಕ್ರಿಪ್ಟೋಕರೆನ್ಸಿಗಳನ್ನು ಬಳಸಿಕೊಂಡು ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಪ್ರಕರಣವನ್ನು ಮೊದಲು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ 19ರಂದು ದಾಖಲಿಸಿದ್ದರು. ಆ ಬಳಿಕ ಅದನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ನವೆಂಬರ್ 15ರಂದು ಎನ್‌ಐಎ ಪ್ರಕರಣವನ್ನು ಮರು ದಾಖಲಿಸಿಕೊಂಡಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ