Modi US Tour: ಅಮೆರಿಕಾದಲ್ಲಿ ಮೋದಿ ಹವಾ, ಪ್ರಧಾನಿಗೆ ಭರ್ಜರಿ ಸ್ವಾಗತ: ನಾಲ್ಕು ದಿನಗಳ ಪ್ರವಾಸ ಅಧಿಕೃತ ಆರಂಭ
Jun 21, 2023 07:43 AM IST
ಅಮೆರಿಕಾದ ನ್ಯೂಯಾರ್ಕ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯರು ಪ್ರೀತಿಯಿಂದ ಬರ ಮಾಡಿಕೊಂಡರು.
- ನ್ಯೂಯಾರ್ಕ್ ಜಾನ್ ಎಫ್ ಕೆನಡಿ ಏರ್ ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಅವರನ್ನು ಭಾರತೀಯ ಮೂಲದ ಹಲವರು ಬರ ಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಸೇರಿದ್ದ ಭಾರತೀಯರನ್ನು ಕಂಡು ಪುಳಕಿತರಾದ ಮೋದಿ ಹಸ್ತಲಾಘವ ನೀಡಿದರು. ಆಗ ಭಾರತ್ ಮಾತಾ ಕಿ ಜೈ ಘೋಷಣೆಗಳೂ ಮೊಳಗಿದವು. ಕೆಲವರಂತೂ ನೃತ್ಯ ಮಾಡಿ ಸಂಭ್ರಮಿಸಿದ್ದೂ ಕಂಡು ಬಂದಿತು.
ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸ ಅಧಿಕೃತವಾಗಿ ಆರಂಭವಾಗಿದ್ದು, ಅಮೆರಿಕಾದಲ್ಲಿ ಭರ್ಜರಿ ಸ್ವಾಗತ ದೊರೆತಿದೆ.
ನ್ಯೂಯಾರ್ಕ್ ಜಾನ್ ಎಫ್ ಕೆನಡಿ ಏರ್ ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಅವರನ್ನು ಭಾರತೀಯ ಮೂಲದ ಹಲವರು ಬರ ಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಸೇರಿದ್ ಭಾರತೀಯರನ್ನು ಕಂಡು ಪುಳಕಿತರಾದ ಮೋದಿ ಹಸ್ತಲಾಘವ ನೀಡಿದರು. ಆಗ ಭಾರತ್ ಮಾತಾ ಕಿ ಜೈ ಘೋಷಣೆಗಳೂ ಮೊಳಗಿದವು. ಕೆಲವರಂತೂ ನೃತ್ಯ ಮಾಡಿ ಸಂಭ್ರಮಿಸಿದ್ದೂ ಕಂಡು ಬಂದಿತು. ಮೋದಿ ಅವರು ತಂಗಿರುವ ಹೊಟೇಲ್ ಬಳಿಯೂ ಭಾರತೀಯ ಮೂಲದ ಹಲವರು ಭೇಟಿಗಾಗಿ ಕಾದಿದ್ದರು. ಅವರೊಂದಿಗೂ ಕೆಲ ಹೊತ್ತು ಕಳೆದ ಮೋದಿ ಸಂತಸ ತಂದರು.
ಮೋದಿ ಅವರನ್ನು ಹಲವಾರು ಬ್ಯಾನರ್‌ಗಳು ಭರ್ಜರಿಯಾಗಿಯೇ ಅಮೆರಿಕಾದಲ್ಲಿ ಸ್ವಾಗತಿಸುತ್ತಿವೆ. ಅದರಲ್ಲೂ ಆಗಸದಲ್ಲಿ ಹಾರುತ್ತಿದ್ದ ಮೋದಿ ಹಾಗೂ ಜೋ ಬೇಡನ್ ಅವರ ಭಾವಚಿತ್ರವಿರುವ ಬ್ಯಾನರ್ ಕೂಡ ಗಮನ ಸೆಳಯುತ್ತಿದೆ.
ಮೋದಿ ಟ್ವೀಟ್
ಅಮೆರಿಕಾಕ್ಕೆ ಬಂದಿಳಿಯುತ್ತಿದ್ದಂತೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡರು ಮೋದಿ. ಮೂರು ದಿನ ಅಮೆರಿಕಾದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಬೇರೆ ಬೇರೆ ಕ್ಷೇತ್ರದವರನ್ನು ಭೇಟಿಯಾಗುವ ಸಮಯ ನಿಗದಿಯಾಗಿದೆ. ವಿಶ್ವ ಸಂಸ್ಥೆ ಆಯೋಜಿಸಿರುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲು ಖುಷಿಯಾಗುತ್ತಿದೆ ಎಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದರು.
ಭಾರೀ ಗೌರವ, ಆದರದೊಂದಿಗೆ ಅಮೆರಿಕಾ ಭೇಟಿಗೆ ಆಹ್ವಾನ ಪಡೆದಿರುವ ಮೂರನೇ ಭಾರತೀಯ ನರೇಂದ್ರ ಮೋದಿ. ಅದರಲ್ಲೂ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅಧಿಕೃತ ನಿವಾಸದಲ್ಲಿ ಡಿನ್ನರ್ ಕೂಡ ಮೋದಿ ಅವರಿಗೆ ಆಯೋಜನೆಗೊಂಡಿದೆ. ಅಮೆರಿಕಾದ ಆತಿಥ್ಯ ಹಾಗೂ ಅಲ್ಲಿನ ಜನರ ಪ್ರೀತಿಯ ಹೊಳೆಯನ್ನು ಅನುಭವಿಸುತ್ತಿದ್ದಾರೆ ಮೋದಿ. ಈ ಬಾರಿಯಂತೂ ಭಾರತೀಯ ಮೂಲದವರಲ್ಲದೇ ಬೇರೆ ಬೇರೆ ಕ್ಷೇತ್ರದ ಸಾಧಕರು ಮೋದಿಯೊಂದಿಗೆ ಚರ್ಚಿಸುತ್ತಿರುವುದು ವಿಶೇಷ.
ನಾನೂ ಅಭಿಮಾನಿ ಎಂದ ಮಸ್ಕ್
ಟೆಸ್ಲಾ ಸಂಸ್ಥೆ ಸ್ಥಾಪಕ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಭಾರತದಲ್ಲಿ ಹೂಡಿಕೆಗೆ ಮುಂದಾಗುವಂತೆ ಮೋದಿ ಮನವಿಗೆ ಸ್ಪಂದಿಸಿದ ಮಸ್ಕ್ ಮುಂದಿನ ವರ್ಷ ಖುದ್ದು ಭಾರತಕ್ಕೆ ಭೇಟಿ ನೀಡುವೆ ಎಂದು ಹೇಳಿದರು.
ಅವರೊಬ್ಬ ಜಾಗತಿಕ ನಾಯಕ. ನಾನೂ ಅವರ ಅಭಿಮಾನಿ. ಮೋದಿ ಅವರೊಂದಿಗೆ ಮಾತುಕತೆ ಅತ್ಯುತ್ತಮವಾಗಿತ್ತು. ಸ್ಮರಣೀಯವೂ ಹೌದು. ಭಾರತಕ್ಕೆ ಎಂಟು ವರ್ಷದ ಹಿಂದೆ ಭೇಟಿ ನೀಡಿದ್ದೆ. ಮತ್ತೆ ಬರಲು ಉತ್ಸುಕವಾಗಿದ್ದೇನೆ ಎಂದರು ಮಸ್ಕ್.
ತಜ್ಞರ ದಂಡು
ಇದಾದ ಬಳಿಕೆ ಅಮೆರಿಕಾದ ಹಲವಾರು ನೋಬಲ್ ಪ್ರಶಸ್ತಿ ಪುರಸ್ಕೃತ ಸಾಧಕರು, ಕಲಾವಿದರು, ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಉದ್ಯಮಿಗಳು, ಶೈಕ್ಷಣಿಕ ತಜ್ಞರು, ಆರೋಗ್ಯ ವಲಯದ ಪ್ರಮುಖರೊಂದಿಗೂ ಸಂವಾದ ನಡೆಸಿದರು. ಖಗೋಳ ಭೌತ ವಿಜ್ಞಾನಿ ನೀಲ್ ಟೈಸನ್, ಗ್ರಾಮಿ ಪ್ರಶಸ್ತಿ ಪುರಸ್ಕೃತ ಗಾಯಕ ಫಲ್ಗುಣಿ ಶಾ, ವಿಶ್ವ ಬ್ಯಾಂಕ್ ಹಿರಿಯ ಉಪಾಧ್ಯಕ್ಷ ಪಾಲ್ ರೋಮರ್, ಅಮೆರಿಕಾದ ಹೂಡಿಕೆದಾರ ರೇ ಡೇಲಿಯೋ, ತಜ್ಞ ವೈದ್ಯ ಡಾ.ಪೀಟರ್ ಅಗ್ರೆ, ಕಲಾವಿದೆ ಚಂದ್ರಿಕಾ ಟಂಡನ್ ಅವರನ್ನೂ ಭೇಟಿ ಮಾಡಿದರು.
ಮೋದಿ ಅವರು ಪ್ರಧಾನಿಯಾಗಿರುವುದರಿಂದ ಈಗ ಜಾಗತಿಕ ಮಟ್ಟದಲ್ಲಿ ಭಾರತದ ಸಮಯ ಬಂದಿದೆ. ಭಾರತ ಹಲವು ಕ್ಷೇತ್ರದಲ್ಲಿ ತನ್ನದೇ ಮಹತ್ವ ಹೊಂದಿರುವ ದೇಶ. ಅದನ್ನು ಜಾಗತಿಕ ಮಟ್ಟದಲ್ಲಿ ಪರಿವರ್ತಿಸುವ ಶಕ್ತಿ ಮೋದಿ ಅವರಿಗಿದೆ. ಮೋದಿ ಅಮೆರಿಕಾಕ್ಕೆ ಬಂದಿರುವುದರಿಂದ ಹೊಸ ಅವಕಾಶಗಳು ತೆರದುಕೊಳ್ಳಲಿವೆ ಎಂದು ಹೂಡಿಕೆದಾರ ರೇ ಡೇಲಿಯೋ ಮೋದಿ ಭೇಟಿ ನಂತರ ತಿಳಿಸಿದರು.
ಮಹತ್ವದ ನಿರ್ಣಯಗಳು
ಗುರುವಾರ ಹಾಗೂ ಶುಕ್ರವಾರ ಮೋದಿ ಅವರ ಮಹತ್ವದ ಕಾರ್ಯಕ್ರಮಗಳು ನಿಗದಿಯಾಗಿವೆ. ಅಮೆರಿಕಾರೊಂದಿಗೆ ರಕ್ಷಣಾ ಒಪ್ಪಂದಗಳು ಮಹತ್ವವಾದವು. ಅಮೆರಿಕಾದ ಜನರಲ್ ಎಲೆಕ್ಟ್ರಿಕ್ ಭಾರತದಲ್ಲಿಹಿಂದೂಸ್ತಾನ್ ಏರೋನಾಟಿಕ್ಸ್ ಸಹಭಾಗಿತ್ವದಲ್ಲಿ ಜಿಇ-ಎಫ್ 414 ಜೆಟ್ ಎಂಜಿನ್ ಉತ್ಪಾದನೆ ಆರಂಭಿಸುವ ಒಪ್ಪಂದವೂ ಸೇರಿದೆ. ನೌಕಾಪಡೆ ಸೇರಲಿರುವ ಅತ್ಯಾಧುನಿಕ ದ್ರೋಣ್ ಖರೀದಿ ಕುರಿತು ಅನುಮತಿ ನೀಡಬಹುದು. ಅದರಲ್ಲೂ ರಷ್ಯಾ ಉಕ್ರೇನ್ ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಯುದ್ದದ ಹಿನ್ನೆಲೆಯಲ್ಲಿ ಅಮೆರಿಕಾ ಹಾಗೂ ಭಾರತ ಕೈಗೊಳ್ಳಲಿರುವ ಕೆಲವು ತೀರ್ಮಾನಗಳು ಜಾಗತಿಕ ಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿವೆ. ಗುರುವಾರ ಯುಎಸ್ ಕಾಂಗ್ರೆಸ್‌ನ ಜಂಟಿ ಸದನ ಉದ್ದೇಶಿಸಿ ಮಾತನಾಡುವರು. ಅಮರ ಶುಕ್ರವಾರ ವಾಷಿಂಗ್ಟನ್‌ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.
ವಿಭಾಗ