PM Modi: ಕೋರ್ಟ್‌ಗೆ ಹೋದವರಿಗೆ ಸರಿಯಾದ ಪ್ರತ್ಯುತ್ತರ ದೊರೆತಿದೆ: ವಿಪಕ್ಷಗಳತ್ತ ವ್ಯಂಗ್ಯದ ಬಾಣ ಬಿಟ್ಟ ಪ್ರಧಾನಿ ಮೋದಿ
Apr 08, 2023 07:34 PM IST
ಪ್ರಧಾನಿ ಮೋದಿ
- ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ವಿಪಕ್ಷಗಳತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಅರ್ಜಿ ಪರಿಗಣಿಸಲು ನಿರಾಕರಿಸಿ ಸುಪ್ರೀಂಕೋರ್ಟ್ ತಕ್ಕ ಉತ್ತರ ನೀಡಿದೆ ಎಂದರು.
ಹೈದರಾಬಾದ್: ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ವಿಪಕ್ಷಗಳತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಅರ್ಜಿಯನ್ನು ಪರಿಗಣಿಸಲು ನಿರಾಕರಿಸುವ ಮೂಲಕ ವಿಪಕ್ಷಗಳಿಗೆ ಸುಪ್ರೀಂಕೋರ್ಟ್ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಕುಹುಕವಾಡಿದರು.
ಯಾವುದೇ ಬೆಲೆ ಇಲ್ಲದ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಸುಪ್ರೀಂಕೋರ್ಟ್ ವಿಪಕ್ಷಗಳಿಗೆ ಆಘಾತ ನೀಡಿದೆ. ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ನಡೆಸಬೇಕು ಎಂದು ಬಯಸುವ ಈ ವಿಪಕ್ಷಗಳಿಗೆ ಸುಪ್ರೀಂಕೋರ್ಟ್ ಸರಿಯಾಗಿ ಚಾಟಿ ಬೀಸಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.
"ಕೆಲವು ದಿನಗಳ ಹಿಂದೆ ಕೆಲವು ರಾಜಕೀಯ ಪಕ್ಷಗಳು, ತಮ್ಮ ಭ್ರಷ್ಟಾಚಾರದ ಪರಂಪರೆಯನ್ನು ಯಾರೂ ವಿಚಾರಣೆಗೆ ಒಳಪಡಿಸಬಾರದು ಎಂದು ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು. ಆದರೆ ಘನ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸುವ ಮೂಲಕ, ಅವರಿಗೆ ಆಘಾತ ನೀಡಿತು.." ಎಂದು ಯಾವ ರಾಜಕೀಯ ಪಕ್ಷದ ಹೆಸರನ್ನೂ ಪ್ರಸ್ತಾಪಿಸದೇ ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡರು.
ಭ್ರಷ್ಟಾಚಾರ ಮತ್ತು ವಂಶಾಡಳಿತ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ನಾವು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು, ಪರಿವಾರವಾದವನ್ನು ಕಿತ್ತೆಸೆಯುವ ಪಣ ತೊಟ್ಟಿದ್ದೇವೆ. ಹೀಗಾಗಿಯೇ ಕೆಲವು ಪಕ್ಷಗಳಿಗೆ ನಮ್ಮನ್ನು ಕಂಡರೆ ಭಯ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎಂದು ಈ ರಾಜಕೀಯ ಪಕ್ಷಗಳು ಬಯಸುತ್ತವೆ. ಆದರೆ ಭಾರತವೀಗ ಬದಲಾಗಿದ್ದು, ಸಂವಿಧಾನ, ಕಾನೂನು ಮತ್ತು ನಿಯಮಗಳಿಗೆ ಗೌರವ ಕೊಡುವವರಿಗೆ ಮಾತ್ರ ಇಲ್ಲಿ ಅವಕಾಶ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ, ಅದರ ಜೊತೆಗೆ ತೆಲಂಗಾಣದಲ್ಲಿ 11,300 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ನೇತೃತ್ವದಲ್ಲಿ 14 ರಾಜಕೀಯ ಪಕ್ಷಗಳು, ವಿರೋಧ ಪಕ್ಷದ ರಾಜಕೀಯ ನಾಯಕರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮೂಲಭೂತ ಹಕ್ಕನ್ನು ಚಲಾಯಿಸುವ ಇತರ ನಾಗರಿಕರ ವಿರುದ್ಧ ಬಲವಂತದ ಕ್ರಿಮಿನಲ್ ಪ್ರಕ್ರಿಯೆಗಳ ಬಳಕೆಯಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು.
ಆದಾಗ್ಯೂ, ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂಕೋರ್ಟ್, ರಾಜಕಾರಣಿಗಳಿಗೆ ಹೆಚ್ಚಿನ ವಿನಾಯಿತಿ ಇಲ್ಲ ಎಂದು ಒತ್ತಿ ಹೇಳಿತು.
ಏಪ್ರಿಲ್ 5 ರಂದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರ ಪೀಠವು, ಅರ್ಜಿಯನ್ನು ಪರಿಗಣಿಸಲು ನಿರಾಸಕ್ತಿ ವ್ಯಕ್ತಪಡಿಸಿತು. ಸಾಮಾನ್ಯ ನಾಗರಿಕರಿಗೆ ಮಾಡುವಂತೆ ರಾಜಕೀಯ ನಾಯಕರ ಕುಂದುಕೊರತೆಗಳನ್ನು ತೆಗೆದುಕೊಳ್ಳಲು ನ್ಯಾಯಾಲಯಗಳು ಯಾವಾಗಲೂ ಇರುತ್ತವೆ ಎಂದು ಪೀಠವು ಅಭಿಪ್ರಾಯಪಟ್ಟಿತು.
ವಿಭಾಗ