logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm-kisan: ಎನ್‌ಡಿಎ ಸರ್ಕಾರದ ಮೊದಲ ದಿನವೇ ಪಿಎಂ ಕಿಸಾನ್‌ ನಿಧಿಗೆ ಪ್ರಧಾನಿ ಸಹಿ, 20 ಸಾವಿರ ಕೋಟಿ ರೂ. ಬಿಡುಗಡೆ

PM-KISAN: ಎನ್‌ಡಿಎ ಸರ್ಕಾರದ ಮೊದಲ ದಿನವೇ ಪಿಎಂ ಕಿಸಾನ್‌ ನಿಧಿಗೆ ಪ್ರಧಾನಿ ಸಹಿ, 20 ಸಾವಿರ ಕೋಟಿ ರೂ. ಬಿಡುಗಡೆ

Umesha Bhatta P H HT Kannada

Jun 10, 2024 05:27 PM IST

google News

ಮೊದಲ ದಿನವೇ ರೈತರ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ನರೇಂದ್ರ ಮೋದಿ

  •   ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಡತಕ್ಕೆ ಸಹಿ ಹಾಕಿದ್ದಾರೆ.

ಮೊದಲ ದಿನವೇ ರೈತರ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಮೊದಲ ದಿನವೇ ರೈತರ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಭಾರತದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ನೀಡುವ ಕಿಸಾನ್‌ ನಿಧಿಯ ಮೊತ್ತ ಬಿಡುಗಡೆಗೆ ಸಹಿ ಹಾಕಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಈಗಾಗಲೇ ಆರು ವರ್ಷಗಳಿಂದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಲ್ಲಿ ಪಿಎಂ ಕಿಸಾನ್ ನಿಧಿ 2024 ರ 17 ನೇ ಕಂತು ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ಭಾರತದ 9.3 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಮೊದಲ ದಿನ ಕಚೇರಿಗೆ ಆಗಮಿಸಿದ ಪ್ರಧಾನಿ ಅವರು ಮೊದಲ ಕಡತಕ್ಕೆ ಸಹಿ ಹಾಕಿದ್ದುಇದೇ ಪಿಎಂ ಕಿಸಾನ್‌ ನಿಧಿಯದ್ದು.

ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ನಮ್ಮದು ರೈತರ ಕಲ್ಯಾಣಕ್ಕೆ ಬದ್ಧರಾಗಿರುವ ಸರ್ಕಾರ. ಆದ್ದರಿಂದ ಮೊದಲ ಕಡತಕ್ಕೆ ಸಹಿ ಹಾಕಿದ್ದೇನೆ. 20 ಸಾವಿರ ಕೋಟಿಯ ಯೋಜನೆ ದೇಶದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು 4 ತಿಂಗಳ ಮೂರು ಕಂತುಗಳಲ್ಲಿ ಪ್ರತಿ ವರ್ಷ 6000 ರೂ. ನೀಡುತ್ತದೆ. ಇದರಿಂದಾಗಿ ಫಲಾನುಭವಿಗಳು ವರ್ಷದ ಮೂರನೇ ತಿಂಗಳಿಗೆ 2000 ರೂ. ಪಡೆಯುತ್ತಾರೆ. ಕೇಂದ್ರ ಸರ್ಕಾರವು ಫೆಬ್ರವರಿ ತಿಂಗಳಿನಲ್ಲಿಯೇ ಪಿಎಂ ಕಿಸಾನ್‌ನ 16 ನೇ ಕಂತನ್ನು ಬಿಡುಗಡೆ ಮಾಡಿತ್ತು.

ಏನಿದು ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಭಾರತ ಸರ್ಕಾರದಿಂದ ಶೇ. 100 ಧನಸಹಾಯದೊಂದಿಗೆ ಕೇಂದ್ರ ವಲಯದ ಯೋಜನೆಯಾಗಿದೆ. ಈ ಯೋಜನೆಯು 2018 ಡಿಸೆಂಬರ್‌ 1ರಿಂದ ಜಾರಿಗೆ ಬಂದಿದ್ದು ಮರು ವರ್ಷದ ಫೆಬ್ರವರಿಯಲ್ಲಿ ಮೊದಲ ಕಂತು ಬಿಡುಗಡೆಯಾಗಿದೆ. ಈವರೆಗೂ 16 ನೇ ಕಂತು ಹಣ ಬಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.6000/- ಆದಾಯ ಬೆಂಬಲವನ್ನು ದೇಶದಾದ್ಯಂತ ಎಲ್ಲಾ ರೈತ ಕುಟುಂಬಗಳಿಗೆ ತಲಾ ರೂ.2000 ರಂತೆ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.

ಯೋಜನೆಗೆ ಕುಟುಂಬದ ವ್ಯಾಖ್ಯಾನವೆಂದರೆ ಪತಿ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು. ಫಲಾನುಭವಿ ರೈತ ಕುಟುಂಬಗಳನ್ನು ಗುರುತಿಸುವ ಸಂಪೂರ್ಣ ಜವಾಬ್ದಾರಿಯು ರಾಜ್ಯ ಸರ್ಕಾರಗಳ ಮೇಲಿದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಕೆಲ ಮಾರ್ಗಸೂಚಿಗಳ ಮಾನದಂಡದ ಅಡಿಯಲ್ಲಿ ರೈತರನ್ನು ಆಯ್ಕೆ ಮಾಡಲಾಗಿದೆ.

ಹೇಗೆ ನೋಡಬೇಕು

ಪಿಎಂ ಕಿಸಾನ್ ಸಮ್ಮಾನ್ ನಿಧಿ 17 ನೇ ಕಂತನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಮಾಡಲಾಗುತ್ತದೆ. ಮೊತ್ತವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅನುಮತಿ ದೊರೆತಿರುವುದರಿಂದ ಬೇಗನೇ ಹಣ ವರ್ಗ ಆಗಲಿದೆ.

ಈಗಾಗಲೇ ಹಿಂದಿನ ವರ್ಷದಿಂದ ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದರೆ, ಪಿಎಂ ಕಿಸಾನ್ ಯೋಜನೆ 2024 ರ 17 ನೇ ಕಂತಿಗೆ ಜಂಟಿಯಾಗಿ ಅರ್ಹರಾಗಿದ್ದೀರಿ. ಆದಾಗ್ಯೂ, ನೀವು ಪಿಎಂ ಕಿಸಾನ್ ನಿಧಿ 17 ನೇ ಕಂತು 2024 ಮಾಹಿತಿಯನ್ನು ನೋಡಬಹುದು. ನಿಮಗೆ ಹಣ ಬಂದಿದೆಯೋ ಇಲ್ಲವೇ ಎನ್ನುವುದನ್ನು ನೀವು ಜೋಡಿಸಿರುವ ಬ್ಯಾಂಕ್‌ ಖಾತೆ ಪರಿಶೀಲಿಸಿದರೆ ತಿಳಿಯಲಿದೆ.

https://pmkisan.gov.in/ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಲ್ಲಿಯೂ ನಿಮ್ಮ ಹೆಸರನ್ನು ನೀಡಿದರೆ ವಿವರ ಸಿಗಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ