Nikki Haley: ಸೋಲುವ ವಯಸ್ಕರಿಗಿಂತ ಹೊಸ ತಲೆಮಾರಿನ ನಾಯಕರಿಗೆ ಮನ್ನಣೆ ನೀಡಿ: ಟ್ರಂಪ್ ವಿರುದ್ಧ ನಿಕ್ಕಿ ಹ್ಯಾಲೆ ಪರೋಕ್ಷ ವಾಗ್ದಾಳಿ!
Mar 04, 2023 09:31 AM IST
ನಿಕ್ಕಿ ಹ್ಯಾಲೆ
- ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲೆ, ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಅವರ ವಯಸ್ಸಿನ ಬಗ್ಗೆ ಚಕಾರ ಎತ್ತಿರುವ ನಿಕ್ಕಿ ಹ್ಯಾಲೆ, ಅಮೆರಿಕನ್ನರು ಹೊಸ ತಲೆಮಾರಿನ ನಾಯಕತ್ವಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ.
ವಾಷಿಂಗ್ಟನ್: ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲೆ, ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ವಯಸ್ಸಿನ ಬಗ್ಗೆ ಚಕಾರ ಎತ್ತಿರುವ ನಿಕ್ಕಿ ಹ್ಯಾಲೆ, ಅಮೆರಿಕನ್ನರು ಹೊಸ ತಲೆಮಾರಿನ ನಾಯಕತ್ವಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಾಷಿಂಗ್ಟನ್‌ನ ಹೊರಗೆ ನಡೆದ ವಾರ್ಷಿಕ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ (CPAC) ಉದ್ದೇಶಿಸಿ ಮಾತನಾಡಿದ ನಿಕ್ಕಿ ಹ್ಯಾಲೆ, ನೀವು ಪ್ರತಿಬಾರಿಯೂ ಸೋಲುವ ವಯಸ್ಕರಿಗಿಂತ, ಹೊಸ ತಲೆಮಾರಿನ ನಾಯಕರಿಗೆ ಮನ್ನಣೆ ನೀಡುವುದು ಉತ್ತಮ ಎಂದು ಹೇಳಿದ್ದಾರೆ. ಈ ಮೂಲಕ 76 ವರ್ಷದ ಡೊನಾಲ್ಡ್ ಟ್ರಂಪ್ ಅವರನ್ನು ನಿಕ್ಕಿ ಹ್ಯಾಲೆ ಪರೋಕ್ಷವಾಗಿ ಟಾರ್ಗೆಟ್ ಮಾಡಿದರು.
ದಕ್ಷಿಣ ಕೊರೊಲಿನಾದ ಮಾಜಿ ಗವರ್ನರ್ ಆಗಿರುವ 51 ವರ್ಷದ ನಿಕ್ಕಿ ಹ್ಯಾಲೆ ಅವರನ್ನು, 2017ರಲ್ಲಿ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ರಾಯಭಾರಿಯಾಗಿ ನೇಮಿಸಿದ್ದರು.
ಇದೀಗ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ, ನಿಕ್ಕಿ ಹ್ಯಾಲೆ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಏರ್ಪಡಲಿದೆ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಲು ತಮ್ಮ ಮಾಜಿ ಬಾಸ್ ಡೊನಾಲ್ಡ್ ಟ್ರಂಪ್ ವಿರುದ್ಧ ತೊಡೆ ತಟ್ಟಿರುವ ನಿಕ್ಕಿ ಹ್ಯಾಲೆ, ಅಮೆರಿಕನ್ನರು ಹೊಸ ಪೀಳಿಗೆಯ ನಾಯಕತ್ವವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
75 ವರ್ಷಕ್ಕಿಂತ ಮೇಲ್ಪಟ್ಟ ರಾಜಕಾರಣಿಗಳು ತಮ್ಮ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಬೇಕು. ಅಮೆರಿಕನ್ನರು ಹೊಸ ಪೀಳಿಗೆಯ ನಾಯಕರ ಆಲೋಚನೆಗಳ ಬಗ್ಗೆ ಚಿಂತಿಸಬೇಕು. ಅಮೆರಿಕವನ್ನು ಮುನ್ನಡೆಸಲು ಯಾರು ಸಮರ್ಥರು ಎಂಬುದನ್ನು ನಿರ್ಧರಿಸಬೇಕು ಎಂದು ನಿಕ್ಕಿ ಹ್ಯಾಲೆ ಆಗ್ರಹಿಸಿದ್ದಾರೆ.
ಅಮೆರಿಕ ಹೊಸ ಚಿಂತೆನೆಯ ಆಧಾರದ ಮೇಲೆ ಮುನ್ನಡೆಯಬೇಕಿದ್ದು, ಇದಕ್ಕಾಗಿ ಹೊಸ ನಾಯಕತ್ವ ಇಂದಿನ ತುರ್ತು ಅಗತ್ಯವಾಗಿದೆ. ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲು, ಹೊಸ ನಾಯಕತ್ವವನ್ನು ಒಪ್ಪಿಕೊಳ್ಳುವ ಸಂದೇಶವನ್ನು ನಮಗೆ ನೀಡಿದೆ. ಅಮೆರಿಕದ ಒಳಿತಿಗಾಗಿ ಅಮೆರಿಕನ್ನರು ಹೊಸ ಪೀಳಿಗೆಯ ನಾಯಕರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ನಿಕ್ಕಿ ಹ್ಯಾಲೆ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಸಮ್ಮೇಳನವನ್ನು ಉದ್ದೇಶಿಸಿ ಡೊನಾಲ್ಡ್ ಟ್ರಂಪ್ ಕೂಡ ಭಾಷಣ ಮಾಡಿದ್ದು, ಅಮೆರಿಕವನ್ನು ಮತ್ತೆ ವಿಶ್ವದ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ತಮ್ಮನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಬಿಡಲೊಪ್ಪದ ಟ್ರಂಪ್, "ಮೇಕ್ ಅಮೆರಿಕಾ ಗ್ರೇಟ್ ಅಗೇನ್" ಘೋಷವಾಕ್ಯದೊಂದಿಗೆ ಮತ್ತೆ ಅಧ್ಯಕ್ಷೀಯ ಅಖಾಡಕ್ಕೆ ಇಳಿಯಲು ಕಸರತ್ತು ನಡೆಸುತ್ತಿದ್ದಾರೆ.
ನಾವು ಅಮೆರಿಕವನ್ನು ಕೈಲಾಗದವರಿಂದ ರಕ್ಷಿಸಬೇಕಿದೆ. ಡೆಮಾಕ್ರೆಟಿಕ್ ಪಕ್ಷದ ಆಡಳಿತದಲ್ಲಿ ಅಮೆರಿಕ ತನ್ನ ಜಾಗತಿಕ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಅಮೆರಿಕದ ಸ್ಥಾನವನ್ನು ಮತ್ತೊಂದು ರಾಷ್ಟ್ರ ತುಂಬುದ ಮೊದಲು, ನಾವು ಎಚ್ಚೆತ್ತುಕೊಳ್ಳಬೇಕು ಎಂದು ಡೊನಾಲ್ಡ್ ಟ್ರಂಪ್ ಮಾರ್ಮಿಕವಾಗಿ ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿಸಿರುವ ಡೊನಾಲ್ಡ್ ಟ್ರಂಪ್, ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅಮೆರಿಕದ ಜಾಗತಿಕ ವರ್ಚಸ್ಸನ್ನು ಬೈಡನ್ ಮಣ್ಣುಪಾಲು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ನನ್ನ ನಾಲ್ಕು ವರ್ಷಗಳ ಆಡಳಿತದಲ್ಲಿ ಅಮೆರಿಕದ ಗೌರವ ಉತ್ತುಂಗದಲ್ಲಿತ್ತು ಎಂದೂ ಟ್ರಂಪ್ ವಾದಿಸಿದ್ದಾರೆ.
ಒಟ್ಟಿನಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಡೊನಾಲ್ಡ್ ಟ್ರಂಪ್ ಮತ್ತು ನಿಕ್ಕಿ ಹ್ಯಾಲೆ ನಡೆಯುತ್ತಿರುವ ಈ ಸ್ಪರ್ಧೆ ಇದೀಗ ಜಾಗತಿಕವಾಗಿ ಗಮನ ಸೆಳೆಯುತ್ತಿದೆ.
ವಿಭಾಗ