Overcharging issues in train: ನೀರಿಗೆ ಎಕ್ಸ್ಟ್ರಾ 5 ರೂ. ಕೊಡಿ ಎಂದ ವೆಂಡರ್; ಮಾರನೇ ದಿನವೇ 1 ಲಕ್ಷ ರೂ. ದಂಡ ಪಾವತಿಸು ಎಂದ ರೈಲ್ವೆ!
Dec 17, 2022 11:19 AM IST
ಹೆಚ್ಚುವರಿ ಹಣ ವಸೂಲಿ ಬಗ್ಗೆ ಗುರುವಾರ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದರು. ಭಾರತೀಯ ರೈಲ್ವೆ ಮಾರನೇ ದಿನವೇ ಅಂದರೆ ನಿನ್ನೆ (ಶುಕ್ರವಾರ) ಆ ವೆಂಡರ್‌ಗೆ 1 ಲಕ್ಷ ರೂಪಾಯಿ ದಂಡ ಮತ್ತು ವಹಿವಾಟು ನಿರ್ಬಂಧ ವಿಧಿಸಿದೆ.
Overcharging issues in train: ಒಂದು ಲೀಟರ್ ನೀರು ಕೊಡಿ ಎಂದವನಿಗೆ 5 ರೂಪಾಯಿ ಎಕ್ಸ್ಟ್ರಾ ಕೊಡಿ ಎಂದ ಐಆರ್‌ಸಿಟಿಸಿ ಪರವಾನಗಿ ಹೊಂದಿದ ಗುತ್ತಿಗೆದಾರನಿಗೆ, 1 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಭಾರತೀಯ ರೈಲ್ವೆ ಸೂಚಿಸಿದೆ. ಭಾರತೀಯ ರೈಲ್ವೆ ಬಹಳ ಚುರುಕಾಗಿದ್ದು, ದೂರು ಬಂದ ಮಾರನೇ ದಿನವೇ ಕ್ರಮ ಜರುಗಿಸಿ ಗಮನಸೆಳೆದಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.
ಭಾರತೀಯ ರೈಲ್ವೆ ಬಹಳ ಚುರುಕಾಗಿದ್ದು, ದೂರು ಬಂದ ಮಾರನೇ ದಿನವೇ ಕ್ರಮ ಜರುಗಿಸಿ ಗಮನಸೆಳೆದಿದೆ. ಕುಡಿಯುವ ನೀರಿನ ಒಂದು ಲೀಟರ್ ಬಾಟಲಿಗೆ ಗರಿಷ್ಠ ಮಾರಾಟ ದರ (ಎಂಆರ್‌ಪಿ)ಕ್ಕಿಂತ 5 ರೂಪಾಯಿ ಹೆಚ್ಚು ವಸೂಲಿ ಮಾಡಿದ ಬಗ್ಗೆ ಪ್ರಯಾಣಿಕರೊಬ್ಬರು ದೂರು ನೀಡಿದ್ದರು. ಮಾರನೇ ದಿನವೇ ಭಾರತೀಯ ರೈಲ್ವೆ ಹೆಚ್ಚುವರಿ ದರ ವಸೂಲಿ ಮಾಡಿದ ವೆಂಡರ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಗಮನಸೆಳೆದಿದೆ!
ಅಂಬಾಲಾ ರೈಲ್ವೆ ಡಿವಿಷನ್‌ನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಗೊಂಡಾದ ಎಂ/ಎಸ್ ಚಂದ್ರಮೌಳಿ ಮಿಶ್ರಾ ಈ ರೀತಿ ದಂಡನೆಗೆ ಒಳಗಾದ ಗುತ್ತಿಗೆದಾರ. ಶಿವಂ ಭಟ್ ಎಂಬುವವರು ದೂರು ನೀಡಿದ ಪ್ರಯಾಣಿಕ.
ಯಾವಾಗ ಏನು ನಡೆಯಿತು? ದಂಡನೆಗೆ ಒಳಗಾದ ವೆಂಡರ್ ಏನು ಮಾಡಿದ್ದ?
ಲಖನೌ-ಚಂಡೀಗಢ-ಲಖನೌ ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 12231 / 32ರಲ್ಲಿ ಚಂದ್ರಮೌಳಿ ಮಿಶ್ರಾ ಐಆರ್‌ಸಿಟಿಸಿಯ ಅಧಿಕೃತ ವೆಂಡರ್. ಈ ರೈಲಿನಲ್ಲಿ ಪ್ಯಾಂಟ್ರಿ ಕಾರು ಇಲ್ಲ. ಹೀಗಾಗಿ ಐಆರ್‌ಸಿಟಿಸಿಯ ಅಧಿಕೃತ ವೆಂಡರ್‌ಗಳೇ ಆಹಾರ ಪೂರೈಸುವ ಹೊಣೆ ಹೊತ್ತುಕೊಂಡಿದ್ದಾರೆ. ಮಿಶ್ರಾಗೆ ಈ ಗುತ್ತಿಗೆ ಡಿಸೆಂಬರ್ 1ರಂದು ಸಿಕ್ಕಿತ್ತು. ಇದು ಎರಡು ಸಲ ವಿಸ್ತರಣೆಯಾಗಿದ್ದು ಡಿಸೆಂಬರ್ 17ರ ತನಕ ಲಖನೌನಲ್ಲಿ ಕೊನೆಗೊಂಡಿದೆ.
ಚಂಡೀಗಢದಿಂದ ಶಹಜಹಾನ್‌ಪುರಕ್ಕೆ ಚಂಡೀಗಢ -ಲಖನೌ ರೈಲು ಸಂಖ್ಯೆ 12232ರಲ್ಲಿ ಗುರುವಾರ ಶಿವಂ ಭಟ್ ಪ್ರಯಾಣಿಸಿದ್ದರು. ರೈಲಿನಲ್ಲಿ ಒಬ್ಬ ದಿನೇಶ್ ಎಂಬ ವ್ಯಕ್ತಿ 15 ರೂಪಾಯಿ ನೀರಿನ ಬಾಟಲಿಯನ್ನು 20 ರೂಪಾಯಿಗೆ ಮಾರಾಟ ಮಾಡಿದ್ದಾಗಿ ಶಿವಂ ಭಟ್ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದರು.
ಇದನ್ನೇ ದೂರು ಎಂದು ಪರಿಗಣಿಸಿದ ಭಾರತೀಯ ರೈಲ್ವೆ, ದಿನೇಶ್ ಎಂಬಾತನ ಮ್ಯಾನೇಜರ್ ರವಿ ಕುಮಾರ್‌ನನ್ನು ಲಖನೌನಲ್ಲಿ ರೈಲ್ವೇಸ್ ಕಾಯ್ದೆಯ ಸೆಕ್ಷನ್ 144 (1)ರ ಪ್ರಕಾರ ಬಂಧಿಸಲು ಸೂಚಿಸಿದೆ. ಹಾಗೆ ರವಿಕುಮಾರ್‌ನ ಬಂಧನವಾಗಿದೆ. ಭಾರತೀಯ ರೈಲ್ವೆ ಪರವಾಗಿ ಡಿವಿಷನಲ್ ರೈಲ್ವೆ ಮ್ಯಾನೇಜರ್ ಮನದೀಪ್ ಸಿಂಗ್ ಭಾಟಿಯಾ ಈ ಕ್ರಮ ಜರುಗಿಸಿದ್ದು, ದಂಡವನ್ನೂ ವಿಧಿಸಲು ಶಿಫಾರಸು ಮಾಡಿದ್ದರು.
ಈ ಕೇಸ್ ಸಂಬಂಧ ಐಆರ್‌ಸಿಟಿಸಿಯ ರೀಜನಲ್ ಮ್ಯಾನೇಜರ್‌ಗೆ ಅಂಬಾಲಕ್ಕೆ ಬರುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು. ರೈಲಿನಲ್ಲಿ ವ್ಯಾಪಾರ ವಹಿವಾಟು ಸುಧಾರಣೆ ಮತ್ತು ಹೆಚ್ಚುವರಿ ಹಣ ವಸೂಲಿ ದೂರು ತಗ್ಗಿಸುವ ವಿಚಾರ ಚರ್ಚಿಸಲಾಗಿತ್ತು ಎಂದು ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಹರಿಮೋಹನ್ ತಿಳಿಸಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಜತೆಗೆ ಮಾತನಾಡಿದ್ದ ಡಿಆರ್‌ಎಂ ಭಾಟಿಯಾ, ವೆಂಡರ್ ಮೇಲೆ ನಿರ್ಬಂಧ ವಿಧಿಸಿ ಪರವಾನಗಿ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದೆ. 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇವೆಲ್ಲವನ್ನೂ ಐಆರ್‌ಸಿಟಿಸಿಯ ರೀಜನಲ್ ಮ್ಯಾನೇಜರ್ ಗಮನಕ್ಕೆ ತರಲಾಗಿದೆ. ಈ ಡಿವಿಷನ್‌ನಲ್ಲಿ 1000ಕ್ಕೂ ಹೆಚ್ಚು ಅನಧಿಕೃತ ವೆಂಡರ್‌ಗಳಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಏಪ್ರಿಲ್ 1ರಿಂದೀಚೆಗೆ ಹೆಚ್ಚು ಹಣ ವಸೂಲಿ ದೂರು ತಗ್ಗಿಸುವುದಕ್ಕೆ ಕ್ರಮ ತೆಗೆದುಕೊಂಡ ವೇಳೆ ಇದು ಗಮನಕ್ಕೆ ಬಂದಿದೆ. 15 ದಿನಗಳ ವಿಶೇಷ ಅಭಿಯಾನ ಚಾಲ್ತಿಯಲ್ಲಿದ್ದು ರೈಲಿನಲ್ಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.