Rahul Gandhi in Panipat: 'ದೇಶದ ಅರ್ಧದಷ್ಟು ಸಂಪತ್ತು ಕೇವಲ 100 ಶ್ರೀಮಂತರ ಬಳಿಯಿದೆ' ಎಂದ ರಾಹುಲ್
Jan 06, 2023 05:14 PM IST
ಪಾಣಿಪತ್ ಜಿಲ್ಲೆಯ ಸನೋಲಿ ಗ್ರಾಮದಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದರು.
- ಈ ಸರ್ಕಾರವು ಎರಡು ಭಾರತಗಳನ್ನು ಸೃಷ್ಟಿಸಿದೆ. ಅದರಲ್ಲಿ ಒಂದು ಬಡವರು ಮತ್ತು ಸಾಮಾನ್ಯ ಜನರು ವಾಸಿಸುವ ಒಂದು ಭಾರತ. ಮತ್ತೊಂದು ಎಲ್ಲಾ ಸಂಪತ್ತನ್ನು ಹೊಂದಿರುವ 200ರಿಂದ 300 ಜನರು ಮಾತ್ರ ವಾಸಿಸುವ ಮತ್ತೊಂದು ಭಾರತ ಎಂದು ರಾಹುಲ್ ಗಾಂಧಿ ಹೇಳಿದರು.
ಪಾಣಿಪತ್ : ಹರಿಯಾಣದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತದ ನಡಿಗೆ ಪುನರಾರಂಭವಾಗಿದೆ. ಉತ್ತರ ಪ್ರದೇಶದಿಂದ ಗುರುವಾರ ಸಂಜೆ ವೇಳೆಗೆ ಯಾತ್ರೆಯು ಹರಿಯಾಣ ಪ್ರವೇಶಿಸಿದೆ. ರಾತ್ರಿ ವಿರಾಮದ ಬಳಿಕ ಇಂದು ಪಾಣಿಪತ್‌ನ ಕುರಾರ್‌ನಿಂದ ಯಾತ್ರೆ ಆರಂಭವಾಗಿದೆ.
ಇಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು 112 ದಿನಗಳನ್ನು ಪೂರೈಸಿದೆ. ಪಾಣಿಪತ್‌ನಲ್ಲಿ ನಮಗೆ ಆತ್ಮೀಯ ಸ್ವಾಗತವನ್ನು ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದ ಕಾಂಗ್ರೆಸ್ ಸಂಸದ, “ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ. ನಮ್ಮ ದೇಶದ ಜನಸಂಖ್ಯೆ 140 ಕೋಟಿ. ಆದರೆ, ದೇಶದ ಒಟ್ಟು ಸಂಪತ್ತಿನ ಶೇಕಡ 50ರಷ್ಟು ಪಾಲನ್ನು ದೇಶದ 100 ಶ್ರೀಮಂತರು ಮಾತ್ರ ಹೊಂದಿದ್ದಾರೆ. ನಿಮಗೆ ಇದರಲ್ಲಿ ಏನಾದರೂ ನ್ಯಾಯ ಕಾಣುತ್ತಿದೆಯೇ? ಇದು ನರೇಂದ್ರ ಮೋದಿಯವರ ಭಾರತದ ವಾಸ್ತವ,” ಎಂದು ರಾಹುಲ್ ಹೇಳಿದ್ದಾರೆ.
“ನೀವು ಭಾರತದ ಎಲ್ಲಾ ಕಾರ್ಪೊರೇಟ್ ಲಾಭಗಳನ್ನು ನೋಡಿದರೆ, 90 ಪ್ರತಿಶತದಷ್ಟು ಲಾಭವು 20 ಕಂಪನಿಗಳು ಅಥವಾ ಉದ್ಯಮಿಗಳ ಕೈಯಲ್ಲಿದೆ. ಈ ದೇಶದ ಅರ್ಧದಷ್ಟು ಸಂಪತ್ತು ಕೇವಲ 100 ಜನರ ಕೈಯಲ್ಲಿದೆ. ಇದು ನರೇಂದ್ರ ಮೋದಿಯವರ ಭಾರತದ ಸತ್ಯ” ಎಂದು ಅವರು ಹೇಳಿದರು.
ಈ ಸರ್ಕಾರವು ಎರಡು ಭಾರತಗಳನ್ನು ಸೃಷ್ಟಿಸಿದೆ. ಅದರಲ್ಲಿ ಒಂದು ಬಡವರು ಮತ್ತು ಸಾಮಾನ್ಯ ಜನರು ವಾಸಿಸುವ ಒಂದು ಭಾರತ. ಮತ್ತೊಂದು ಎಲ್ಲಾ ಸಂಪತ್ತನ್ನು ಹೊಂದಿರುವ 200ರಿಂದ 300 ಜನರು ಮಾತ್ರ ವಾಸಿಸುವ ಮತ್ತೊಂದು ಭಾರತ ಎಂದು ಅವರು ಹೇಳಿದರು.
“ನಿಮ್ಮಲ್ಲಿ ಏನೂ ಇಲ್ಲ. ನಿಮ್ಮಲ್ಲಿರುವುದು ಈ ಪಾಣಿಪತ್ ಗಾಳಿಯಷ್ಟೇ. ಅದರಲ್ಲಿ ನೀವು ಉಸಿರಾಡಲು ಸಾಧ್ಯವಿಲ್ಲ. ಇದು ಕ್ಯಾನ್ಸರ್,” ಎಂದು ಅವರು ಹೇಳಿದರು.
“ಪಾಣಿಪತ್ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಕೇಂದ್ರವಾಗಿದೆ. ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಂತಹ ನಿರ್ಧಾರಗಳು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಹಾಳುಮಾಡಿದೆ. ಇದು ಪಾಣಿಪತ್ ಮಾತ್ರವಲ್ಲ. ಇಡೀ ದೇಶದ ಕಥೆಯಾಗಿದೆ” ಎಂದು ಗಾಂಧಿ ಹೇಳಿದರು.
ಜಿಎಸ್‌ಟಿ ಮತ್ತು ಅಪನಗದೀಕರಣ ದೇಶದ ಬೆನ್ನೆಲುಬನ್ನೇ ಮುರಿದಿದೆ. ಶೇಕಡ 38ರಷ್ಟು ನಿರುದ್ಯೋಗ ಪ್ರಮಾಣದೊಂದಿಗೆ ಹರಿಯಾಣ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ಕೇಂದ್ರದ ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ರಾಹುಲ್, “ರಾಜ್ಯದ ಶಕ್ತಿ ವ್ಯರ್ಥವಾಗುತ್ತಿದೆ. ಬಿಜೆಪಿ ನಾಯಕರು ತಮ್ಮನ್ನು ತಾವು ದೊಡ್ಡ ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ. ಲಕ್ಷಾಂತರ ಯುವಕರು ಭಾರತೀಯ ಸೇನೆಯನ್ನು ಸೇರಲು ಬಯಸುತ್ತಾರೆ. ಆದರೆ, ಈಗ ಅವರೆಲ್ಲರೂ ಹತಾಶರಾಗಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕೇವಲ 25 ಪ್ರತಿಶತದಷ್ಟು ಜನರಿಗೆ ಮಾತ್ರ ನಿಯಮಿತ ಉದ್ಯೋಗಗಳು ಸಿಗುತ್ತವೆ. ಉಳಿದವರೆಲ್ಲಾ ನಿರುದ್ಯೋಗಿಗಳಾಗಿ ಉಳಿಯುತ್ತಾರೆ” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ನಾನು ಸೈನಿಕರ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಅವರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಎಂದು ಗಾಂಧಿ ಹೇಳಿದರು.
ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ, ದೀಪೇಂದರ್ ಸಿಂಗ್ ಹೂಡಾ, ಕರಣ್ ಸಿಂಗ್ ದಲಾಲ್, ಉದಯ್ ಭಾನ್ ಮತ್ತು ಕುಲದೀಪ್ ಶರ್ಮಾ ಸೇರಿದಂತೆ ಹರಿಯಾಣದ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಗಾಂಧಿಯವರೊಂದಿಗೆ ಸೇರಿಕೊಂಡರು.
ರಾಹುಲ್ ಗಾಂಧಿ ತಾಯಿ ಹಾಗೂ ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ವೈರಲ್ ಉಸಿರಾಟದ ಸೋಂಕಿನ ಚಿಕಿತ್ಸೆಗಾಗಿ ಬುಧವಾರ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ಭೇಟಿಯಾಗಲು ಗುರುವಾರ ರಾತ್ರಿ ರಾಹುಲ್ ದೆಹಲಿಗೆ ತೆರಳಿದ್ದರು. ಹೀಗಾಗಿ ಯಾತ್ರೆಯ ಪುನರಾರಂಭ ಸ್ವಲ್ಪ ವಿಳಂಬವಾಯಿತು.