ವಾರಣಾಸಿಯಲ್ಲಿ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟ ಪ್ರಧಾನಿ ಮೋದಿ; ವಿಡಿಯೋ
Dec 17, 2023 09:23 PM IST
ವಾರಣಾಸಿಯಲ್ಲಿ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟ ಪ್ರಧಾನಿ ಮೋದಿ.
- Prime Minister Narendra Modi: ವಾರಣಾಸಿಯಲ್ಲಿ ನಡೆದ ರೋಡ್ಶೋನಲ್ಲಿ ತಮ್ಮ ಬೆಂಗಾವಲು ಪಡೆಯ ವಾಹನ ಮತ್ತು ತಮ್ಮ ವಾಹನವನ್ನು ನಿಲ್ಲಿಸಿ ಆ್ಯಂಬುಲೆನ್ಸ್ಗೆ ಪ್ರಧಾನಿ ಮೋದಿ ಅವರು ದಾರಿ ಮಾಡಿಕೊಟ್ಟಿದ್ದಾರೆ.
ನವದೆಹಲಿ: ಇಂದು ವಾರಣಾಸಿಯಲ್ಲಿ ನಡೆದ ರೋಡ್ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಸಂದೇಶವನ್ನು ಸಾರಿದ್ದಾರೆ. ರೋಡ್ಶೋ ನಡೆಸುತ್ತಿದ್ದ ಅವಧಿಯಲ್ಲಿ ಮೋದಿ ತಮ್ಮ ಮತ್ತು ಭದ್ರತಾ ಸಿಬ್ಬಂದಿ ವಾಹನಗಳನ್ನು ನಿಲ್ಲಿಸಿ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟರು.
ಮೋದಿ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ಮೋದಿ ಅವರು ವಾಹನವೊಂದರಲ್ಲಿ ಕುಳಿತಿದ್ದರು. ರಸ್ತೆ ಬದಿಗಳಲ್ಲಿ ಜನ ಸಂದಣಿ ಹೆಚ್ಚಿತ್ತು. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಸ್ವಾಗತ ಕೋರುತ್ತಿದ್ದರು. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಕೂಡ ಇದೇ ಹಾದಿಯಲ್ಲಿ ಸಾಗಿ ಬಂತು. ವಿಷಯ ತಿಳಿದ ಮೋದಿ, ಬದಿಗೆ ಸರಿಸುವಂತೆ ತಮ್ಮ ವಾಹನದ ಚಾಲಕನಿಗೆ ತಿಳಿಸಿದರು.
ಆ ಮೂಲಕ ಆ್ಯಂಬುಲೆನ್ಸ್ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಅವರ ವಾಹನಗಳು ಬ್ಯಾರಿಕೇಡ್ಗೆ ಬದಿಗೆ ನಿಧಾನವಾಗುತ್ತಿದ್ದಂತೆ ಆ್ಯಂಬುಲೆನ್ಸ್ ವೇಗವಾಗಿ ಚಲಿಸಿತು. ಈ ವಿಡಿಯೋವನ್ನು ಎನ್ಎನ್ಐ ಸುದ್ದಿ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಲ್ಲದೆ, ಪ್ರಧಾನಿ ಮೋದಿ ವಾರಣಾಸಿಗೆ ಬಂದಿರುವ ಉದ್ದೇಶವನ್ನೂ ತಿಳಿಸಿದೆ.
ಈ ಹಿಂದೆಯೂ ಆ್ಯಂಬುಲೆನ್ಸ್ಗೆ ಮೋದಿ ದಾರಿ ಬಿಟ್ಟಿದ್ದರು!
ವಿಐಪಿ ಸಂಸ್ಕೃತಿಯ ವಿರುದ್ಧ ದನಿಯೆತ್ತಿರುವ ಪ್ರಧಾನಿ ಅವರು ತಮ್ಮ ಬೆಂಗಾವಲು ವಾಹನವನ್ನು ಆಂಬ್ಯುಲೆನ್ಸ್‌ಗಾಗಿ ನಿಲ್ಲಿಸಿದ್ದು ಇದೇ ಮೊದಲಲ್ಲ. ಇದೇ ರೀತಿಯ ಘಟನೆ ಕಳೆದ ವರ್ಷ ಅಹಮದಾಬಾದ್ ಮತ್ತು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲೂ ವರದಿಯಾಗಿತ್ತು. 2019ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕ್ಯಾಮರಾಮನ್ ಮೂರ್ಛೆ ಹೋದ ನಂತರ ಮೋದಿ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಆ್ಯಂಬುಲೆನ್ಸ್ ಕರೆಸಿದ್ದರು.
ಕನ್ಯಾಕುಮಾರಿ-ವಾರಣಾಸಿಗೆ ಹೊಸ ರೈಲು
ಪ್ರಧಾನಿ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಗೆ 2 ದಿನಗಳ ಭೇಟಿಗೆ ಬಂದಿದ್ದು, ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಒಟ್ಟು 19 ಸಾವಿರ ಕೋಟಿ ಮೊತ್ತದ ವಿವಿಧ 37 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಾಶಿ ತಮಿಳು ಸಂಗಮಂನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಕನ್ಯಾಕುಮಾರಿ-ವಾರಣಾಸಿ ನಡುವೆ ಹೊಸ ರೈಲಿಗೂ ಹಸಿರು ನಿಶಾನೆ ತೋರಿದ್ದಾರೆ.
ಯಾತ್ರೆಯ ಯಶಸ್ಸಿಗೆ ಧನ್ಯವಾದ ಸಲ್ಲಿಸಿದ ಮೋದಿ
ಗುಜರಾತ್ನಲ್ಲಿ ಸೂರತ್ನಲ್ಲಿ ಡೈಮಂಡ್ ಬೋರ್ಸ್ ಉದ್ಘಾಟನೆ ಬಳಿಕ ವಾರಾಣಸಿಗೆ ಬಂದ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭವ್ಯ ಸ್ವಾಗತ ಕೋರಿದರು. ಈ ವೇಳೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದರು. ವಾರಾಣಸಿಯ ಕಟಿಂಗ್ ಮೆಮೋರಿಯಲ್ ಇಂಟರ್ ಕಾಲೇಜಿನಲ್ಲಿ ಈ ಯಾತ್ರೆಯ ಕಾರ್ಯಕ್ರಮ ಜರುಗಿತು. ಈ ಯಾತ್ರೆ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಡಿ.18ರಂದು ಸರ್ವವೇದ ಮಹಾಮಂದಿಕ್ಕೆ ಮೋದಿ ಭೇಟಿ
ಡಿಸೆಂಬರ್ 18ರಂದು ಸೋಮವಾರ ಸರ್ವವೇದ ಮಹಾಮಂದಿರಕ್ಕೆ ಭೇಟಿಕೊಡಲಿದ್ದು, ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ, 20 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಹಾಗೆ ವಾರಾಣಸಿಯಿಂದ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಚಾಲನೆ ನೀಡಲಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಅವಧಿಯಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.