Border Dispute: ಗಡಿ ವಿವಾದದ ನಡುವೆಯೇ ಕರ್ನಾಟಕದ ಗ್ರಾಮಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ
Apr 05, 2023 09:01 AM IST
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
- ಉಭಯ ರಾಜ್ಯಗಳ ಗಡಿ ವಿವಾದದ ನಡುವೆ ಮಹಾರಾಷ್ಟ್ರ ಸರ್ಕಾರ ಮರಾಠಿ ಮಾತನಾಡುವ ಕರ್ನಾಟಕ ಗಡಿ ಪ್ರದೇಶದ 865 ಗ್ರಾಮಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಮುಂಬೈ (ಮಹಾರಾಷ್ಟ್ರ): ಉಭಯ ರಾಜ್ಯಗಳ ಗಡಿ ವಿವಾದದ ನಡುವೆ ಮಹಾರಾಷ್ಟ್ರ ಸರ್ಕಾರ ಮರಾಠಿ ಮಾತನಾಡುವ ಕರ್ನಾಟಕ ಗಡಿ ಪ್ರದೇಶದ 865 ಗ್ರಾಮಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕದ ಗಡಿ ಗ್ರಾಮಗಳಲ್ಲಿ ತನ್ನ ಆರೋಗ್ಯ ವಿಮಾ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕರ್ನಾಟಕದ ಪ್ರತಿಪಕ್ಷಗಳ ನಾಯಕರೂ ಇದರ ವಿರುದ್ಧ ದನಿ ಎತ್ತಿದ್ದರು. ಆದರೆ ತೀವ್ರ ವಿರೋಧದ ನಡುವೆಯೂ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಈ ಆದೇಶ ಹೊರಡಿಸಿದೆ.
ಆರೋಗ್ಯ ವಿಮಾ ಯೋಜನೆ ಜಾರಿ ಮಾಡಲು ಕಳೆದ ತಿಂಗಳೇ ನಿರ್ಧರಿಸಿದ್ದ ಮಹಾರಾಷ್ಟ್ರ ಸರ್ಕಾರ, ಈ ಕುರಿತು ಸೋಮವಾರ (ಏ. 3) ನಿರ್ಣಯ ಹೊರಡಿಸಿತ್ತು. ಬೆಳಗಾವಿ, ಕಾರವಾರ, ಕಲಬುರಗಿ ಮತ್ತು ಬೀದರ್‌ನ 12 ತಹಸಿಲ್‌ಗಳ 865 ಗ್ರಾಮಗಳನ್ನು ‘ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆ’ಯಡಿ ಸೇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದ ಪ್ರಕಾರ, ಈ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು ಮಹಾರಾಷ್ಟ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ 996 ರೀತಿಯ ಚಿಕಿತ್ಸೆಗಳಿಗೆ ವರ್ಷಕ್ಕೆ 1.50 ಲಕ್ಷ ರೂ.ವರೆಗೆ ವೈದ್ಯಕೀಯ ವಿಮೆ ಪಡೆಯಲಿವೆ. ಇದು 34 ವಿವಿಧ ರೀತಿಯ ವೈದ್ಯಕೀಯ ಪರಿಣಿತ ಸಲಹಾ ಸಂಸ್ಥೆಗಳನ್ನು ಸಹ ಒಳಗೊಂಡಿದೆ ಎಂದು ಸರ್ಕಾರದ ನಿರ್ಣಯ ಹೇಳಿದೆ.
ಈಗಾಗಲೇ ಅಂತ್ಯೋದಯ ಆಹಾರ ಯೋಜನೆಯ ಫಲಾನುಭವಿಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಬರುವ ಆದ್ಯತಾ ಗುಂಪಿನ ಕುಟುಂಬಗಳು ಮತ್ತು ಅನ್ನಪೂರ್ಣ ಪಡಿತರ ಚೀಟಿ ಹೊಂದಿರುವವರು ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗಡಿ ವಿವಾದ
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಇಂದು-ನಿನ್ನೆಯದಲ್ಲ. 1956ರಲ್ಲೇ ಪ್ರಾರಂಭವಾಗಿತ್ತು. ಬಹಳ ಹಿಂದಿನಿಂದಲೂ ಮರಾಠಿ ಮಾತನಾಡುವ ಜನರನ್ನು ಹೊಂದಿರುವ ಕರ್ನಾಟಕದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಪ್ರದೇಶಗಳು ತನ್ನದೆಂದು ಹೇಳಿಕೊಂಡು ಬರುತ್ತಿದೆ. ಆದರೆ, 1956ರ ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಪ್ರಕಾರ ಈ ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದಾಗಿದೆ. 1956ರ ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇನ್ನೂ ಈ ವಿವಾದ ಸುಪ್ರೀಂ ಅಂಗಳದಲ್ಲಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕಕ್ಕೆ ಸೇರಲು ನಿರ್ಧರಿಸಿವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ತಿಂಗಳ ಹಿಂದೆ ಹೇಳಿಕೊಂಡ ನಂತರ ದಶಕಗಳಷ್ಟು ಹಳೆಯದಾದ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯು ಶಿವಸೇನೆಯ ಶಿಂಧೆ ನೇತೃತ್ವದ ಬಣದೊಂದಿಗೆ ಮೈತ್ರಿ ಹೊಂದಿದೆ.