logo
ಕನ್ನಡ ಸುದ್ದಿ  /  Nation And-world  /  Pm Modi Brother Gets Emotional As He Talks About Prime Minister

Somabhai Modi: ತಮ್ಮನ ಆರೋಗ್ಯದ ಬಗ್ಗೆ ಚಿಂತಿಸಿ ಭಾವುಕರಾದ ಪ್ರಧಾನಿ ಅವರ ಹಿರಿಯ ಸಹೋದರ ಸೋಮಭಾಯಿ ಮೋದಿ

HT Kannada Desk HT Kannada

Dec 05, 2022 03:30 PM IST

ಸೋಮಭಾಯಿ ಮೋದಿ

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಿರಿಯ ಸಹೋದರ ಸೋಮಭಾಯಿ ಮೋದಿ ಅವರು, ಇಂದು (ಡಿ.05-ಸೋಮವಾರ) ಅಹಮದಾಬಾದ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಹಿರಿಯ ಸಹೋದರ ಸೋಮಭಾಯಿ ಮೋದಿ, ತಮ್ಮನ್ನು ಭೇಟಿ ಮಾಡಿದ ಪ್ರಧಾನಿ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಈ ಕುರಿತಾದ ಮಾಹಿತಿ ಇಲ್ಲಿದೆ..
ಸೋಮಭಾಯಿ ಮೋದಿ
ಸೋಮಭಾಯಿ ಮೋದಿ (ANI)

ಅಹಮದಾಬಾದ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಿರಿಯ ಸಹೋದರ ಸೋಮಭಾಯಿ ಮೋದಿ ಅವರು, ಇಂದು (ಡಿ.05-ಸೋಮವಾರ) ಅಹಮದಾಬಾದ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದರು. ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ, ಪ್ರಧಾನಿ ಮೋದಿ ಮತ ಚಲಾಯಿಸಿದ ಕೆಲವೇ ನಿಮಿಷಗಳ ಬಳಿಕ, ಸೋಮಭಾಯಿ ಮೋದಿ ಅವರೂ ಮತ ಚಲಾಯಿಸಿದರು.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಹಿರಿಯ ಸಹೋದರ ಸೋಮಭಾಯಿ ಮೋದಿ, ತಮ್ಮನ್ನು ಭೇಟಿ ಮಾಡಿದ ಪ್ರಧಾನಿ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಇದೇ ವೇಳೆ ಸೋಮಭಾಯಿ ಮೋದಿ ಅವರು ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂವಾದದ ಬಗ್ಗೆ ಮಾಹಿತಿ ನೀಡಿದರು.

ಪ್ರಧಾನಿ ಮೋದಿ ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾರೆ. ನಾನು ಅವರ ಆರೋಗ್ಯದ ಬಗ್ಗೆ ಚಿಂತಾಕ್ರಾಂತನಾಗಿರುತ್ತೇನೆ. ಕೆಲಸದ ಒತ್ತಡದ ನಡುವೆಯೂ ಸ್ವಲ್ಪ ವಿಶ್ರಾಂತಿ ಮತ್ತು ಆರೋಗ್ಯದ ಕಡೆ ಗಮನ ಕೊಡುವಂತೆ ನಾನು ಮನವಿ ಮಾಡಿದ್ದೇನೆ ಎಂದು ಸೋಮಭಾಯಿ ಮೋದಿ ಸ್ಪಷ್ಟಪಡಿಸಿದರು.

2014ರಿಂದ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಕೆಲಸವನ್ನು, ದೇಶದ ಜನರು ನಿರ್ಲಕ್ಷಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ನಿರಂತರವಾಗಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಅವರ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅವರು ದೇಶದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಸೋಮಭಾಯಿ ಮೋದಿ ಭಾವುಕರಾಗಿ ನುಡಿದರು.

ಮತದಾರರಿಗೆ ನನ್ನ ಏಕೈಕ ಸಂದೇಶವೆಂದರೆ ಅವರು ತಮ್ಮ ಮತವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವರು ದೇಶದ ಅಭಿವೃದ್ಧಿಗೆ ಶ್ರಮಿಸುವ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು. ರಾಷ್ಟ್ರಮಟ್ಟದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಲಾಗಿದೆ ಎಂಬುದನ್ನು ಜನರು ನೋಡಿದ್ದಾರೆ. ಜನರು ಅದರ ಆಧಾರದ ಮೇಲೆ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಸೋಮಭಾಯಿ ಮೋದಿ ಹೇಳಿದ್ದಾರೆ.

ಇದಕ್ಕೂ ಮೊದಲು ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಕ್ಕಾಗಿ ಹಿಮಾಚಲ ಪ್ರದೇಶ, ದೆಹಲಿ ಮತ್ತು ಗುಜರಾತ್‌ನ ಜನರಿಗೆ ಧನ್ಯವಾದ ಅರ್ಪಿಸಿದರು.

ಅಲ್ಲದೇ ಶಾಂತಿಯುತವಾಗಿ ಚುನಾವಣೆ ನಡೆಸಿದ ಚುನಾವಣಾ ಆಯೋಗವನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಇದೇ ವೇಳೆ ಮನವಿ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ಮತ ಚಲಾಯಿಸಿದ ಮತಗಟ್ಟೆಯಲ್ಲಿದ್ದ ಅಹಮದಾಬಾದ್‌ನ ಸ್ಥಳೀಯರು, ತಾವು ಪ್ರಧಾನಿ ಮೋದಿಯ ದರ್ಶನ ಪಡೆಯಲು ಮುಂಜಾನೆ ಬೂತ್‌ಗೆ ಬಂದಿದ್ದೇವೆ ಎಂದು ಹೇಳಿದರು. ನಾವು ಪ್ರಧಾನಿಯನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಪ್ರಧಾನಿ ಮೋದಿ ಅವರು ಮತ ಚಲಾಯಿಸಲು ಇಲ್ಲಿಗೆ ಬರುವುದೇ ನಮಗೆ ಆನಂದದ ಕ್ಷಣ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಇದಕ್ಕೂ ಮುನ್ನ, ರಾಜಮನೆತನದ ರಾಜಮಾತೆ ಶುಭಾಂಗಿನಿರಾಜೆ ಗಾಯಕ್ವಾಡ್ ಅವರು, ವಡೋದರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಶುಭಾಂಗಿನಿರಾಜೆ ಗಾಯಕ್ವಾಡ್‌ ಇದೇ ವೇಳೆ ಮನವಿ ಮಾಡಿದರು.

ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ಈ ಹಕ್ಕನ್ನು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಜವಾಬ್ದಾರಿ ಇಲ್ಲದೆ ಯಾವುದೇ ಹಕ್ಕು ಇಲ್ಲ. ಎಂದು ಶುಭಾಂಗಿನಿರಾಜೆ ಗಾಯಕ್ವಾಡ್ ಮಾರ್ಮಿಕವಾಗಿ ಹೇಳಿದರು.

ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಿಗೆ, ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು