Ganeshotsav2023: ಭಾರತದ ಶ್ರೀಮಂತ ಮುಂಬೈ ಜಿಎಸ್‌ಬಿ ಗಣೇಶ; ಚಿನ್ನ, ಬೆಳ್ಳಿ ಆಭರಣಗಳ ಅಲಂಕಾರವೇ ವಿಶೇಷ
Sep 19, 2023 06:37 AM IST
ಮುಂಬೈನಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀಮಂತ ಗಣೇಶ.
- Richest Public Ganesha ಮುಂಬೈನ ಪೂರ್ವ ಭಾಗದಲ್ಲಿರುವ ಜಿಎಸ್‌ಬಿ ಸೇವಾ ಮಂಡಲ ( GSB Seva Mandal) ಗಣೇಶ ಭಾರತದ ಅತ್ಯಂತ ಶ್ರೀಮಂತ ಗಣೇಶ. ಚಿನ್ನ, ಬೆಳ್ಳಿ ಆಭರಣಗಳಿಂದ ಅಲಂಕೃತವಾದ ಗಣೇಶ ಗಮನ ಸೆಳೆಯುತ್ತಾನೆ. ಈ ಬಾರಿ ಇನ್ನಷ್ಟು ವಿಶೇಷಗಳೊಂದಿಗೆ ಮಂಡಲ ಗಣೇಶನನ್ನು ಅಲಂಕರಿಸಿದೆ.
ಮುಂಬೈ: ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವವರು ವಿಶೇಷ ಅಲಂಕಾರ ಮಾಡಲು ಎಷ್ಟು ಖರ್ಚು ಮಾಡಬಹುದು. ಅದು ಸಾವಿರ ಅಥವಾ ಲಕ್ಷಗಳಲ್ಲಿ ಇದ್ದರೆ ಹೆಚ್ಚು.
ಆದರೆ ಮುಂಬೈನ ಈ ಗಣೇಶನ ಅಲಂಕಾರಕ್ಕೆ ಕೋಟಿಗಟ್ಟಲೇ ವೆಚ್ಚ ಮಾಡಲಾಗುತ್ತದೆ. ಅದೂ ಭರ್ಜರಿ ಬಂಗಾರ, ಬೆಳ್ಳಿಯ ಆಭರಣಗಳಿಂದ ಅಲಂಕರಿಸುವುದು ಈ ಗಣೇಶನ ವಿಶೇಷ. ಭಾರತದ ಅತ್ಯಂತ ಶ್ರೀಮಂತ ಗಣೇಶ ಎನ್ನುವ ಹೆಸರು ಪಡೆದಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಗಣಪತಿ ಈ ಬಾರಿಯೂ ಕೋಟಿಯ ಲೆಕ್ಕದಲ್ಲಿಯೇ ಇದ್ದಾನೆ.
ಮುಂಬೈನ ಪೂರ್ವ ಭಾಗದ ಕಿಂಗ್ಸ್ ವೃತ್ತದಲ್ಲಿ 69 ವರ್ಷಗಳಿಂದ ಪ್ರತಿಷ್ಠಾಪನೆಗೊಳ್ಳುತ್ತಾ ಬಂದಿರುವ ಜಿಎಸ್‌ಬಿ ಸೇವಾ ಮಂಡಲದ ಈ ಗಣಪತಿಗೆ ಅಲಂಕಾರವೂ ಭೂಷಣ. ಗೌಡ ಸಾರಸ್ವತ ಬ್ರಾಹ್ಮಣ ಮಂಡಲದ ಸದಸ್ಯರು ಇದನ್ನು ವರ್ಷದಿಂದ ವರ್ಷಕ್ಕೆ ವಿಭಿನ್ನ ಅಲಂಕಾರದ ಮೂಲಕ ಗಮನ ಸೆಳಯುತ್ತಲೇ ಬಂದಿದ್ದಾರೆ. ಗಣೇಶನಿಗೆ ಚಿನ್ನದ ಹಾಗೂ ಬೆಳ್ಳಿಯ ಸಹಿತ ಬಗೆಬಗೆಯ ಆಭರಣಗಳಿಂದ ವಿಭಿನ್ನವಾಗಿ ಅಲಂಕರಿಸಿ ಹಬ್ಬವನ್ನು ಆಚರಿಸುತ್ತಾರೆ.
ಈ ಬಾರಿ 66.5 ಕೆಜಿ ಬಂಗಾರ ಹಾಗೂ 295 ಕೆ.ಜಿ ಬೆಳ್ಳಿ ಆಭರಣಗಳನ್ನೂ ಈ ಬಾರಿ ಬಳಕೆ ಮಾಡಲಾಗಿದೆ. ಇದರೊಟ್ಟಿಗೆ ಇನ್ನೂ ಕೆಲವು ಬೆಲೆಬಾಳುವ ಅಲಂಕಾರಿಕ ವಸ್ತುಗಳೂ ಇಲ್ಲಿವೆ.
ಜಿಎಸ್‌ಬಿ ಸೇವಾ ಮಂಡಲವು ಈ ಬಾರಿ ಗಣೇಶನ ಆಭರಣಗಳೂ ಸೇರಿದಂತೆ ಇಡೀ ಪೆಂಡಾಲ್ ಮೇಲೆ 360.40 ಕೋಟಿ ರೂ.ಗಳ ವಿಮೆಯನ್ನು ಮಾಡಿಸಿದೆ. ಹಿಂದಿನ ವರ್ಷ ಇದೇ ಗಣೇಶನಿಗೆ 316.4 ಕೋಟಿ ರೂ.ಗಳ ವಿಮೆಯನ್ನು ಮಾಡಿಸಲಾಗಿತ್ತು. ಇದರಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಜತೆಗೆ ಪೆಂಡಾಲ್, ಸ್ವಯಂಸೇವಕರು, ಅರ್ಚಕರು, ಅಡುಗೆಯವರು, ಚಪ್ಪಲಿ ಅಂಗಡಿ ಕೆಲಸಗಾರರು, ಪಾರ್ಕಿಂಗ್ ಕೆಲಸದವರು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಇದಲ್ಲದೇ ಗಣೇಶನ ಹಬ್ಬದಲ್ಲಿ ವಿಶೇಷವಾಗಿ ಸುಡಲಾಗುವ ಪಟಾಕಿ ಅನಾಹುತದ ವಿಮೆಯನ್ನೂ ಮಾಡಿಸಿಕೊಳ್ಳಲಾಗಿದೆ.
ಹತ್ತು ದಿನಗಳ ಕಾಲ ಇರುವ ಜಿಎಸ್‌ಬಿ ಸೇವಾ ಮಂಡಲದ ಗಣೇಶ ಮುಂಬೈನ ವಿಶೇಷ ಆಕರ್ಷಣೆ, ವಿಭಿನ್ನ ಆಭರಣಗಳ ಮೂಲಕ ವಿಶಾಲ ಗಣೇಶನನ್ನು ಅಲಂಕರಿಸಲಾಗುತ್ತದೆ. ಹಲವು ವರ್ಷದಿಂದ ವಿಭಿನ್ನವಾಗಿ ಅಲಂಕಾರ ಮಾಡುತ್ತಾ ಬರಲಾಗುತ್ತಿದೆ. ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಕಾರಣದಿಂದಲೇ ಇದು ಆಕರ್ಷಕ ಹಾಗೂ ಶ್ರೀಮಂತ ಗಣೇಶ ಎಂದೇ ಮುಂಬೈನಲ್ಲಿ ಖ್ಯಾತಿ ಪಡೆದಿದೆ.
ಈ ಬಾರಿ ಗಣೇಶನಿಗೆ ಜನರ ಮುಖ ಗುರುತಿಸುವ ವಿಶೇಷ ಕ್ಯಾಮರಾಗಳನ್ನು(facial recognition camera) ಅಳವಡಿಸಲಾಗಿದೆ. ಸಂಚಾರ ಪೊಲೀಸರು ಬಳಸುವ ಮಾದರಿಯ ಕ್ಯಾಮರಾಗಳಿವು. ಅಂದರೆ ಗಣೇಶನೇ ತನ್ನ ದರ್ಶನಕ್ಕೆ ಬರುವ ಭಕ್ತರ ಮೇಲೆ ವಿಚಕ್ಷಣೆ ಇಡಲಿದ್ದಾನೆ. ಭದ್ರತೆ ಕಾರಣದಿಂದ ಸಿಸಿ ಕ್ಯಾಮರಾ ಮೊದಲಿನಿಂದ ಅಳವಡಿಸಿದರೂ ಮೊದಲ ಬಾರಿಗೆ ಈ ರೀತಿಯ ಕ್ಯಾಮರಾಗಳನ್ನು ಬಳಸಲಾಗುತ್ತಿದೆ ಎನ್ನುವುದು ಸಂಘಟಕರ ವಿವರಣೆ.
ಇದರೊಟ್ಟಿಗೆ ಭಕ್ತರಿಗಾಗಿ ಕ್ಯೂಆರ್ ಕೋಡ್, ಡಿಜಿಟಿಲ್ ಲೈವ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅವರು ಮನೆಯಲ್ಲಿಯೇ ಕುಳಿತು ಪ್ರತಿನಿತ್ಯದ ಪೂಜೆ, ಚಟುವಟಿಕೆಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ನಮ್ಮದು ಅತ್ಯಂತ ಶಿಸ್ತಿನ ಗಣೇಶ. ಅಲಂಕಾರಕ್ಕಾಗಿ ಸಮಿತಿ ಕೋಟಿಗಟ್ಟಲೇ ಖರ್ಚು ಮಾಡುತ್ತದೆ. ಇಲ್ಲಿನ ಕೆಲಸ ಮಾಡುವ ಪ್ರತಿಯೊಬ್ಬರೂ ಸೇರಿ ಎಲ್ಲರಿಗೂ ವಿಮೆ ರಕ್ಷಣೆ ನೀಡುತ್ತಾ ಬಂದಿದ್ದೇವೆ. ಆಭರಣ, ಪೆಂಡಾಲ್ ಸೇರಿ ವಿಮೆ ಸೌಲಭ್ಯ ಕಲ್ಪಿಸಿದ್ದೇವೆ. ಈ ಬಾರಿ ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣಗೊಂಡ ಕಾರಣಕ್ಕೆ ವಿಶೇಷ ಹೋಮವನ್ನು ಹಮ್ಮಿಕೊಂಡಿದ್ದೇವೆ ಎನ್ನುವುದು ಜಿಎಸ್‌ಬಿ ಸೇವಾ ಮಂಡಲಿಯ ವಕ್ತಾರರ ಹೇಳಿಕೆ.