logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Suryodaya Yojana: 1 ಕೋಟಿ ಮನೆಗಳ ಮೇಲ್ಛಾವಣಿಗೆ ಸೌರ ಘಟಕ; ಪ್ರಧಾನಿ ಸೂರ್ಯೋದಯ ಯೋಜನೆಗೆ ಚಾಲನೆ

PM Suryodaya Yojana: 1 ಕೋಟಿ ಮನೆಗಳ ಮೇಲ್ಛಾವಣಿಗೆ ಸೌರ ಘಟಕ; ಪ್ರಧಾನಿ ಸೂರ್ಯೋದಯ ಯೋಜನೆಗೆ ಚಾಲನೆ

Umesh Kumar S HT Kannada

Jan 23, 2024 11:49 AM IST

google News

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ.

  • PM Modi launches Pradhan Mantri Suryodaya Yojana: ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೌರ ಘಟಕ ಸ್ಥಾಪಿಸುವುದಕ್ಕೆ ಅನುಕೂಲವಾಗುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಜ.22) ಘೋಷಿಸಿದರು. ಸೂರ್ಯವಂಶದ ರಾಮನ ಬೆಳಕು ಪಡೆದು, ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ. (Narendra Modi / X)

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ (ಜ.22) ಅಯೋಧ್ಯೆ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆ ಮಾಡಿದ್ದಲ್ಲದೆ, 1 ಕೋಟಿ ಮನೆಗಳಿಗೆ ಸೌರ ವಿದ್ಯುತ್ ಒದಗಿಸುವ ಸಂಕಲ್ಪದ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ (Pradhan Mantri Suryodaya Yojana) ಯನ್ನೂ ಘೋಷಿಸಿದ್ದರು.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 40 GW ಛಾವಣಿಯ ಸೌರ ಸಾಮರ್ಥ್ಯದ ಗುರಿಯನ್ನು ತಲುಪುವುದಕ್ಕೆ ಸಹಾಯ ಮಾಡುವ ಹೊಸ ಪ್ರಯತ್ನ ಎಂದು ಬಣ್ಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ನಿನ್ನೆ (ಜ.22) ಎಕ್ಸ್‌ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದರು. ಆದಾಗ್ಯೂ, ಮೇಲ್ಛಾವಣಿಯ ಸೌರ ವಿದ್ಯುತ್ ಕಾರ್ಯಕ್ರಮ (Rooftop Solar Programme) ಗಳ ಸ್ಥಾಪನೆಯನ್ನು ಉತ್ತೇಜಿಸುವ ಮೊದಲ ಯೋಜನೆ ಇದಲ್ಲ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014 ರಲ್ಲಿ ರಚನೆಯಾದ ಕೂಡಲೇ ಮೇಲ್ಛಾವಣಿಯ ಸೌರ ವಿದ್ಯುತ್ ಯೋಜನೆಯನ್ನು ರೂಪಿಸಿತ್ತು. ಅಂದು 2022 ರ ವೇಳೆಗೆ 40,000 ಮೆಗಾವ್ಯಾಟ್‌ಗಳು (MW) ಅಥವಾ 40 ಗಿಗಾವ್ಯಾಟ್‌ಗಳ (GW) ಸಂಚಿತ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ನಿಗದಿ ಮಾಡಲಾಗಿತ್ತು. ಈ ಗುರಿ ಸಾಧನೆ ಸಾಧ್ಯವಾಗದ ಕಾರಣ 2026ಕ್ಕೆ ಇದರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇಲ್ಛಾವಣಿ ಸೌರ ಕಾರ್ಯಕ್ರಮ ಎಂದರೇನು

ಭಾರತದ ವಸತಿ ವಲಯದಲ್ಲಿ ಮೇಲ್ಛಾವಣಿಯ ಸೌರ ಘಟಕ ಅಳವಡಿಸುವ ಸಾಮರ್ಥ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ ಯೋಜನೆ ಮೇಲ್ಛಾವಣಿ ಸೌರ ಕಾರ್ಯಕ್ರಮ. ಇದನ್ನು 2014 ರಲ್ಲಿ ಕೇಂದ್ರ ಹಣಕಾಸು ನೆರವು, ಎಂಎನ್‌ಆರ್‌ಇ ಮಾರ್ಗಸೂಚಿಗಳ ಪ್ರಕಾರ ಅರ್ಹ ಯೋಜನೆಗಳಿಗೆ ಹಣಕಾಸಿನ ನೆರವಿನೊಂದಿಗೆ ಜಾರಿಗೊಳಿಸಲಾಗಿದೆ. 2026ರ ಮಾರ್ಚ್‌ ವೇಳೆಗೆ ಮೇಲ್ಛಾವಣಿಯ ಸೌರ ಘಟಕಗಳ ಸಾಮರ್ಥ್ಯವನ್ನು 40 ಗಿಗಾವ್ಯಾಟ್‌ ಹೆಚ್ಚಿಸುವ ಗುರಿಯನ್ನು ಡಿಸ್ಕಾಂಗಳಿಗೆ ನೀಡಲಾಗಿತ್ತು. ಪ್ರಸ್ತುತ ಇದು ಎರಡನೇ ಹಂತದಲ್ಲಿದೆ. ಈ ಯೋಜನೆಯಿಂದಾಗಿ, ದೇಶದ ಮೇಲ್ಛಾವಣಿಯ ಸೌರಶಕ್ತಿಯು ಮಾರ್ಚ್ 2019 ರಂತೆ 1.8 GW ನಿಂದ ನವೆಂಬರ್ 2023 ಕ್ಕೆ 10.4 GW ಗೆ ಹೆಚ್ಚಾಗಿದೆ.

ಪ್ರಸ್ತುತ ಭಾರತದ ಸೌರ ಸಾಮರ್ಥ್ಯವೆಷ್ಟು

ಭಾರತದಲ್ಲಿ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 2023ರ ಡಿಸೆಂಬರ್ ವೇಳೆಗೆ 73.31 GW ತಲುಪಿದೆ. ಇದೇ ವೇಳೆ, ಛಾವಣಿಯ ಸೌರ ಘಟಕಗಳ ಸಾಮರ್ಥ್ಯವು 11.08 GW ಆಗಿದೆ. ಒಟ್ಟು ಸೌರ ಸಾಮರ್ಥ್ಯದ ವಿಷಯದಲ್ಲಿ, ರಾಜಸ್ಥಾನವು 18.7 GW ನೊಂದಿಗೆ ಅಗ್ರಸ್ಥಾನದಲ್ಲಿದೆ. ಗುಜರಾತ್ 10.5 GW ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೇಲ್ಛಾವಣಿಯ ಸೌರ ಸಾಮರ್ಥ್ಯಕ್ಕೆ ಬಂದಾಗ, ಗುಜರಾತ್ 2.8 GW ನೊಂದಿಗೆ ಅಗ್ರಸ್ಥಾನದಲ್ಲಿದೆ, ಮಹಾರಾಷ್ಟ್ರವು 1.7 GW ನಂತರದ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಸೌರ ಶಕ್ತಿಯು ದೇಶದ ಪ್ರಸ್ತುತ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದಲ್ಲಿ ಪ್ರಮುಖ ಪಾಲನ್ನು ಹೊಂದಿದೆ, ಇದು ಸುಮಾರು 180 GW ಆಗಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ವೆಬ್‌ಸೈಟ್‌ನ ಮಾಹಿತಿ ತಿಳಿಸಿದೆ.

ಏನಿದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ

ಮನೆಗಳ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಉದ್ದೇಶದ ಯೋಜನೆಯೇ ಪ್ರಧಾನಿ ಮಂತ್ರಿ ಸೂರ್ಯೋದಯ ಯೋಜನೆ.

ಈ ಯೋಜನೆಯ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಎಕ್ಸ್‌ನಲ್ಲಿ ಹೇಳಿಕೊಂಡಿರುವುದು ಇಷ್ಟು -

"ಸೂರ್ಯವಂಶದ ಭಗವಾನ್ ಶ್ರೀರಾಮನ ಬೆಳಕಿನ ಮೂಲಕ ಪ್ರಪಂಚದ ಎಲ್ಲ ಭಕ್ತರು ಶಕ್ತಿಯನ್ನು ಪಡೆಯುತ್ತಾರೆ. ಇಂದು ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಬಾರತದ ಜನರು ತಮ್ಮದೇ ಆದ ಸೌರ ಛಾವಣಿಯ ವ್ಯವಸ್ಥೆಯನ್ನು ಹೊಂದಬೇಕು ಎಂಬ ನನ್ನ ಸಂಕಲ್ಪವು ಮತ್ತಷ್ಟು ಬಲವಾಗಿದೆ. ಇಲ್ಲಿಗೆ ಬಂದ ಭಕ್ತ ಜನರು ಅಯೋಧ್ಯೆಯಿಂದ ಊರಿಗೆ ಹಿಂದಿರುಗಿದ ಬಳಿಕ ತೆಗೆದುಕೊಳ್ಳುವ ಮೊದಲ ನಿರ್ಧಾರವೇ ನಮ್ಮ ಸರ್ಕಾರವು ಕೈಗೊಂಡಿರುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ 1 ಕೋಟಿ ಮನೆಗಳ ಛಾವಣಿ ಮೇಲೆ ಸೌರ ವ್ಯವಸ್ಥೆ ಅಳವಡಿಸುವ ಗುರಿ ಪೂರೈಸುವುದಕ್ಕೆ ನೆರವಾಗುವುದು. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಯಾಗುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲಿದೆ" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

ಸೌರಶಕ್ತಿಯ ವಿಸ್ತರಣೆಯು ಭಾರತಕ್ಕೇಕೆ ಮುಖ್ಯ

ಮುಂದಿನ 30 ವರ್ಷಗಳಲ್ಲಿ ವಿಶ್ವದ ಯಾವುದೇ ದೇಶ ಅಥವಾ ಪ್ರದೇಶದ ಅತಿದೊಡ್ಡ ಶಕ್ತಿಯ ಬೇಡಿಕೆಯ ಬೆಳವಣಿಗೆಯನ್ನು ಭಾರತ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಇಂಟರ್‌ನ್ಯಾ‍ನಲ್ ಎನರ್ಜಿ ಏಜೆನ್ಸಿಯ ಇತ್ತೀಚಿನ ವರ್ಲ್ಡ್ ಎನರ್ಜಿ ಔಟ್‌ಲುಕ್ ವರದಿ ಹೇಳಿದೆ.

ಈ ಬೇಡಿಕೆಯನ್ನು ಪೂರೈಸಲು, ದೇಶಕ್ಕೆ ಶಕ್ತಿಯ ವಿಶ್ವಾಸಾರ್ಹ ಮೂಲ ಬೇಕಾಗುತ್ತದೆ. ಅದು ಕೇವಲ ಕಲ್ಲಿದ್ದಲು ಸ್ಥಾವರಗಳಾಗಿರಬಾರದು. ಇತ್ತೀಚಿನ ವರ್ಷಗಳಲ್ಲಿ ಭಾರತವು ತನ್ನ ಕಲ್ಲಿದ್ದಲು ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. ಆದರೂ, 2030 ರ ವೇಳೆಗೆ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ತಲುಪುವ ಗುರಿಯನ್ನು ಹೊಂದಿದೆ. ಆದ್ದರಿಂದ, ಸೌರ ವಿದ್ಯುತ್ ಸಾಮರ್ಥ್ಯವನ್ನು ವಿಸ್ತರಿಸುವುದು ಅತ್ಯಗತ್ಯ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ