Independence Day : ಭಾರತದ ಜಾಗತಿಕ ಪ್ರತಿಷ್ಠೆ ಅಭಿನಂದನಾರ್ಹ: ಪುಟಿನ್ ಅಭಿಮತ
Aug 15, 2022 06:23 PM IST
ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ)
- ಭಾರತದ 75ನೇ ಸ್ವಾತಂತ್ರದ ದಿನಾಚರಣೆಗೆ ಶುಭಾಶಯ ತಿಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಈ ಅವಧಿಯಲ್ಲಿ ಭಾರತ ಗಳಿಸಿರುವ ಜಾಗತಿಕ ಪ್ರತಿಷ್ಠೆ ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದ್ದಾರೆ. ಈ ಏಳು ದಶಕಗಳ ಅವಧಿಯಲ್ಲಿ ರಷ್ಯಾ-ಭಾರತದ ರಾಜತಾಂತ್ರಿಕ ಸಂಬಂಧ ಕೂಡ ಐತಿಹಾಸಿಕವಾಗಿ ಗರಿಷ್ಠ ಮಟ್ಟ ತಲುಪಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಮಾಸ್ಕೋ: ಭಾರತದ 75ನೇ ಸ್ವಾತಂತ್ರದ ದಿನಾಚರಣೆಗೆ ಶುಭಾಶಯ ತಿಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಈ ಅವಧಿಯಲ್ಲಿ ಭಾರತ ಗಳಿಸಿರುವ ಜಾಗತಿಕ ಪ್ರತಿಷ್ಠೆ ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತದ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕಾಗಿ ನಾನು ಭಾರತದ ನಾಯಕತ್ವ ಮತ್ತು ಜನತೆಯನ್ನು ಅಭಿನಂದಿಸುವುದಾಗಿ ಪುಟಿನ್ ಹೇಳಿದ್ದಾರೆ.
ಈ ಏಳು ದಶಕಗಳ ಅವಧಿಯಲ್ಲಿ ಭಾರತವು ತಂತ್ರ ಅಭಿವೃದ್ಧಿಯ ಪಥದಲ್ಲಿ ಹಲವು ಮಹತ್ತರವದ ಸಾಧನೆಗಳನ್ನು ಮಾಡಿದೆ. ಆರ್ಥಿಕ, ಸಾಮಾಜಿಕ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಅನುಕರಣೀಯ ಎಂದೂ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಏಳು ದಶಕಗಳ ಅವಧಿಯಲ್ಲಿ ರಷ್ಯಾ-ಭಾರತದ ರಾಜತಾಂತ್ರಿಕ ಸಂಬಂಧ ಕೂಡ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ ಎಂದು ಪುಟಿನ್ ಹೇಳಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆ ಎತ್ತರಕ್ಕೆ ಏರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅದು ನಿರ್ವಹಿಸುತ್ತಿರುವ ರಚನಾತ್ಮಕ ಪಾತ್ರ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ. ಭವಿಷ್ಯದಲ್ಲಿ ಭಾರತದ ಸ್ಥಾನಮಾನ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುವುದಾಗಿ ರಷ್ಯಾ ಅಧ್ಯಕ್ಷ ನುಡಿದಿದ್ದಾರೆ.
ಅಂತಾರಾಷ್ಟೀಯ ಮಟ್ಟದಲ್ಲಿ ಭಾರತ ಮತ್ತು ರಷ್ಯಾ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿವೆ. ಯುಎನ್, ಬ್ರಿಕ್ಸ್, ಎಸ್‌ಸಿಒ ಮತ್ತು ಇತರ ಬಹುಪಕ್ಷೀಯ ರಚನೆಗಳ ಚೌಕಟ್ಟಿನೊಳಗೆ ಎರಡೂ ರಾಷ್ಟ್ರಗಳು ಪರಿಣಾಮಕಾರಿಯಾಗಿ ಸಂವಹನ ನಡೆಸುತ್ತಿವೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ್ದು, ಉಭಯ ರಾಷ್ಟ್ರಗಳ ಜನರ ನಡುವಿನ ಬಾಂಧವ್ಯ ಕೂಡ ಇದಕ್ಕೆ ಮಹತ್ತರವಾದ ಕೊಡುಗೆ ನೀಡಿದೆ ಎಂದು ಪುಟಿನ್ ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ಭಾರತ ಮತ್ತು ರಷ್ಯಾ ಮತ್ತಷ್ಟು ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಲಿವೆ ಎಂಬ ವಿಶ್ವಾಸ ಇರುವುದಾಗಿ ಪುಟಿನ್ ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೆನೆ. ಜೊತೆಗೆ ಭಾರತೀಯ ನಾಗರಿಕರ ಸಮೃದ್ಧಿಯನ್ನು ಬಯಸುತ್ತೇನೆ ಎಂದು ಪುಟಿನ್ ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿ ಜಾಗತಿಕವಾಗಿ ಟೀಕೆಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತಮ್ಮ ವರ್ಚಸ್ಸನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ತಟಸ್ಥ ನಿಲುವು ಜಾಗತಿಕವಾಗಿಯೂ ಮೆಚ್ಚುಗೆಗೆ ಪಾತ್ರವಾಗಿತ್ತು. ಎರಡೂ ರಾಷ್ಟ್ರಗಳು ಯುದ್ಧವನ್ನು ಕೊನೆಗಾಣಿಸಿ ಶಾಂತಿಯುತ ರಾಜತಾಂತ್ರಿಕ ಮಾತುಕತೆಗೆ ಮುಂದಾಗಬೇಕು ಎಂದು ಭಾರತ ಆರಂಭದಿಂದಲೂ ಒತ್ತಾಯಿಸುತ್ತಲೇ ಇದೆ.
ಈ ಎಲ್ಲ ಕಾರಣಗಳಿಂದ ಭಾರತದ ಸ್ನೇಹದ ಮಹತ್ವ ಅರಿತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದೊಂದಿಗೆ ಘನಿಷ್ಠ ರಾಜತಾಂತ್ರಿಕ ಸಂಬಂಧ ಹೊಂದಲು ಹಾತೊರೆಯುತ್ತಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಯಾಗುತ್ತರುವುದನ್ನು ಮನಗಂಡಿರುವ ಪುಟಿನ್, ಭಾರತದೊಂದಿಗಿನ ಸ್ನೇಹ ತಮಗೆ ಲಾಭದಾಯಕ ಎಂಬ ಸತ್ಯವನ್ನು ಅರಿತಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ನ್ಯಾಟೋ ಮಿತ್ರ ರಾಷ್ಟ್ರಗಳ ವೈರತ್ವ ಕಟ್ಟಿಕೊಂಡಿರುವ ಪುಟಿನ್, ವಿಶ್ವ ಭೂಪಟದಲ್ಲಿ ರಷ್ಯಾವನ್ನು ಏಕಾಂಗಿಯಾಗಿ ನೋಡಲು ಸಿದ್ಧರಿಲ್ಲ. ಇದೇ ಕಾರಣಕ್ಕೆ ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಟಸ್ಥ ನಿಲುವು ತೇದ ಭಾರತದತ್ತ ಹೆಚ್ಚಿನ ಸ್ನೇಹಹಸ್ತ ಚಾಚಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.