New tax regime: 3.75 ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿನಾಯ್ತಿ ಇರುವವರಿಗೆ ಮಾತ್ರ ಹೊಸ ತೆರಿಗೆ ಪದ್ಧತಿ ಉತ್ತಮವಂತೆ! ತಜ್ಞರ ಅಭಿಪ್ರಾಯ
Feb 01, 2023 09:52 PM IST
3.75 ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿನಾಯ್ತಿ ಇರುವವರಿಗೆ ಮಾತ್ರ ಹೊಸ ತೆರಿಗೆ ಪದ್ಧತಿ ಉತ್ತಮವಂತೆ!
- ಮೊದಲ ನೋಟಕ್ಕೆ ಹೊಸ ತೆರಿಗೆ ಪದ್ಧತಿ ಹೆಚ್ಚು ಆಕರ್ಷಕವಾಗಿ ಕಾಣಿಸಬಹುದು. ಆದರೆ, ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ ವರ್ಷಕ್ಕೆ 3.75 ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇರುವವರಿಗೆ ಮಾತ್ರ ಹೊಸ ತೆರಿಗೆ ಪದ್ಧತಿ ಉತ್ತಮವಂತೆ.
ತೆರಿಗೆ ಪಾವತಿದಾರರು ಈಗ ಹೊಸತಾ ಹಳತಾ ಎಂಬ ಹೊಸ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಪರಿಚಯಿಸಿರುವುದರಿಂದ "ಯಾವುದು ಉತ್ತಮ?ʼʼ ಎಂಬ ಸಂದೇಹವು ತೆರಿಗೆ ಪಾವತಿದಾರರ ತಲೆ ತಿನ್ನುತ್ತಿರಬಹುದು.
ಮೊದಲ ನೋಟಕ್ಕೆ ಹೊಸ ತೆರಿಗೆ ಪದ್ಧತಿ ಹೆಚ್ಚು ಆಕರ್ಷಕವಾಗಿ ಕಾಣಿಸಬಹುದು. ಆದರೆ, ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ ವರ್ಷಕ್ಕೆ 3.75 ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇರುವವರಿಗೆ ಮಾತ್ರ ಹೊಸ ತೆರಿಗೆ ಪದ್ಧತಿ ಉತ್ತಮವಂತೆ. ಈ ರೀತಿ ತೆರಿಗೆ ವಿನಾಯಿತಿ ಇರುವವರಿಗೆ ಹಳೆಯ ತೆರಿಗೆ ಪದ್ಧತಿಗಿಂತ ಹೊಸ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ಪಾವತಿಸಬಹುದು ಎಂದು ಪಿಟಿಐ ಸುದ್ದಿಸಂಸ್ಥೆಯು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರ ಅಭಿಪ್ರಾಯವನ್ನು ಪಡೆದಿದೆ.
"ವಾರ್ಷಿಕ ಐ-ಟಿ ರಿಟರ್ನ್ಸ್ ಸಲ್ಲಿಸುವಾಗ 3.75 ಲಕ್ಷ ರೂ.ಗಿಂತ ಕಡಿಮೆ ಮೊತ್ತವನ್ನು ಕ್ಲೈಮ್ ಮಾಡುವ ತೆರಿಗೆದಾರರಿಗೆ ಬಜೆಟ್‌ನಲ್ಲಿ ಘೋಷಿಸಿದಂತೆ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಸಲಹೆ ನೀಡುತ್ತೇನೆ. ಅವರು ಕಡಿಮೆ ತೆರಿಗೆ ಪಾವತಿ ಮಾಡುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ" ಎಂದು ಅವರು ಹೇಳಿದ್ದಾರೆ.
ಹೊಸ ತೆರಿಗೆ ಪದ್ಧತಿಯಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿದ್ದಷ್ಟು ತೆರಿಗೆ ವಿನಾಯಿತಿ ಪ್ರಯೋಜನಗಳು ಇಲ್ಲ. ಅಂದರೆ, ಹಳೆ ತೆರಿಗೆ ಪದ್ಧತಿಯಲ್ಲಿ ಮನೆ ಬಾಡಿಗೆ, ಮಕ್ಕಳ ಫೀಸ್ ಇತ್ಯಾದಿಗಳನ್ನು ತೋರಿಸಿ ತೆರಿಗೆ ವಿನಾಯಿತಿ ಪಡೆಯುತ್ತೇವೆ. ಹೊಸ ತೆರಿಗೆ ಪದ್ಧತಿಯಲ್ಲಿ ಇಂತಹ ಕೆಲವು ತೆರಿಗೆ ವಿನಾಯಿತಿ ಆಯ್ಕೆಗಳು ಇವೆ. ಹಳೆಯ ತೆರಿಗೆ ಪದ್ಧತಿಯಲ್ಲಿದ್ದಷ್ಟು ಅವಕಾಶಗಳು ಇಲ್ಲ.
ಹೊಸ ತೆರಿಗೆ ಪದ್ಧತಿಯು ಏಳು ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ತೆರಿಗೆ ಪಾವತಿಯಿಂದ ಮುಕ್ತಗೊಳಿಸುತ್ತದೆ. ಆದರೆ, ಏಳು ಲಕ್ಷಕ್ಕಿಂತ ಒಂದು ರೂ. ಹೆಚ್ಚಾದರೂ ನೀವು ಅಧಿಕ ತೆರಿಗೆ ಪಾವತಿಸಬೇಕಾಗುತ್ತದೆ. ಎಲ್ಲಾದರೂ ನಿಮ್ಮ ಆದಾಯ ಏಳು ಲಕ್ಷ ರೂ.ಗಿಂತ ಹೆಚ್ಚಾದರೆ ನೀವು ಹೆಚ್ಚಿನ ತೆರಿಗೆ ಪಾವತಿಸಬೇಕಾಗಿರುತ್ತದೆ.
ಕಡಿಮೆ ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿಗೆ ಹೋಗುವಂತೆ ಈ ತೆರಿಗೆ ಪದ್ಧತಿ ಸೆಳೆಯಬಹುದು. ಆದರೆ, ಒಮ್ಮೆ ಹೊಸ ತೆರಿಗೆ ಪದ್ಧತಿಗೆ ಹೋದ ಬಳಿಕ ಮತ್ತೆ ಹಳೆಯ ಪದ್ಧತಿಗೆ ಬರುವ ಆಯ್ಕೆ ಇರುವುದಿಲ್ಲ. ಮುಂದಿನ ವರ್ಷಗಳಲ್ಲಿ ಎಲ್ಲರೂ ಹೊಸ ತೆರಿಗೆ ಪದ್ಧತಿಗೆ ಹೋಗುವುದು ಅನಿವಾರ್ಯವಾಗಬಹುದು.
ಮನೆ ಬಾಡಿಗೆ, ವಿಮೆ, ಮಕ್ಕಳ ಟ್ಯೂಷನ್ ಶುಲ್ಕ, ಗೃಹಸಾಲದ ಮೇಲಿನ ಬಡ್ಡಿ ಇತ್ಯಾದಿಗಳನ್ನು ತೋರಿಸಿ ಬಹುತೇಕರು 3.75 ಲಕ್ಷ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಅವರಿಗೆ ಹೊಸ ತೆರಿಗೆ ಪದ್ಧತಿ ಉಪಯುಕ್ತವಾಗಬಹುದು.
ಇನ್ನು ಮುಂದೆ ಆದಾಯ ತೆರಿಗೆ ಪಾವತಿ ಸಂದರ್ಭದಲ್ಲಿ ಹೊಸ ತೆರಿಗೆ ಪದ್ಧತಿಯು ಡಿಫಾಲ್ಟ್ ಆಗಿರಲಿದೆ. ಇದೇ ಸಂದರ್ಭದಲ್ಲಿ ಹಳೆಯ ತೆರಿಗೆ ಪದ್ಧತಿ ಆಯ್ಕೆ ಮಾಡುವ ಆಯ್ಕೆಯೂ ಇರಲಿದೆ. ಇದು ಹೊಸ ತೆರಿಗೆ ಪದ್ಧತಿಯೆಡೆಗೆ ಜನರನ್ನು ಸೆಳೆಯುವ ಯತ್ನ ಎಂದು ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆದರೆ, ಹೊಸ ತೆರಿಗೆ ಪದ್ಧತಿಗೆ ಬರುವಂತೆ ಯಾರನ್ನೂ ಬಲವಂತ ಮಾಡಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.