Viral Video: ಸೀಮಾ ಹೈದರ್ ವಿಡಿಯೋ ವೈರಲ್, ಪತಿ ಹಲ್ಲೆ ನಡೆಸಿದ್ದಾಗಿ ಆರೋಪ, ಫೇಕ್ ವಿಡಿಯೋ ಎಂದ ಪಾಕಿಸ್ತಾನಿ ಮಹಿಳೆ
Apr 09, 2024 07:22 AM IST
ಸೀಮಾ ಹೈದರ್ ವೈರಲ್ ವಿಡಿಯೋದ ಚಿತ್ರಗಳು
ಪ್ರಿಯಕರನನ್ನು ಅರಸಿಕೊಂಡು ಭಾರತಕ್ಕೆ ಓಡಿಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಸುದ್ದಿಯಲ್ಲಿದ್ದಾರೆ. ಮುಖದ ಮೇಲಿನ ಗಾಯ ತೋರಿಸುತ್ತಿರುವ ಸೀಮಾ ಹೈದರ್ ವಿಡಿಯೋ ವೈರಲ್ (Seema Haider Viral Video) ಆಗಿದೆ. ಆದರೆ, ಇದು ಫೇಕ್ ವಿಡಿಯೋ ಎಂದು ಹೇಳಲಾಗುತ್ತಿದ್ದು, ಸೀಮಾ ಹೈದರ್ ಅವರ ಇನ್ನೊಂದು ವಿಡಿಯೋವನ್ನು ಐಎಎನ್‌ಎಸ್ ಸುದ್ದಿ ಸಂಸ್ಥೆ ಶೇರ್ ಮಾಡಿದೆ.
ಉತ್ತರ ಪ್ರದೇಶದಲ್ಲಿರುವ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಓಡಿ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸೀಮಾ ಹೈದರ್ ವಿಡಿಯೋ ವೈರಲ್ (Seema Haider Viral Video) ಆಗಿದ್ದು, ಅದರಲ್ಲಿ ಸೀಮಾ ಹೈದರ್ ಎಂದು ಹೇಳಲಾದ ಮಹಿಳೆ ತನ್ನ ಮುಖದ ಮೇಲಿನ ಗಾಯದ ಗುರುತು ತೋರಿಸುತ್ತಿರುವ ದೃಶ್ಯವಿವರಣೆ ಇದೆ. ಇದಾಗಿ ಕೆಲವೇ ಗಂಟೆಗಳಲ್ಲಿ ಮತ್ತೊಂದು ವಿಡಿಯೋ ಬಂದಿದ್ದು, ಅದರಲ್ಲಿ ವೈರಲ್ ಆಗಿರುವ ವಿಡಿಯೋ ಫೇಕ್ ಎಂಬ ಸಂದೇಶವಿದೆ.
ಸೀಮಾ ಹೈದರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಗಳದ ಹಿನ್ನೆಲೆಯಲ್ಲಿ ಸೀಮಾ ಅವರ ಪತಿ ಸಚಿನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವಿಡಿಯೋ ಮತ್ತು ಸೀಮಾ ಅವರ ಮುಖದ ಮೇಲಿನ ಗಾಯದ ಗುರುತುಗಳು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಸಿದ್ದು ನಾನಾ ರೀತಿಯ ಚರ್ಚೆಗಳಾಗುತ್ತಿವೆ. ಕೌಟುಂಬಿಕ ಹಿಂಸೆಯಿಂದ ಹಿಡಿದು ಹೆಣ್ಮಕ್ಕಳಿಗೆ ಭಾರತ ಸುರಕ್ಷಿತವಲ್ಲ ಎಂಬ ವಿಷಯ ವರಸೆಗಳ ತನಕ ಈ ಚರ್ಚೆ ನಡೆದಿದೆ.
ಸೀಮಾ ಹೈದರ್ ವಿಡಿಯೋ ವೈರಲ್ ಆದ ಕೂಡಲೇ, ಸೀಮಾ ಹೈದರ್ ಮತ್ತು ಆಕೆಯ ಪತಿ ಸಚಿನ್ ಮೀನಾ ನಡುವೆ ಜಗಳ ಸಂಭವಿಸಿದೆ ಎಂದು ಊಹಿಸಲಾಗಿದೆ. ಇದು ಸೀಮಾ ಅವರ ಮುಖದ ಮೇಲೆ ಗಾಯದ ಕಲೆಗಳು ಮತ್ತು ಮೂಗೇಟುಗಳಿಗೆ ಕಾರಣ ಎಂಬ ಚರ್ಚೆ ನಡೆಯಿತು. ಸೀಮಾ ಹೈದರ್ ಬಲಗಣ್ಣು ಊದಿಕೊಂಡಿದ್ದು ಮತ್ತು ಆಕೆಯ ಮೇಲಿನ ತುಟಿಗೆ ಗಾಯವಾಗಿರುವುದು ವಿಡಿಯೋದಲ್ಲಿದೆ.
ಸೀಮಾ ಹೈದರ್ ವಕೀಲರು ಹೇಳಿರುವುದೇನು
ಸೀಮಾ ಹೈದರ್ ಪರ ವಕೀಲ ಎಪಿ ಸಿಂಗ್, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ "ನಕಲಿ". ಸೀಮಾ ಅವರ ವೀಡಿಯೊವನ್ನು ಪಾಕಿಸ್ತಾನಿ ಯೂಟ್ಯೂಬರ್‌ಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಕೃತಕ ಕೌಶಲ ಬಳಸಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, "ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಸೀಮಾ ಅವರ ವೀಡಿಯೊ ವೈರಲ್ ಸಂಪೂರ್ಣ ನಕಲಿ ಮತ್ತು ಈ ಸುದ್ದಿ ತಪ್ಪುದಾರಿಗೆಳೆಯುವಂತಿದೆ" ಎಂದು ಸಿಂಗ್ ವಿವರಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ಸೀಮಾ ಹೈದರ್ ವೈರಲ್ ವಿಡಿಯೋ ಬಗ್ಗೆ ಹೇಳಿರುವುದೇನು
ವಿವಿಧ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೀಮಾ ಹೈದರ್ ಗಾಯಗೊಂಡಿರುವುದನ್ನು ತೋರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತನ್ನ ಪತಿ ಸಚಿನ್ ಮೀನಾ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ನಕಲಿ ವೈರಲ್ ವೀಡಿಯೊವನ್ನು ಪಾಕಿಸ್ತಾನದ ಯೂಟ್ಯೂಬರ್‌ಗಳು ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಪಾಕಿಸ್ತಾನಿ ಸುದ್ದಿ ವಾಹಿನಿಗಳನ್ನು ಅವರು ಕಟುವಾಗಿ ಟೀಕಿಸಿದರು.
ನಾನು ಮತ್ತು ನನ್ನ ಪತಿ ಸಚಿನ್ ನಡುವೆ ಎಲ್ಲವೂ ಸರಿಯಾಗಿಯೇ ಇದೆ. ನಮ್ಮ ಇಡೀ ಕುಟುಂಬವು ಸಂತೋಷ ಮತ್ತು ಶಾಂತಿಯಿಂದ ಬದುಕುತ್ತಿದೆ. ನಾನು ಭಾರತದ ಉತ್ತರ ಪ್ರದೇಶದಲ್ಲಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಮಹಾರಾಜ್ ಯೋಗಿ ಆದಿತ್ಯನಾಥಜೀ ಅವರು ಯಾವುದೇ ಮಹಿಳೆಯ ಮೇಲೆ ಯಾವುದೇ ರೀತಿಯ ದೌರ್ಜನ್ಯಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಸೀಮಾ ಹೈದರ್ ಹೇಳಿದ್ದಾರೆ.
ಸೀಮಾ ಹೈದರ್ ಯಾರು? ಅವರ ಕಥೆ ಏನು
ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ 2020ರಲ್ಲಿ ಪಬ್‌ಜಿ ಮೊಬೈಲ್ ಗೇಮ್ ಆಡ್ತಾ ನೇಪಾಳ ಮೂಲಕ ಭಾರತಕ್ಕೆ ಬಂದು ತನ್ನ ಪ್ರಿಯಕರ ಸಚಿನ್ ಮೀನಾ ಜೊತೆಗೆ ಬಾಳುವೆ ನಡೆಸುತ್ತಿದ್ದಾರೆ. ಪಬ್‌ಜಿ ಆಡುವಾಗ ಸಂಪರ್ಕಕ್ಕೆ ಬಂದವರು ಇಬ್ಬರು. ಸಚಿನ್ ಮೀನಾ ಗ್ರೇಟರ್ ನೋಯ್ಡಾದ ರಬುಪುರಾ ಗ್ರಾಮದವರು. ಆರಂಭದಲ್ಲಿ ಸ್ನೇಹದಲ್ಲಿದ್ದ ಇಬ್ಬರ ನಡುವೆ ವಾಟ್ಸ್‌ಆಪ್ ಚಾಟ್‌ಗಳ ಬಳಿಕ ಪ್ರೀತಿ, ಪ್ರೇಮ ಶುರುವಾಯಿತು.
ಸೀಮಾ ಹೈದರ್ ಪಾಕಿಸ್ತಾನದ ಕರಾಚಿಯವರು. ನಾಲ್ಕು ಮಕ್ಕಳ ತಾಯಿ. ಸಚಿನ್ ಜೊತೆ ಸೇರಲು ಸೀಮಾ ಆರಂಭದಲ್ಲಿ ದುಬೈಗೆ ಹೋಗಿದ್ದರು. ಅಲ್ಲಿಂದ ನೇಪಾಳ ನಂತರ ಪ್ಯಾಸೆಂಜರ್ ಬಸ್ ಮೂಲಕ 2023ರ ಮೇ ತಿಮಗಳಲ್ಲಿ ಭಾರತಕ್ಕೆ ಆಗಮಿಸಿದ್ದರು. ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ದೇವಸ್ಥಾನದಲ್ಲಿ ಸಚಿನ್ ಮತ್ತು ಸೀಮಾ ಹಿಂದೂ ಸಂಪ್ರದಾಯ ಪ್ರಕಾರ ವಿವಾಹವಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಸೀಮಾಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕು ಎಂಬ ಒತ್ತಡ ಪಾಕ್ ಕಡೆಯಿಂದ ಇದ್ದು, ಇಲ್ಲಿ ಸೀಮಾಳ ಭಾರತದ ಕುಟುಂಬ ಮತ್ತು ನೆರೆಹೊರೆಯವರು ಆಕೆಯನ್ನು ಕಳುಹಿಸಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ, ಸೀಮಾ ಗರ್ಭಿಣಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಯೂ ಇದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.