logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Priyanka Gandhi: ಕೇರಳದ ವಯನಾಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕ ಗಾಂಧಿ; ಯಾವ್ಯಾವ ನಾಯಕರು ಸಾಥ್‌ ಕೊಟ್ಟರು

Priyanka Gandhi: ಕೇರಳದ ವಯನಾಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕ ಗಾಂಧಿ; ಯಾವ್ಯಾವ ನಾಯಕರು ಸಾಥ್‌ ಕೊಟ್ಟರು

Umesha Bhatta P H HT Kannada

Oct 23, 2024 02:48 PM IST

google News

ಕೇರಳದ ವಯನಾಡು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಂಕ ಗಾಂಧಿ ನಾಮಪತ್ರ ಸಲ್ಲಿಸಿದರು.

    • ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಕೇರಳದ ವಯನಾಡು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಂಕ ಗಾಂಧಿ ನಾಮಪತ್ರ ಸಲ್ಲಿಸಿದರು.
ಕೇರಳದ ವಯನಾಡು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಂಕ ಗಾಂಧಿ ನಾಮಪತ್ರ ಸಲ್ಲಿಸಿದರು.

ವಯನಾಡು: ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಧುಮುಕಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಉಪ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಸಹೋದರ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಕರ್ನಾಟಕದ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಾಂಕಗಾಂಧಿ ಕಣಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದಲ್ಲಿಯೇ ಆರು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಪ್ರಿಯಾಂಕ ಕಣಕ್ಕೆ ಇಳಿಯಬಹುದು ಎನ್ನುವ ಲೆಕ್ಕಾಚಾರ ಇದ್ದರೂ ಚುನಾವಣೆ ಉಸ್ತುವಾರಿ ಹೊತ್ತಿದ್ದರಿಂದ ಸ್ಪರ್ಧೆ ಮಾಡಿರಲಿಲ್ಲ. 52 ವರ್ಷದ ನಾಯಕಿ ಪ್ರಿಯಾಂಕಗಾಂಧಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ನಾಮಪತ್ರವನ್ನು ಅಧಿಕೃತವಾಗಿಯೇ ಬುಧವಾರ ಸಲ್ಲಿಸಿದರು.

ಮಂಗಳವಾರವೇ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮ್ಮ ಸೋನಿಯಾಗಾಂಧಿ ಅವರೊಂದಿಗೆ ಹೊರಟು ಮೈಸೂರಿಗೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ರಾತ್ರಿಯೇ ವಯನಾಡು ತಲುಪಿದ್ದರು.

ಬೆಳಿಗ್ಗೆ ಕಲ್ಪೆಟ್ಟದ ಬಸ್‌ ನಿಲ್ದಾಣದಿಂದ ಮೆರವಣಿಗೆ ಮೂಲಕ ಹೊರಟು ವಯನಾಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು. ಬೃಹತ್‌ ರೋಡ್‌ ಶೋ ಭಾರೀ ಗಮನ ಸೆಳೆಯಿತು. ಈ ವೇಳೆ ಅವರಿಗೆ ಅಮ್ಮ ಸೋನಿಯಾಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹಿತ ಹಲವರು ಸಾಥ್‌ ನೀಡಿದರು.

ಬಳಿಕ ವಯನಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ಪ್ರಿಯಾಂಕ ಗಾಂಧಿ ಭಾಗಿಯಾದರು. ಸಮಾವೇಶದಲ್ಲಿ ಪಕ್ಷದ ನಾಯಕರು ಸಾಥ್‌ ನೀಡಿದರು. ಈ ವೇಳೆ ಬಿಜೆಪಿ ಹಾಗೂ ಎಡ ಪಕ್ಷಗಳ ವಿರುದ್ದ ನಾಯಕರು ವಾಗ್ದಾಳಿ ನಡೆಸಿದರು.

ಸತತ ಪ್ರಚಾರ

ನನಗೆ ಆಗ 17 ವರ್ಷ/ ನಾನು 1989 ರ ಸಾರ್ವಜನಿಕ ಚುನಾವಣೆಯಲ್ಲಿ ನನ್ನ ತಂದೆಗಾಗಿ ಮೊದಲ ಬಾರಿಗೆ ಪ್ರಚಾರ ಮಾಡಿದ್ದೇನೆ. ಈಗ 35 ವರ್ಷಗಳು ಕಳೆದಿವೆ. ನಾನು ನನ್ನ ತಾಯಿ, ನನ್ನ ಸಹೋದರ ಮತ್ತು ನನ್ನ ಅನೇಕ ಸಹೋದ್ಯೋಗಿಗಳಿಗಾಗಿ ವಿವಿಧ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ನನ್ನ ಪರವಾಗಿ ನಾನೇ ಪ್ರಚಾರ ಮಾಡುತ್ತಿದ್ದೇನೆ. ಯುಡಿಎಫ್ ಅಭ್ಯರ್ಥಿಯಾಗಲು ನನಗೆ ಅವಕಾಶ ನೀಡಿದ್ದಕ್ಕಾಗಿ ಮತ್ತು ವಯನಾಡಿನ ಅಭ್ಯರ್ಥಿಯಾಗಲು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಕುಟುಂಬಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ತುಂಬ ಆಭಾರಿಯಾಗಿದ್ದೇನೆ. ನೀವು ನನಗೆ ಅವಕಾಶ ನೀಡಿದರೆ ನಿಮ್ಮನ್ನು ಪ್ರತಿನಿಧಿಸುವುದು ನನ್ನ ಗೌರವ ಎಂದು ಪ್ರಿಯಾಂಕ ಇದೇ ವೇಳೆ ಹೇಳಿದರು.

ವಯನಾಡು ದುರಂತ ನೆನಪು

ಮೂರು ತಿಂಗಳ ಹಿಂದೆ ಇಲ್ಲಿ ಭಾರೀ ದುರಂತವೇ ಸಂಭವಿಸಿತು. ಪ್ರಕೃತಿ ವಿಕೋಪದಿಂದ ಸಹಸ್ರಾರು ಮಂದಿ ತೊಂದರೆ ಅನುಭವಿಸಿದರು. ನಾನು ಈ ವಿನಾಶ ಸನ್ನಿವೇಶವನ್ನು ಖುದ್ದಾಗಿ ನೋಡಿದೆ. ಕುಟುಂಬವನ್ನು ಕಳೆದುಕೊಂಡ ಮಕ್ಕಳನ್ನು ನಾನು ನೋಡಿದೆ ಕಣ್ಣೀರಾದೆ. ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಭೇಟಿಯಾಗಿದೆ. ಇಡೀ ಜೀವನವೇ ಕೊಚ್ಚಿಹೋದ ಜನರನ್ನು ಭೇಟಿಯಾದೆ. ನಾನು ಒಂದು ವಿಷಯದಿಂದ ಆಘಾತಕ್ಕೊಳಗಾಗಿದ್ದೇನೆ, ನಾನು ಭೇಟಿಯಾದ ಪ್ರತಿಯೊಬ್ಬರೂ ಪರಸ್ಪರ ಸಹಾಯ ಮಾಡುವುದರಲ್ಲಿ ತೊಡಗಿದ್ದರು. ಅವರು ಧೈರ್ಯದಿಂದ, ದುರಾಸೆಯಿಲ್ಲದೆ ಮತ್ತು ಸಹಾನುಭೂತಿಯಿಂದ ಪರಸ್ಪರ ಬೆಂಬಲಿಸಿದರು. ನನ್ನ ಸಹೋದರ ಕೂಡ ಇಲ್ಲಿನ ಸಂಸದರಾಗಿ ಜನರನ್ನು ಸಂತೈಸಿ ಸಹಾಯ ಮಾಡಿದರು. ನನಗೆ ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರೆ ಖಂಡಿತಾ ನಿಮ್ಮ ದನಿಯಾಗಿ ಕೆಲಸ ಮಾಡುವೆ ಎಂದು ಪ್ರಿಯಾಂಕ ಹೇಳಿದರು.

ನವೆಂಬರ್‌ 13 ರಂದು ಮತದಾನ ನಡೆಯಲಿದ್ದು. ಅಲ್ಲಿಯವರೆಗೂ ಪ್ರಿಯಾಂಕಗಾಂಧಿ ಕಲ್ಪೆಟ್ಟದಲ್ಲಿಯೇ ಇದ್ದುಕೊಂಡು ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವರು. ಇದಕ್ಕಾಗಿ ಸಿದ್ದತೆಗಳನ್ನು ಪಕ್ಷ ಮಾಡಿಕೊಂಡಿದೆ.

ಪ್ರಿಯಾಂಕ ಗಾಂಧಿ ಅವರು ಐದು ವರ್ಷದ ಹಿಂದೆಯೇ ರಾಜಕೀಯಕ್ಕೆ ಧುಮುಕಿದ್ದರೂ ಚುನಾವಣೆ ಕಣಕ್ಕೆ ಇಳಿದಿರಲಿಲ್ಲ. ಮೊದಲ ಬಾರಿಗೆ ಅವರು ಕೇರಳದಿಂದ ಕಣಕ್ಕೆ ಇಳಿಯತ್ತಿದ್ದಾರೆ. ಅದರಲ್ಲೂ ತಮ್ಮ ಸಹೋದರ ರಾಹುಲ್‌ ಗಾಂಧಿ ಎರಡು ಬಾರಿ ಗೆದ್ದಿದ್ದ ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ವಿಶೇಷ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ