Terrorists: ಉಗ್ರರ ಅಟ್ಟಹಾಸಕ್ಕೆ ನಲುಗಿದ ಜಮ್ಮು ಕಾಶ್ಮೀರ; ಭಯೋತ್ಪಾದಕರ ಮೂಲೋತ್ಪಾಟನೆಗೆ ಬೇಕಿದೆ ಸರ್ಪ್ ವಿನಾಶ್ ರೀತಿಯ ಕಾರ್ಯಾಚರಣೆ
May 15, 2023 09:46 AM IST
ಜಮ್ಮು-ಕಾಶ್ಮೀರದ ರಸ್ತೆಯಲ್ಲಿ ಸಾಗುತ್ತಿರುವ ವಿಶೇಷ ಸೈನಿಕರ ಪಡೆ (ಫೋಟೋ-HT File)
ಜಮ್ಮು-ಕಾಶ್ಮೀರದ ಪೂಂಛ್ ಮತ್ತು ರಜೌರಿಯಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವ್ ವಿನಾಶ್ ಕಾರ್ಯಾಚರಣೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಜಮ್ಮು-ಕಾಶ್ಮೀರ: ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಇತ್ತೀಚೆಗೆ ಉಗ್ರರ ಅಟ್ಟಹಾಸ (Terrorist Attack) ಹೆಚ್ಚಾಗುತ್ತಿದ್ದು, ಸೇನೆ ಹಾಗೂ ಸ್ಥಳೀಯರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಹೆಚ್ಚಾಗುತ್ತಿವೆ.
ಕೇಂದ್ರ ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರು ಭಯೋತ್ಪಾದಕರ ದಾಳಿಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್ 20 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.
ಸೇನಾ ಟ್ರಕ್ ಭಿಂಬರ್‌ನಿಂದ ಪೂಂಛ್ ಜಿಲ್ಲೆಯ ಸಂಗ್ಯೋಟ್‌ಗೆ ತೆರಳುತ್ತಿದ್ದಾಗ ಧಾರಕಾರ ಮಳೆ ಸುರಿಯುತ್ತಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಳೆ ಹಾಗೂ ಕಡಿಮೆ ಗೋಚರತೆಯ ಲಾಭ ಪಡೆದು ಸೇನಾ ವಾಹನದ ಮೇಲೆ ಗ್ರೆನೇಡ್ ಎಸೆದು ಉಗ್ರರು ಪರಾರಿಯಾಗಿದ್ದರು. ಕೂಡಲೇ ವಾಹನ ಹೊತ್ತಿ ಉರಿದಿತ್ತು. ಘಟನೆಯಲ್ಲಿ ಐವರು ಯೋಧರು ಹುತಾತ್ಮರಾದರೆ ಓರ್ವ ಯೋಧ ಗಾಯಗೊಂಡಿದ್ದ.
ನೆರೆಯ ಶತ್ರು ದೇಶ ಪಾಕಿಸ್ತಾನ ಪ್ರೇರಿತ ಇಂತಹ ಹತ್ತಾರು ದಾಳಿಗಳು ಅಗಿಂದಾಗೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಲೇ ಇರುತ್ತವೆ. ವಿಶೇಷವಾಗಿ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯಗಳು ಹೆಚ್ಚಾಗಿವೆ.
ಸೇನಾ ಮೇಲಿನ ನಿರಂತರ ದಾಳಿಗಳಿಂದಾಗಿ ಈ ಎರಡು ಜಿಲ್ಲೆಗಳ ಕಾಡು ಪ್ರದೇಶದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಭದ್ರತಾ ತಜ್ಞರು ಅವಳಿ ಗಡಿ ಜಿಲ್ಲೆಗಳಲ್ಲಿ ಉಗ್ರರನ್ನು ಮೂಲೋತ್ಪಾಟನೆ ಮಾಡಲು ಸರ್ಪ್ ವಿನಾಶ್ (Sarp Vinash) ಮಾದರಿಯ ಕಾರ್ಯಾಚರಣೆ ಪ್ರಾರಂಭಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ ಎಂದು ವರದಿಯಾಗಿದೆ.
ಈ ಹಿಂದೆಯೂ ನಡೆದಿತ್ತು ಸರ್ಪ್ ವಿನಾಶ್ ಆಪರೇಷನ್
ಸರ್ಪ್ ವಿನಾಶ್ (Snake Destroy) ಮಾದರಿಯ ಸೇನಾ ಕಾರ್ಯಾಚರಣೆ ಇದೇ ಮೊದಲಲ್ಲ. 2003ರ ಏಪ್ರಿಲ್-ಮೇನಲ್ಲಿ ಪಿರ್ ಪಂಜಾಲ್ ಶ್ರೇಣಿಯ ಹಿಲ್ಕಾಕ ಪೂಂಛಅ-ಸುರನ್‌ಕೋಟ್ ಪ್ರದೇಶದಲ್ಲಿ ನೆಲೆಗಳನ್ನು ಹಾಕಿದ್ದ ಉಗ್ರರ ಹೆಡೆಮುರಿ ಕಟ್ಟಲು ಸರ್ವ್ ವಿನಾಶ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.
ಕೆಲ ವರದಿಗಳ ಪ್ರಕಾರ ಅಂದಿನ ಆಪರೇಷನ್‌ನಲ್ಲಿ 64 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಉಗ್ರರು ಬಳಸಿದ್ದ ಈ ಅಡಗುತಾಣಗಳ ಮೇಲಿನ ಸೇನಾ ದಾಳಿ ಜಮ್ಮು-ಕಾಶ್ಮೀರದ ಇತಿಹಾಸನದಲ್ಲೇ ಅತಿ ದೊಡ್ಡ ಕಾರ್ಯಾಚರಣೆ ಎನಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿನ ಪೂಂಛ್ ಮತ್ತು ರಜೌರಿಯಲ್ಲಿ ಭಯೋತ್ಪಾದಕರ ತಾಣಗಳು ಹಾಗೂ ಅವರ ಪ್ಲಾನ್‌ಗಳನ್ನು ಭದ್ರತಾ ಏಜೆನ್ಸಿಗಳು ನಿಯಂತ್ರಿಸಲು ಸಮರ್ಥವಾಗಿದ್ದು, ಅದರಲ್ಲಿ ಒಂದು ಮಟ್ಟಿಗೆ ಯಶಸ್ಸು ಕಂಡಿವೆ.
ಈ ಎರಡೂ ಜಿಲ್ಲೆಗಳಲ್ಲಿ 2021ರ ಅಕ್ಟೋಬರ್ 11 ರಂದು ನಡೆದಿದ್ದ ಎಂಡು ಉಗ್ರರ ದಾಳಿಗಳಲ್ಲಿ ಮೂವರು ಅಧಿಕಾರಿಗಳು ಹಾಗೂ ಐವರು ಪ್ಯಾರಾಟ್ರೂಪರ್‌ಗಳು ಸೇರಿದಂತೆ 26 ಸೇನಾ ಸಿಬ್ಬಂದಿ ಹಾಗೂ ಏಳು ಮಂದಿ ನಾಗರಿಕರು ಸಾವನ್ನಪ್ಪಿದ್ದರು.
ನೆರೆಯ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಇಲ್ಲಿನ ಏಜೆನ್ಸಿಗಳು ಉಗ್ರರನ್ನು ಪೋಷಣೆ ಮಾಡುತ್ತಿವೆ. ರಜೌರಿ ಮತ್ತು ಪೂಂಛ್ ಜಿಲ್ಲಗಳಲ್ಲಿ ಉಗ್ರರನ್ನು ಮಟ್ಟಹಾಕಲು ಸ್ನೇಕ್ ಡೆಸ್ಟ್ರಾಯರ್ (ಸರ್ಪ್ ವಿನಾಶ್) ಮಾದರಿಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಜಮ್ಮುಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕೆಲವು ಸ್ಥಳೀಯರು ಹಣದಾಸೆಗೆ ಉಗ್ರರಿಗೆ ನೆರವು ನೀಡುತ್ತಿರುವುದು ಸೇನೆ ಹಾಗೂ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಉಗ್ರರನ್ನು ಮಟ್ಟಹಾಕಲು ಈ ರೀತಿಯ ನೆರವು ಅಡ್ಡಿಯಾಗುತ್ತಿದೆ. ಮತ್ತೊಮ್ಮೆ ಸರ್ಪ್ ವಿನಾಶ್ ಶುರುವಾದರೆ ಭಯೋತ್ಪಾದಕರನ್ನು ಮೂಲೋತ್ಪಾಟನೆ ಮಾಡಬಹುದಾಗಿದೆ. ಈ ರೀತಿಯ ಆಪರೇಷನ್ ನಡೆಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.