Karnataka-Maharashtra border dispute: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಅರವಿಂದ ಕುಮಾರ್
Apr 13, 2023 06:45 AM IST
ಭಾರತದ ಸುಪ್ರೀಂ ಕೋರ್ಟ್ (ಸಾಂಕೇತಿಕ ಚಿತ್ರ)
Karnataka-Maharashtra border dispute: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈಗ ಪ್ರಕರಣಕ್ಕೆ ಪ್ರತ್ಯೇಕ ಪೀಠವನ್ನು ರಚಿಸಲಿದ್ದಾರೆ. ಈ ಹಿಂದೆ ಮೂವರು ನ್ಯಾಯಮೂರ್ತಿಗಳು ಕರ್ನಾಟಕದವರಾಗಿರುವುದರಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಬುಧವಾರ ಹಿಂದೆ ಸರಿದಿದ್ದಾರೆ.
ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಹ್ಸ್ನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈಗ ಪ್ರಕರಣಕ್ಕೆ ಪ್ರತ್ಯೇಕ ಪೀಠವನ್ನು ರಚಿಸಲಿದ್ದಾರೆ. ಈ ಹಿಂದೆ ಮೂವರು ನ್ಯಾಯಮೂರ್ತಿಗಳು ಕರ್ನಾಟಕದವರಾಗಿರುವುದರಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಕರ್ನಾಟಕದ ಕೆಲವು ಗ್ರಾಮಗಳನ್ನು ತನ್ನ ಪಾಲಿಗೆ ವರ್ಗಾಯಿಸುವಂತೆ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಮತ್ತು ಸ್ಥಳಗಳು ಮರಾಠಿ ಮಾತನಾಡುವ ಜನರಿಗೆ ಸೇರಿದ್ದು, ಕರ್ನಾಟಕದ ಭಾಗವಾಗಿರಬಾರದು ಎಂದು ಮಹಾರಾಷ್ಟ್ರ ಸರ್ಕಾರ ಪ್ರತಿಪಾದಿಸಿದೆ.
ಭಾಷಾವಾರು ರಾಜ್ಯಗಳ ಮರುಸಂಘಟನೆಯ ನಂತರ ಗಡಿ ವಿವಾದ ಉಂಟಾಗಿದ್ದು, ಇದು 1960 ರ ದಶಕದ ಹಿಂದಿನದು. ರಾಜ್ಯ ಮರುಸಂಘಟನೆ ಕಾಯಿದೆ, 1956 ಎಂಬುದು, ಭಾಷಾವಾರು ರಾಜ್ಯಗಳನ್ನು ಮರುಸಂಘಟಿಸುವ ಗುರಿಯನ್ನು ಹೊಂದಿರುವಂಥದ್ದು.
ಈ ಕಾಯಿದೆಯ ಅನುಷ್ಠಾನದ ನಂತರ, ಬೆಳಗಾವಿ ಕರ್ನಾಟಕದ ಭಾಗವಾಯಿತು. 1960ರ ಮೇನಲ್ಲಿ, ಮಹಾರಾಷ್ಟ್ರವು ಸಾಕಷ್ಟು ಮರಾಠಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವುದರಿಂದ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿ (ಹಿಂದೆ ಬೆಳಗಾಂ) ತನ್ನದು ಎಂದು ಹಕ್ಕು ಪ್ರತಿಪಾದಿಸಿತು. ಸಂಸತ್ತು ಮಾತ್ರ ರಾಜ್ಯದ ಗಡಿಯನ್ನು ನಿರ್ಧರಿಸುತ್ತದೆಯೇ ಹೊರತು ಸುಪ್ರೀಂ ಕೋರ್ಟ್ ಅಲ್ಲ ಎಂದು ಕರ್ನಾಟಕ ವಾದಿಸಿತು.
ಕಳೆದ ತಿಂಗಳು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ರಾಜ್ಯಗಳ ನಡುವಿನ ಗಡಿ ಗ್ರಾಮಗಳಿಗೆ ಆರೋಗ್ಯ ವಿಮಾ ಯೋಜನೆ ಕುರಿತು ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.
ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಕರ್ನಾಟಕದ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ಯೋಜನೆ ಘೋಷಿಸಿರುವ ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯ ಅಕ್ಷಮ್ಯ ಅಪರಾಧ ಎಂದು ಹೇಳಿದ್ದರು. ಈ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾತನಾಡಿಸಿದಾಗ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಬೇಕು. ಯಾವುದೇ ಪ್ರಚೋದನೆ ನೀಡಬಾರದು, ಈಗ ಇದನ್ನು ಉಲ್ಲಂಘಿಸಲಾಗಿದೆ, ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಹೇಳಿದ್ದರು.
ಕರ್ನಾಟಕವೂ ಈ ರೀತಿಯ ಯೋಜನೆಗಳನ್ನು ಘೋಷಿಸಬಹುದು ಎಂದು ಬೊಮ್ಮಾಯಿ ಹೇಳಿದರು. ‘ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ಹಲವು ತಾಲೂಕು, ಗ್ರಾಮ ಪಂಚಾಯತಿಗಳು ನಿರ್ಧರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಬೊಮ್ಮಾಯಿ ಹೇಳಿದರು.
ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವು ಕರ್ನಾಟಕದ ಗಡಿಭಾಗದ ಹಳ್ಳಿಗಳಲ್ಲಿ 'ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ' ಅನುಷ್ಠಾನಗೊಳಿಸಲು ಹೆಚ್ಚುವರಿ 54 ಕೋಟಿ ರೂ. ಘೋಷಿಸಿದೆ.
ಗಮನಿಸಬಹುದಾದ ಸುದ್ದಿಗಳು
ಸಿಆರ್‌ಪಿಎಫ್ ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ; ಸಿದ್ದರಾಮಯ್ಯ ಪ್ರಶ್ನೆಗೆ ಸಿಆರ್‌ಪಿಎಫ್ ಉತ್ತರ
Recruitment test row: ಈ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸುವ ಕ್ರಮವನ್ನು ಚುನಾವಣಾ ಕಣದಲ್ಲಿರುವ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡ ವಿರೋಧಿಸಿದ್ದರು. ಕನ್ನಡದಲ್ಲೂ ಏಕೆ ಪರೀಕ್ಷೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ