logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರಾಹುಲ್‌ ಗಾಂಧಿ: ಐತಿಹಾಸಿಕ ಎಂದು ಬಣ್ಣಿಸಿದ ಕಾಂಗ್ರೆಸ್‌

Rahul Gandhi: ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರಾಹುಲ್‌ ಗಾಂಧಿ: ಐತಿಹಾಸಿಕ ಎಂದು ಬಣ್ಣಿಸಿದ ಕಾಂಗ್ರೆಸ್‌

HT Kannada Desk HT Kannada

Jan 29, 2023 01:00 PM IST

google News

ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ

    • ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ್‌ ಜೋಡೋ ಯಾತ್ರೆಯ ಕೊನೆಯ ದಿನವಾದ ಇಂದು(ಜ.29-ಭಾನುವಾರ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಕಾಂಗ್ರೆಸ್‌ ಈ ಕ್ಷಣವನ್ನು ಐತಿಹಾಸಿಕ ಎಂದು ಬಣ್ಣಿಸಿದೆ.
ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ
ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ (Verified Twitter)

ಶ್ರೀನಗರ: ಭಾರತ್‌ ಜೋಡೋ ಯಾತ್ರೆಯ ಕೊನೆಯ ದಿನವಾದ ಇಂದು(ಜ.29-ಭಾನುವಾರ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಕಾಂಗ್ರೆಸ್‌ ಈ ಕ್ಷಣವನ್ನು ಐತಿಹಾಸಿಕ ಎಂದು ಬಣ್ಣಿಸಿದೆ.

ಭಾರತ್‌ ಜೋಡೋ ಯಾತ್ರೆಯ ಶ್ರೀನಗರವನ್ನು ಪ್ರವೇಶಿಸಿದ್ದು, ಈ ವೇಳೆ ಲಾಲ್‌ ಚೌಕ್‌ನಲ್ಲಿ ರಾಹುಲ್‌ ಗಾಂಧಿ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ನೆರೆದಿದ್ದ ನೂರಾರು ಭಾರತ್‌ ಜೋಡೋ ಯಾತ್ರಿಗಳು ಜೈಘೋಷ ಮೊಳಗಿಸಿದರು.

ರಾಹುಲ್‌ ಗಾಂಧಿ ಅವರು ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿವುದು ಐತಿಹಾಸಿಕ ಎಂದಿರುವ ಕಾಂಗ್ರೆಸ್‌, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರೀತಿಯನ್ನು ಹಂಚಿದ ನಾಯಕ ಸುದೀರ್ಘ ನಡಿಗೆಯ ಮೂಲಕ ಇತಿಹಾಸ ಬರೆದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದೆ.

ಇದು ಕಾಂಗ್ರೆಸ್‌ ಪಾಲಿಗೆ ಐತಿಹಾಸಿಕ ಕ್ಷಣ. ರಾಹುಲ್‌ ಗಾಂಧಿ ಅವರು ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ. ಇಡೀ ಭಾರತ ಒಂದಾಗಿದೆ ಎಂಬ ಸಂದೇಶವನ್ನು ಸಾರುವಲ್ಲಿ ರಾಹುಲ್‌ ಗಾಂಧಿ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ಭಾರತ್‌ ಜೋಡೋ ಯಾತ್ರೆಯ ನಡಿಗೆ ಇಂದು ಮುಕ್ತಾಯಗೊಂಡಿದ್ದು, ನಾಳೆ (ಜ.30-ಸೋಮವಾರ) ಶ್ರೀನಗರದಲ್ಲಿ ಬೃಹತ್‌ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.

ಈ ಸಮಾರಂಭದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಮುನ್ನಡೆಸಿದ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದ ಬಳಿಕ, 'ಹಾಥ್‌ ಸೇ ಹಾಥ್‌ ಜೋಡೋ ' ಅಭಿಯಾನವನ್ನು ಆರಂಭಿಸಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿದೆ.

ನಾಳೆ(ಜ.30-ಸೋಮವಾರ) ಶ್ರೀನಗರದಲ್ಲಿ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವಂತೆ 21 ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್‌ ಪತ್ರ ಮುಖೇನ ಮನವಿ ಮಾಡಿದೆ. ಆದರೆ ಕೇವಲ 12 ವಿಪಕ್ಷಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಉಳಿದ 9 ಪಕ್ಷಗಳು ಭದ್ರತೆಯ ಕಾರಣಕ್ಕೆ ಸಮಾರಂಭದಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿವೆ.

ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಉದ್ಧವ್ ಠಾಕ್ರೆ ಅವರ ಶಿವಸೇನೆ, ಸಿಪಿಐ(ಎಂ), ಸಿ.ಪಿ.ಐ. , ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಮತ್ತು ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳು, ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಶ್ರೀನಗರದಲ್ಲಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತೆಲಗು ದೇಶಂ ಪಕ್ಷ ಸೇರಿದಂತೆ ಒಟ್ಟು 9 ವಿಪಕ್ಷಗಳು ಭಾರತ್‌ ಜೋಡೋ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗದಿರುವ ನಿರ್ಣಯ ಕೈಗೊಂಡಿವೆ. ಈ ಪೈಕಿ ಕೆಲವು ಪಕ್ಷಗಳು ತಮ್ಮ ಗೈರು ಹಾಜರಿಗೆ ಭದ್ರತೆಯ ಕಾರಣ ನೀಡಿರುವುದು ಗಮನ ಸೆಳೆದಿದೆ.

ಒಟ್ಟಿನಲ್ಲಿ ಭಾರತ್‌ ಜೋಡೋ ಯಾತ್ರೆಗೆ ಅಂತಿಮ ತೆರೆ ಬಿದ್ದಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ, ರಾಹುಲ್‌ ಗಾಂಧಿ ದೇಶದ ಗಮನ ಸೆಳೆದಿದ್ದಾರೆ ಎಂದು ಹೇಳಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ