logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Election 2024: ಮಹಾಯುತಿ Vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ, ಸದ್ಯದ ರಾಜಕೀಯ ಚಿತ್ರಣ

Maharashtra election 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ, ಸದ್ಯದ ರಾಜಕೀಯ ಚಿತ್ರಣ

Umesh Kumar S HT Kannada

Nov 20, 2024 05:44 PM IST

google News

ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ ಇದ್ದು, ಸದ್ಯದ ರಾಜಕೀಯ ಚಿತ್ರಣದ ವಿವರ ಇಲ್ಲಿದೆ. ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನಾವಿಸ್‌, ಉದ್ಧವ್ ಠಾಕ್ರೆ, ಏಕನಾಥ ಶಿಂಧೆ ಅವರ ಫೋಟೋವನ್ನು ಸಾಂಕೇತಿಕವಾಗಿ ಬಳಸಲಾಗಿದೆ.

  • Maharashtra election 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ ಏರ್ಪಟ್ಟಿದೆ. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಗಳ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಮಹಾರಾಷ್ಟ್ರದ ರಾಜಕೀಯ ರಂಗ ಒಡೆದು ಚೂರು ಚೂರಾದ ಕನ್ನಡಿಯಂತಾಗಿದ್ದು, ಸದ್ಯದ ರಾಜಕೀಯ ಚಿತ್ರಣ ಹೀಗಿದೆ ನೋಡಿ.

ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ ಇದ್ದು, ಸದ್ಯದ ರಾಜಕೀಯ ಚಿತ್ರಣದ ವಿವರ ಇಲ್ಲಿದೆ. ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನಾವಿಸ್‌, ಉದ್ಧವ್ ಠಾಕ್ರೆ, ಏಕನಾಥ ಶಿಂಧೆ ಅವರ ಫೋಟೋವನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ ಇದ್ದು, ಸದ್ಯದ ರಾಜಕೀಯ ಚಿತ್ರಣದ ವಿವರ ಇಲ್ಲಿದೆ. ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನಾವಿಸ್‌, ಉದ್ಧವ್ ಠಾಕ್ರೆ, ಏಕನಾಥ ಶಿಂಧೆ ಅವರ ಫೋಟೋವನ್ನು ಸಾಂಕೇತಿಕವಾಗಿ ಬಳಸಲಾಗಿದೆ.

Maharashtra election 2024: ಮಹಾರಾಷ್ಟ್ರ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು, ಇಂದು (ನವೆಂಬರ್ 20) ಮತದಾನ ನಡೆಯುತ್ತಿದೆ. ನವೆಂಬರ್ 23 ರಂದು ಶನಿವಾರ ಫಲಿತಾಂಶ ಪ್ರಕಟವಾಗಲಿದ್ದು, ಜನಾದೇಶ ಯಾರ ಪರ - ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಪರವೋ ಅಥವಾ ಹಾಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಕಡೆಗೋ ಎಂಬುದು ಸ್ಪಷ್ಟವಾಗಲಿದೆ. ಮಹಾ ವಿಕಾಸ ಅಘಾಡಿಯ ಮಿತ್ರ ಪಕ್ಷಗಳಾದ ಶಿವ ಸೇನಾ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಎರಡು ಹೋಳಾಗಿ ಅದರಿಂದ ಬೇರ್ಪಟ್ಟ ಏಕನಾಥ ಶಿಂಧೆ ನೇತೃತ್ವದ ಶಿವ ಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಜತೆಗೆ ಕೈ ಜೋಡಿಸಿ ಮಹಾಯುತಿ ಮೈತ್ರಿ ಹೆಸರಿನಲ್ಲಿ ಆಡಳಿತ ನಡೆಸಿದೆ. ಎರಡು ಪ್ರಮುಖ ಪಕ್ಷಗಳು ವಿಭಜನೆಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಇಂದು ಸಂಜೆ ಮಹಾರಾಷ್ಟ್ರ ಎಕ್ಸಿಟ್ ಪೋಲ್ ಪ್ರಕಟವಾಗಲಿದ್ದು, ಅದಕ್ಕೂ ಮೊದಲು ಮಹಾರಾಷ್ಟ್ರದ ಸದ್ಯದ ರಾಜಕೀಯ ಚಿತ್ರಣದ ಕಡೆಗೆ ಒಂದು ನೋಟ ಹರಿಸುವುದು ಉಚಿತವೆನಿಸೀತು.

ಬಿಜೆಪಿ ನೇತೃತ್ವದ ಮಹಾಯುತಿ ಆಡಳಿತ, ಯೋಜನೆಗಳು ಮತ್ತು ಮತ ಧ್ರುವೀಕರಣ ಪ್ರಯತ್ನ

ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿ ಏಕನಾಥ ಶಿಂಧೆ ನೇತೃತ್ವದ ಶಿವ ಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪ್ರಮುಖ ಪಕ್ಷಗಳು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಟವಳೆ), ರಾಷ್ಟ್ರೀಯ ಸಮಾಜ ಪಕ್ಷ ಮತ್ತುಇತರೆ ಪಕ್ಷಗಳೂ ಈ ಮೈತ್ರಿಯಲ್ಲಿವೆ. 2014ರಲ್ಲಿ ಈ ಮೈತ್ರಿ ರಚನೆಯಾಗಿದೆ. 2022ರಿಂದ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಸರ್ಕಾರ ಆಡಳಿತ ನಡೆಸಿದೆ. ಈ ಬಾರಿ ಚುನಾವಣೆಯಲ್ಲಿ ಈ ಮೈತ್ರಿಯು ಮಜ್ಹಿ ಲಡ್ಕಿ ಬಾಹಿನ್‌ ಮುಂತಾದ ಮಹಿಳಾ ಅಭಿವೃದ್ಧಿ ಯೋಜನೆ ಮತ್ತು ಬಾಟೇಂಗೆ ತೋ ಕಾಟೇಂಗೆ, ಏಕ್ ಹೈ ತೋ ಸೇಫ್ ಹೆ ಎಂಬಿತ್ಯಾದಿ ಘೋ‍ಷಣೆಗಳ ಮೂಲಕ ಚುನಾವಣೆಯನ್ನು ಎದುರಿಸಿದೆ. ಆದಾಗ್ಯೂ, ಈ ಘೋಷಣೆಗಳು ಮತ ಧ್ರುವೀಕರಣದ ಪ್ರಯತ್ನ ಎಂಬ ಟೀಕೆಗಳಿಗೆ ಒಳಗಾಗಿದೆ.

ಅಜಿತ್ ಪವಾರ್ ಅವರು ಬಿಜೆಪಿಯ ಈ ಘೋಷಣೆಗಳಿಂದ ದೂರವಿದ್ದರೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅರ್ಥವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಇದು ಮೈತ್ರಿಕೂಟದೊಳಗೆ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಯಿತು. ಬಿಜೆಪಿ ತನ್ನ ಇತ್ತೀಚಿನ ಜಾಹೀರಾತು ಪ್ರಚಾರದಲ್ಲಿ, ಮಹಾ ವಿಕಾಸ ಅಘಾಡಿ ಮೇಲೆ ದಾಳಿ ಮಾಡಿದ್ದು, “ಕಾಂಗ್ರೆಸ್ ಬೇಡ” ಎಂಬ ಭಾವನೆ ಮತದಾರರಲ್ಲಿ ಮೂಡಿಸಲು ಪ್ರಯತ್ನಿಸಿದೆ. ಇದಕ್ಕಾಗಿ ಅದು, 26/11 ಮುಂಬೈ ದಾಳಿ ಮತ್ತು ಪಾಲ್ಘರ್ ಹತ್ಯೆಗಳಂತಹ ಹಿಂದಿನ ಘಟನೆಗಳನ್ನು ಎತ್ತಿ ತೋರಿಸಿತು.

ಮಹಾರಾಷ್ಟ್ರದ 288 ವಿಧಾನಸಭೆ ಸ್ಥಾನಗಳ ಪೈಕಿ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ 149, ಶಿವ ಸೇನಾ (ಶಿಂಧೆ) 81, ಎನ್‌ಸಿಪಿ (ಅಜಿತ್ ಪವಾರ್‌) 59 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಗೊಳ್ಳುವಿಕೆ ಕಡೆಗೆ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ

ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ, ಈ ಬಾರಿ ಪ್ರಚಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಪ್ರತಿಪಾದಿಸಿದೆ. ಈ ಮೈತ್ರಿಯಲ್ಲಿ ಶಿವ ಸೇನಾ (ಉದ್ಧವ್ ಬಾಳಾ ಸಾಹೇಬ್‌ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಸೇರಿಕೊಂಡಿವೆ. ಈ ಮೈತ್ರಿ ಕೂಟ ಬಿಜೆಪಿಯ ಮಹಾಯುತಿ ವಿರುದ್ಧ ಜಾತಿ ಆಧಾರಿತ ಜನಗಣತಿ, ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಾತ್ಮಕ ಮೌಲ್ಯಗಳ ವಿಚಾರ ಮುಂದಿಟ್ಟು ಎದುರಿಸಿದೆ. ಮಹಾ ವಿಕಾಸ್ ಅಘಾಡಿ ನಾಯಕರು ವಿಶೇಷವಾಗಿ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರು ಬಿಜೆಪಿ ನಾಯಕರ ವಾಕ್ಚಾತುರ್ಯವನ್ನು ಟೀಕಿಸಿದ್ದು, ಅವರದ್ದು “ಒಡೆದು ಆಳುವ ನೀತಿ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಶಿವ ಸೇನಾ ಮತ್ತು ಎನ್‌ಸಿಪಿ ಒಡೆದು ಹೋಳಾದ ಹಿನ್ನೆಲೆಯಲ್ಲಿ ಈ ಟೀಕೆ ವ್ಯಕ್ತವಾಗಿದೆ ಎಂದು ರಾಜಕೀಯ ಪರಿಣತರು ವ್ಯಾಖ್ಯಾನಿಸಿದ್ದಾರೆ. ಇದಲ್ಲದೆ, ಸರ್ಕಾರದ ನೀತಿಗಳಿಂದ ಅತೃಪ್ತರಾದ ಮತದಾರರ ಮನ ಒಲಿಸಿ ಮತ್ತೆ ಅಧಿಕಾರ ಗದ್ದುಗೆ ಏರುವ ಪ್ರಯತ್ನವನ್ನು ಪ್ರಚಾರದ ಮೂಲಕ ಮಾಡಿದ್ದರು.

ಮಹಾರಾಷ್ಟ್ರದ 288 ವಿಧಾನಸಭೆ ಸ್ಥಾನಗಳ ಪೈಕಿ ಮಹಾ ವಿಕಾಸ್ ಅಘಾಡಿ ಮೈತ್ರಿಯ ಕಾಂಗ್ರೆಸ್ ಪಕ್ಷ 101 ಸ್ಥಾನಗಳಲ್ಲಿ, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

ಮಹಾರಾಷ್ಟ್ರ ಚುನಾವಣೆ: ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು; ವೈವಿಧ್ಯಮಯ ಪ್ರಾತಿನಿಧ್ಯ

ಮಹಾರಾಷ್ಟ್ರ ಚುನಾವಣೆ ಗಮನಿಸಿದರೆ, ಮಹಾ ಮೈತ್ರಿಗಳಷ್ಟೇ ಅಲ್ಲ, ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಕಣದಲ್ಲಿರುವ ಸಣ್ಣ ಪಕ್ಷಗಳಲ್ಲಿ ಸೇರಿವೆ. ಬಿಎಸ್‌ಪಿ 237 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಎಐಎಂಐಎಂ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ವರ್ಷ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 28 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ. 2,086 ಸ್ವತಂತ್ರರು ಸೇರಿದಂತೆ 4,136 ವ್ಯಕ್ತಿಗಳು ಸ್ಪರ್ಧಿಸಿದ್ದಾರೆ. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಗಳ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ಧಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ