logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Birthday: ಮೋದಿಗೆ ವಿಶ್‌ ಮಾಡದ ಪುಟಿನ್:‌ ಕಾರಣವೂ ಇಂಟ್ರೆಸ್ಟಿಂಗ್..!

PM Modi Birthday: ಮೋದಿಗೆ ವಿಶ್‌ ಮಾಡದ ಪುಟಿನ್:‌ ಕಾರಣವೂ ಇಂಟ್ರೆಸ್ಟಿಂಗ್..!

Nikhil Kulkarni HT Kannada

Sep 17, 2022 07:44 AM IST

google News

ಮೋದಿ-ಪುಟಿನ್‌ ಮಾತುಕತೆ

    • ಎಸ್‌ಸಿಒ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ವೇಳೆ ಪುಟಿನ್‌ ಅವರು ಒಂದು ದಿನ ಮುಂಚಿತವಾಗಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಲು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.
ಮೋದಿ-ಪುಟಿನ್‌ ಮಾತುಕತೆ
ಮೋದಿ-ಪುಟಿನ್‌ ಮಾತುಕತೆ (Verified Twitter)

ಸಮರಖಂಡ್:‌ ಉಜ್ಬೇಕಿಸ್ತಾನ್‌ ರಾಜಧಾನಿ ಸಮರಖಂಡ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಜಾಗತಿಕ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ, ನಿನ್ನೆ(ಸೆ.16‌-ಶುಕ್ರವಾರ) ನಡೆದ ಈ ಮಾತುಕತೆ ಭಾರೀ ಮಹತ್ವ ಪಡೆದುಕೊಂಡಿದೆ.

ಮಾತುಕತೆ ಆರಂಭವಾಗುತ್ತಿದ್ದಂತೇ ಪುಟಿನ್‌ ಅವರು ಪ್ರಧಾನಿ ಮೋದಿ ಅವರ ಜಾಗತಿಕ ಪಾತ್ರವನ್ನು ಕೊಂಡಾಡಿದರು. ಅಲ್ಲದೇ ಪ್ರಧಾನಿ ಮೋದಿ ಅವರ ಜನ್ಮದಿನ(ಸೆ.17-ಶನಿವಾರ)ವನ್ನು ಉಲ್ಲೇಖಿಸಿದರು. ಆದರೆ ಪುಟಿನ್‌ ಅವರು ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಲಿಲ್ಲ.

ಮಾತುಕತೆ ವೇಳೆ ಪ್ರದಾನಿ ಮೋದಿ ಅವರ ಜನ್ಮದಿನದ ಬಗ್ಗೆ ಉಲ್ಲೇಖ ಮಾಡಿದ ಪುಟಿನ್‌, ನಾಳೆ ನನ್ನ ಆತ್ಮೀಯ ಗೆಳೆಯರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಎಂಬುದು ನನಗೆ ಗೊತ್ತಿದೆ. ಆದರೆ ರಷ್ಯಾದ ಸಂಪ್ರದಾಯದ ಪ್ರಕಾರ, ನಾವು ಎಂದಿಗೂ ಮುಂಚಿತವಾಗಿ ಶುಭಾಶಯ ತಿಳಿಸಲಾಗುವುದಿಲ್ಲ. ಹಾಗಾಗಿ ಈಗಲೇ ನಾನು ನಿಮಗೆ ಶುಭಾಶಯ ಕೋರಲು ಸಾಧ್ಯವಿಲ್ಲ ಎಂದು ಪುಟಿನ್‌ ಹೇಳಿದರು.

ಆದರೆ ನಿಮ್ಮ ಜನ್ಮದಿನದ ಬಗ್ಗೆ ನಮಗೆ ಮಾಹಿತಿ ಇದೆ. ನಾಳೆ ಮತ್ತೆ ನಾನು ನಿಮಗೆ ರಷ್ಯಾದ ಜನತೆಯ ಪರವಾಗಿ ಶುಭಾಶಯ ತಿಳಿಸುತ್ತೇನೆ ಎಂದು ಪುಟಿನ್‌ ನುಡಿದರು. ಇದಕ್ಕೆ ನಗುವಿನ ಮೂಲಕ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಪುಟಿನ್‌ ಅವರಿಗೆ ಧನ್ಯವಾದ ಅರ್ಪಿಸಿದರು.

ನಾನು ಈ ಅವಕಾಶವನ್ನು ಭಾರತಕ್ಕೆ ಶುಭ ಹಾರೈಸಲು ಬಳಸಿಕೊಳ್ಳುತ್ತೇನೆ. ಮೋದಿ ಅವರ ನಾಯಕತ್ವದಲ್ಲಿ ಭಾರತ-ರಷ್ಯಾ ನಡುವಿನ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧ ಐತಿಹಾಸಿಕ ಘಟ್ಟ ತಲುಪಿದೆ ಎಂದು ಪುಟಿನ್‌ ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತಕ್ಕೆ ಸಮೃದ್ಧಿಯನ್ನು ನಾವು ಬಯಸುತ್ತೇವೆ ಎಂದು ಪುಟಿನ್‌ ಹೇಳಿದರು.

ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಕಾರ್ಯತಂತ್ರದ ವಿಶೇಷ ಪಾಲುದಾರಿಕೆಯ ಸ್ವರೂಪವನ್ನು ಹೊಂದಿವೆ. ಉಭಯ ದೇಶಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ರಷ್ಯಾದ ಅಧ್ಯಕ್ಷ ಪ್ರತಿಪಾದಿಸಿದರು.

ಇನ್ನು ಪುಟಿನ್‌ ಅವರೊಂದಿಗಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷರೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದು ಬಣ್ಣಿಸಿದರು. ವ್ಯಾಪಾರ, ಇಂಧನ, ರಕ್ಷಣೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಲು ನಮಗೆ ಅವಕಾಶ ದೊರೆಯಿತು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ನಾವು ಇತರ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ರಷ್ಯಾ-ಭಾರತದ ನಡುವಿನ ಸಂಬಂಧ ಐತಿಹಾಸಿಕ ಘಟ್ಟ ತಲುಪಿದ್ದು, ನಮ್ಮ ನಡುವಿನ ಸಹಕಾರ ಜಾಗತಿಕ ಪರಿಣಾಮಗಳನ್ನು ಬೀರಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆ ವೇಳೆ ಉಕ್ರೇನ್‌ ಯುದ್ಧದ ಪ್ರಸ್ತಾಪ ಮಾಡಿರುವ ಪ್ರಧಾನಿ ಮೋದಿ, ಇದು ಯುದ್ಧದ ಸಮಯವಲ್ಲ ಎಂದು ಪುಟಿನ್‌ ಅವರಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಷ್ಯಾ ಅಧ್ಯಕ್ಷ, ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಇಂದು(ಸೆ.17-ಶನಿವಾರ) 72ನೇ ವಸಂತಕ್ಕೆ ಕಾಲಿರಿಸಿರುವ ಪ್ರಧಾನಿ ಮೋದಿ ಅವರಿಗೆ, ದೇಶದ ಮತ್ತು ಜಾಗತಿಕ ಗಣ್ಯರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಉಜ್ಬೇಕಿಸ್ತಾನ್‌ ರಾಜಧಾನಿ ಸಮರಖಂಡ್‌ಗೆ ಆಗಮಿಸಿರುವ ಪ್ರಧಾನಿ ಮೋದಿ, ಇಂದು ಭಾರತಕ್ಕೆ ಮರಳಲಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ