Karnataka Elections: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಪ್ರತಿಭಟನೆ, ಹೈಡ್ರಾಮಾ
Apr 03, 2023 07:44 PM IST
Karnataka Elections: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಪ್ರತಿಭಟನೆ
- ವಿವಿಧ ಅಭ್ಯರ್ಥಿಗಳ ಪರ ಲಾಬಿ ನಡೆಸುತ್ತಿರುವಾಗ ಗುಂಪುಗಳು ಕರ್ನಾಟಕ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ಗೆ ತನ್ನದೇ ಪಕ್ಷದ ಜನರಿಂದ ಸಂಕಷ್ಟ ಎದುರಾಗುವ ಲಕ್ಷಣವಿದೆ. ಏಕೆಂದರೆ, ಕಾಂಗ್ರೆಸ್ ಪಕ್ಷದ ವಿವಿಧ ಗುಂಪುಗಳ ಕಾರ್ಯಕರ್ತರು ಇಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದಾರೆ.
ವಿವಿಧ ಅಭ್ಯರ್ಥಿಗಳ ಪರ ಲಾಬಿ ನಡೆಸುತ್ತಿರುವಾಗ ಗುಂಪುಗಳು ಕರ್ನಾಟಕ ಕಾಂಗ್ರೆಸ್ ಕಚೇರಿಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ, ವಿವಿಧ ಫಲಕಗಳನ್ನು ಹಿಡಿದು ಟಿಕೆಟ್‌ಗಾಗಿ ಆಗ್ರಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಕಚೇರಿಗೆ ಪ್ರತಿಭಟನಾಕಾರರು ಪ್ರವೇಶಿಸಲು ಯತ್ನಿಸಿದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ವಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸುವ ಮುನ್ನವೇ ನಾಟಕೀಯ ಪ್ರತಿಭಟನೆಗಳು ನಡೆದಿವೆ.
'ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಪಡೆಯಲಿದೆ., ಹೀಗಾಗಿ ನಮ್ಮ ಪಕ್ಷದ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಇದೆ. ಮಂಗಳವಾರ ಸಿಇಸಿ (ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ) ಸಭೆ ನಡೆಯಲಿದ್ದು, ಕ್ಷೇತ್ರಗಳ ಸಮೀಕ್ಷೆಯ ವರದಿಯನ್ನೂ ಪಡೆಯುತ್ತಿದ್ದೇವೆ. ಉತ್ತಮ ಅಭ್ಯರ್ಥಿಗಳಿಗೆ ಖಂಡಿತಾವಾಗಿಯೂ ಟಿಕೆಟ್ ದೊರಕಲಿದೆ" ಎಂದು ಕರ್ನಾಟಕ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ತರೀಕೆರೆ ಕ್ಷೇತ್ರದ ಎಚ್.ಎಂ.ಗೋಪಿಕೃಷ್ಣ ಪರ ಒಂದು ಗುಂಪು, ಮೊಳಕಾಲೂರು ಕ್ಷೇತ್ರದ ಯೋಗೇಶಬಾಬು ಪರ ಮತ್ತೊಂದು ಗುಂಪು ಇಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ವಿಷಕುಡಿಯಲು ಪ್ರಯತ್ನಿಸಿದ್ದು ಸೇರಿದಂತೆ ಹಲವು ಹೈಡ್ರಾಮಾ ನಡೆದಿದೆ.
ಕೆಪಿಸಿಸಿಯಲ್ಲಿ ಮಡಿವಾಳ ಸಮಾಜದ ಪ್ರತಿಭಟನೆಯಿಂದಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನೂ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ. ಈ ಪಟ್ಟಿ ಬಿಡುಗಡೆಯಾದ ಬಳಿಕ ಟಿಕೆಟ್ ಆಕಾಂಕ್ಷಿಗಳು ಮತ್ತು ಬೆಂಬಲಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಪಟ್ಟಿಯನ್ನು ಕಾಂಗ್ರೆಸ್ 124 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಎರಡು ಬಾರಿ ಸ್ಕ್ರೀನಿಂಗ್ ಸಮಿತಿ ಸಭೆ ನಡೆದಿದ್ದು, ಇನ್ನೂ 38 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಂದುವರೆದಿದೆ ಎನ್ನಲಾಗಿದೆ.