logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aravind Kejriwal: ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನಿವಾಸಕ್ಕೆ ಆಪ್‌ ಘೇರಾವ್‌, ಭಾರೀ ಭದ್ರತೆ, ರಾಜೀನಾಮೆಗೆ ಬಿಜೆಪಿ ಒತ್ತಡ

Aravind Kejriwal: ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನಿವಾಸಕ್ಕೆ ಆಪ್‌ ಘೇರಾವ್‌, ಭಾರೀ ಭದ್ರತೆ, ರಾಜೀನಾಮೆಗೆ ಬಿಜೆಪಿ ಒತ್ತಡ

Umesha Bhatta P H HT Kannada

Mar 26, 2024 12:30 PM IST

google News

ದೆಹಲಿಯಲ್ಲಿ ಪ್ರತಿಭಟಿಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    • ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ದೆಹಲಿಯಲ್ಲಿ ಆಪ್‌ ಪ್ರತಿಭಟನೆ ತೀವ್ರಗೊಂಡಿದೆ. ಬಿಜೆಪಿ ಕೂಡ ಕೇಜ್ರಿವಾಲ್‌ ರಾಜೀನಾಮೆ ಆಗ್ರಹಿಸಿ ಒತ್ತಡ ಹೇರಿದೆ.
ದೆಹಲಿಯಲ್ಲಿ ಪ್ರತಿಭಟಿಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ದೆಹಲಿಯಲ್ಲಿ ಪ್ರತಿಭಟಿಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾರಿ ನಿರ್ದೇಶನಾಲಯ( ED) ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನುತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯ ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಘೇರಾವ್ ಮುಂದಾಗಿದೆ. ಆಪ್‌ನ ಮುಖಂಡರು, ನೂರಾರು ಕಾರ್ಯಕರ್ತರು ಪ್ರಧಾನಿ ಅವರ ನಿವಾಸದತ್ತ ಧಾವಿಸಿ ಪ್ರತಿಭಟನೆಗೆ ಮುಂದಾಗಿರುವುದಿಂದ ಬಿಗುವಿನ ವಾತಾವರಣ ಕಂಡು ಬಂದಿದೆ. ಅಲ್ಲದೇ ಆಪ್‌ ಕಾರ್ಯಕರ್ತರು ಪಟೇಲ್‌ ಚೌಕ್‌ನಲ್ಲೂ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಆದಾಗ್ಯೂ, ಪ್ರತಿಭಟನಾ ಮೆರವಣಿಗೆ ಅಥವಾ ಆಂದೋಲನ ನಡೆಸಲು ಪಕ್ಷಕ್ಕೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಅರವಿಂದ ಕೇಜ್ರಿವಾಲ್‌ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರದಲ್ಲಿ ಮುಂದುವರೆಯಬಾರದು ಎಂದು ಬಿಜೆಪಿ ಒತ್ತಡ ಹೇರತೊಡಗಿದೆ.

ಆಪ್‌ ಘೇರಾವ್‌

ಅರವಿಂದ ಕೇಜ್ರಿವಾಲ್‌ ಅವರನ್ನು ಅಬಕಾರಿ ನೀತಿ ಹೆಸರಿನಲ್ಲಿ ಅನಗತ್ಯವಾಗಿ ಸಿಲುಕಿಸಿ ಬಂಧಿಸಲಾಗಿದೆ. ಅವರ ಪಾತ್ರವೇನೂ ಇದರಲ್ಲಿ ಇಲ್ಲ. ಇದರ ಹಿಂದೆ ರಾಜಕೀಯ ಅಡಗಿದೆ. ಲೋಕಸಭೆ ಚುನಾವಣೆಯಲ್ಲಿ ಆಪ್‌ ಪ್ರಭಾವ ತಗ್ಗಿಸಲು ಕೇಜ್ರಿವಾಲ್‌ ಬಂಧನವಾಗಿರುವ ಅನುಮಾನಗಳಿದ್ದು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಪ್‌ ಮುಖಂಡರು ಆಗ್ರಹಿಸಿದರು. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸಿದಾಗ ಅಲ್ಲಿ ಪೊಲೀಸರ ತಡೆದರು. ಆದರೂ ಅಲ್ಲಿಯೇ ಘೇರಾವ್‌ ಹಾಕಿ ಆಕ್ರೋಶವನ್ನು ಹೊರ ಹಾಕಿದರು.

ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಕ್ಕಾಗಿ ದೆಹಲಿಯ ಜನರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕಾರಣವಿಲ್ಲದೇ ನಾಯಕತ್ವವನ್ನು ತುಳಿಯಲು ಪ್ರಯತ್ನಿಸಿರುವುದಕ್ಕೆ ಇಡೀ ದೇಶದ ಜನರು ಕೋಪಗೊಂಡಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತವನ್ನು ಮುಂದೆ ಕೊಂಡೊಯ್ಯುವ ಏಕೈಕ ಗುರಿಯನ್ನು ಹೊಂದಿರುವ ನಾಯಕನನ್ನು (ಅರವಿಂದ್ ಕೇಜ್ರಿವಾಲ್) ಪ್ರಧಾನಿ ಮೋದಿ ಜೈಲಿಗೆ ಹಾಕಿದ್ದಾರೆ. ಪ್ರಧಾನಿಯವರು ಅರವಿಂದ್ ಕೇಜ್ರಿವಾಲ್ ಅವರನ್ನು ಎಷ್ಟು ದ್ವೇಷಿಸುತ್ತಾರೆ ಮತ್ತು ಅವರಿಗೆ ಹೆದರುತ್ತಾರೆ ಎನ್ನುವುದು ಬಂಧನ ಸಾಬೀತುಪಡಿಸಿದೆ ಎಂದು ಎಂದು ಎಎಪಿ ಮುಖಂಡ ದುರ್ಗೇಶ್ ಪಾಠಕ್ ಆರೋಪಿಸಿದರು.

ಈ ನಡುವೆ ಕೇಜ್ರಿವಾಲ್‌ ಅವರ ಬಂಧನಕ್ಕೆ ಖಂಡಿಸಿ ವಿರೋಧಪಕ್ಷಗಳ ಒಕ್ಕೂಟವೂ ಮಾರ್ಚ್‌ 31ರಂದು ಭಾರತದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ಅರವಿಂದ ಕೇಜ್ರಿವಾಲ್‌ ಅವರನ್ನು ಬಿಡುಗಡೆ ಮಾಡುವವರಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಪ್‌ ಹೇಳಿದೆ.

ಏತನ್ಮಧ್ಯೆ, ಎಎಪಿ ನಾಯಕರು ಸೋಮವಾರ ಹೋಳಿ ಆಚರಿಸಲಿಲ್ಲ. ಹೋಳಿ ಕೇವಲ ಹಬ್ಬವಲ್ಲ, ಆದರೆ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ, ಕ್ರೌರ್ಯದ ಮೇಲೆ ನ್ಯಾಯದ ಸಂಕೇತವಾಗಿದೆ. ಇಂದು, ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ನಾಯಕರೂ ಈ ದುಷ್ಟತನ, ಕ್ರೌರ್ಯ ಮತ್ತು ಅನ್ಯಾಯದ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿದ್ದಾರೆ. ಈ ವರ್ಷ, ನಾವು ಬಣ್ಣಗಳೊಂದಿಗೆ ಆಡಲಿಲ್ಲ, ನಾವು ಹೋಳಿ ಆಚರಿಸಲಿಲ್ಲ ಎಂದು ದೆಹಲಿ ಸಚಿವೆ ಅತಿಶಿ ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ.

ಭಾರೀ ಭದ್ರತೆ

ಆಪ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ನಿವಾಸದ ಸುತ್ತಲೂ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ದೆಹಲಿ ಪ್ರದೇಶದಲ್ಲಿ ಪೊಲೀಸರು ಹೆಚ್ಚುವರಿ ಗಸ್ತು ವಾಹನಗಳನ್ನು ಸಹ ನಿಯೋಜಿಸಲಾಗಿದೆ.. ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬೋರ್ಡಿಂಗ್ / ಡಿಬೋರ್ಡಿಂಗ್ಗೆ ಯಾವುದೇ ನಿರ್ಬಂಧವಿಲ್ಲ ಎಂದು ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ.

ದೆಹಲಿಯಲ್ಲಿ "ಸೆಕ್ಷನ್ 144 ಅನ್ನು ಈಗಾಗಲೇ ವಿಧಿಸಲಾಗಿದೆ. ಇಲ್ಲಿ ಪ್ರತಿಭಟಿಸಲು ಯಾರಿಗೂ ಅವಕಾಶವಿಲ್ಲ. ಆದ್ದರಿಂದ, ನಾವು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಇಲ್ಲಿ ಪ್ರತಿಭಟನೆ ನಡೆಸುವವರನ್ನು ನಾವು ಬಂಧಿಸುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದರು.

ಆದಾಗ್ಯೂ, ಭದ್ರತಾ ಕಾರಣಗಳಿಂದಾಗಿ, "ಲೋಕ ಕಲ್ಯಾಣ್ ಮಾರ್ಗ್ ಮೆಟ್ರೋ ನಿಲ್ದಾಣ, ಪಟೇಲ್ ಚೌಕ್ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 3 ಮತ್ತು ಕೇಂದ್ರ ಸಚಿವಾಲಯ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 5 ರಲ್ಲಿ ಪ್ರವೇಶ / ನಿರ್ಗಮನವನ್ನು ಮುಂದಿನ ಸೂಚನೆ ಬರುವವರೆಗೆ ಮುಚ್ಚಲಾಗುವುದು" ಎಂದು ದೆಹಲಿ ಮೆಟ್ರೋ ರೈಲು ನಿಗಮ ತಿಳಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ