logo
ಕನ್ನಡ ಸುದ್ದಿ  /  Nation And-world  /  Pm Modi Launches 5g Services At 6th India Mobile Congress

PM Modi Launches 5G services: ದೇಶಕ್ಕೆ 5G ಸೇವೆ ಸಮರ್ಪಿಸಿದ ಪ್ರಧಾನಿ ಮೋದಿ: ಯಾವ ನಗರಗಳಲ್ಲಿ ಲಭ್ಯ?

HT Kannada Desk HT Kannada

Oct 01, 2022 11:55 AM IST

5G ಸೇವೆ ಉದ್ಘಾಟಿಸಿದ ಮೋದಿ

    • ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಅ.1-ಶನಿವಾರ) ದೇಶಕ್ಕೆ 5G ಸೇವೆಯನ್ನು ಸಮರ್ಪಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC)ನ ಆರನೇ ಆವೃತ್ತಿ ಉದ್ಘಾಟಿಸಿದ ಪ್ರಧಾನಿ ಮೋದಿ, ಇದೇ ವೇಳೆ ನಿರ್ದಿಷ್ಟ ನಗರಗಳಿಗೆ 5G ಸೇವೆಯನ್ನು ಸಮರ್ಪಿಸಿದರು. ದೇಶದ 13 ನಗರಗಳಲ್ಲಿ ಮೊದಲ ಹಂತದಲ್ಲಿ 5G ಸೇವೆ ಲಭ್ಯವಾಗಲಿದೆ.
5G ಸೇವೆ ಉದ್ಘಾಟಿಸಿದ ಮೋದಿ
5G ಸೇವೆ ಉದ್ಘಾಟಿಸಿದ ಮೋದಿ (ANI)

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಅ.1-ಶನಿವಾರ) ದೇಶಕ್ಕೆ 5G ಸೇವೆಯನ್ನು ಸಮರ್ಪಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC)ನ ಆರನೇ ಆವೃತ್ತಿ ಉದ್ಘಾಟಿಸಿದ ಪ್ರಧಾನಿ ಮೋದಿ, ಇದೇ ವೇಳೆ ನಿರ್ದಿಷ್ಟ ನಗರಗಳಿಗೆ 5G ಸೇವೆಯನ್ನು ಸಮರ್ಪಿಸಿದರು.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಭಾರತದ ಸಂಪರ್ಕ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲೊಂದು ಸೃಷ್ಟಿಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 5G ಸೇವೆಯನ್ನು ಪಡೆದುಕೊಂಡಿದೆ. ದೇಶದ ಪ್ರಮುಖ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ) ಸಂಸ್ಥೆಗಳು ಇಂದು 5 ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಲು ಟೆಕ್ ಡೆಮೊಗಳನ್ನು ಪ್ರದರ್ಶಿಸಿವೆ.

ಟೆಕ್‌ ಡೆಮೊ ವೀಕ್ಷಣೆ ಮಾಡಿದ ಪ್ರಧಾನಿ ಮೋದಿ, ತ್ವರಿತ 5G ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC)ಯ ಆರನೇ ಆವೃತ್ತಿಯಲ್ಲಿ ಹೈ ಸೆಕ್ಯುರಿಟಿ ರೂಟರ್ಸ್‌, ಆಟೋಮೇಟೆಡ್‌ ಗೈಡೆಡ್‌ ವೆಹಿಕಲ್ಸ್‌, ಸ್ಮಾರ್ಟ್‌ ಆಂಬುಲೆನ್ಸ್‌ ಮುಂತಾದ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲಾಯಿತು.

ಭಾರತದಲ್ಲಿ ಮೊದಲ ಹಂತದದಲ್ಲಿ ಅಹಮದಾಬಾದ್, ಗಾಂಧಿನಗರ, ಜಾಮ್‌ನಗರ, ಬೆಂಗಳೂರು, ಚೆನ್ನೈ, ಹೈದರಾಬಾದ್, ನವದೆಹಲಿ, ಗುರುಗ್ರಾಮ್, ಲಕ್ನೋ, ಚಂಡೀಗಢ, ಕೋಲ್ಕತ್ತಾ, ಮುಂಬೈ ಮತ್ತು ಪುಣೆ ಸೇರಿದಂತೆ ಒಟ್ಟು 13 ಪ್ರಮುಖ ನಗರಗಳು 5G ಸೇವೆಯನ್ನು ಪಡೆಯಲಿವೆ.

5G ತಂತ್ರಜ್ಞಾನವು ಪ್ರಸ್ತುತ 4G ಸಂಪರ್ಕಕ್ಕಿಂತ ಸುಮಾರು 10 ಪಟ್ಟು ವೇಗವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 4ಜಿಯಲ್ಲಿ ಡಾಟಾ ಇಳಿಸುವಿಕೆಗೆ 70 ಮಿಲಿಸೆಕೆಂಡ್‌ ಬೇಕಾಗಿದ್ದರೆ, 5ಜಿಯಲ್ಲಿ ಅದು1 ಮಿಲಿಸೆಕೆಂಡ್‌ನಷ್ಟು ಕಡಿಮೆ ಅವಧಿಯನ್ನು ತೆಗೆದುಕೊಳ್ಳಲಿದೆ. ಅಂದರೆ ಮೂರು ಗಂಟೆಗಳ ಕಾಲಾವಧಿಯ ಹೈಡೆಫಿನಿಶನ್‌ ಸಿನಿಮಾವೊಂದನ್ನು, ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಕೆಲವೇ ಸೆಕೆಂಡ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ರಿಲಯನ್ಸ್ ಜಿಯೋ ವಿಶ್ವದ ಅತ್ಯಂತ ವೇಗದ 5G ರೋಲ್‌ಔಟ್ ಹೊಂದುವ ಗುರಿಯನ್ನು ಹೊಂದಿದೆ. ಕಂಪನಿಯು 2023ರ ಅಂತ್ಯದ ವೇಳೆಗೆ ಭಾರತದಾದ್ಯಂತ 5G ಕವರೇಜ್ ನೀಡಲು ನೀಲನಕ್ಷೆ ರೂಪಿಸಿದೆ ಎಂದೂ ಹೇಳಲಾಗುತ್ತಿದೆ. ಅದರಂತೆ 2024ರ ವೇಳೆಗೆ ಏರ್‌ಟೆಲ್ ಕೂಡ ದೇಶಾದ್ಯಂತ 5G ವ್ಯಾಪ್ತಿಯನ್ನು ಒದಗಿಸಲಿದೆ ಎಂಬ ನಿರೀಕ್ಷೆ ಇದೆ.

ದೇಶದ ಜನರ ಬೇಡಿಕೆ ಮತ್ತು ಉದ್ಯಮದ ವೇಗದ ಅಂಶಗಳನ್ನು ಪರಿಗಣಿಸಿದ ಮೇಲೆ, Vi ತನ್ನ 5G ರೋಲ್‌ಔಟ್ ತರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. 4ಜಿಯಿಂದ 5ಜಿಗೆ ವರ್ಗವಾಗಲು ತುದಿಗಾಲ ಮೇಲೆ ನಿಂತಿರುವುದಾಗಿ ಶೇ. 89ರಷ್ಟು ಗ್ರಾಹಕರು ಸಮೀಕ್ಷೆಯೊಂದರಲ್ಲಿ ಹೇಳಿದ್ದಾರೆ.

ದೇಶವು 5G-ಸಿದ್ಧ ಸ್ಮಾರ್ಟ್‌ಫೋನ್‌ಗಳೊಂದಿಗೆ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಈ ಗ್ರಾಹಕರನ್ನು ಸೆಳೆಯಲು ಮೂರು ಪ್ರಮುಖ ಕಂಪನಿಗಳು ಪೈಪೋಟಿ ನಡೆಸಲಿವೆ. ಇತ್ತೀಚಿನ ವರದಿಯ ಪ್ರಕಾರ, ಭಾರತೀಯ ಗ್ರಾಹಕರು 5G ಅಪ್‌ಗ್ರೇಡ್‌ಗಾಗಿ ಶೇ.45ರಷ್ಟು ಹೆಚ್ಚು ಹಣವನ್ನು ಪಾವತಿಸಲು ಕೂಡ ಸಿದ್ಧರಿದ್ದಾರೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಿಲಯನ್ಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ, ಭಾರ್ತಿ ಏರ್‌ಟೆಲ್‌ನ ಸುನೀಲ್ ಭಾರ್ತಿ ಮಿತ್ತಲ್ ಮತ್ತು ವೊಡಾಫೋನ್ ಐಡಿಯಾದ ಕುಮಾರ್ ಮಂಗಲಂ ಬಿರ್ಲಾ ಅವರು, ಎಂಡ್-ಟು-ಎಂಡ್ 5G ತಂತ್ರಜ್ಞಾನದ ಸ್ಥಳೀಯ ಅಭಿವೃದ್ಧಿಯನ್ನು ವೀಕ್ಷಣೆ ಮಾಡಿದರು. ಈ ವೇಳೆ ಏರ್‌ಟೆಲ್, ವೊಡಾಫೋನ್ ಐಡಿಯಾ, ಸಿ-ಡಾಟ್ ಮತ್ತು ಇತರರ ಸ್ಟಾಲ್‌ಗಳಿಗೆ ಗಣ್ಯುರು ಭೇಟಿ ನೀಡಿದರು.

5G‌ ಸೇವೆಯಿಂದ 2023 ರಿಂದ 2040ರ ವೇಳೆಗೆ ಭಾರತೀಯ ಆರ್ಥಿಕತೆಗೆ 36.4 ಟ್ರಿಲಿಯನ್ (ಅಂದಾಜು 455 ಶತಕೋಟಿ ಡಾಲರ್) ಪ್ರಯೋಜನ ದೊರೆಯಲಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯೊಂದು ಅಂದಾಜಿಸಿದೆ.

    ಹಂಚಿಕೊಳ್ಳಲು ಲೇಖನಗಳು