Remote Voting Machine: ಚುನಾವಣಾ ಆಯೋಗದ ರಿಮೋಟ್ ವೋಟಿಂಗ್ ಮಷಿನ್‌ಗೆ ವಿಪಕ್ಷಗಳ ವಿರೋಧ: ಕಾಂಗ್ರೆಸ್ ಸ್ಪಷ್ಟನೆ
Jan 15, 2023 07:32 PM IST
ದಿಗ್ವಿಜಯ್ ಸಿಂಗ್
- ಕೇಂದ್ರ ಚುನಾವಣಾ ಆಯೋಗವು ಪ್ರಸ್ತಾಪಿಸಿರುವ ರಿಮೋಟ್ ವೋಟಿಂಗ್ ಮಷಿನ್(RVM) ವ್ಯವಸ್ಥೆಗೆ, ವಿಪಕ್ಷಗಳು 'ಒಮ್ಮತ'ದ ವಿರೋಧ ವ್ಯಕ್ತಪಡಿಸಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. RVM ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಸಭೆ ಕರೆದಿತ್ತು. ಈ ಸಭೆಯಲ್ಲಿ ಹಲವು ವಿಪಕ್ಷಗಳು ಭಾಗವಹಿಸಿದ್ದವು. ಈ ಕುರಿತು ಇಲ್ಲಿದೆ ಮಾಹಿತಿ..
ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಪ್ರಸ್ತಾಪಿಸಿರುವ ರಿಮೋಟ್ ವೋಟಿಂಗ್ ಮಷಿನ್(RVM) ವ್ಯವಸ್ಥೆಗೆ, ವಿಪಕ್ಷಗಳು 'ಒಮ್ಮತ'ದ ವಿರೋಧ ವ್ಯಕ್ತಪಡಿಸಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
RVM ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಕರೆದಿದ್ದ ವಿಪಕ್ಷಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, RVM ವ್ಯವಸ್ಥೆ ಜಾರಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಮಾತನಾಡಿರುವ ದಿಗ್ವಿಜಯ್ ಸಿಂಗ್, ನಮ್ಮ ಕರೆಗೆ ಓಗೊಟ್ಟು ಸಭೆಯಲ್ಲಿ ಪಾಲ್ಗೊಂಡ ಪ್ರಮುಖ ವಿಪಕ್ಷ ನಾಯಕರಿಗೆ ಕಾಂಗ್ರೆಸ್ ಪಕ್ಷವು ಧನ್ಯವಾದ ಅರ್ಪಿಸುತ್ತದೆ ಎಂದು ಹೇಳಿದರು.
RVM ವಿಪರೀತವಾದ ರಾಜಕೀಯ ವೈಪರೀತ್ಯಗಳನ್ನು ಹೊಂದಿದೆ ಎಂಬುದು ನಮ್ಮ ಭಾವನೆಯಾಗಿದೆ. ಚುನಾವಣಾ ಆಯೋಗ ಈ ಕುರಿತು ಸ್ಪಷ್ಟ ಚಿತ್ರಣವನ್ನು ನೀಡಿಲ್ಲ. ಅಲ್ಲದೇ ಚುನಾವಣಾ ಆಯೋಗವು ವಲಸೆ ಕಾರ್ಮಿಕರು ಹಾಗೂ ಅವರ ಸಂಖ್ಯೆ ಬಗ್ಗೆ ಯಾವುದೇ ಖಚಿತತೆ ನೀಡಿಲ್ಲ. ಹೀಗಾಗಿ RVM ಬಳಕೆಯನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ವಿರೋಧಿಸಿವೆ ಎಂದು ದಿಗ್ವಿಜಯ್ ಸಿಂಗ್ ಮಾಹಿತಿ ನೀಡಿದರು.
RVM ಬಗ್ಗೆ ರಾಜಕೀಯ ಪಕ್ಷಗಳು ಇದೇ ಜನ.31ರೊಳಗಾಗಿ ತಮ್ಮ ಅಭಿಪ್ರಾಯವನ್ನು ನೀಡುವಂತೆ ಚುನಾವಣಾ ಆಯೋಗವು ಕೋರಿದೆ. ಹೀಗಾಗಿ ಜ.25ರಂದು ನಾವು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ. ಈ ಸಭೆಯಲ್ಲಿ RVM ಕುರಿತಾದ ಅಭಿಪ್ರಾಯವನ್ನು ಜಂಟಿಯಾಗಿ ಕಳುಹಿಸಬೇಕೋ ಅಥವಾ ಪ್ರತ್ಯೇಕವಾಗಿ ಕಳುಹಿಸಬೇಕೋ ಎಂಬುದರ ಕುರಿತೂ ಚರ್ಚೆ ಮಾಡಲಾಗುವುದು ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
ಇನ್ನು RVM ಕುರಿತು ಚರ್ಚಿಸಲು ಕಾಂಗ್ರೆಸ್ ಕರೆದಿದ್ದ ವಿಪಕ್ಷಗಳ ಸಭೆಯಲ್ಲಿ, ಜೆಡಿಯು, ಶಿವಸೇನೆ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ, ಸಿಪಿಎಂ, ಜೆಎಂಎಂ, ಆರ್‌ಜೆಡಿ, ಪಿಡಿಪಿ, ವಿಸಿಕೆ ಪಕ್ಷಗಳು ಭಾಗವಹಿಸಿದ್ದವು. ಅಲ್ಲದೇ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು.
ಆದರೆ ಈ ಸಭೆಗೆ ಟಿಎಂಸಿ, ಎನ್‌ಸಿಪಿ ಹಾಗೂ ಎಸ್‌ಪಿ ಪಕ್ಷಗಳು ಗೈರು ಹಾಜರಾಗಿದ್ದು, RVM ಕುರಿತು ಮತ್ತಷ್ಟು ಸ್ಪಷ್ಟನೆ ಪಡೆದ ಬಳಿಕ ಈ ಕುರಿತು ನಿರ್ಧಾರ ಮಾಡುವುದಾಗಿ ಸ್ಷಷ್ಟಪಡಿಸಿವೆ.
ಈ ಕುರಿತು ಮಾತನಾಡಿರುವ ದಿಗ್ವಿಜಯ್ ಸಿಂಗ್, ಸಭೆಗೆ ಟಿಎಂಸಿ, ಎನ್‌ಸಿಪಿ ಹಾಗೂ ಎಸ್‌ಪಿ ಪಕ್ಷಗಳು ಗೈರುಹಾಜರಾಗಿದ್ದರೂ, RVM ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ. ಜ.25ರಂದು ನಡೆಯಲಿರುವ ಸಭೆಯಲ್ಲಿ ಈ ಪಕ್ಷಗಳೂ ಭಾಗವಹಿಸುವ ಭರವಸೆ ಇದೆ ಎಂದು ಹೇಳಿದರು.
ಇನ್ನು RVM ಕುರಿತು ಚರ್ಚಿಸಲು ನಾಳೆ(ಜ.16-ಸೋಮವಾರ) ಚುನಾವಣಾ ಆಯೋಗ ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಸಭೆಯಲ್ಲೂ ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸಲಿದ್ದೇವೆ ಎಂದು ದಿಗ್ವಿಜಯ್ ಸಿಂಗ್ ಸ್ಪಷ್ಟಪಡಿಸಿದರು.
ಏನಿದು RVM?:
ರಿಮೋಟ್ ವೋಟಿಂಗ್ ಮಷಿನ್(RVM) ಎಂಬುದು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ಮತದಾನ ಮಾಡಲು ಸಹಕರಿಸುವ ವ್ಯವಸ್ಥೆಯಾಗಿದೆ. ಉದ್ಯೋಗಕ್ಕಾಗಿ ಸ್ವಂತ ಊರು ಬಿಟ್ಟು ಬೇರೆಡೆ ತೆರಳಿರುವ ವಲಸೆ ಕಾರ್ಮಿಕರು, ತಾವಿರುವ ಸ್ಥಳದಲ್ಲೇ ಮತದಾನ ಮಾಡಲು RVM ಅನುಕೂಲ ಮಾಡಿಕೊಡುತ್ತದೆ. ಇದರಿಂದ ವಲಸೆ ಕಾರ್ಮಿಕರು ಮತದಾನದ ದಿನ ತಮ್ಮ ಊರಿಗೆ ತೆರಳುವುದು ತಪ್ಪಲಿದೆ.
ಆದರೆ ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಈ ಕುರಿತು ಸರ್ವಪಕ್ಷಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೇ ಈ ಕುರಿತು ಚರ್ಚಿಸಲು ನಾಳೆ (ಜ.16-ಸೋಮವಾರ) 8 ರಾಷ್ಟ್ರೀಯ ಪಕ್ಷಗಳು ಹಾಗೂ 57 ಪ್ರಾದೇಶಿಕ ಪಕ್ಷಗಳ ಸಭೆ ಕರೆದಿದೆ.
ವಿಭಾಗ