Rahul Gandhi: ಯಾತ್ರೆ ವೇಳೆ ಬಿಳಿ ಟಿಶರ್ಟ್ ಧರಿಸಿದ್ದಕ್ಕೆ ಕಾರಣ ತಿಳಿಸಿ ಭಾವುಕರಾದ ರಾಹುಲ್
Jan 30, 2023 04:29 PM IST
ಶ್ರೀನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ವಂದನೆ ಸಲ್ಲಿಸಿದ ರಾಹುಲ್ ಗಾಂಧಿ
- ಭಾಷಣದ ವೇಳೆ ಮಾಜಿ ಕಾಂಗ್ರೆಸ್ ಅಧ್ಯಕ್ಷರು ತಾವು ಯಾತ್ರೆಯ ಸಮಯದಲ್ಲಿ ಭೇಟಿಯಾದ ಬಾಲಕಿಯೊಬ್ಬಳ ಕಥೆಯನ್ನು ವಿವರಿಸಿದರು. ಆಕೆ ತಮ್ಮ ಕೈಯಲ್ಲಿ ಕೊಟ್ಟ ಪತ್ರವೊಂದರ ಬಗ್ಗೆಯೂ ಮಾತನಾಡಿದರು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಭಾರತ್ ಜೋಡೋ ಯಾತ್ರೆ ಅಧಿಕೃತವಾಗಿ ಮುಕ್ತಾಯಗೊಂಡಿತು. ದೇಶಾದ್ಯಂತ ಸಾವಿರಾರು ಕಿಲೋಮೀಟರ್ ನಡಿಗೆಯಲ್ಲಿ ಸಾಗಿದ ಸಂಸದ ರಾಹುಲ್ ಗಾಂಧಿ, ಭಾರಿ ಚಳಿಯ ನಡುವೆಯೂ ಯಾವುದೇ ರೀತಿಯ ದಪ್ಪನೆಯ ಬಟ್ಟೆ ಅಥವಾ ಜಾಕೆಟ್ ಧರಿಸದೆ ಗಮನ ಸೆಳೆದಿದ್ದರು. ಯಾತ್ರೆಯ ಅಂತಿಮ ದಿನದಂದು ಇದಕ್ಕೆ ಕಾಂಗ್ರೆಸ್ ನಾಯಕ ಕಾರಣ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಕೈ ನಾಯಕ ತುಸು ಭಾವುಕರಾದರು.
ಭಾರಿ ಹಿಮಪಾತದ ನಡುವೆಯೂ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿರು. ಭಾಷಣದ ವೇಳೆ ರಾಹುಲ್, ತಮಗಾದ ಅನುಭವವನ್ನು ಹಂಚಿಕೊಂಡರು. ಭಾರತ್ ಜೋಡೋ ಯಾತ್ರೆಯಲ್ಲಿ ಭೇಟಿಯಾದ ನಾಲ್ಕು ಮಕ್ಕಳ ಕಥೆಯನ್ನು ರಾಹುಲ್ ಗಾಂಧಿ ವಿವರಿಸಿದರು. ಆ ನಾಲ್ಕು ಮಕ್ಕಳು ಬೇರೆ ಯಾರೂ ಅಲ್ಲ. ಮೈಕೊರೆಯುವ ಚಳಿಯಲ್ಲೂ ಯಾವುದೇ ಸ್ವೆಟರ್ ಧರಿಸದೆ ನಡುಗುತ್ತಿದ್ದ ಭಿಕ್ಷುಕರು ಎಂದು ಹೇಳಿದರು. ಯಾತ್ರೆಯುದ್ದಕ್ಕೂ ಜಾಕೆಟ್ ಧರಿಸದೆ ಮುನ್ನಡೆಯಲು ಈ ಘಟನೆ ಪ್ರೇರೇಪಿಸಿತು ಎಂದು ಹೇಳಿದರು.
“...ಆ ನಾಲ್ವರು ಮಕ್ಕಳು ನನ್ನ ಬಳಿಗೆ ಬಂದರು. ಅವರಲ್ಲಿ ಹೆಚ್ಚು ಬಟ್ಟೆಯಿರಲಿಲ್ಲ. ನಾನು ಅವರನ್ನು ತಬ್ಬಿಕೊಂಡೆ. ಅವರು ಚಳಿಯಿಂದ ನಡುಗುತ್ತಿದ್ದರು. ಬಹುಶಃ ಅವರಿಗೆ ತಿನ್ನಲು ಆಹಾರವೂ ಇಲ್ಲ. ಅವರಿಗೆ ಧರಿಸಲು ಇಲ್ಲದಿರುವ ಜಾಕೆಟ್ ಅಥವಾ ಸ್ವೆಟರ್ ನನಗೇಕೆ ಎಂದು ನಾನು ಯೋಚಿಸಿದೆ. ಹೀಗಾಗಿ ನಾನು ಕೂಡ ಜಾಕೆಟ್ ಧರಿಸಬಾರದು ಎಂದ ನಿರ್ಧರಿಸಿದೆ,” ಎಂದು ಗಾಂಧಿ ಹೇಳಿದರು.
ಭಾಷಣದ ವೇಳೆ ಮಾಜಿ ಕಾಂಗ್ರೆಸ್ ಅಧ್ಯಕ್ಷರು ತಾವು ಯಾತ್ರೆಯ ಸಮಯದಲ್ಲಿ ಭೇಟಿಯಾದ ಬಾಲಕಿಯೊಬ್ಬಳ ಕಥೆಯನ್ನು ವಿವರಿಸಿದರು. ಆಕೆ ತಮ್ಮ ಕೈಯಲ್ಲಿ ಕೊಟ್ಟ ಪತ್ರವೊಂದರ ಬಗ್ಗೆಯೂ ಮಾತನಾಡಿದರು.
“ನಾನು ಯಾತ್ರೆಯಿಂದ ಬಹಳಷ್ಟು ಕಲಿತಿದ್ದೇನೆ. ಒಂದು ದಿನ, ಯಾತ್ರೆಯಲ್ಲಿ ನಡೆಯಲು ನನಗೆ ಬಹಳ ಕಷ್ಟವಾಗುತ್ತಿತ್ತು. ನಾನು ತುಂಬಾ ನೋವನ್ನು ಅನುಭವಿಸಿದೆ. ನಾನು ಇನ್ನೂ 6ರಿಂದ 7 ಗಂಟೆ ನಡೆಯಬೇಕಿತ್ತು. ಆದರೆ, ಒಬ್ಬಳು ಚಿಕ್ಕ ಹುಡುಗಿ ನನ್ನ ಬಳಿಗೆ ಓಡಿ ಬಂದು 'ನಾನೊಂದು ಪತ್ರ ಬರೆದಿದ್ದೇನೆ' ಎಂದು ಎಂದು ಹೇಳಿದಳು. ಅವಳು ನನ್ನನ್ನು ತಬ್ಬಿ ಬಳಿಕ ಓಡಿಹೋದಳು. ನಾನು ಆಕೆ ಬರೆದಿದ್ದನ್ನು ಓದಲು ಪ್ರಾರಂಭಿಸಿದೆ” ಎಂದು ಗಾಂಧಿ ಹೇಳಿದರು.
ಆಕೆ ಬರೆದಿದ್ದು ಇಷ್ಟೇ, “ನಿಮ್ಮ ಮೊಣಕಾಲು ನೋಯುತ್ತಿರುವುದು ನನಗೆ ತಿಳಿಯುತ್ತಿದೆ. ಏಕೆಂದರೆ ನೀವು ನಿಮ್ಮ ಕಾಲಿನ ಮೇಲೆ ಒತ್ತಡ ಹಾಕಿದಾಗ ಅದು ನಿಮ್ಮ ಮುಖದ ಮೇಲೆ ಪ್ರತಿಬಿಂಬಿಸುತ್ತಿದೆ. ನಾನು ನಿಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ, ನಾನು ನನ್ನ ಹೃದಯದಿಂದ ನಿಮ್ಮ ಜೊತೆಯಲ್ಲೇ ನಡೆಯುತ್ತಿದ್ದೇನೆ. ಏಕೆಂದರೆ ನೀವು ನನಗಾಗಿ ಮತ್ತು ನನ್ನ ಭವಿಷ್ಯಕ್ಕಾಗಿ ನಡೆಯುತ್ತಿದ್ದೀರಿ ಎಂದು ನನಗೆ ತಿಳಿದಿದೆ,” ಎಂದು ಬರೆದಿದ್ದಾಗಿ ರಾಹುಲ್ ಹೇಳಿದರು. ಆ ಕ್ಷಣದಲ್ಲಿಯೇ ನನ್ನ ನೋವು ಮಾಯವಾಯಿತು, ಎಂದು ಗಾಂಧಿ ಹೇಳಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮಂತೆ ಯಾತ್ರೆ ಕೈಗೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಗಾಂಧಿ, ಅವರು ಹೆದರಿ ಅದನ್ನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬಿಜೆಪಿ ನಾಯಕರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ನಾನು ಖಂಡಿತಾ ಹೇಳಬಲ್ಲೆ. ಅವರು ಅದನ್ನು ಮಾಡುವುದಿಲ್ಲ. ಅವರು ಖಂಡಿತಾ ಭಯಪಡುತ್ತಾರೆ” ಎಂದು ಹೇಳಿದರು.