Reinstate Donald Trump?: ಟ್ವಿಟ್ಟರ್‌ನಲ್ಲಿ ಡೊನಾಲ್ಡ್ ಟ್ರಂಪ್ ಖಾತೆ ಮರುಸ್ಥಾಪಿಸಬೇಕೆ? ಟ್ವಿಟ್ಟರ್ ಮತಗಣನೆ ಆರಂಭಿಸಿದ ಎಲಾನ್ ಮಸ್ಕ್
Nov 19, 2022 04:40 PM IST
Reinstate Donald Trump?: ಟ್ವಿಟ್ಟರ್‌ನಲ್ಲಿ ಡೊನಾಲ್ಡ್ ಟ್ರಂಪ್ ಖಾತೆ ಮರುಸ್ಥಾಪಿಸಬೇಕೆ?
- ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಬೇಕೆ? ಬೇಡವೇ? ಎಂಬ ವಿಷಯದ ಕುರಿತು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿಯೇ ಜನಮತ ಆರಂಭಿಸಿದ್ದಾರೆ.
ವಾಷಿಂಗ್ಟನ್: ಮೈಕ್ರೊಬ್ಲಾಗಿಂಗ್ ತಾಣವಾದ ಟ್ವಿಟ್ಟರ್‌ನಲ್ಲಿ ಈ ಹಿಂದೆ ನಿಷೇಧಕ್ಕೆ ಒಳಾಗದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಬೇಕೆ? ಬೇಡವೇ? ಎಂಬ ವಿಷಯದ ಕುರಿತು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿಯೇ ಜನಮತ ಆರಂಭಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಬೇಕೆ? ಎಂದು ಶತಕೋಟ್ಯಧಿಪತಿ ಟ್ವಿಟ್ಟರ್ ಮಾಲೀಕರಾದ ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳನ್ನು ನೀಡಲಾಗಿದ್ದು, ಟ್ವಿಟ್ಟರ್ ಬಳಕೆದಾರರು ಮತ ಚಲಾಯಿಸುತ್ತಿದ್ದಾರೆ. ಟ್ರಂಪ್ ಮತಗಣನೆಗೆ ಗಂಟೆಗೆ ಒಂದು ದಶಲಕ್ಷ ವೋಟ್ ಬೀಳುತ್ತಿದೆ ಎಂದು ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ.
2020ರ ಆರಂಭದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಕ್ಯಾಪಿಟಲ್ ಹಿಲ್‌ನಲ್ಲಿ ಜನವರಿ ಆರರಂದು ನಡೆದ ಗಲಾಟೆಯ ಬಳಿಕ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಇದೀಗ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿ ಹಲವು ಹೊಸ ನಿಯಮಗಳನ್ನು ಆರಂಭಿಸುತ್ತಿದ್ದು, ಇವರು ಡೊನಾಲ್ಟ್ ಟ್ರಂಪ್ ಖಾತೆಯನ್ನು ಮರು ಸ್ಥಾಪಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ.
ಟ್ವಿಟ್ಟರ್‌ನ ಕೆಲವು ನಿಯಮಗಳನ್ನು ಮುರಿಯುವ ಸಲುವಾಗಿ ಎಲಾನ್ ಮಸ್ಕ್ ನಿನ್ನೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಅನಿರ್ದಿಷ್ಟ ಅವಧಿಗೆ ನಿಷೇಧಕ್ಕೆ ಒಳಗಾದ ಹಲವು ಖಾತೆಗಳನ್ನು ಮರುಸ್ಥಾಪಿಸಲು ಆರಂಭಿಸಿದ್ದಾರೆ. ಲೇಖಕ ಜೋರ್ಡಾನ್ ಪೀಟರ್ಸನ್, ಹಾಸ್ಯನಟ ಕ್ಯಾಥಿ ಗ್ರಿಫಿನ್ ಸೇರಿದಂತೆ ಹಲವು ಖಾತೆಗಳನ್ನು ಮರುಸ್ಥಾಪಿಸಿದ್ದಾರೆ.
"ಹೊಸ ಟ್ವಿಟ್ಟರ್ ನೀತಿಯು ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ನಕಾರಾತ್ಮಕ ಮತ್ತು ದ್ವೇಷದ ಟ್ವೀಟ್‌ಗಳನ್ನು ಸಹಿಸುವುದಿಲ್ಲಲ. ಟ್ವಿಟ್ಟರ್‌ಗೆ ಯಾವುದೇ ಜಾಹೀರಾತು ಅಥವಾ ಇತರೆ ಆದಾಯಗಳು ಇಲ್ಲ. ಇದಕ್ಕೆ ಪರಿಹಾರ ಹುಡುಕದ ಹೊರತು ಬೇರೆ ದಾರಿಯಿಲ್ಲʼʼ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಕಂಪನಿಯ ಕಠಿಣ ಉದ್ಯೋಗದ ವಾತಾವರಣಕ್ಕೆ ಹೊಂದಿಕೊಳ್ಳಲು ಬಯಸದೆ, ಎಲಾನ್ ಮಸ್ಕ್ ನೀಡಿದ ಡೆಡ್‌ಲೈನ್‌ಗೆ ಮುಂಚಿತವಾಗಿಯೇ ನೂರಾರು ಉದ್ಯೋಗಿಗಳು ಮೊನ್ನೆ ರಾಜೀನಾಮೆ ನೀಡಿದ್ದರು.
ನೂರಾರು ಉದ್ಯೋಗಿಗಳು ಕೆಲಸ ಬಿಟ್ಟ ಹಿನ್ನಲೆಯಲ್ಲಿ ಟ್ವಿಟ್ಟರ್ ಕಂಪನಿಯು ತನ್ನ ಕೆಲವು ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. "ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತ ಕಂಪನಿಯಲ್ಲಿ ಇರಿ ಅಥವಾ ಮೂರು ತಿಂಗಳ ವೇತನದೊಂದಿಗೆ ಕಂಪನಿ ಬಿಡಿʼʼ ಎಂದು ಎಲಾನ್ ಮಸ್ಕ್ ಅವರು ಉದ್ಯೋಗಿಗಳಿಗೆ ಮೆಮೊ ನೀಡಿದ್ದರು.
ಬಹುತೇಕ ಉದ್ಯೋಗಿಗಳು ಎರಡನೆಯ ಆಯ್ಕೆಯನ್ನು ಆಯ್ಕೆ ಮಾಡಿದ್ದು, ಕೆಲಸ ಬಿಟ್ಟಿದ್ದಾರೆ. ಇದು ಕಂಪನಿಗೆ ಇನ್ನೊಂದು ಹೊಡೆತವಾಗಿದೆ. ಈ ಹಿಂದೆ ಇವರು ಒಂದಿಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಅವರ ಅವಶ್ಯಕತೆಯನ್ನು ಅರಿತು ವಾಪಸ್ ಕರೆದಿದ್ದರು. ಈಗ ನೂರಾರು ಉದ್ಯೋಗಿಗಳು ಕೆಲಸ ತೊರೆದಿದ್ದು, ಎಲಾನ್ ಮಸ್ಕ್‌ಗೆ ಮುಖಭಂಗವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಮೂರು ವಾರದ ಹಿಂದೆ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಎಲಾನ್ ಮಸ್ಕ್ ಅವರು ಅರ್ಧದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಇದರೊಂದಿಗೆ ಸಾವಿರಾರು ಗುತ್ತಿಗೆ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ವಿಭಾಗ