Moscow Concert Attack: ರಷ್ಯಾದಲ್ಲಿ ರಕ್ತದೋಕುಳಿ; ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ಐಸಿಸ್ ದಾಳಿಗೆ 70 ಕ್ಕೂ ಹೆಚ್ಚು ಸಾವು, 10 ಅಂಶಗಳು
Mar 23, 2024 10:37 AM IST
ಮಾಸ್ಕೋ ಕನ್ಸರ್ಟ್ ದಾಳಿ: ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳದಲ್ಲಿ ಕಂಡುಬಂದ ದೃಶ್ಯ.
ಮಾಸ್ಕೋ ಸಂಗೀತ ಸಭಾಂಗಣದಲ್ಲಿ ಶುಕ್ರವಾರ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ಇಲ್ಲಿದೆ ಗಮನಸೆಳೆದ 10 ಅಂಶಗಳು.
ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಶುಕ್ರವಾರ ರಾತ್ರಿ ಬಂದೂಕುಧಾರಿಗಳು ಸಂಗೀತ ಕಛೇರಿ ಸಭಾಂಗಣಕ್ಕೆ ನುಗ್ಗಿ ಗುಂಡು ಹಾರಿಸಿದ್ದರ (Moscow concert attack) ಪರಿಣಾಮ ಕನಿಷ್ಠ 70 ಜನ ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡರು. ಐಸಿಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ (Crocus City Hall) ನಲ್ಲಿ ಪಿಕ್ನಿಕ್ ಅವರ ಸಂಗೀತ ಕಛೇರಿ ಪ್ರಾರಂಭವಾಗುವ ಕೊಂಚ ಮೊದಲು ಸ್ವಯಂಚಾಲಿತ ಗುಂಡಿನ ದಾಳಿಯ ಸದ್ದು ಕೇಳಿಸಿತು. ತತ್‌ಕ್ಷಣವೇ ಅಲ್ಲಿದ್ದ ಸಭಿಕರು ಸಭಾಂಗಣದ ಆಸನಗಳ ಹಿಂದೆ ಅಡಗಿಕೊಂಡರು ಅಥವಾ ಗುಂಡುಗಳಿಂದ ತಪ್ಪಿಸಿಕೊಳ್ಳಲು ನೆಲಮಾಳಿಗೆ ಅಥವಾ ಛಾವಣಿಯ ಪ್ರವೇಶದ್ವಾರಗಳ ಕಡೆಗೆ ಓಡಿದರು. ಈ ಗೊಂದಲದ ನಡುವೆ ಭಾರಿ ಪ್ರಮಾಣದ ಸಾವು ನೋವು ಸಂಭವಿಸಿದೆ.
ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಐಸಿಸ್ ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ಟೆಲಿಗ್ರಾಮ್ ಗ್ರೂಪ್‌ನಲ್ಲಿ ಭಯೋತ್ಪಾದಕ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡು ಚುಟುಕು ಹೇಳಿಕೆ ನೀಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ಉಗ್ರ ದಾಳಿ; ಗಮನಸೆಳೆದ 10 ಅಂಶಗಳು
1) ಮಾಸ್ಕೋದಲ್ಲಿರುವ ಕ್ರೋಕಸ್ ಸಿಟಿ ಹಾಲ್ (Crocus City Hall)ಗೆ ನುಗ್ಗಿದ ಕೆಲವು ಬಂದೂಕುದಾರಿಗಳು ಅಲ್ಲಿದ್ದ ಸಭಿಕರ ಮೇಲೆ ಗುಂಡು ಹಾರಿಸಲಾರಂಭಿಸಿದರು. ಈ ದಾಳಿ ಶುಕ್ರವಾರ ನಡೆದಿದ್ದು, ದಾಳಿಕೋರರು ಮುಖಮರೆಮಾಚುವಂತೆ ಉಡುಪು ಧರಿಸಿದ್ದರು. ಕಟ್ಟಡದೊಳಗೆ ಜನಸಮೂಹದ ಮೇಲೆ ಗುಂಡುಹಾರಿಸಿದ್ದಲ್ಲದೆ, ಗ್ರೆನೇಡ್, ಫೈರ್ ಬಾಂಬ್‌ಗಳನ್ನು ಎಸೆದರು.
2) ಕ್ರೋಕಸ್ ಸಿಟಿ ಮಾಲ್ ದಾಳಿ ನಡೆದ ಕೂಡಲೇ ಅಲ್ಲಿಗೆ ಎಸ್‌ಒಬಿಆರ್ ವಿಶೇಷ ಪೊಲೀಸ್ ಪಡೆ, ಓಮೊನ್ ಗಲಭೆ ವಿರೋಧಿ (OMON anti-riot) ಪಡೆ ಸ್ಥಳಕ್ಕೆ ತಲುಪಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಶುರುಮಾಡಿದೆ. ದಾಳಿ ನಡೆದಾಗ ಸಿಟಿಮಾಲ್‌ನಲ್ಲಿ 6 ಸಾವಿರಕ್ಕೂ ಹೆಚ್ಚು ಜನರಿದ್ದರು. ಈ ಕಟ್ಟಡದ ನೆಲಮಾಳಿಗೆಯಲ್ಲಿ ರಕ್ಷಣೆ ಪಡೆದಿದ್ದ 100 ಜನರನ್ನು ಸ್ಥಳಾಂತರಿಸಲಾಗಿದೆ.
3) "ಇಡೀ ವಿಶ್ವ ಸಮುದಾಯವು ಈ ಹೇಯ ಅಪರಾಧವನ್ನು ಖಂಡಿಸಬೇಕು!" ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಟೆಲಿಗ್ರಾಮ್ ಮೂಲಕ ವಿನಂತಿಸಿದೆ.
4) ಅಮರಿಕ ಅಧ್ಯಕ್ಷ ಈ ಉಗ್ರ ದಾಳಿಯನ್ನು "ಭಯಾನ"ಕ" ಎಂದು ವ್ಯಾಖ್ಯಾನಿಸಿದ್ದು, ಇದಕ್ಕೂ ಉಕ್ರೇನ್ ಯುದ್ಧಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು. ಈ ನಡುವೆ, ಎರಡು ವಾರ ಮೊದಲೇ ಅಮೆರಿಕದ ರಾಯಭಾರ ಕಚೇರಿ ಈ ದಾಳಿ ಕುರಿತು ಮುನ್ನೆಚ್ಚರಿಕೆ ವಹಿಸಲು ರಷ್ಯಾಕ್ಕೆ ಹೇಳಿತ್ತು. ಮಾಸ್ಕೋದಲ್ಲಿ ಸಂಗೀತ ಕಛೇರಿ ಸೇರಿ ಸಾಮೂಹಿಕ ಸಭೆಗಳ ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.
5) ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಯುರೋಪ್ ಒಕ್ಕೂಟ ಆಘಾತ ವ್ಯಕ್ತಪಡಿಸಿದೆ.
6) ಮಾಸ್ಕೋ ದಾಳಿಯ ಚಿತ್ರಣ ಭಯಾನಕವಾಗಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತೇವೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಫ್ರೆಂಚ್ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
7) ಮಾಸ್ಕೋ ಸಂಗೀತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಂದೂಕುಧಾರಿಗಳು ನಡೆಸಿದ ದಾಳಿಗೂ ಕೈವ್ ಗೂ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಶುಕ್ರವಾರ ಹೇಳಿದ್ದಾರೆ. "ನಾವು ರಷ್ಯಾ ಜೊತೆಗೆ ನಿಯಮಿತ ಸೈನ್ಯದೊಂದಿಗೆ ಒಂದು ದೇಶವಾಗಿ ಪೂರ್ಣ ಪ್ರಮಾಣದ ಯುದ್ಧವನ್ನು ನಡೆಸುತ್ತಿದ್ದೇವೆ. ಅದು ಬಿಟ್ಟು ಈ ರೀತಿ ನೀಚ ಕೃತ್ಯ ಮಾಡುವುದಿಲ್ಲ" ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಹೇಳಿದರು.
8) ರಷ್ಯಾದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭರ್ಜರಿ ಗೆಲುವು ದಾಖಲಿಸಿ ತಮ್ಮ ಹಿಡಿತವನ್ನು ಭದ್ರಪಡಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.
9) ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪುಟಿನ್ ಹಾರೈಸಿದ್ದಾರೆ. "ಅಧ್ಯಕ್ಷರು ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು ಮತ್ತು ವೈದ್ಯರಿಗೆ ತಮ್ಮ ಕೃತಜ್ಞತೆಯನ್ನು ತಿಳಿಸಿದರು" ಎಂದು ಉಪ ಪ್ರಧಾನ ಮಂತ್ರಿ ಟಟಯಾನಾ ಗೋಲಿಕೋವಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
10) ಮಾಸ್ಕೋದಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. "ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬದವರಿಗೆ ಭಾವನಾತ್ಮಕವಾಗಿ ಸ್ಪಂದಿಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತ ಸರ್ಕಾರ ಮತ್ತು ರಷ್ಯಾದ ಒಕ್ಕೂಟದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
-------------------------------
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.