Narendra Modi Profile: ಪ್ರಧಾನಿಯಾಗಿ 9 ವರ್ಷ; ನರೇಂದ್ರ ಮೋದಿ ಅವರ ಸಾಧನೆ, ಬದುಕಿನ ಕುರಿತ ಕಿರು ಚಿತ್ರಣ
May 27, 2023 10:14 AM IST
ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)
Narendra Modi Profile: ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿ ಇದೇ ಮೇ 30 ಕ್ಕೆ 9 ವರ್ಷ ಪೂರ್ಣವಾಗುತ್ತಿದೆ. ದೇಶದ ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರ ಬದುಕಿನ ಕಡೆಗೊಂದು ಇಣುಕುನೋಟ ಬೀರಿ, ಅವರ ಸಾಧನೆ, ಬದುಕಿನ ಕಿರುಚಿತ್ರಣ ಪಡೆಯುವುದಕ್ಕೆ ಈ ಸನ್ನಿವೇಶ ಒಂದು ನಿಮಿತ್ತ.
ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರಕ್ಕೆ ಒಂಬತ್ತು ವರ್ಷ ಪೂರ್ತಿಯಾಗಿದೆ. ಮುಂದಿನ ವರ್ಷ ಮತ್ತೆ ಲೋಕಸಭೆ ಚುನಾವಣೆ (Loka Sabha Election) ಇದ್ದು, ಈಗಾಗಲೇ ಪಕ್ಷಗಳು ಇದಕ್ಕೆ ಸಿದ್ಧತೆ ಆರಂಭಿಸಿವೆ. ಈ ಹಂತದಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಕೂಡ ಒಂಬತ್ತು ವರ್ಷ ಪೂರ್ಣವಾಗಿದೆ. ದೇಶದ ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರ ಬದುಕಿನ ಕಡೆಗೊಂದು ಇಣುಕುನೋಟ ಬೀರಿ, ಅವರ ಸಾಧನೆ, ಬದುಕಿನ ಕಿರುಚಿತ್ರಣ ಪಡೆಯುವುದಕ್ಕೆ ಈ ಸನ್ನಿವೇಶ ಒಂದು ನಿಮಿತ್ತ.
ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿ. ಅವರು 2014ರಲ್ಲಿ ಮೊದಲ ಸಲ ಪ್ರಧಾನಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರು 2019ರ ಮೇ 30 ರಂದು ಎರಡನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಭಾಜನರು ಅವರು. ಇದಕ್ಕೂ ಮೊದಲು 2001ರ ಅಕ್ಟೋಬರ್‌ನಿಂದ 2014ರ ಮೇ ತಿಂಗಳ ತನಕ ಗುಜರಾತ್‌ನ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.
ಅವರು ಪ್ರಧಾನಮಂತ್ರಿಯಾದಲ್ಲಿಂದೀಚೆಗೆ ಅವರ ರಾಜಕೀಯ ಬದುಕು, ಜಾಗತಿಕವಾಗಿ ಬದಲಾದ ಭಾರತದ ಚಿತ್ರಣ ಎಲ್ಲವೂ ಪದೇಪದೆ ಚರ್ಚೆಗೆ ಬರುವಂಥದ್ದು. ಅದೇ ರೀತಿ ಕಾಂಗ್ರೆಸ್ ಮತ್ತು ಇತರೆ ವಿಪಕ್ಷದವರ ಟೀಕೆಗಳನ್ನೂ ಸದಾ ಎದುರಿಸುತ್ತಲೇ ಬಂದವರು ಪ್ರಧಾನಿ ಮೋದಿ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇದೆ. ಈ ಹಂತದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಕರ್ನಾಟಕದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆಯಲ್ಲೂ ಗೆಲ್ಲುವ ಭರವಸೆಯೊಂದಿಗೆ ಮುಂದಡಿ ಇರಿಸಿದೆ. ಇಲ್ಲಿ ನಾಯಕತ್ವದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಸಂಸತ್ತಿನ 2014 ಮತ್ತು 2019 ರ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ. ಎರಡೂ ಸಂದರ್ಭಗಳಲ್ಲಿ ಸಂಪೂರ್ಣ ಬಹುಮತವನ್ನು ಪಕ್ಷ ಗಳಿಸಿದೆ. 1984ರ ಚುನಾವಣೆಯಲ್ಲಿ ಕೊನೆಯ ಬಾರಿಗೆ ರಾಜಕೀಯ ಪಕ್ಷವೊಂದು ಸಂಪೂರ್ಣ ಬಹುಮತ ಪಡೆದಿತ್ತು ಎಂಬುದನ್ನು ಇಲ್ಲಿ ನೆನಪಿಸಬಹುದು.
ನರೇಂದ್ರ ಮೋದಿ ಅವರ ರಾಜಕೀಯ ಬದುಕು
ನರೇಂದ್ರ ಮೋದಿ ಅವರ ರಾಜಕೀಯ ಬದುಕು ಗಮನಿಸಿದರೆ ಅದು ಆರಂಭವಾಗಿದ್ದು 1990ರ ದಶಕದಿಂದ. ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಿತ್ತು. ಜನರಲ್ಲಿ ಸರ್ಕಾರ ವಿರೋಧಿ ಧೋರಣೆ ಜಾಗೃತವಾಗಿತ್ತು. ಪಕ್ಷದ ರಾಜಕೀಯ ನಾಯಕತ್ವಕ್ಕೆ ಪೂರಕವಾದ ಪ್ರಬಲ ಸಂಘಟನೆಯನ್ನು ನಿರ್ಮಿಸುವುದು ಅಂದು ನರೇಂದ್ರ ಮೋದಿ ಅವರ ಎದುರಿಗಿದ್ದ ಪ್ರಮುಖ ಸವಾಲು. ದಶಕದ ಕಾಂಗ್ರೆಸ್ ಆಳ್ವಿಕೆ ಕೊನೆಗೊಳಿಸಿದ ಜನ, ಜನತಾದಳಕ್ಕೆ 70 ಸ್ಥಾನಗಳಲ್ಲಿ, ಬಿಜೆಪಿಗೆ 67 ಸ್ಥಾನಗಳಲ್ಲಿ ಗೆಲುವು ನೀಡಿದ್ದರು. ಹಾಗೆ ಪಕ್ಷ ಅಲ್ಲಿ ಪ್ರವರ್ಧಮಾನಕ್ಕೆ ಬಂತು. ಮುಂದಿನ ಚುನಾವಣೆ 1995ರಲ್ಲಿ ಬಿಜೆಪಿಗೆ 182 ಸ್ಥಾನಗಳ ಪೈಕಿ 121ರಲ್ಲಿ ಗೆಲುವು ಸಿಕ್ಕಿತ್ತು. ನರೇಂದ್ರ ಮೋದಿ ಅವರು 2001ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾದರು. ಅಲ್ಲಿಂದಾಚೆಗೆ ಬಿಜೆಪಿ ಒಮ್ಮೆಯೂ ಅಲ್ಲಿ ಅಧಿಕಾರ ಕಳೆದುಕೊಂಡಿಲ್ಲ.
ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಗುಜರಾತ್ ಅನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಬಿಂಬಿಸಿತ್ತು. ಅಷ್ಟೇ ಅಲ್ಲ, ಮೊದಲ ಸಲ ಪ್ರಧಾನಮಂತ್ರಿ ಅಭ್ಯರ್ಥಿಯ ಹೆಸರನ್ನೂ ಅದು ಘೋಷಿಸಿತ್ತು. ನರೇಂದ್ರ ಮೋದಿ ನಾಯಕತ್ವವನ್ನು ಪಕ್ಷ ಸೃಷ್ಟಿಸಿತ್ತು. ಮೋದಿ ಹವಾ ಮೂಲಕ ಶುರುವಾದ ಬಿಜೆಪಿ ಅಧಿಕಾರ ಪ್ರಯಾಣ ಅನೇಕ ರಾಜ್ಯಗಳಲ್ಲೂ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿತು.
ಜಾಗತಿಕ ಮಟ್ಟದಲ್ಲೂ ನರೇಂದ್ರ ಮೋದಿ ನಾಯಕತ್ವ ತನ್ನದೇ ಛಾಪು ಮೂಡಿಸಿ ಮನ್ನಣೆ ಪಡೆಯಿತು. ಎರಡನೇ ಅವಧಿಯಲ್ಲಿ ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ನಡೆದಾಗ, ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ನರೇಂದ್ರ ಮೋದಿ, ಪ್ರಮುಖ ವಿಚಾರಗಳಲ್ಲಿ ಭಾರತವನ್ನು ನಿರ್ಣಾಯಕ ಸ್ಥಾನದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ.
ನರೇಂದ್ರ ಮೋದಿ ಬದುಕಿನ ಪಥ
ಜನನ - 1950 ಸೆಪ್ಟೆಂಬರ್ 17
ಹುಟ್ಟೂರು - ಗುಜರಾತ್‌ನ ವಡ್‌ನಗರ
ತಂದೆ - ದಾಮೋದರದಾಸ್ ಮೋದಿ
ತಾಯಿ- ಹೀರಾಬೆನ್
ಒಡಹುಟ್ಟಿದವರು -ನರೇಂದ್ರ ಮೋದಿ ಸೇರಿ 6 ಜನ.
ಶಿಕ್ಷಣ - ರಾಜಕೀಯ ಶಾಸ್ತ್ರ ಎಂ.ಎ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ
1987ರಲ್ಲಿ ಬಿಜೆಪಿ ಸೇರ್ಪಡೆ
1988-89ರಲ್ಲಿ ಬಿಜೆಪಿ ಗುಜರಾತ್‌ನ ಸಂಘಟನಾ ಕಾರ್ಯದರ್ಶಿ
1995ರಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ
2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ
2002ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಭರ್ಜರಿ ಗೆಲುವು (182 ಸ್ಥಾನಗಳ ಪೈಕಿ 127ರಲ್ಲಿ ಗೆಲುವು), ಮುಖ್ಯಮಂತ್ರಿಯಾಗಿ ಪುನರಾಯ್ಕೆ
2007ರ ಚುನಾವಣೆ - 117 ಸ್ಥಾನಗಳಲ್ಲಿ ಗೆಲುವು, ಮುಖ್ಯಮಂತ್ರಿಯಾಗಿ ಮುಂದುವರಿಕೆ
2012ರ ಚುನಾವಣೆ - 115 ಸ್ಥಾನಗಳಲ್ಲಿ ಗೆಲುವು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಕೆ
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, ಬಿಜೆಪಿ ಮತ್ತು ಮಿತ್ರಪಕ್ಷಗಳ ಸರ್ಕಾರ ರಚನೆ, ಬಿಜೆಪಿಗೆ ಸಿಕ್ಕಿತ್ತು ಸ್ಪಷ್ಟಬಹುಮತ
2019ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದ ಮೋದಿ, ಬಿಜೆಪಿಗೆ ಭರ್ಜರಿ ಬಹುಮತ
ವಿಭಾಗ