Wayanad Election: ಕೇರಳ ವಯನಾಡು ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಎದುರಾಳಿ ಯಾರು, ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮಣೆ ಹಾಕಿದ ಬಿಜೆಪಿ
Oct 21, 2024 01:54 PM IST
ಕೇರಳದ ವಯನಾಡು ಕ್ಷೇತ್ರದ ಕಾಂಗ್ರೆಸ್ ನ ಪ್ರಿಯಾಂಕ ಗಾಂಧಿ ವಿರುದ್ದ ಬಿಜೆಪಿ ಸಾಫ್ಟ್‌ವೇರ್ ಎಂಜಿನಿಯರ್ ನವ್ಯ ಹರಿದಾಸ್ ಹೆಸರು ಪ್ರಕಟಿಸಿದೆ.
- ಕರ್ನಾಟಕದ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರ ವಿರುದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಬಿಜೆಪಿ ಕಣಕ್ಕಿಳಿಸಿದೆ.
ತಿರುವಂನಪುರಂ: ಕೇರಳದ ವಯನಾಡಿನಲ್ಲಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಪ್ರಿಯಾಂಕ ಗಾಂಧಿ ವಿರುದ್ದ ಎರಡು ಬಾರಿ ನಗರಪಾಲಿಕೆ ಸದಸ್ಯೆಯೊಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಅದೂ ಎಂಟೆಕ್ ಪದವಿ ಪಡೆದು ಸಾಫ್ಟ್‌ವೇರ್ ಎಂಜಿನಯರ್ ಆಗಿ ಈಗ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಕೇರಳದ ಕೋಝಿಕ್ಕೋಡ್ ನಗರದ ಕಾರ್ಪೊರೇಷನ್‌ನಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿರುವ ನವ್ಯಾ ಹರಿದಾಸ್ ಅವರು ವಯನಾಡ್ ಲೋಕಸಭಾ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಲಿದ್ದಾರೆ. ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ನವೆಂಬರ್ 13 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ನವ್ಯಾ ಹರಿದಾಸ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಡಪಕ್ಷದ ಸಿಪಿಐ ಅಭ್ಯರ್ಥಿ ಸತ್ಯನ್ ಮೊಕೇರಿ ಅವರನ್ನು ಚುನಾವನೆಯಲ್ಲಿ ಎದುರಿಸಲಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಬಾಕಿಯಿದೆ.
ವಯನಾಡು ಲೋಕಸಭೆ ಕ್ಷೇತ್ರದ ಉಪ ಚುನಾವಣೆ ರಾಹುಲ್ ಗಾಂಧಿ ರಾಜೀನಾಮೆಯಿಂದ ಎದುರಾಗಿದೆ. ಕಳೆದ ಬಾರಿ ಅಮೇಥಿಯಲ್ಲಿ ಸೋತು ವಯನಾಡಿನಲ್ಲಿ ಗೆದ್ದಿದ್ದ ರಾಹುಲ್ ಗಾಂಧಿ ಐದು ವರ್ಷ ಇಲ್ಲಿ ಸಂಸದರಾಗಿದ್ದರು. ಈ ಬಾರಿ ರಾಯ್ ಬರೇಲಿ ಹಾಗೂ ವಯನಾಡಿನಿಂದ ಗೆದ್ದಿದ್ದು ವಯನಾಡು ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.
ಇಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಪಕ್ಷದ ಅಭ್ಯರ್ಥಿ. ಅವರ ಎದುರಾಳಿ ಯಾರಾಗುವರು ಎನ್ನುವ ಕುತೂಹಲವಿತ್ತು. ಈ ಪ್ರಮುಖ ಸ್ಥಾನಕ್ಕೆ ಬಿಜೆಪಿ ಯುವ ಮಹಿಳಾ ನಾಯಕಿ ನವ್ಯಾ ಹರಿದಾಸ್ ಅವರನ್ನು ತಮ್ಮ ಸ್ಪರ್ಧಿ ಎಂದು ಘೋಷಿಸಿದೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹರಿದಾಸ್ ಅವರು ಕ್ಯಾಲಿಕಟ್ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಕೆಎಂಸಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿಯನ್ನು ಪಡೆದಿದ್ದಾರೆ. ನಂತರ ಎಂಟೆಕ್ ಮುಗಿಸ್ ಸಾಫ್ಟ್‌ವೇರ್ ಎಂಜಿನಿಯರ್ ಕೂಡ ಆಗಿದ್ದರು. ಸದ್ಯ ನವ್ಯ ಹರಿದಾಸ್ ಅವರು ಪಾಲಿಕೆಯಲ್ಲಿ ಬಿಜೆಪಿ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವ್ಯಾ ಹರಿದಾಸ್ ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದರು.ಕೋಝಿಕ್ಕೋಡ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವ್ಯಾ ಮೂರನೇ ಸ್ಥಾನ ಪಡೆದಿದ್ದರು. ಸದ್ಯ ಕೇರಳ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಎಡಿಆರ್ ಪ್ರಕಾರ, ನವ್ಯಾ ಹರಿದಾಸ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ನವ್ಯಾ ಹರಿದಾಸ್ ಅವರು 1,29,56,264 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪ್ರಿಯಾಂಕ ಗಾಂಧಿ ಈ ವಾರ ನಾಮಪತ್ರ ಸಲ್ಲಿಸಲಿದ್ದು, ನವ್ಯಾ ಕೂಡ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ವಿರುದ್ದ ಕಳೆದ ಬಾರಿ ಬಿಜೆಪಿ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದ್ದರೆ, ಸಿಪಿಐಎಂ ಇಲ್ಲಿ ಹಿರಿಯ ನಾಯಕ ಡಿ. ರಾಜಾ ಪತ್ನಿ ಅನ್ನೀ ರಾಜಾ ಅವರನ್ನು ಉಮೇದುವಾರರನ್ನಾಗಿ ಮಾಡಿತ್ತು. ಈ ಬಾರಿ ಸಿಪಿಐಎಂ ಮಹಿಳೆ ಬದಲು ಪುರುಷ ಅಭ್ಯರ್ಥಿ ಸತ್ಯನ್ ಮೋಕೇರಿ ಅವರ ಹೆಸರು ಪ್ರಕಟಿಸಿದೆ.