Chennai Floods: ಆಂಧ್ರ ಕರಾವಳಿಯಲ್ಲೂ ಚಂಡಮಾರುತ ಅಬ್ಬರ, ಪೊಲೀಸ್ ಸೇರಿ ಮೂವರ ಸಾವು: ಚೆನ್ನೈನಲ್ಲಿ ನಿಲ್ಲದ ಮಳೆ ಭಯ
Dec 06, 2023 08:04 AM IST
ಮಿಚಾಂಗ್ ಚಂಡಮಾರುತದ ಪ್ರಭಾವ ತಗ್ಗಿದ್ದರೂ ಆಂಧ್ರಪ್ರದೇಶ, ತಮಿಳುನಾಡಿನ ಹಲವು ಕಡೆ ಮಳೆಯಾಗುತ್ತಿದೆ.
- AP TN Rains ಚಂಡಮಾರುತದಿಂದ ಆಂಧ್ರಪ್ರದೇಶ( Andhra Pradesh) ಹಾಗೂ ತಮಿಳುನಾಡು( Tamil nadu) ಕರಾವಳಿಯಲ್ಲಿ ಮಳೆಯಾಗುತ್ತಿದೆ. ಕೆಲವು ಕಡೆ ಅನಾಹುತಗಳೇ ಆಗಿವೆ. ಎರಡೂ ರಾಜ್ಯದಲ್ಲಿ ಈವರೆಗೂ ಮಳೆಗೆ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹೈದ್ರಾಬಾದ್/ಚೆನ್ನೈ: ನಾಲ್ಕೈದು ದಿನಗಳಿಂದ ಭಾರೀ ಅವಾಂತರ ಸೃಷ್ಟಿಸಿದ ಮಿಚಾಂಗ್ ಚಂಡಮಾರುತದ ಅಬ್ಬರ ತಗ್ಗಿದೆ. ಆದರೆ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸೃಷ್ಟಿಸಿದ ಅವಾಂತರಗಳು ಅಧಿಕ.
ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನಲ್ಲಿ 17 ಮಂದಿ ಮೃತಪಟ್ಟಿದ್ದರೆ, ಆಂಧ್ರಪ್ರದೇಶದಲ್ಲೂ ಪೊಲೀಸ್ ಪೇದೆ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಚೆನ್ನೈ ಮಹಾನಗರವಂತೂ ಎಂಟು ವರ್ಷದ ಬಳಿಕ ಮಳೆಯಿಂದ ನಲುಗಿ ಹೋಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗದಲ್ಲಿ ಬುಧವಾರವೂ ಸಾಧಾರಣ ಮಳೆಯಾಗುತ್ತಿದೆ. ಆಂಧ್ರಪ್ರದೇಶದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಇದರ ನಡುವೆಯೇ ರಕ್ಷಣಾ ಕಾರ್ಯಗಳು ಹಾಗೂ ಪುನರ್ವಸತಿ ಚಟುವಟಿಕೆಗಳೂ ನಡೆದಿವೆ.
ಆಂಧ್ರದಲ್ಲೂ ಅನಾಹುತ
ಮಿಚಾಂಗ್ ಚಂಡಮಾರುತ ಮಂಗಳವಾರ ಆಂಧ್ರದ ಕರಾವಳಿ ಬಾಪಟ್ಲಾ ಜಿಲ್ಲೆಯಲ್ಲಿ ತೀವ್ರತೆ ಪಡೆದುಕೊಂಡಿತ್ತು. ಅಲ್ಲದೇ ಅಕ್ಕಪಕ್ಕದ ಏಳೆಂಟು ಜಿಲ್ಲೆಗಳಲ್ಲೂ ಮಳೆ ಅನಾಹುತಗಳಾಗಿವೆ.
ಮಳೆಯಿಂದಾಗಿ ಪೌಲ್ಟ್ರಿ ಫಾರಂನ ಗೋಡೆ ಕುಸಿದ ಪರಿಣಾಮವಾಗ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಳೂರು ಜಿಲ್ಲೆಯಲ್ಲಿ ನಡೆದಿದೆ. ಅದೇ ರೀತಿ ಬೈಕ್‌ನಲ್ಲಿ ಹೊರಟಿದ್ದ ಮೀಸಲು ಪಡೆಯ ಪೇದೆಯೊಬ್ಬರ ಮೇಲೆ ಮರ ಬಿದ್ದು ಅವರೂ ಜೀವ ಕಳೆದುಕೊಂಡಿದ್ಧಾರೆ. ಸಿದ್ದಾವತಂ ಅರಣ್ಯ ಪ್ರದೇಶದ ಭಾಗದಲ್ಲಿ ಬರುವಾಗ ಭಾರೀ ಗಾತ್ರದ ಮರ ಬೈಕ್ ಮೇಲೆ ಬಿದ್ದಾಗ ಪೊಲೀಸ್ ಪೇದೆ ಮೃತಪಟ್ಟರು ಎಂದು ವರದಿಯಾಗಿದೆ. ಇದಲ್ಲದೇ ಹಲವು ಕಡೆಗಳಲ್ಲಿ ಮಳೆ ಹಾಗೂ ಭಾರೀ ಗಾಳಿಯಿಂದಾಗಿ ವಿದ್ಯುತ್ ಕಂಬಗಳು, ಮರಗಳು ಉರುಳಿವೆ. ಹಲವು ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಮಂಗಳವಾರ ವಿದ್ಯುತ್ ಇಲ್ಲದೇ ಜನ ತೊಂದರೆ ಅನುಭವಿಸಿದರು. ಬುಧವಾರವೂ ಆಂಧ್ರಪ್ರದೇಶದ ಹಲವು ಕಡೆ ಮಳೆಯಾಗುವ ನಿರೀಕ್ಷೆಯಿದೆ.
ಆದರೆ ಮಿಚಾಂಗ್ ಚಂಡಮಾರುತದ ತೀವ್ರತೆ ಬುಧವಾರ ಬೆಳಿಗ್ಗೆ ಹೊತ್ತಿಗೆ ತಗ್ಗಿದೆ. ಬಾಪಟ್ಲಾದಿಂದ ಖಮ್ಮಮ್ ಜಿಲ್ಲೆಯ ಕಡೆಗೆ ಚಂಡಮಾರುತ ಸಾಗಿದ್ದು, 100ರಿಂದ 50 ಕಿ.ಮಿ ವೇಗಕ್ಕೆ ತಗ್ಗಿದೆ. ಇನ್ನೂ ಆರು ಗಂಟೆಗಳಲ್ಲಿ ಇದರ ತೀವ್ರತೆ ಕಡಿಮೆಯಾಗಿದೆ. ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈನಲ್ಲಿ ಭಾರೀ ಅವಾಂತರ
ಮಹಾ ಮಳೆಯಿಂದ ನಲುಗಿದ್ದ ಚೆನ್ನೈನಲ್ಲಿ ಆಗಿರುವ ಅನಾಹುತಗಳು ಒಂದೊಂದಾಗಿ ಹೊರ ಬರುತ್ತಿವೆ. ಚೆನ್ನೈನ ಹಲವಾರು ಬಡಾವಣೆಗಳಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಪಾಸ್ತಿ ನಷ್ಟವಾಗಿದೆ. ಕಟ್ಟಡಗಳು ಅಲ್ಲಲ್ಲಿ ಕುಸಿದಿವೆ. ಮನೆ, ರಸ್ತೆ, ಬಡಾವಣೆಗಳಿಗೆ ನುಗ್ಗಿದ ನೀರಿನ ಪ್ರವಾಹ ನಿಧಾನವಾಗಿ ತಗ್ಗಿದೆ. ಮತ್ತೆ ಮಳೆ ಬಂದರೆ ಹೇಗೆ ಎನ್ನುವ ಭಯವಂತೂ ಜನರಲ್ಲಿರುವುದು ಕಂಡು ಬರುತ್ತಿದೆ.
ಗ್ರೇಟರ್ ಚೆನ್ನೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ನಾನಾ ಕಾರಣಗಳಿಂದ 17 ಮಂದಿ ಮಳೆಗೆ ಬಲಿಯಾಗಿದ್ದಾರೆ. ಇದರಲ್ಲಿ ಕಟ್ಟಡ ಕುಸಿತ, ಮರ ಬಿದ್ದಿರುವುದು, ವಿದ್ಯುತ್ ಶಾಕ್ ಹಾಗೂ ಕೊಚ್ಚಿಕೊಂಡು ಹೋಗಿರುವುದು ಸೇರಿದೆ ಎಂದು ಹೇಳಿದ್ದಾರೆ.
ಕೆಲವು ಕಡೆಗಳಿಗೆ ತಕ್ಷಣವೇ ಸೇವೆ ಒದಗಿಸಿ ಹಲವರನ್ನು ರಕ್ಷಣೆ ಮಾಡಲಾಗಿದೆ. ಅಂತಹ ಹತ್ತು ಪ್ರಕರಣಗಳಲ್ಲಿ ವಿದ್ಯುತ್ ಶಾಕ್ ಹಾಗೂ ಪ್ರವಾಹಕ್ಕೆ ಸಿಲುಕಿದವರು ಬದುಕಿದ್ದಾರೆ ಎಂದು ತಿಳಿಸಿದ್ದಾರೆ.
ಎಂಟು ವರ್ಷದ ನಂತರ
ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗದಲ್ಲಿ ಸುರಿದ ಮಳೆಯಿಂದ ಅನಾಹುತ ಆಗಿವೆ. ಆದರೆ ತಮಿಳುನಾಡು ಸರ್ಕಾರವು ಮುನ್ನೆಚ್ಚರಿಕೆ ವಹಿಸಿ ಪೂರ್ವತಯಾರಿ ಮಾಡಿಕೊಂಡಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. 2015ರಲ್ಲಿ ಮಳೆಯಿಂದ ಆಗಿದ್ದ ಆನಾಹುತದ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಕ್ರಮ ವಹಿಸಿದೆ. ನಷ್ಟದ ಅಂದಾಜು ಕಾರ್ಯವೂ ನಡೆದಿದೆ. ಒಂದೆರಡು ದಿನದಲ್ಲಿ ಸಹಜ ಸ್ಥಿತಿಗೆ ಚೆನ್ನೈ ಮಹಾನಗರ ಬರಲಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ತಿಳಿಸಿದ್ದಾರೆ.
2015ರಲ್ಲಿ ಸುರಿದಿದ್ದ ಮಳೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಳೆ ಕಡಿಮೆ ಅವಧಿಯಲ್ಲಿ ಸುರಿದಿದೆ. ಅಂದಾಜು 33 ಸೆ.ಮೀನಷ್ಟು ಮಳೆ ಬಂದಿರುವ ಮಾಹಿತಿಯಿದೆ. ಈಗಾಗಲೇ 411 ಪುನರ್ವಸತಿ ಕೇಂದ್ರಗಳಲ್ಲಿ 61,600 ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶೇ. 70 ರಷ್ಟು ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ತೆಗೆಯಲಾಗಿದೆ ಎಂದು ವಿವರಿಸಿದ್ದಾರೆ.
5,000 ಕೋಟಿ ರೂ.ಗೆ ಆಗ್ರಹ
ಸಂಸತ್ ಅಧಿವೇಶನದಲ್ಲಿ ಚೆನ್ನೈ ಮಳೆ ಅನಾಹುತ ಪ್ರಸ್ತಾಪಿಸಿದ ಡಿಎಂಕೆ ಸಂಸದ ಟಿ.ಆರ್. ಬಾಲು, ಕೇಂದ್ರ ಸರ್ಕಾರ ಕೂಡಲೇ 5,000 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಚೆನ್ನೈ ವಿಮಾನ ನಿಲ್ದಾಣದ ಸೇವೆಗಳು ಪುನಾರಂಭಗೊಂಡಿವೆ. ರೈಲು ಮಾರ್ಗಗಳ ವ್ಯತ್ಯಯದಿಂದ ಸಂಪೂರ್ಣ ರೈಲ್ವೆ ಸಂಚಾರ ಸಾಧ್ಯವಾಗಿಲ್ಲ.