Train Arson Case: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖಾ ವಿವರವನ್ನು ಎನ್‌ಐಎಗೆ ಹಸ್ತಾಂತರಿಸಲು ಸೂಚನೆ
Apr 22, 2023 12:22 PM IST
Train Arson Case: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖಾ ವಿವರವನ್ನು ಎನ್‌ಐಎಗೆ ಹಸ್ತಾಂತರಿಸಲು ಸೂಚನೆ
ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ (Train Arson Case)ದ ತನಿಖೆಯ ವಿವರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸುವಂತೆ ಕೇರಳದ ಪೊಲೀಸ್ ಮಹಾನಿರ್ದೇಶಕರು (ಡಿಐಜಿ) ರಾಜ್ಯದ ಅಪರಾಧ ವಿಭಾಗಕ್ಕೆ ಸೂಚಿಸಿದ್ದಾರೆ.
ತಿರುವನಂತಪುರ: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ (Train Arson Case)ದ ತನಿಖೆಯ ವಿವರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸುವಂತೆ ಕೇರಳದ ಪೊಲೀಸ್ ಮಹಾನಿರ್ದೇಶಕರು (ಡಿಐಜಿ) ರಾಜ್ಯದ ಅಪರಾಧ ವಿಭಾಗಕ್ಕೆ ಸೂಚಿಸಿದ್ದಾರೆ. ಇತ್ತೀಚೆಗೆ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.
ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ರೈಲ್ವೆ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣವನ್ನು ಎನ್‌ಐಎ ಕೊಚ್ಚಿ ಘಟಕಕ್ಕೆ ವರ್ಗಾಯಿಸಲು ಅನುಮತಿ ನೀಡಲಾಗಿದೆ ಎಂದು ಆದೇಶ ಪತ್ರದಲ್ಲಿ ಡಿಜಿಪಿ ಅನಿಲ್ ಕಾಂತ್ ಹೇಳಿದ್ದಾರೆ.
ಮಲಪ್ಪುರಂನ ಕ್ರೈಂ ಬ್ರಾಂಚ್ ಸೂಪರಿಂಟೆಂಡೆಂಟ್‌ಗೆ, ತನಿಖಾಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಪಟ್ಟ ಸಿಡಿ ಫೈಲ್‌ಗಳು, ಸಂಬಂಧಿತ ದಾಖಲೆಗಳು ಮತ್ತು ಪ್ರಕರಣದ ಮಾಹಿತಿಗಳನ್ನು ಕಾಲಮಿತಿಯಲ್ಲಿ ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣವು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯಲ್ಲಿ ಮಗು ಸೇರಿದಂತೆ ಮೂರು ಜನರು ಮೃತಪಟ್ಟಿದ್ದರು. ಏಪ್ರಿಲ್ 2ರಂದು ರಾತ್ರಿ ಆರೋಪಿ ಶಾರುಖ್ ಸೈಫಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಕೃತ್ಯ ಎಸಗಿದ್ದ. ಕೋಯಿಕೋಡ್ ನ ಎಲತ್ತೂರ್ ಬಳಿಯ ಕೊರಾಪುಳ ಸೇತುವೆಯನ್ನು ತಲುಪಿದಾಗ ತನ್ನ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ್ದ.
ಘಟನೆಯಲ್ಲಿ ಒಂಬತ್ತು ಜನರಿಗೆ ಸುಟ್ಟ ಗಾಯಗಳಾಗಿವೆ. ಪುಟ್ಟ ಮಗು ಸೇರಿದಂತೆ ಮೂವರು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೂವರು ಬಿದ್ದು ಮೃತಪಟ್ಟಿರಬಹುದು ಎಂದು ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ಶಾರುಖ್ ಸೈಫಿ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ ಅವರ ಆಮೂಲಾಗ್ರ ವೀಡಿಯೊಗಳನ್ನು ಹೆಚ್ಚು ನೋಡುತ್ತಿದ್ದನು. ಈತನ ವಿರುದ್ಧ ಸಂಗ್ರಹಿಸಿದ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ" ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂಆರ್ ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ತನಿಖಾ ತಂಡವು ಭಯೋತ್ಪಾದಕ ಕೃತ್ಯಗಳಿಗೆ ಶಿಕ್ಷೆಗೆ ಸಂಬಂಧಿಸಿದಂತೆ ಯುಎಪಿಎಯ ಸೆಕ್ಷನ್ 16ಯಡಿ ಈತನ ವಿರುದ್ಧ ಪ್ರಕರಣ ದಾಖಲಿಸಿದೆ. "ನಾವು ವಿವಿಧ ರಾಜ್ಯಗಳಿಗೆ ಹೋಗಿ ವೈಜ್ಞಾನಿಕ, ಡಾಕ್ಯುಮೆಂಟರಿ ಮತ್ತು ಮೌಖಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ಕುರಿತು ಸಮಗ್ರ ತನಿಖೆ ನಡೆಸಿದ್ದೇವೆ. ಈತನ ವಿರುದ್ಧ ಯುಎಪಿಎಗೆ (UAPA) ಸಂಬಂಧಿಸಿದ ಕಾನೂನು ಕ್ರಮಗಳನ್ನು ಅನ್ವಯಿಸಲು ನಿರ್ಧರಿಸಿದ್ದೇವೆ. ಆತ ತೀವ್ರಗಾಮಿ, ಮೂಲಭೂತವಾದಿ. ಜಾಕೀರ್ ನಾಯ್ಕ್ ಮತ್ತು ಇತರೆ ಮೂಲಭೂತವಾದಿಗಳ ವಿಡಿಯೋಗಳನ್ನು ಹೆಚ್ಚಾಗಿ ನೋಡುವ ಅಭ್ಯಾಸ ಹೊಂದಿದ್ದಾನೆ. ಈತ ಪೂರ್ವಯೋಜಿತವಾಗಿ ಅಪರಾಧ ಕೃತ್ಯ ಎಸಗಲು ಕೇರಳಕ್ಕೆ ಬಂದಿದ್ದನು" ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.