Manik Saha: ಸತತ 2ನೇ ಅವಧಿಗೆ ತ್ರಿಪುರಾ ಸಿಎಂ ಆಗಿ ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ
Mar 08, 2023 12:59 PM IST
ತ್ರಿಪುರಾ ಸಿಎಂ ಆಗಿ ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ
- ಬಿಜೆಪಿ ನಾಯಕ ಮಾಣಿಕ್ ಸಹಾ ಅವರು ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಅಗರ್ತಲಾ (ತ್ರಿಪುರ): ಬಿಜೆಪಿ ನಾಯಕ ಮಾಣಿಕ್ ಸಹಾ ಅವರು ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸಿಎಂ ಮಾಣಿಕ್ ಸಹಾ ಜೊತೆ ಆರ್‌ಎಲ್ ನಾಥ್, ಪ್ರಂಜಿತ್ ಸಿಂಗ್ ರಾಯ್, ಸುಶ್ರೀ ಸಂತಾನಾ ಚಕ್ಮಾ, ಸುಶಾಂತ್ ಚೌಧರಿ, ಟಿಂಕು ರಾಯ್, ಬಿಕಾಶ್ ದೆಬ್ಬರ್ಮಾ, ಸುಧಾಂಶು ದಾಸ್ ಮತ್ತು ಸುಕ್ಲಾ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಉಪಸ್ಥಿತರಿದ್ದರು.
ಬಿಜೆಪಿ ಶಾಸಕಿ ಪ್ರತಿಮಾ ಭೂಮಿಕ್, ರಾಜ್ಯಸಭಾ ಸಂಸದ ಬಿಪ್ಲಬ್ ದೇಬ್, ತ್ರಿಪುರಾ ಉಸ್ತುವಾರಿ ಸಂಬಿತ್ ಪಾತ್ರ, ಮಹೇಶ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಲ್ಲಿನ ಶಸ್ತ್ರಚಿಕಿತ್ಸಕರಾಗಿದ್ದ ಮಾಣಿಕ್ ಸಹಾ ಅವರು 2016 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರನ್ನು 2020 ರಲ್ಲಿ ರಾಜ್ಯದ ಬಿಜೆಪಿ ಮುಖ್ಯಸ್ಥರನ್ನಾಗಿ ಮಾಡಲಾಯಿತು ಮತ್ತು ಮಾರ್ಚ್ 2022 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.
ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ್ದ ಸಹಾ, ಕಳೆದ ವರ್ಷ ಬಿಪ್ಲಬ್ ಕುಮಾರ್ ದೇಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವರೆಗೂ ಸಂಸದರಾಗಿದ್ದರು. ಬಳಿಕ ತ್ರಿಪುರಾ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಈಶಾನ್ಯ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸೋಮವಾರ ನಿಯೋಜಿತ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಿದ್ದರು. ಅಂದೇ ಹೊಸದಾಗಿ ಆಯ್ಕೆಯಾದ ಎಲ್ಲಾ ಬಿಜೆಪಿ ಶಾಸಕರ ಸಾಮಾನ್ಯ ಸಭೆ ನಡೆದಿದ್ದು, ಅವರು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಣಿಕ್ ಸಹಾ ಅವರ ಹೆಸರನ್ನು ಸರ್ವಾನುಮತದಿಂದ ಪ್ರಸ್ತಾಪಿಸಿದರು.
"ನನ್ನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾವು 'ಉನ್ನತ ತ್ರಿಪುರ, ಶ್ರೇಷ್ಠ ತ್ರಿಪುರ'ವನ್ನು ನಿರ್ಮಿಸಲು ಮತ್ತು ಎಲ್ಲಾ ವರ್ಗಗಳ ಜನರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಸಭೆಯ ನಂತರ ಸಹಾ ಟ್ವೀಟ್ ಮಾಡಿದ್ದರು.
ಮಾಣಿಕ್ ಸಹಾ ಫೆಬ್ರವರಿ 3 ರಂದು ಅಗರ್ತಲಾದ ರಾಜಭವನದಲ್ಲಿ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರಿಗೆ ರಾಜೀನಾಮೆ ಸಲ್ಲಿಸಿದರು. ಆದರೆ ಹೊಸ ಸರ್ಕಾರ ರಚೆನೆಯಾಗುವ ವರೆಗೆ ಸಿಎಂ ಆಗಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಿದ್ದರು.
ಫೆಬ್ರವರಿ 16 ರಂದು ತ್ರಿಪುರಾದ 60 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆದಿತ್ತು. 20 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 259 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ–ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಮೈತ್ರಿಕೂಟ, ಭಾರತೀಯ ಕಮ್ಯೂನಿಸ್ಟ್ ಪಕ್ಷ -ಮಾರ್ಕ್ವಾದ (ಸಿಪಿಐ-ಎಂ)–ಕಾಂಗ್ರೆಸ್ ಮೈತ್ರಿಕೂಟ ಮತ್ತು ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ರಾಜ್ಯದ ಹೊಸ ಪ್ರಾದೇಶಿಕ ಪಕ್ಷವಾದ ಟಿಪ್ರಮೋಥಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಮರಳಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಬಹುಮತ 31 ಆಗಿತ್ತು. ಹಾಲಿ ಮುಖ್ಯಮಂತ್ರಿ ಸಹಾ ಅವರು ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ಅವರನ್ನು 1,257 ಮತಗಳ ಅಂತರದಿಂದ ಸೋಲಿಸಿದರು.
ಟಿಪ್ರಮೋಥಾ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರಯತ್ನದಲ್ಲಿ ಈ ಬಾರಿ ಈಶಾನ್ಯದಲ್ಲಿ ಕೇರಳದಲ್ಲಿ ಪ್ರತಿಸ್ಪರ್ಧಿಗಳಾದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಒಗ್ಗೂಡಿದವು. ಆದರೆ ಬಹುಮತ ಪಡೆಯುವಲ್ಲಿ ವಿಫಲವಾದವು. ಸಿಪಿಐ(ಎಂ) 11 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) ಒಂದು ಸ್ಥಾನವನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ.
2018 ಕ್ಕಿಂತ ಮೊದಲು ತ್ರಿಪುರಾದಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಐಪಿಎಫ್‌ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತು ಮತ್ತು 1978 ರಿಂದ 35 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷ ಸಿಪಿಐ(ಎಂ) ಅನ್ನು ಹೊರಹಾಕಿತ್ತು. ಮುಖ್ಯಮಂತ್ರಿಯಾಗಿ ಸಿಪಿಐ(ಎಂ)ನ ಮಾಣಿಕ್ ಸರ್ಕಾರ್ ಅವರ 20 ವರ್ಷಗಳ ಸುದೀರ್ಘ ಅಧಿಕಾರ ಕೊನೆಗೊಂಡಿತ್ತು.
ವಿಭಾಗ